ಸುದ್ದಿ ಸಂತೆ: ದರ್ಗಾ ಪ್ರವೇಶಕ್ಕೆ ಮುಂದಾದ ತೃಪ್ತಿಗೆ ಸೇನೆ ಬೆದರಿಕೆ, ಜಪಾನ್ ನಲ್ಲಿ ಉದ್ಯೋಗ ಸುಗ್ಗಿ, ಅಶ್ವಿನ್ ರಾವ್ ಗೆ ಜಾಮೀನಿಲ್ಲ, ಇತರೆ ಸುದ್ದಿಗಳು..

ಮಹಿಳೆಯರ ನಿಷೇಧ ಇರುವ ಹಿಂದು ದೇವಾಲಯಗಳಲ್ಲಿ ಪ್ರವೇಶಕ್ಕಾಗಿ ಹೋರಾಟ ನಡೆಸುತ್ತಿರುವ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ, ಶನಿ ಸಿಂಗ್ಣಾಪುರ ಮತ್ತು ತ್ರಿಂಬಕೇಶ್ವರ ದೇವಸ್ಥಾನಗಳ ಯಶಸ್ಸಿನ ನಂತರ ಇದೀಗ ಮಹಾರಾಷ್ಟ್ರದ ಹಾಜಿ ಅಲಿ ದರ್ಗಾದತ್ತ ಹೊರಳಿದೆ. ಇದೇ ಏ. 28 ರಂದು ದರ್ಗಾ ಪ್ರವೇಶಿಸಲು ನಿರ್ಧಾರ ಮಾಡಿದ್ದು, ಇದಕ್ಕೆ ಶಿವಸೇನೆ ನಾಯಕ ಹಾಜಿ ಅರಫ್ತ್ ವಿರೋಧ ವ್ಯಕ್ತ ಪಡಿಸಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ ಮಹಿಳೆಯರು ದರ್ಗಾದ ಮಜಾರ್-ಇ-ಶರಿಫ್ ಅನ್ನು ಮುಟ್ಟುವ ಹಾಗಿಲ್ಲ. ನಾವು ಕೂಡ ಇದಕ್ಕೆ ಅವಕಾಶ ನೀಡುವುದಿಲ್ಲ. ತೃಪ್ತಿ ದೇಸಾಯಿ ಅವರ ನಿರ್ಧಾರ ಖಂಡಿನಿಯ. ಅವರೇನಾದರೂ ಪ್ರವೇಶಕ್ಕೆ ಯತ್ನಿಸಿದರೆ ಚಪ್ಪಲಿ ಏಟು ಬೀಳಲಿದೆ ಎಂದು ಬೆದರಿಕೆ ಹಾಕಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ದೇಸಾಯಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಇಂತಹ ಬೆದರಿಕೆ ಹಾಕುವುದು ತಪ್ಪು. ಹಾಜಿ ಅರಫ್ತ್ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ದರ್ಗಾ ಪ್ರವೇಶ ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಏ. 20 ರಂದೇ ‘ಹಾಜಿ ಅಲಿ ಫಾರ್ ಆಲ್’ ಎಂಬ ವೇದಿಕೆ ಅನಾವರಣಗೊಳಿಸಿದ್ದು, ಮುಸ್ಲಿಂ ಮಹಿಳೆಯರು ಸಾಥ್ ನೀಡುವಂತೆ ಮನವಿ ಮಾಡಿದ್ದಾರೆ.

ಎನ್ ಜಿ ಒ ಸಂಸ್ಥೆಯೊಂದು ಮಹಿಳೆಯರ ದರ್ಗಾ ಪ್ರವೇಶ ನಿರ್ಬಂಧ ಪ್ರಶ್ನಿಸಿ ಮುಂಬಯಿ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಸರ್ಕಾರದ ಅಭಿಪ್ರಾಯ ಕೇಳಿತ್ತು. ದರ್ಗಾ ಪ್ರವೇಶಕ್ಕೆ ತಮ್ಮ ಕಡೆಯಿಂದ ಯಾವುದೇ ಆಕ್ಷೇಪ ಇಲ್ಲ ಎಂದು ಸರಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ ದರ್ಗಾದ ಟ್ರಸ್ಟಿ ರಿಜ್ವಾನ್ ಮಹಿಳೆಯರ ದರ್ಗಾ ಪ್ರವೇಶ ಒಪ್ಪುವುದಿಲ್ಲ, ಅವರ ಸುರಕ್ಷತೆ ದೃಷ್ಟಿಯಿಂದ ನಿರ್ಬಂಧ ಹೇರಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು.

ಭಾರತೀಯರಿಗೆ ಜಪಾನ್ ನಲ್ಲಿ ವಿಫುಲ ಉದ್ಯೋಗಾವಕಾಶ

ಪ್ರತಿಭಾವಂತ ಯುವ ಸಮುದಾಯದ ಕೊರತೆ ಎದುರಿಸುತ್ತಿರುವ ಜಪಾನ್ ಅದಕ್ಕಾಗಿ ಇದೀಗ ಭಾರತದತ್ತ ಕಣ್ಣು ಹಾಕಿದೆ. ಸರಳ ಜಪಾನಿ ಭಾಷೆ ಕಲಿತಿರುವ ಯುವಜನರಿಗೆ ಉದ್ಯೋಗ ನೀಡಲು ಮುಂದಾಗಿದೆ.

ಜಪಾನ್ ಸರ್ಕಾರದ ಪರ ಅಲ್ಲಿನ ಉದ್ಯಮಿಗಳ ನಿಯೋಗ ಕೈಗೊಂಡಿರುವ ಭಾರತ ಭೇಟಿ ಅಂಗವಾಗಿ  ರಾಜ್ಯದ ಉನ್ನತ ಶಿಕ್ಷಣ ಸಚಿವ ಜಯಚಂದ್ರ ಅವರನ್ನು ಶನಿವಾರ ಭೇಟಿ ಮಾಡಿತ್ತು. ನಂತರ ಮಾತನಾಡಿದ ಜಪಾನ್ ನಿಯೋಗದ ಮುಖ್ಯಸ್ಥ ಸುಬಬಟಾ ಚಾನ್,  ಜಪಾನ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ 40 ಸಾವಿರ, ನರ್ಸಿಂಗ್ ಹಾಗೂ ಕೌಶಲ್ಯಾಧಾರಿತ ತರಬೇತಿ ಪಡೆದವರಿಗೆ 4 ಲಕ್ಷ ಉದ್ಯೋಗಾವಕಾಶವಿದೆ. ಕನಿಷ್ಠ ₹ 2.50 ಲಕ್ಷ ಮಾಸಿಕ ವೇತನ ದೊರೆಯಲಿದ್ದು, ಪದವಿ ಜೊತೆಗೆ ಕನಿಷ್ಠ ಸರಳ ಜಪಾನಿ ಭಾಷೆ ಕಲಿತಿದ್ದರೆ ಸಾಕು ಎಂದರು.

ಕರ್ನಾಟಕ ಸೇರಿದಂತೆ ದೇಶದ ನಾನಾ ವಿಶ್ವ ವಿದ್ಯಾಯಲಗಳಲ್ಲಿ ಜಪಾನಿ ಕಲಿಕಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿಲಾಗಿದೆ. ಈ ಸಂಬಂಧ ಮೇ 3 ರಂದು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಭೆ ಕರೆಯಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಅಶ್ವಿನ್ ರಾವ್ ಗೆ ಜಾಮೀನು ನಿರಾಕರಣೆ

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ವೈ.ಅಶ್ವಿನ್ ರಾವ್ ಮತ್ತು ಮೂವರು ಆರೋಪಿಗಳಿಗೆ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಶನಿವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಜಿ ಲೋಕಾಯುಕ್ತ ನ್ಯಾ.ವೈ ಭಾಸ್ಕರ ರಾವ್ ಪುತ್ರ ವೈ ಅಶ್ವಿನ್, ವಿ. ಭಾಸ್ಕರ್, ಎನ್. ನರಸಿಂಹ ಮೂರ್ತಿ ಹಾಗೂ ಹೊಟ್ಟೆ ಕೃಷ್ಣನಿಗೆ ಜಾಮೀನು ನೀಡಲು ನಿರಾಕರಿಸಿದೆ. ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

ವಿಧಾನಸಭಾ ಕ್ಷೇತ್ರಗಳ ಬಹುಕೋಟಿ ಹಗರಣಕ್ಕೆ ನ್ಯಾಯಾಂಗ ಸಮಿತಿ ರಚನೆ

ರಾಜರಾಜೇಶ್ವರಿ ನಗರ, ಗಾಂಧಿನಗರ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಲ್ಲಿ 2013-14 ನೇ ಸಾಲಿನ ನಾನಾ ಅಭಿವೃದ್ಧಿ ಕಾರ್ಯಗಳಲ್ಲಿ ನಡೆದಿರುವ ಬಹುಕೋಟಿ ಹಗರಣದ ವಿಚಾರಣೆಗೆ ನ್ಯಾಯಾಂಗ ಸಮಿತಿ ರಚಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಶನಿವಾರ ತಿಳಿಸಿದರು.

ಹಗರಣ ಕುರಿತು ಕಠಾರಿಯಾ ಸಮಿತಿ ಮತ್ತು ಸಿಐಡಿ ನೀಡಿರುವ ವರದಿ ಆಧರಿಸಿ ತಪ್ಪಿತಸ್ಥರನ್ನು ಗುರುತಿಸಲು ನಿವೃತ್ತ ನ್ಯಾಯಾಧೀಶರು ಮತ್ತು ಮೂವರು ಪಿಡಬ್ಲ್ಯುಡಿ ನಿವೃತ್ತ ಅಧಿಕಾರಿಗಳನ್ನೊಳಗೊಂಡ ನ್ಯಾಯಾಂಗ ಸಮಿತಿಯನ್ನು ರಚಿಸಲಾಗುತ್ತದೆ ಎಂದರು.

600 ಲಕ್ಷ ಟನ್ ಆಹಾರ ಧಾನ್ಯ ಲಭ್ಯ:ಪಾಸ್ವಾನ್

ಪ್ರಸಕ್ತ ವರ್ಷಕ್ಕೆ ಅಗತ್ಯವಿರುವಷ್ಟು ಆಹಾರ ಧಾನ್ಯಗಳನ್ನು ಭಾರತೀಯ ಆಹಾರ ನಿಗಮ ಶೇಖರಣೆ ಮಾಡಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. 549 ಲಕ್ಷ ಟನ್ ಬೇಡಿಕೆಗಿಂತ ಹೆಚ್ಚು ಅಂದರೆ ಸುಮಾರು 600 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯಗಳನ್ನು ಸಂಗ್ರಹಿಸಿಡಲಾಗಿದೆ ಎಂದಿದ್ದಾರೆ.

ಭಾರತ ಕಾಲ್ ಸೆಂಟರ್ ಪ್ರತಿನಿಧಿಯ ಅಣಕಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಭಾರತೀಯ ಕಾಲ್ ಸೆಂಟರ್ ಪ್ರತಿನಿಧಿಯ ಧ್ವನಿಯನ್ನು ಅಣಕಿಸಿದ್ದಾರೆ. ಇದೇ ವೇಳೆ ಭಾರತ ಒಂದು ಉತ್ತಮ ರಾಷ್ಟ್ರವಾಗಿದ್ದು, ಅದರ ನಾಯಕರ ವಿರುದ್ಧ ಕೋಪ ಇಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.

‘ನಾನು ಕ್ರೆಡಿಟ್ ಕಾರ್ಡ್ ಬಗ್ಗೆ ವಿಚಾರಿಸುವ ನೆಪದಲ್ಲಿ ಕಂಪನಿಗೆ ಕರೆ ಮಾಡಿದೆ. ಆಗ ನನ್ನೊಂದಿಗೆ ಮಾತನಾಡಿದ ವ್ಯಕ್ತಿ ಭಾರತೀಯ. ನೀವು ಎಲ್ಲಿಯವರು ಎಂದು ಕೇಳಿದೆ. ಆಗ ನಾನು ಭಾರತೀಯ ಎಂದ. ಹೌದೇ, ಒಳ್ಳೇಯದು ಎಂದೇಳಿ ಫೋನ್ ಇಟ್ಟೆ. ನನ್ನ ಜತೆ ಭಾರತೀಯ ವ್ಯಕ್ತಿ ಮಾತನಾಡಲು ಹೇಗೆ ಸಾಧ್ಯವಾಯಿತು?’ ಎಂದು ಟ್ರಂಪ್ ಡೆಲಾವೆರ್ ನಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.

‘ಭಾರತ ಉತ್ತಮ ದೇಶ. ಅದರ ನಾಯಕರ ಮೇಲೆ ನನಗೆ ಕೋಪವಿಲ್ಲ. ಆದರೆ ನನಗೆ ನಮ್ಮ ನಾಯಕರ ಮೇಲೆಯೇ ಕೋಪ. ಅವರು ನಮ್ಮ ಕೆಲಸವನ್ನು ಕಿತ್ತುಕೊಂಡಿಲ್ಲ. ನಾವೇ ಅದನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ಭಾರತ, ಚೀನಾ, ಜಪಾನ್ ಮತ್ತು ವಿಯೆಟ್ನಾ ದೇಶಗಳ ಮೇಲೆ ಸಿಟ್ಟಿಲ್ಲ’ ಎಂದಿದ್ದಾರೆ. ಆ ಮೂಲಕ ತಮ್ಮ ಪ್ರಚಾರದ ಆರಂಭಿಕ ದಿನಗಳಲ್ಲಿ, ಅಮೆರಿಕದಲ್ಲಿನ ಉದ್ಯೋಗಗಳನ್ನು ವಿದೇಶಿಗರು ಕಿತ್ತುಕೊಳ್ಳುತ್ತಿದ್ದಾರೆ ಎಂದು ಭಾರತ ಮತ್ತಿತರ ದೇಶಗಳ ಮೇಲೆ ಕಿಡಿ ಕಾರುತ್ತಿದ್ದ ಟ್ರಂಪ್ ಇದೀಗ ರಾಗ ಬದಲಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಪುಣೆ ರೈಸಿಂಗ್ ಜೇಂಟ್ಸ್ ವಿರುದ್ಧ ಶುಕ್ರವಾರ ಪುಣೆಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂದಗತಿಯ ಬೌಲಿಂಗ್ ಮಾಡಿದ್ದಕ್ಕೆ ನಾಯಕ ವಿರಾಟ್ ಕೊಹ್ಲಿಗೆ ₹ 12 ಲಕ್ಷ ದಂಡ ವಿಧಿಸಲಾಗಿದೆ.
  • ತನ್ನ ಸೌಂದರ್ಯದಿಂದ ಯುವಕರ ಮನಗೆದ್ದಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ಲೇಖಕಿಯಾಗುತ್ತಿದ್ದಾಳೆ. ಸ್ವೀಟ್ ಡ್ರೀಮ್ಸ್ ಎಂಬ 12 ಸಣ್ಣಕಥೆಗಳ ಪುಸ್ತಕವನ್ನು ಬರೆಯುವ ಮೂಲಕ ಸನ್ನಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾಳೆ.
  • ಮಹಾರಾಷ್ಟ್ರದ ಬರ ಪರಿಹಾರಕ್ಕೆ ಹಮ್ಮಿಕೊಂಡಿರುವ ‘ಜಲ್ ಯುಕ್ತ ಲಾತೂರ್’ ಕಾರ್ಯಕ್ರಮಕ್ಕೆ ನಟ ರಿತೇಶ್ ದೇಶ್ ಮುಖ್ ₹ 25 ಲಕ್ಷ ಕೊಡುಗೆ ನೀಡಿದ್ದಾರೆ.

Leave a Reply