ದಯೆ, ಪ್ರೀತಿಯಿಂದ ಸಿಗೋ ಆತ್ಮತೃಪ್ತಿಯಲ್ಲಿ ಕ್ಯಾನ್ಸರ್ ಗುಣವಾಯ್ತು, ತಮಾಷೆಯಲ್ಲ… ಇದಕ್ಕಿರುವ ಸಾಕ್ಷಿ ಬ್ರಿಸ್ ರೋಯರ್..!

ಡಿಜಿಟಲ್ ಕನ್ನಡ ಟೀಮ್

ಕ್ಯಾನ್ಸರ್ ಎಂದರೆ ಎಲ್ಲರಿಗೂ ಎದೆ ನಡುಗುತ್ತದೆ. ಈ ಕ್ಯಾನ್ಸರ್ ವಿರುದ್ಧ ಹೋರಾಡಬೇಕಾದರೆ, ಉತ್ತಮ ಚಿಕಿತ್ಸೆ ಹೇಗೆ ಮುಖ್ಯವೋ ಅದೇರೀತಿ ರೋಗಿಯಲ್ಲಿ ಆತ್ಮಸ್ಥೈರ್ಯವೂ ಮುಖ್ಯ. ಈ ಕ್ಯಾನ್ಸರ್ ಗೆ ತುತ್ತಾದವರ ಸಂಖ್ಯೆ ದೊಡ್ಡದಾಗಿಯೇ ಇದೆ. ಅದೇ ರೀತಿ ಉತ್ತಮ ಮನೋಬಲದಿಂದ ಇದರ ವಿರುದ್ಧ ಹೋರಾಡಿ ಗೆದ್ದವರ ಉದಾಹರಣೆ ನಮಗೆ ಸಾಕಷ್ಟು ಸಿಗುತ್ತದೆ.

ವ್ಯಾಂಕೊವರ್ ನ ಬ್ರೀಸ್ ರೋಯರ್ ಎಂಬ ವ್ಯಕ್ತಿ ಯಾವುದೇ ಚಿಕಿತ್ಸೆ ತೆಗೆದುಕೊಳ್ಳದೇ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಪ್ರೀತಿ ತೋರಿ, ಅದರಿಂದ ಸಿಗೋ ಆತ್ಮತೃಪ್ತಿಯಿಂದ ಗುಣಮುಖರಾಗಿದ್ದಾರೆ.

ಅರೆ, ಇದು ಹೇಗೆ ಸಾಧ್ಯ? ತಮಾಷೆ ಮಾಡುತ್ತಿರಬೇಕು ಎಂದು ಮೂಗು ಮುರಿಬೇಡಿ. ಇದು ನಿಜ. ಬ್ರಿಸ್ ಹೊಟ್ಟೆಗೆ ಸಂಬಂಧಿಸಿದ ತೀರಾ ಅಪರೂಪದ ಕ್ಯಾನ್ಸರ್ ಗೆ ತುತ್ತಾಗಿದ್ದರು. ಈ ಸಂದರ್ಭದಲ್ಲಿ ತನ್ನ ಕೈಲಾದ ಮಟ್ಟಿಗೆ ಇತರರಿಗೆ ಪ್ರೀತಿಯನ್ನು ಹಂಚಲು ನಿರ್ಧರಿಸಿದ. ‘ನಾವು ಎಷ್ಟು ದಾನ ಮಾಡುತ್ತಿವೋ ಅಷ್ಟು ಶ್ರೀಮಂತರಾಗುತ್ತೇವೆ’ ಎಂಬ ಧ್ಯೇಯದೊಂದಿಗೆ ‘ಗಿಫ್ಟ್ ಎಕಾನಮಿ ಫೇಸ್ ಬುಕ್ ಪೇಜ್’ ಆರಂಭಿಸಿದ. ಆನಂತರ ತನ್ನಿಂದಾದದ್ದನ್ನೆಲ್ಲಾ ಅಗತ್ಯವಿರುವವರಿಗೆ ದಾನ ಮಾಡುತ್ತಾ ಹೋದ. ಕಳೆದ ವರ್ಷದಿಂದ ಇಲ್ಲಿಯವರೆಗೂ ತನ್ನ ಮನಸಿಗೆ ತೋಚಿದಂತೆ ಈ ಅಭ್ಯಾಸ ಮುಂದುವರಿಸಿದ.

ಇತ್ತೀಚೆಗೆ ಏಪ್ರಿಲ್ 14ರಂದು ಎಂ ಆರ್ ಐ ಸ್ಕ್ಯಾನಿಂಗ್ ಗೆ ಒಳಗಾದ, ಅದರ ಫಲಿತಾಂಶ ವೈದ್ಯರು ಸೇರಿದಂತೆ ಎಲ್ಲರು ನಿಬ್ಬೆರಗಾದರು. ಕಾರಣ ಆ ಪರೀಕ್ಷೆಯಲ್ಲಿ ಬ್ರಿಸ್ ಗಿದ್ದ ಕ್ಯಾನ್ಸರ್ ನಾಪತ್ತೆಯಾಗಿತ್ತು.

‘ನಾನು ಈಗ ಕ್ಯಾನ್ಸರ್ ಮುಕ್ತನಾಗಿದ್ದೇನೆ. ಇದರ ಎಲ್ಲ ಶ್ರೇಯ ಪ್ರೀತಿ ಹಾಗೂ ದಯೆಗೆ ಸೇರಬೇಕು. ಇವು ಅತ್ಯುತ್ತಮ ಫಲಿತಾಂಶ ನೀಡಿದ್ದು, ಯಾವುದೇ ಕಿಮೊ ಅಥವಾ ಚಿಕಿತ್ಸೆ ಇಲ್ಲದೇ ಗುಣವಾಗಿದೆ’ ಎಂದು ಬ್ರಿಸ್ ಸಂತಸ ವ್ಯಕ್ತಪಡಿಸಿದ್ದಾನೆ.

ಈ ಹಂತದಲ್ಲಿ ಬ್ರಿಸ್ ಏನೆಲ್ಲಾ ಮಾಡಿದ ಎಂದರೆ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದವರಿಗೆ ಹಣ ನೀಡಿದ, ಕಳೆದ ಕ್ರಿಸ್ ಮಸ್ ವೇಲೆ 25 ಸಾವಿರ ಅಮೆರಿಕನ್ ಡಾಲರ್ ದೇಣಿಗೆ ಸಂಗ್ರಹಿಸಿ ನೆಲೆ ಇಲ್ಲದವರಿಗೆ ಸೂರು ಕಟ್ಟಿಕೊಟ್ಟ. ಇದೇ ರೀತಿ ಒಂದು ಪುಟ್ಟ ಹಳ್ಳಿಯನ್ನು ಕಟ್ಟಲು ಮುಂದಾದ. ಪ್ರತಿ ವಾರ ಮಹಿಳೆಯೊಬ್ಬಳಿಗೆ ತರಕಾರಿಯನ್ನು ಪೂರೈಸುತ್ತಿದ್ದ. ಹೀಗೆ ತನಗೆ ಅನಿಸಿದ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಾ ಹೋದ.

ಕ್ಯಾನ್ಸರ್ ಜತೆಗೆ ಖಿನ್ನತೆ ಮತ್ತು ಏಕಾಂಗಿತನ ಬ್ರಿಸ್ ನನ್ನು ಕೊಲ್ಲುತ್ತಿತ್ತು. ಹಾಗಾಗಿ ಆತ ಯಾವುದೇ ಅಪೇಕ್ಷೆ ಇಲ್ಲದೇ ಮನಬಂದಂತೆ ಜನರಿಗೆ ಸಹಾಯ ಹಸ್ತ ಚಾಚುತ್ತಾ ಸಾಗಿದ. ಈ ಕಾರ್ಯದಿಂದ ಆತ್ಮ ತೃಪ್ತಿಯನ್ನು ಪಡೆದ ಬ್ರಿಸ್, ಕ್ಯಾನ್ಸರ್ ಮುಕ್ತನಾದ. ಈತನ ವರದಿ ವ್ಯಾಂಕೊವರ್ ನಲ್ಲಿ ಹರಡುತ್ತಿದ್ದಂತೆ, ಹಲವು ಕ್ಯಾನ್ಸರ್ ರೋಗಿಗಳು ಈತನನ್ನು ಸಂಪರ್ಕಿಸಿ, ಸಲಹೆ ಪಡೆದಿದ್ದಾರೆ. ಅವರೂ ಸಹ ಈ ವಿಧಾನವನ್ನು ತಮ್ಮ ಚಿಕಿತ್ಸೆ ಪದ್ಧತಿಯಲ್ಲಿ ಒಂದಾಗಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಬ್ರಿಸ್ ನ ಪ್ರಕರಣ ನೋಡಿ ಸ್ವತಃ ವೈದ್ಯರಿಗೆ ಈ ಬಗ್ಗೆ ವೈಜ್ಞಾನಿಕ ಸಮರ್ಥನೆ ನೀಡಲು ಸಾಧ್ಯವಾಗುತ್ತಿಲ್ಲ. ಕಾರಣ ಇಲ್ಲಿ ಬ್ರಿಸ್ ಗೆ ನೆರವಾಗಿದ್ದು, ಆತ್ಮತೃಪ್ತಿ. ಅಗತ್ಯದಲ್ಲಿದ್ದವರಿಗೆ ಪ್ರತಿ ಬಾರಿ ನೆರವಾದಾಗಲೂ ಬ್ರೀಸ್ ತೃಪ್ತ ಭಾವ ಅನುಭವಿಸುತ್ತಿದ್ದ. ನಮ್ಮ ಆತ್ಮ ತೃಪ್ತವಾದರೆ, ದೇಹದ ನೋವು ಹಾಗೂ ನ್ಯೂನತೆಗಳೂ ಸಹ ಮಾಯವಾಗುತ್ತೆ ಎಂಬುದಕ್ಕೆ ಸೂಕ್ತ ಉದಾಹರಣೆಯಾಗಿದೆ ಬ್ರಿಸ್ ಪ್ರಕರಣ.

Leave a Reply