ಚಿಕ್ಕಬಳ್ಳಾಪುರ ರೈತ ಆನಂದ್ ಚಿತಾಗ್ನಿ ಆರುವ ಮೊದಲೇ ಶುರುವಾಗಿದೆ ದರಿದ್ರ ರಾಜಕೀಯ!

ಡಿಜಿಟಲ್ ಕನ್ನಡ ವಿಶೇಷ

ಸಾಗುವಳಿ ಚೀಟಿ ಸಿಗಲಿಲ್ಲ, ಕಷ್ಟಪಟ್ಟು ಬೆಳೆದ ಫಸಲು ಕೈಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರದ ಆವಲಹಳ್ಳಿಯ ರೈತ ಆನಂದಕುಮಾರ್ ಆತ್ಮಹತ್ಯೆ ಮಾಡಿಕೊಂಡರು ಎಂಬುದೇನೋ ಸರಿ. ಆದರೆ ಅವರಿಗೆ ಆ ಸಾಗುವಳಿ ಚೀಟಿ ಸಿಗದೇ ಹೋದದ್ದಕ್ಕೆ ಕಾರಣ ರಾಜಕೀಯ. ಈಗವರು ಸತ್ತಮೇಲೆ ನಡೆಯುತ್ತಿರುವುದೂ ಮತ್ತದೇ ದರಿದ್ರ ರಾಜಕೀಯ!

ಚಿಕ್ಕಬಳ್ಳಾಪುರ ಜಿಲ್ಲೆ ಅಂಗರೇಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಲಹಳ್ಳಿಯಲ್ಲಿ 120 ಎಕರೆ ಸರಕಾರಿ ಗೋಮಾಳ ಜಮೀನಿದೆ. ಬಹಳ ವರ್ಷಗಳ ಹಿಂದೆಯೇ ಊರಿನ ಸುಮಾರು 52 ಕುಟುಂಬಗಳು ಈ ಜಮೀನನ್ನು ಹಂಚಿಕೊಂಡು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಹೀಗೆ ಹಂಚಿಕೆ ಮಾಡಿಕೊಂಡವರಲ್ಲಿ ಎಲ್ಲ ವರ್ಗದವರೂ ಸೇರಿದ್ದಾರೆ. ತಮ್ಮ ಪಾಲಿಗೆ ಬಂದ 3.12 ಎಕರೆ ಭೂಮಿಯಲ್ಲಿ ಆನಂದಕುಮಾರ್ ಕುಟುಂಬ ಸಹ ಸುಮಾರು 30 ವರ್ಷಗಳಿಂದ ಬೇಸಾಯ ಮಾಡಿಕೊಂಡು ಬಂದಿತ್ತು. ಈ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಆನಂದ್ ಗೋಡಂಬಿ ಕೃಷಿ ಮಾಡಿದ್ದು, ಫಸಲು ಕಣ್ಣು ಕುಕ್ಕುವಂತೆ ಬಂದಿತ್ತು. ಕೊಯಿಲು ಬಾಕಿ ಇತ್ತು.

ಅನಂದಕುಮಾರ್ ಕುಟುಂಬ ಹಿಂದಿನಿಂದಲೂ ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತರು. ಅವರ ತಾಯಿ ಹಿಂದೆ ಜೆಡಿಎಸ್ ನಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಗೆದ್ದು, ಉಪಾಧ್ಯಕ್ಷರೂ ಆಗಿದ್ದರು. ಕಾಂಗ್ರೆಸ್ ನ ಕೃಷ್ಣಮೂರ್ತಿ ಎಂಬುವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು, ಅವರಿಗೂ ಈ ಕುಟುಂಬಕ್ಕೂ ಪಕ್ಷ ರಾಜಕೀಯ ವೈಷಮ್ಯ ಇತ್ತು. ಮತ್ತೊಬ್ಬ ಕಾಂಗ್ರೆಸ್ ಮುಖಂಡ ಮುನೇಗೌಡ ಈ ಕೃಷ್ಣಮೂರ್ತಿ ಬೆನ್ನಿಗಿದ್ದು, ಇವರಿಬ್ಬರು ಆನಂದ್ ಕುಟುಂಬಕ್ಕೆ ಪರೋಕ್ಷ ಕಿರುಕುಳ ನೀಡುತ್ತಾ ಬಂದಿದ್ದರು. ಕಾಂಗ್ರೆಸ್ ಡಾ. ಕೆ. ಸುಧಾಕರ್ ಚಿಕ್ಕಬಳ್ಳಾಪುರ ಶಾಸಕರಾದ ನಂತರ ಆನಂದ್ ಕುಟುಂಬದ ಮೇಲೆ ಇದ್ದದ್ದು, ಇಲ್ಲದ್ದನ್ನು ದೂರುತ್ತಾ ಕಿರುಕುಳ ಹೆಚ್ಚು ಮಾಡಿದ್ದರು. ಇತ್ತೀಚೆಗೆ ಲೋಕಾಯುಕ್ತ ಬದಲು ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ನಿಲವು ವಿರೋಧಿಸಿ ಚಿಕ್ಕಬಳ್ಳಾಪುರ ಡಿಸಿ ಕಚೇರಿ ಎದಿರು ಜೆಡಿಎಸ್ ನಡೆಸಿದ ಪ್ರತಿಭಟನೆಯಲ್ಲಿ ಆನಂದ್ ಕೂಡ ಭಾಗವಹಿಸಿದ್ದರು ಅಂತ ಶಾಸಕ ಸುಧಾಕರ್ ಅವರ ಕಿವಿ ಕಚ್ಚಲಾಯಿತು. ಅವರಿಗೆ ತಕ್ಕ ಪಾಠ ಕಲಿಸಬೇಕು. ಆವಲಹಳ್ಳಿಯಲ್ಲಿ ಆನಂದ್ ಕುಟುಂಬ ಸಾಗುವಳಿ ಮಾಡುತ್ತಿರುವ ಜಮೀನನ್ನು ಸರಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಮೊದಲಿಂದಲೂ ಇತ್ತು. ಅವರ ಜಮೀನಿನಲ್ಲಿ ತುಂಬಿ-ತುಳುಕುತ್ತಿದ್ದ ಗೋಡಂಬಿ ಫಸಲು ನೋಡಿದ ಮೇಲೆ ಮತ್ತಷ್ಟು ಜಾಸ್ತಿಯಾಯಿತು. ಜತೆಗೆ ಎಸಿಬಿ ಪ್ರತಿಭಟನೆ ಕಾರಣವೂ ಸೇರಿಕೊಂಡಿತು.

ಈ ಕೃಷ್ಣಮೂರ್ತಿ ಮತ್ತು ಮುನೇಗೌಡ ಅವರ ಒತ್ತಡದಿಂದ ವಾರದ ಹಿಂದೆ ಅಂದರೆ ಏ. 16 ರಂದು ಅಂಗರೇಕನಹಳ್ಳಿ ಪಂಚಾಯಿತಿ ಅಧಿಕಾರಿಗಳು ಆನಂದ್ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಗೋಡಂಬಿ ಹರಾಜಿಗೆ ಮುಂದಾಗಿದ್ದರು. ಆದರೆ ಗ್ರಾಮಸ್ಥರು ಪ್ರತಿರೋಧ ಒಡ್ಡಿದ್ದರಿಂದ ವಾಪಾಸಾಗಿದ್ದರು. ಆದರೆ ಏ. 21 ರಂದು ಮತ್ತೆ ಹರಾಜು ಮಾಡುವುದಾಗಿ ಹೇಳಿದ್ದರು. ಅದಕ್ಕೆ ಮುನ್ನಾದಿನ ಅಂದರೆ 20 ರಂದು ಆನಂದ್ ಜಿಲ್ಲಾಧಿಕಾರಿ ವೆಂಕಟೇಶ್ ಅವರನ್ನು ಭೇಟಿ ಮಾಡಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದಿರುವ ಗೋಡಂಬಿ ಹರಾಜು ತಪ್ಪಿಸಬೇಕು. ಅದನ್ನು ತಾವೇ ಮಾರಾಟ ಮಾಡಲು ನೆರವಾಗಬೇಕು ಎಂದು ಕೋರಿದರು. ಆದರೆ ಡಿಸಿ ಅವರ ಮೇಲೆ ಅದ್ಯಾವ ಒತ್ತಡವಿತ್ತೋ ಅವರು ಅದನ್ನು ಉಪೇಕ್ಷಿಸಿದರು. ಇದರಿಂದ ಬೇಸತ್ತು ವಿಷ ಸೇವಿಸಿದ ಅನಂದ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರಿಂದ ರೊಚ್ಚಿಗೆದ್ದ ಜನ ಕೃಷ್ಣಮೂರ್ತಿ, ಮುನೇಗೌಡ, ಸುಧಾಕರ್ ವಿರುದ್ಧ ಪ್ರತಿಭಟಿಸಿದ್ದು ಈಗ ಇತಿಹಾಸ.

ಸತ್ತವರ ಬಗ್ಗೆ ಕಹಿ ಮಾತಾಡಬಾರದು ಅನ್ನೋದು ಪ್ರತೀತಿ. ಆದರೆ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಅವರು ಆನಂದ್ ಚಿತಾಗ್ನಿ ಆರುವ ಮೊದಲೇ ರಾಜಕಾರಣ ಶುರುವಿಟ್ಟುಕೊಂಡಿದ್ದಾರೆ. ಅಂತ್ಯಸಂಸ್ಕಾರ ಮುಗಿದು ದಿನ ಕಳೆಯುವ ಮೊದಲೇ ಆನಂದ್ ಆತ್ಮಹತ್ಯೆಗೆ ಅವರೇ ಜವಾಬ್ದಾರರು, ಅವರು ಮಾಡಿಕೊಂಡಿರೋ ತಪ್ಪಿಗೆ ಬೇರೆಯವರು ಹೇಗೆ ಹೊಣೆ ಆಗ್ತಾರೆ , ಅವರು ಸಾಗುವಳಿ ಮಾಡುತ್ತಿದ್ದ ಜಮೀನನ್ನು ಅವರ ಕುಟುಂಬದವರಿಗೆ ಕೊಡೋದಿಕ್ಕೆ ಬರೋದಿಲ್ಲ, ಬೇಕಾದರೆ ಬೇರೆ ಕಡೆ ಕೊಡ್ತೀವಿ ಅಂತ ಹೇಳಿದ್ದಾರೆ. ಯಾವ ಸಂದರ್ಭದಲ್ಲಿ, ಏನು ಮಾತಾಡಬೇಕು ಎಂಬ ಪರಿಜ್ಞಾನ ಇಲ್ಲದಿದ್ದರೆ ಮಾತ್ರ ಹೀಗಾಗುತ್ತದೆ.

ಆನಂದ್ ಕುಮಾರ್ ಅವರೇನು ತಿಂದು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ರಾಜಕೀಯ ಹಗೆಸಾಧಕರ ಚಿತಾವಣೆಯಿಂದ ಚಿತೆ ಏರಿದ್ದಾರೆ. ಹಾಗಂತ ಆನಂದ್ ಕುಮಾರ್ ತಮ್ಮ ರವಿಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ. ನನ್ನ ಅಣ್ಣನ ಸಾವಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಕಾರಣ ಅಂತ. ಹೀಗಿರುವಾಗ ಸುಧಾಕರ್ ಅವರೇಕೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಧಿಕ್ಕಾರ ಕೂಗಿಸಿಕೊಂಡವರ ಪಟ್ಟಿಯಲ್ಲಿ ಇವರ ಹೆಸರು ಇದ್ದದ್ದಕ್ಕೋ ಅಥವಾ ದೇವೇಗೌಡರು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದರಲ್ಲಿ ಜೆಡಿಎಸ್ ಮತಗಳು ಹಾರಾಡಿದಂತೆ ಭಾಸವಾಗಿದ್ದರ ಪರಿಣಾಮವೋ ಗೊತ್ತಿಲ್ಲ. ಸುಧಾಕರ್ ಅವರು ತಮ್ಮದೇನೂ ತಪ್ಪಿಲ್ಲ ಅಂತ ಈಗ ಪ್ರತಿಪಾದಿಸುತ್ತಿರುವುದರಲ್ಲಿ ಯಾವುದೇ ಅರ್ಥ ಇಲ್ಲ. ಅವರಿಗೆ ಚೆನ್ನಾಗಿ ಗೊತ್ತು, ಭೂಮಂಜೂರು ಕಾಯಿದೆ ಪ್ರಕಾರ ನಿರಂತರ ಹದಿನೈದು ವರ್ಷ ಸಾಗುವಳಿ ಮಾಡಿದವರಿಗೆ ಅದರ ಒಡೆತನ ಸೇರುತ್ತದೆ, ಆನಂದ್ ಕುಮಾರ್ ಕುಟುಂಬದವರು ಅಲ್ಲಿ 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ, 1988 ರಲ್ಲೇ ಸಾಗುವಳಿ ಚೀಟಿಗಾಗಿ ಆರ್ಜಿಯನ್ನೂ ಸಲ್ಲಿಸಿದ್ದಾರೆ ಅಂತ. ಹೀಗಿರುವಾಗ ಆನಂದ್ ಜಮೀನಿನ ಗೋಡಂಬಿ ಫಸಲು ಹರಾಜಿಗೆ ಮುಂದಾಗಿದ್ದನ್ನು ಇವರೇಕೆ ತಡೆಯುವ ಪ್ರಯತ್ನ ಮಾಡಲಿಲ್ಲ. ಅವರ ಪಕ್ಷದವರು ಅವರ ಕೈ ಕಟ್ಟಿಹಾಕಿಬಿಟ್ಟಿದ್ದರೇ?

ಅದು ಹಾಳಾಗಿ ಹೋಗಲಿ, ಪರಿಹಾರ ವಿಷಯದಲ್ಲೂ ಸುಧಾಕರ್ ಕಡ್ಡಿ ಆಡಿಸುತ್ತಿರುವುದೇಕೇ? ಈಗಾಗಲೇ ರೋಶನ್ ಬೇಗ್ 5 ಲಕ್ಷ ರುಪಾಯಿ ಮತ್ತು ಎರಡು ಎಕರೆ ಭೂಮಿ ಪರಿಹಾರ ಘೋಷಿಸಿ ಆಗಿದೆ. ಆನಂದ್ ಕುಟುಂಬಕ್ಕೆ ಈಗಿನ ಸಾಗುವಳಿ ಜಮೀನು ಕೊಡೋಕೆ ಆಗೋದಿಲ್ಲ ಅಂತ ಹೇಳಲು ಇವರು ಯಾರು? ಅದನ್ನು ಹೇಳಬೇಕಾದವರು ಶಾಸಕರಲ್ಲ, ಬದಲಿಗೆ ಕಾನೂನು-ಕಾಯಿದೆ. ಹಾಗಾದರೆ ಇವರೇನು ಖಾಸಗಿ ಜಮೀನು ಖರೀದಿ ಮಾಡಿ ಪರಿಹಾರ ಕೊಡುತ್ತಾರೆಯೇ? ಬೇರೆ ಕಡೆ ಕೊಡೋದು ಸರಕಾರಿ ಭೂಮಿಯನ್ನೇ ತಾನೇ. ಅದನ್ನು ಈಗಿನ ಜಾಗದಲ್ಲೇ ಕೊಡಬಹುದಲ್ಲ. ಕಾನೂನಿನ ತೊಡಕುಗಳು ಇದ್ದರೆ ಸರಕಾರದಿಂದಲೇ ಅದನ್ನು ನಿವಾರಿಸಿಕೊಡಬಹುದಲ್ಲ. ತಮಗೆ ಬೇಕಾದವರಿಗೆ ನೂರಾರು ಎಕರೆ ಸರಕಾರಿ ಭೂಮಿಯನ್ನು ಡಿನೋಟಿಫೈ ಮಾಡಿ, ಉಪಕಾರ ಮಾಡುವ ಸರಕಾರಕ್ಕೆ, 30 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದ ಬಡಕುಟುಂಬಕ್ಕೆ ಆ ಜಮೀನು ದಕ್ಕುವಂತೆ ಮಾಡುವುದು ಅಷ್ಟೊಂದು ಕಷ್ಟವೇ?

ರಾಜ್ಯದಲ್ಲಿ ಕಳೆದೊಂದು ಆರ್ಥಿಕ ವರ್ಷದಲ್ಲಿ 1500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರಕ್ಕೆ ಆನಂದ್ ಆತ್ಮಹತ್ಯೆ ಇವುಗಳಲ್ಲಿ ಒಂದಾಗಿರಬಹುದು. ಈ ಆತ್ಮಹತ್ಯೆಗಳನ್ನು ನೋಡಿ, ನೋಡಿ ಅದರ ಭಾವನೆಯೇ ಸತ್ತು ಹೋಗಿರಬಹುದು. ಆನಂದ್ ಕುಟುಂಬಕ್ಕೆ ಪರಿಹಾರವನ್ನೂ ಕಲ್ಪಿಸಬಹುದು. ಆದರೆ ಆನಂದ್ ಜೀವ ವಾಪಸು ತರಲು ಸಾಧ್ಯವಿಲ್ಲ. ರಾಜಕೀಯಕ್ಕಿಂತ ಒಂದು ಜೀವ, ಆ ಜೀವ ನೆಚ್ಚಿಕೊಂಡಿದ್ದ ಒಂದು ಕುಟುಂಬ ದೊಡ್ಡದು ಎಂಬುದನ್ನು ಈಗಲಾದರೂ ಅರಿಯಬೇಕು. ಆನಂದ್ ಹೆಸರಲ್ಲಿ ಕೊಳವೆ ಬಾವಿ ತೋಡಿ ಊರಿನ ಜನರಿಗೆ ನೀರು ಕೊಡ್ತೀವಿ ಅಂತ ಹೇಳುತ್ತಿರೋ ಕಾಂಗ್ರೆಸ್ ಮುಖಂಡರಿಗೆ ನಾಚಿಕೆ ಆಗಬೇಕು. ಅವರು ಊರವರಿಗೆ ನೀರು ಕೊಡೋದಿಕ್ಕೆ ಆನಂದ್ ಸಾಯಬೇಕಿತ್ತೇ..?

Leave a Reply