ಮಂಗಳದ ಈ ಸುದಿನ ಮಧುರವಾಗಲಿ..

N S Shridharamurthyಎನ್.ಎಸ್.ಶ್ರೀಧರ ಮೂರ್ತಿ

‘ಪದ್ಮಭೂಷಣ’ ಭಾರತ ಸರ್ಕಾರ ನೀಡುವ ಮೂರನೇ ಅತಿ ದೊಡ್ಡ ಗೌರವ. ಇದನ್ನು ಪಡೆಯಲು ಏನೆಲ್ಲಾ ಸರ್ಕಸ್ಗಳು, ಶಿಫಾರಸ್ಸುಗಳು ನಡೆಯುತ್ತವೆ. ಆದರೆ ತಮ್ಮ ಮನೆ ಬಾಗಿಲಿಗೆ ಬಂದ ‘ಪದ್ಮಭೂಷಣ’ ಗೌರವವನ್ನು ಒಲ್ಲೆ ಎಂದ ದಿಟ್ಟತನ ನಮ್ಮ ಹೆಮ್ಮಯ ಗಾಯಕಿ ಎಸ್.ಜಾನಕಿಯವರದ್ದು. ಇದಕ್ಕೆ ನೀಡಿದ ಕಾರಣ ಕೂಡ ವೈಯಕ್ತಿಕವಾದದ್ದಲ್ಲ. ‘ಹಿಂದಿ ಗಾಯಕರಿಗೆ ಗೌರವಗಳು ತೀರಾ ಬೇಗ ಬಂದು ಬಿಡುತ್ತದೆ. ದಕ್ಷಿಣದ ಗಾಯಕರನ್ನು ಎಂದಿನಿಂದಲೂ ಕಡೆಗಣಿಸಲಾಗುತ್ತಿದೆ. ಪಿ.ಸುಶೀಲ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಜೆ.ಯೇಸುದಾಸ್, ವಾಣಿ ಜಯರಾಂ, ಕೆ.ಎಸ್.ಚಿತ್ರಾ’ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ದಾದಾ ಸಾಹೇಬ್ ಫಾಲ್ಕೆ ಸಿಗಬೇಕು’ ಹೀಗೆ ಸ್ಪಷ್ಟವಾಗಿಯೇ ಜಾನಕಿ ಕೇಳಿದ್ದರು. ತಮಗೆ ಬೇಕು ಎಂದು ಕೇಳಿರಲಿಲ್ಲ.  ಅವರ ಬೇಡಿಕೆಯಲ್ಲಿ ಸಂಪೂರ್ಣ ಸತ್ವವಿತ್ತು. ಹೀಗಾದರೂ ಈ ನಿರ್ಧಾರಕ್ಕೆ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಪ್ರಚಾರ ಸಿಗಲಿಲ್ಲ. ಅದೊಂದು ಚಳುವಳಿಯ ರೂಪವನ್ನೂ ತಾಳಲಿಲ್ಲ. ಹೀಗಾದರೂ ಜಾನಕಿ ಎದೆಗುಂದಲಿಲ್ಲ. ಮೊದಲಿಂದಲೂ ತಮಗೆ ಅನ್ನಿಸಿದ್ದನ್ನು ಹೇಳುವುದರಲ್ಲಿ ಅವರು ಎಂದಿಗೂ ಹಿಂದೆಗೆದವರಲ್ಲ. ಜಾನಕಿಯವರಲ್ಲಿ ಒಬ್ಬ ಬಂಡಾಯಗಾರ್ತಿ ಇದ್ದಾರೆ. ಸತ್ಯದ ಪರವಾಗಿ ಎಂದಿಗೂ ಅವರದು ದಿಟ್ಟಧ್ವನಿ.

ಕರ್ನಾಟಕ ರಾಜ್ಯ ಸರ್ಕಾರ ತನ್ನ ವಾರ್ಷಿಕ ಪ್ರಶಸ್ತಿಗಳಲ್ಲಿ ಹಿನ್ನೆಲೆ ಗಾಯಕರಿಗೆ ಪುರಸ್ಕಾರವನ್ನು ನೀಡುತ್ತಿರಲಿಲ್ಲ. ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದವರು ಎಸ್.ಜಾನಕಿಯವರೇ, ಯಾರ ಬೆಂಬಲ ಸಿಗದಿದ್ದರೂ ನಿರಂತರವಾಗಿ ಒತ್ತಡ ಹಾಕುತ್ತಲೇ ಬಂದರು. 1982ರಲ್ಲಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದರು, ಹಿನ್ನೆಲೆ ಗಾಯಕರಿಗೆ ಗೌರವ ಸಿಗುವವರೆಗೂ ತಾನು ಕನ್ನಡದಲ್ಲಿ ಹಾಡುವುದಿಲ್ಲ. ಆಗ ಅವರು ಬಹು ಬೇಡಿಕೆಯ ಗಾಯಕಿ. ಕನ್ನಡದ ಬಹುತೇಕ ಎಲ್ಲಾ ಚಿತ್ರಗಳಲ್ಲಿಯೂ ಅವರ ಹಾಡು ಇದ್ದೇ ಇರುತ್ತಿತ್ತು. ವೈಯಕ್ತಿಕ ನೆಲೆಯಲ್ಲಿಯೇ ನೋಡಿದ್ದರೆ ಅವರು ನಷ್ಟ ಮಾಡಿಕೊಂಡಿದ್ದರು. ಆದರೆ ಅವರು ಎಂದಿಗೂ ತನ್ನದು ಎಂದು ಯೋಚಿಸಿದವರೇ ಅಲ್ಲ. ಹೀಗೆ ಬರೊಬ್ಬರಿ ಐದು ವರ್ಷಗಳ ಕಾಲ ಅವರು ಕನ್ನಡ ಚಿತ್ರಗೀತೆಗಳನ್ನು ಹಾಡಲಿಲ್ಲ. ಕೊನೆಗೂ 1987-88ನೇ ಸಾಲಿನಲ್ಲಿ ಹಿನ್ನೆಲೆ ಗಾಯಕರಿಗೆ ರಾಜ್ಯಪ್ರಶಸ್ತಿ ನೀಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿತು. ಎಸ್.ಜಾನಕಿಯವರ ಹೋರಾಟಕ್ಕೆ ಜಯ ದೊರಕಿತು. ಆದರೆ ಈ ಮೊದಲ ವರ್ಷದ ಪ್ರಶಸ್ತಿಗಳು ದೊರಕಿದ್ದು ಪುತ್ತೂರು ನರಸಿಂಹ ನಾಯಕ್ ಮತ್ತು ಬಿ.ಆರ್.ಛಾಯಾ ಅವರಿಗೆ. ಈವರೆಗೂ ಕರ್ನಾಟಕ ಸರ್ಕಾರ ಜಾನಕಿಯವರಿಗೆ ಯಾವ ಪುರಸ್ಕಾರವನ್ನೂ ನೀಡಿಲ್ಲ.ಕೇರಳ ಸರ್ಕಾರದಿಂದ ಹನ್ನೆರಡು, ಆಂದ್ರಪ್ರದೇಶದಿಂದ ಎಂಟು, ತಮಿಳು ನಾಡಿನಿಂದ ಐದು ಮತ್ತು ಒರಿಸ್ಸಾದಿಂದ ಒಂದು ಸಲ ರಾಜ್ಯ ಪ್ರಶಸ್ತಿ ಪಡೆದಿರುವ ಅವರ ಪ್ರತಿಭೆ ಕರ್ನಾಟಕ ಸರ್ಕಾರಕ್ಕೆ ಇಂದಿಗೂ ಪ್ರಶಸ್ತಿಗೆ ಯೋಗ್ಯ ಎನ್ನಿಸಿಲ್ಲ. ಆದರೆ ಜಾನಕಿ ಇದರ ಕುರಿತು ಯೋಚಿಸಿದವರಲ್ಲ. ತಮ್ಮ ಹೋರಾಟದಿಂದ ಹಿನ್ನೆಲೆ ಗಾಯಕರು ಪ್ರಶಸ್ತಿ ಪಡೆಯುತ್ತಿದ್ದಾರಲ್ಲ ಅಷ್ಟೇ ಅವರಿಗೆ ತೃಪ್ತಿ.

ಕೌಟಂಬಿಕ ಸಮಸ್ಯೆಯಿಂದ ಜಾನಕಿ ಶಾಲೆಯ ಮೆಟ್ಟಿಲನ್ನು ಹತ್ತಿದವರೇ ಅಲ್ಲ. ಸ್ವಂತ ಪ್ರತಿಭೆಯಿಂದಲೇ ಮುಂದೆ ಬಂದವರು. ಆದರೆ ಹನ್ನೆರಡು ಭಾಷೆಗಳಲ್ಲಿ ಐವತ್ತೆಂಟು ಸಾವಿರ ಚಿತ್ರಗೀತೆಗಳನ್ನು ಹಾಡಿದ್ದಾರೆ ಅಷ್ಟೇ ಅಲ್ಲ, ಎಲ್ಲಾ ಭಾಷೆಗಳನ್ನು ಕಲಿತು ಅದರ ಅರ್ಥ ತಿಳಿದೇ ಹಾಡಿದ್ದಾರೆ. ಇಂತಹ ಇನ್ನೊಂದು ಉದಾಹರಣೆಯನ್ನು ಭಾರತೀಯ ಚಿತ್ರರಂಗದಲ್ಲಿಯೇ ನೋಡುವುದು ಕಷ್ಟ. ಸೋನು ನಿಗಮ್ ಎಂಟು ನೂರಕ್ಕೂ ಕನ್ನಡ ಚಿತ್ರಗೀತೆಗಳನ್ನು ಹಾಡಿ ನಮ್ಮವರೇ ಆಗಿ ಬಿಟ್ಟಿದ್ದಾರೆ ಎಂದು ಹೆಮ್ಮೆಯಿಂದ ಮಾತನಾಡುವವರು ನಮ್ಮ ನಡುವೆ ಇದ್ದಾರೆ. ಆದರೆ ಸೋನು ನಿಗಮ್ ಅವರಿಗೆ ಒಂದೇ ಒಂದು ಅಕ್ಷರ ಕನ್ನಡ ಬರುವುದಿಲ್ಲ. ಅದನ್ನು ಕಲಿಯ ಬೇಕು ಅರ್ಥ ತಿಳಿದುಕೊಳ್ಳ ಬೇಕು ಎಂದು ಭಾವಿಸಿದವರೂ ಅಲ್ಲ.ಶ್ರೇಯಾ ಘೋಷಲ್ ಮಟ್ಟಿಗೆ ಕೂಡ ಇದು ನಿಜವೇ ಅಷ್ಟೇ ಅಲ್ಲ. ಪಿ.ಸುಶೀಲ, ವಾಣಿ ಜಯರಾಂ, ಕೆ.ಎಸ್.ಚಿತ್ರಾ ಯಾರೂ ಕನ್ನಡ ಕಲಿಯಲು ಪ್ರಯತ್ನಿಸಿದವರಲ್ಲ. ಆದರೆ ಜಾನಕಿ ಇವರೆಲ್ಲರಿಗಿಂತಲೂ ಭಿನ್ನ. ಕನ್ನಡ ಮಾತೃಭಾಷೆಯವರಿಗಿಂತ ಸೊಗಸಾಗಿ ಕನ್ನಡವನ್ನು ಅವರು ಕಲಿತಿದ್ದಾರೆ. ಅರ್ಥ ತಿಳಿದು ಹಾಡಿದ್ದಾರೆ. ಇದು ಅವರು ಹಾಡಿದ ಹನ್ನೆರಡೂ ಭಾಷೆಗೂ ಅನ್ವಯವಾಗುವ ಸಂಗತಿ. ಕನ್ನಡದ ಮೊದಲ ಕವಿಗೀತೆಯನ್ನು ಆಧರಿಸಿದ ಚಿತ್ರಗೀತೆ ‘ಗೌರಿ’ಚಿತ್ರದ ‘ಯಾವ ಜನ್ಮದ ಮೈತ್ರಿ’ಯನ್ನು ಹಾಡಿದವರು ಎಸ್.ಜಾನಕಿಯವರೇ, ಇದಲ್ಲಿನ ‘ವಿಶ್ವ ಜೀವನವೊಂದು. ಪಲ್ಲವಿಯನ್ನು ಅವರು ಹೇಳಿದ ಕ್ರಮಕ್ಕೆ ಕುವೆಂಪು ಅವರೇ ಬೆರಗಾಗಿದ್ದರಂತೆ. ಬೇಂದ್ರೆಯವರ ‘ಮೂಡಣ ಮನೆಯ’ ಕವನಕ್ಕೆ ಧ್ವನಿಯಾದವರೂ ಜಾನಕಿ. ‘ಎಮ್ಮ ಮನೆಯಂಗಳದಿ’ ‘ತಾಯ ಬಾರ ಮೊಗವ ತೋರ’ ಹೀಗೆ ಅವರು ಹಾಡಿದ ಕವಿಗೀತೆಗಳ ಪಟ್ಟಿ ದೊಡ್ಡದಿದೆ. ‘ಮೈಸೂರು ಮಲ್ಲಿಗೆ’ ಚಿತ್ರದ ಗೀತೆಗಳ ರೆಕಾರ್ಡಿಂಗ್ ನಡೆದಿದ್ದು ಅರವಿಂದ್ ಸ್ಟುಡಿಯೋದಲ್ಲಿ. ಜಾನಕಿಯವರಿಂದ ಒಂದು ನರಸಿಂಹ ಸ್ವಾಮಿಯವರ ಕವಿತೆ ಹಾಡಿಸ ಬೇಕು ಎಂದು ನಾಗಾಭರಣ ಬಯಸಿದರು. ಜಾನಕಿ ಒಪ್ಪಿ ಅಲ್ಲಿಗೆ ಬಂದ ಮೇಲೆ ಗೊತ್ತಾಯಿತು ಅಲ್ಲಿ ಲಿಫ್ಟ್ ಇಲ್ಲ ಎಂದು. ಜಾನಕಿಯವರಿಗೆ ಅಸ್ತಮಾ ಸಮಸ್ಯೆ ಇರುವುದರಿಂದ ಬೇಡ ಎಂದು ಅವರು ಪತಿ ರಾಮಪ್ರಸಾದ್ ನಿರ್ಧರಿಸಿದ್ದರು. ಆದರೆ ಕವಿಗೀತೆ ಎನ್ನುವ ಒಂದೇ ಹಂಬಲಕ್ಕೆ ಜಾನಕಿ ತಮ್ಮ ಆರೋಗ್ಯವನ್ನು ಪಣವಾಗಿಟ್ಟು ಮೂರು ಮಹಡಿ ಹತ್ತಿ ಬಂದು ‘ದೀಪವು ನಿನ್ನದೆ ಗಾಳಿಯೂ ನಿನ್ನದೆ’ಗೀತೆಯನ್ನು ಹಾಡಿದರು.

ಜಾನಕಿ ಹೇಗೆ ಶಾಲೆಯ ಮಟ್ಟಿಲನ್ನು ತುಳಿದವರಲ್ಲವೂ ಹಾಗೆ ಶಾಸ್ತ್ರೀಯ ಸಂಗೀತವನ್ನೂ ಕಲಿತವರಲ್ಲ. ಆದರೆ ಸವಾಲಿನಿಂದಲೇ ಬಹಳ ಕಷ್ಟದ ಗೀತೆಗಳನ್ನು ಹಾಡಿದ್ದಾರೆ. ‘ಸನಾದಿ ಅಪ್ಪಣ್ಣ’ಚಿತ್ರದಲ್ಲಿ ಬಿಸ್ಮಲ್ಲಾ ಖಾನರ ಶೆಹನಾಯಿಗೆ ಸಮನಾಗಿ ಹಾಡಿದ ‘ಕರೆದರೂ ಕೇಳದೆ’ ಗೀತೆಯನ್ನು ಮರೆಯಲು ಸಾಧ್ಯವೆ? ‘ಹೇಮಾವತಿ’ಚಿತ್ರದಲ್ಲಿ ‘ಶಿವ ಶಿವ ಎನ್ನದ ನಾಲಿಗೆ ಏಕೆ” ಎನ್ನವ ಗೀತೆ ಒಂದು ಸಾಲು ತೋಡಿ ರಾಗದಲ್ಲಿದ್ದರೆ ಇನ್ನೊಂದು ಸಾಲು ಅಭೋಗಿ ರಾಗದಲ್ಲಿದೆ. ಈ ಗೀತೆಯ ಸಂಗೀತ ನಿರ್ದೇಶಕ ಎಲ್.ವೈದ್ಯನಾಥನ್ ಅವರೇ ಹೇಳಿದಂತೆ ಜಾನಕಿಯವರಲ್ಲದೆ ಇನ್ಯಾರೂ ಹಾಡಲಾಗದ ಗೀತೆ ಇದು. ನಾಲ್ಕು ವರ್ಷದ ಬಾಲಕಿಯಿಂದ ಹಿಡಿದು ತೊಂಬತ್ತು ವರ್ಷದ ಮುದುಕಿಯವರೆಗೆ ಎಲ್ಲಾ ವಯಸ್ಸಿಗೂ ಧ್ವನಿಯಾಗ ಬಲ್ಲ ಜಾನಕಿ ನಮ್ಮ ಕಾಲದ ಅದ್ಭುತ.

ಇಷ್ಟೆಲ್ಲಾ ನೆನಪಾಗಲು ಕಾರಣ, ಇಂದು ಏಪ್ರಿಲ್ 23 ಅವರ ಜನ್ಮದಿನ… ಅವರಿಗೆ ಶುಭ ಕೋರುವ ಜೊತೆಗೆ ಇಂದಿನ ಗಾಯಕರು ಅವರಿಂದ ಸ್ವಾಭಿಮಾನ ಮತ್ತು ಸಂಸ್ಕೃತಿಯ್ನು ಕಲಿಯಲಿ ಎಂದು ಆಶಿಸುತ್ತೇನೆ.

2 COMMENTS

  1. lekhana chennagide. gowri kavigeethe aadharisida modala geete embudu sariye ?
    mukthi chithradalli gss, ksn kavanagalu ive.
    bendre avara kuniyonu baara kooda ide.
    ta. ra. su. geethegalu ive.
    innoo ive endu nenapu. sadyakke holeyuttilla.

  2. ಲೇಖನ ಚೆನ್ನಾಗಿದೆ. ಆದರೆ ಪ್ರಶಸ್ತಿ ಬಗ್ಗೆ ಪರಿಶೀಲಿಸುವುದು ಒಳ್ಳೆಯದು. 2015 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ೫೯ ಗಣ್ಯರ ಪೈಕಿ ಜಾನಕಿಯವರೂ ಒಬ್ಬರು ಎಂಬುದು ನನ್ನ ಬಲವಾದ ಅನುಮಾನ. ದಯವಿಟ್ಟು ಪರಿಶೀಲಿಸಿ.

Leave a Reply