ಭಾರತೀಯ ಫುಟ್ಬಾಲ್ ನಲ್ಲಿ ಬದಲಾವಣೆಯ ಗಾಳಿ ಬೀಸುವ ಸೂಚನೆ, ಫುಟ್ಬಾಲ್ ವ್ಯವಸ್ಥೆಯ ರೂಪಾಂತರಕ್ಕೆ ಸಕಲ ಸಿದ್ಧತೆ

ಪಿ. ಸೋಮಶೇಖರ, ಭದ್ರಾವತಿ

ವಿಶ್ವ ಫುಟ್ಬಾಲ್ ನಲ್ಲಿ ಭಾರತ ಕಳೆದುಹೋಗಿರುವ ಪರಿಸ್ಥಿತಿಯಲ್ಲಿದೆ. ಕಾರಣ, ಭಾರತ ತಂಡದ ಫುಟ್ಬಾಲ್ ಪರಸ್ಥಿತಿ ತೀರಾ ಹಿಂದುಳಿದಿದೆ. ವಿಶ್ವಕಪ್ ನಲ್ಲಿಭಾರತ ತಂಡ ಆಡುವುದನ್ನು ನೋಡುವ ಅಭಿಮಾನಿಗಳ ಆಸೆ, ಕನಸಾಗಿಯೇ ಉಳಿದಿದೆ. ಈ ಪರಿಸ್ಥಿತಿಯಲ್ಲಿ ಭಾರತ ಫುಟ್ಬಾಲ್ ಅನ್ನು ಮೇಲೆತ್ತುವ ಕಾರ್ಯದತ್ತ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಮನಸ್ಸು ಮಾಡಿದೆ.

ಕಳೆದ ವರ್ಷ 2018ರ ಫಿಫಾ ವಿಶ್ವಕಪ್ ನ ಎರಡನೇ ಹಂತದ ಅರ್ಹತಾ ಸುತ್ತಿನಲ್ಲಿ ಭಾರತ ಡಿ ಗುಂಪಿನಲ್ಲಿ ಆಡಿದ 8 ಪಂದ್ಯಗಳ ಪೈಕಿ 1ರಲ್ಲಿ ಜಯ ಸಾಧಿಸಿದ್ದು, ಬಿಟ್ಟರೆ, ಉಳಿದ 7 ಪಂದ್ಯಗಳಲ್ಲಿ ಪಡೆದಿದ್ದು, ಹೀನಾಯ ಸೋಲು. ಜೂನ್ ನಲ್ಲಿ ನಡೆದ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ಗುಹಾಮ್ ವಿರುದ್ಧ ಸೋಲನುಭವಿಸಿತ್ತು. ಇದು ಭಾರತ ಫುಟ್ಬಾಲ್ ತಂಡದ ಸಾಮರ್ಥ್ಯದ ಮೇಲೆ ಪ್ರಶ್ನೆ ಮೂಡುವಂತೆ ಮಾಡಿತ್ತು. ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿನ ಫುಟ್ಬಾಲ್ ವ್ಯವಸ್ಥೆಯನ್ನೇ ಬದಲಿಸಲು ಎಐಎಫ್ಎಫ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಐಎಸ್ಎಲ್ ಮತ್ತು ಐ ಲೀಗ್ ಅನ್ನು ವಿಲೀನಗೊಳಿಸುವ ತೀರ್ಮಾನಕ್ಕೆ ಬಂದಿದೆ. ಇಲ್ಲಿ ಎರಡು ಲೀಗ್ ಗಳನ್ನು ಒಟ್ಟಿಗೆ ಸೇರಿಸುವುದಕ್ಕಿಂತ ಮುಖ್ಯವಾಗಿ ದೇಶದ ಎಲ್ಲಾ ಪ್ರಮುಖ ಕ್ಲಬ್ ಗಳನ್ನು ಒಂದು ಸೂರಿನಡಿ ತರುವುದು ಪ್ರಮುಖ ಗುರಿ.

ಸದ್ಯ ಭಾರತದಲ್ಲಿ ಫುಟ್ಬಾಲ್ ಟೂರ್ನಿಗಳಿಗೆ ಕೊರತೆ ಏನಿಲ್ಲ. ಐ-ಲೀಗ್, ಐಎಸ್ಎಲ್ ಎರಡೆರಡು ಪ್ರಮುಖ ಟೂರ್ನಿ ಜತೆಗೆ ಫೆಡರೇಷನ್ ಕಪ್ ಹಾಗೂ ಇತರೆ ಟೂರ್ನಿಗಳು ನಡೆಯುತ್ತಿವೆ. ಆದರೆ, ಈ ಯಾವುದೇ ಟೂರ್ನಿಗಳು ಭಾರತ ತಂಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿಲ್ಲ ಎಂಬುದು ವಾಸ್ತವದ ಸತ್ಯಾಂಶ.

ಪ್ರತಿ ಬಾರಿ ಫಿಫಾ ವಿಶ್ವಕಪ್ ಟೂರ್ನಿ ಆಗಮಿಸಿದಾಗಲೂ ಭಾರತ ಅಭಿಮಾನಿಗಳ ಮನಸಿಗೆ ಬರುವುದು ಎರಡು ಅಂಶ. ಒಂದು ಭಾರತ ಯಾವಾಗ ಫಿಫಾ ವಿಶ್ವಕಪ್ ನಲ್ಲಿ ಆಡಲಿದೆ ಎಂಬ ನಿರೀಕ್ಷೆ. ಮತ್ತೊಂದು 1950ರಲ್ಲಿ ಭಾರತಕ್ಕೆ ವಿಶ್ವಕಪ್ ಆಡುವ ಅವಕಾಶ ಸಿಕ್ಕಿದ್ದರೂ ಅದನ್ನು ಕೈಚೆಲ್ಲಿದ ಕಹಿ ಘಟನೆಯ ಮೆಲಕು. ಪ್ರತಿ ಬಾರಿ ಫುಟ್ಬಾಲ್ ವಿಶ್ವಕಪ್ ವೇಳೆ ಅಭಿಮಾನಿಗಳು ಮುಂದಿನ ವಿಶ್ವಕಪ್ ನಲ್ಲಿ ಭಾರತ ಕಾಣಿಸಿಕೊಳ್ಳುವುದೇ ಎಂಬ ಪ್ರಶ್ನೆಯನ್ನು ತಮ್ಮಲ್ಲೇ ಹಾಕಿಕೊಂಡು ಕೊರುಗುತ್ತಿರೋದಂತೂ ಸತ್ಯ. ಪ್ರಸ್ತುತ ಭಾರತದಲ್ಲಿರುವ ಫುಟ್ಬಾಲ್ ಪರಿಸ್ಥಿತಿಯನ್ನು ನೋಡಿದಾಗ, ಅಭಿಮಾನಿಗಳ ಈ ನಿರೀಕ್ಷೆ ದೊಡ್ಡದೇ ಆಗಿದೆ.

ನಿಜ, ಭಾರತದ ಫುಟ್ಬಾಲ್ ಆಟಗಾರರಿಗೆ ವಿಶ್ವದ ಇತರೆ ದೇಶಗಳಲ್ಲಿರುವ ಅತ್ಯುತ್ತಮ ಗುಣಮಟ್ಟದ ಸೌಕರ್ಯಗಳಿಲ್ಲ. ಇನ್ನು ಫುಟ್ಬಾಲ್ ತಳಮಟ್ಟದಲ್ಲಿ ಗಟ್ಟಿಯಾಗಿ ಬೇರು ಬಿಟ್ಟಿಲ್ಲ. ಶಾಲಾ ಮಟ್ಟದ ಟೂರ್ನಿಗಳು, ರಾಜ್ಯ ಸಂಸ್ಥೆಗಳಿಂದ ಕಿರಿಯರ ಟೂರ್ನಿಗಳ ಹೊರತಾಗಿ ಚಿಕ್ಕ ವಯಸ್ಸಿನಲ್ಲಿ ಆಟಗಾರರಿಗೆ ಸೂಕ್ತ ವೇದಿಕೆ ಇಲ್ಲ. ಈ ಎಲ್ಲ ಪ್ರತಿಕೂಲ ವಾತಾವರಣವನ್ನು ಬದಲಾಯಿಸುವ ಮಹತ್ತರ ಕಾರ್ಯಕ್ಕೆ ಎಐಎಫ್ಎಫ್ ಕೈ ಹಾಕಿದೆ.

ಫುಟ್ಬಾಲ್ ವ್ಯವಸ್ಥೆಯನ್ನೇ ಬದಲಾಯಿಸುತ್ತೇವೆ ಅಂತಿದ್ದಾರೆ, ಏನೆಲ್ಲಾ ಬದಲಾವಣೆಯಾಗುತ್ತೆ ಎಂಬ ಪ್ರಶ್ನೆ ಸಹಜ. ಐಎಸ್ಎಲ್ ಮತ್ತು ಐ ಲೀಗ್ ದೇಶದ ಎರಡು ಟೂರ್ನಿ. ಫಿಪಾ ನಿಯಮದ ಪ್ರಕಾರ ಯಾವುದೇ ದೇಶ ಎರಡು ಪ್ರಮುಖ ಟೂರ್ನಿಗೆ ಅವಕಾಶ ನೀಡುವಂತಿಲ್ಲ. ಹಾಗಾಗಿ ಈ ಎರಡರಲ್ಲಿ ಒಂದನ್ನು ಉಳಿಸಿಕೊಳ್ಳುವುದು ಮತ್ತೊಂದು ಸವಾಲಾಗುತ್ತದೆ. ಹಾಗಾಗಿ ಇದರ ವಿಲೀನಕ್ಕೆ ಎಐಎಫ್ಎಫ್ ಮುಂದಾಗಿದೆ. ಏಕಾಏಕಿ ವಿಲೀನ ಮಾಡುವುದಕ್ಕೂ ಇಲ್ಲಿ ಹಲವು ಸವಾಲುಗಳಿವೆ. ಅದಕ್ಕಾಗಿಯೇ, ಯಾವಾಗ ಯಾವ ರೀತಿ ಮಾಡಿದರೆ, ಎಲ್ಲಾ ಕ್ಲಬ್ ಹಾಗೂ ಅದರ ಆಟಗಾರರ ಹಿತದೃಷ್ಠಿಗೆ ಉತ್ತಮವಾಗಲಿದೆ ಎಂಬ ಪೂರ್ವತಯಾರಿ ಪ್ರಮುಖವಾಗಿದೆ.

ಪ್ರಸ್ತುತ ವಾರ್ಷಿಕ ವೇಳಾಪಟ್ಟಿಯಲ್ಲಿ ಮೊದಲು ಐಎಸ್ಎಲ್, ಐ ಲೀಗ್ ನಂತರ ಫೆಡರೇಷನ್ ಕಪ್ ನಡೆಯುತ್ತಿದೆ. ಇದರ ಬದಲಾಗಿ ಮುಂಬರುವ ಹೊಸ ಲೀಗ್ ಅನ್ನು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ನಡೆಸಲು ಚಿಂತನೆ ನಡೆದಿವೆ. ಐಎಸ್ಎಲ್ ಕ್ಲಬ್ ಜತೆಗೆ ಐ ಲೀಗ್ ನ ಕೋಲ್ಕತಾದ ಈಸ್ಟ್ ಬೆಂಗಾಲ್, ಮೊಹನ್ ಬಗಾನ್, ಹಾಗೂ ಚಾಂಪಿಯನ್ ಬೆಂಗಳೂರು ಎಫ್ ಸಿ ಯಾವ ರೀತಿ ಹೊಸ ಲೀಗ್ ಗೆ ಸೇರಿಕೊಳ್ಳಲಿವೆ ಎಂಬುದು ಇನ್ನು ಗೌಪ್ಯವಾಗಿದೆ.

ಇಷ್ಟೇ ಅಲ್ಲ, ಕಿರಿಯರ ಮಟ್ಟದಲ್ಲಿ ಅಂಡರ್ 14 ಟೂರ್ನಿಯನ್ನು ಪರಿಚಯಿಸುವುದು ಭಾರತೀಯ ಸಂಸ್ಥೆಯ ಮತ್ತೊಂದು ಮುಖ್ಯ ಗುರಿ. ಭಾರತೀಯ ಫುಟ್ಬಾಲ್ ಬೆಳವಣಿಗೆಯ ನೀಲಿನಕ್ಷೆಗೆ ಈ ಕ್ರಮಗಳು ಉತ್ತಮ ಆಶಾಕಿರಣ ಮೂಡಿಸಿವೆ. ಎಐಎಫ್ಎಫ್ ನ ಈ ಎಲ್ಲಾ ಮಹತ್ವಾಕಾಂಕ್ಷಿ ಯೋಜನೆಗಳು ಜಾರಿಯಾಗುವುದಷ್ಟಕ್ಕೆ ಸೀಮಿತವಾಗಬಾರದು. ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದು ಪ್ರಮುಖ ಪಾತ್ರ ವಹಿಸಲಿದೆ.

ವ್ಯವಸ್ಥೆಯ ರೂಪಾಂತರದ ಜತೆಗೆ ಎಐಎಫ್ಎಫ್ ಮುಂದಿರುವ ದೊಡ್ಡ ಸವಾಲು 2017ರ ಕಿರಿಯರ ವಿಶ್ವಕಪ್, ಕೇವಲ ಆಯೋಜನೆ ಅಷ್ಟೇ ಅಲ್ಲ, ಅಭಿಮಾನಿಗಳನ್ನು ಸೆಳೆದು, ಫುಟ್ಬಾಲ್ ನತ್ತ ಹೆಚ್ಚು ಜನರನ್ನು ಆಕರ್ಷಿಸಲು ಇದು ಮಹತ್ವದ ಅವಕಾಶ. ಈ ಟೂರ್ನಿಯಲ್ಲಿ ಭಾರತ ಸಹ ಭಾಗವಹಿಸುತ್ತಿರುವುದು ಮತ್ತೊಂದು ಪ್ರಮುಖ ಅಂಶವಾಗಿದೆ. ಭಾರತ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಪಂದ್ಯವನ್ನು ಆಯೋಜಿಸುತ್ತಿದ್ದು, ಯಾವುದೇ ಕುಂದುಕೊರತೆ ಬಾರದಂತೆ ನೋಡಿಕೊಳ್ಳಬೇಕು. ಇದು ಭಾರತದ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.

ಈ ಕಿರಿಯರ ವಿಶ್ವಕಪ್ ನಿಂದಾಗಿ ಎಐಎಫ್ಎಫ್ ಹೊಸ ಬದಲಾವಣೆಯನ್ನು 2017ರ ಬದಲಿಗೆ 2018ರಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈಗ ಎರಡು ವರ್ಷಗಳ ಕಾಲಾವಕಾಶ ದೊರೆತಿದೆ. ನಿರೀಕ್ಷೆಯಂತೆ ಎಲ್ಲವೂ ಸಾಗಿದರೆ, ಭಾರತೀಯ ಫುಟ್ಬಾಲ್ ಗುಣಮಟ್ಟ ಸಹ ಗಣನೀಯವಾಗಿ ಸುಧಾರಿಸಲಿದೆ. ಆ ಮೂಲಕ ಮುಂಬರುವ ದಿನಗಳಲ್ಲಿ ಭಾರತ ತಂಡ ವಿಶ್ವಮಟ್ಟದಲ್ಲಿ ಪ್ರಭಾವ ಬೀರಲು ಸಾಧ್ಯ.

Leave a Reply