ಪ್ರಧಾನಿ ಮನದ ಮಾತಲ್ಲಿ ಜಲಸಂರಕ್ಷಣೆ ವಿಚಾರ, ನಾವೇ ಸಕ್ಕರೆ ಕೊಟ್ಟು ಆಹ್ವಾನಿಸಿಕೊಂಡಿದ್ದೇ ಈ ಬರ?

ಡಿಜಿಟಲ್ ಕನ್ನಡ ವಿಶೇಷ

ಈ ಬಾರಿಯ ಪ್ರಧಾನಿಯವರ ‘ಮನ್ ಕೀ ಬಾತ್’ನಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರೂ ಇವತ್ತಿನ ಬರ ಪರಿಸ್ಥಿತಿಯನ್ನು ಎದುರಿಗಿರಿಸಿಕೊಂಡು ಜಲ ಸಂರಕ್ಷಣೆ ಬಗ್ಗೆ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಈ ಬಾರಿಯ ಮಳೆಗಾಲದಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಎಲ್ಲ ಯತ್ನಗಳನ್ನೂ ಮಾಡಲಿದ್ದೇವೆ ಎಂದರು ಪ್ರಧಾನಿ.

ಜತೆಯಲ್ಲೇ… ಬರ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳುವುದರಲ್ಲಿ ರೈತರ ಜವಾಬ್ದಾರಿಯೂ ಇದೆ ಎಂಬುದನ್ನೂ ಉದಾಹರಣೆಯೊಂದರ ಮೂಲಕ ಹೇಳಿದ್ದಾರೆ. ಅದು ಈ ಹೊತ್ತಿನಲ್ಲಿ ಎಲ್ಲರೆದೆಗೆ ಇಳಿಯಬೇಕಿದೆ.

ಅವರು ಹೇಳಿದ್ದು- ‘ಮಹಾರಾಷ್ಟ್ರದ ಅಹಮದ್ ನಗರದ ಹಿವೆರಿ ಬಜಾರ್ ರೈತರು ಜಲಸಂರಕ್ಷಣೆಯಲ್ಲಿ ಒಂದು ಅಮೋಘ ಕೆಲಸ ಮಾಡಿದ್ದಾರೆ. ಅತಿ ನೀರನ್ನು ಬೇಡುತ್ತಿದ್ದ ಕಬ್ಬು ಮತ್ತು ಬಾಳೆ ಬೆಳೆಗಳನ್ನು ಬದಲಿಸಿಕೊಂಡು, ಕಡಿಮೆ ನೀರು ಸಾಕಾಗುವ ತರಕಾರಿ- ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.’

ಈ ಮಾತುಗಳನ್ನಿಟ್ಟುಕೊಂಡು ನಾವು ಕೆಲವು ಹೆಚ್ಚುವರಿ ಮಾಹಿತಿಗಳನ್ನು ಆಯ್ದುಕೊಂಡು ವಿಶ್ಲೇಷಿಸಬೇಕಿದೆ.

ನಿಜ. ಇದು ಗಂಭೀರವಾಗಿ ಯೋಚಿಸಬೇಕಾದ ವಿಚಾರವೇ. ರೈತರ ವಿಷಯ ಬಂದಾಗ ಸರ್ಕಾರದ ವಿರುದ್ಧ ಆಕ್ರೋಶ- ಅಸಮಾಧಾನಗಳೆಲ್ಲ ಸರಿ. ಆದರೆ ಬೆಳೆಗಾರನಿಗೆ ಯಾವುದೇ ಜವಾಬ್ದಾರಿ ಬೇಕಿಲ್ಲ ಎಂಬ ಅತಿ ಭಾವುಕತನ ಒಳ್ಳೆಯದಲ್ಲ. ಬೇರೆ ಬೆಳೆ ಬೆಳೆಯಬಹುದಾದ ಅವಕಾಶಗಳಿದ್ದಾಗಿಯೂ, ತಾನು ಕಬ್ಬನ್ನು ಮಾತ್ರ ಬೆಳೆಯುತ್ತೇನೆ ಹಾಗೂ ಅದಕ್ಕೆ ಬೆಲೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ನಿಲುವು ತಾರ್ಕಿಕವೇ ಅಂತಲೂ ಯೋಚಿಸಬೇಕಿದೆ.

ಮಹಾರಾಷ್ಟ್ರದ ಹಲವೆಡೆ ಕುಡಿಯಲು ನೀರಿಲ್ಲದಂತೆ ಅಂತರ್ಜಲ ಪಾತಾಳಕ್ಕಿಳಿದಿರುವುದರಲ್ಲಿ ಬೆಳೆ ಪದ್ಧತಿಯ ಕೊಡುಗೆಯೂ ಸಾಕಷ್ಟಿದೆ.  ಒಂದು ಕಿಲೋಗ್ರಾಂ ಸಕ್ಕರೆ ಉತ್ಪಾದಿಸುವುದಕ್ಕಾಗುವಷ್ಟು ಕಬ್ಬು ಬೆಳೆಯುವುದಕ್ಕೆ ಮಹಾರಾಷ್ಟ್ರದಲ್ಲಿ 2100 ಲೀಟರ್ ನೀರು ಬೇಕಾಗುತ್ತದೆ. ಇದು ಮಣ್ಣಿನ ಗುಣದ ಆಧಾರದಲ್ಲಿ ಬೇರೆ ಬೇರೆ ರಾಜ್ಯಕ್ಕೆ ಬೇರೆ ಬೇರೆಯಾಗುತ್ತದೆ. ಬಿಹಾರದಲ್ಲಿ ಇಷ್ಟನ್ನೇ ಉತ್ಪಾದಿಸುವುದಕ್ಕೆ 822 ಲೀಟರ್ ನೀರು ಸಾಕಾದರೆ, ಆಂದ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಇದರ ಪ್ರಮಾಣ 2200 ಲೀಟರ್!

ಮರಾಠಾವಾಡಾದಲ್ಲಿ ವಾರ್ಷಿಕ 600-700 ಎಂಎಂ ಮಳೆಯಾಗುತ್ತದೆ. ಕಲ್ಲಿನ ಪ್ರದೇಶವಾದ್ದರಿಂದ ಇಂಗುವ ನೀರಿನ ಪ್ರಮಾಣ ಶೇ. 10ರಷ್ಟು ಮಾತ್ರ. ಇಲ್ಲಿ ಬೆಳೆಯುವ ಕಬ್ಬು ಒಟ್ಟಾರೆ 1200 ಎಂಎಂ ನೀರು ಹೀರಿಕೊಳ್ಳುತ್ತದೆ. ಅಂದಮೇಲೆ ಬಾವಿಗಳು, ಕೆರೆಕುಂಟೆಗಳು ಬತ್ತದೇ ಇನ್ನೇನಾಗುತ್ತವೆ?

2014-15 ರ ಸಾಲಿನಲ್ಲಿ ಭಾರತ ಇಲ್ಲಿನ ಆಂತರಿಕ ಬೇಡಿಕೆಗಿಂತ 3.7 ಮಿಲಿಯನ್ ಟನ್ ಹೆಚ್ಚುವರಿ ಸಕ್ಕರೆ ಉತ್ಪಾದಿಸಿತು. ಅವೆಲ್ಲ ರಫ್ತಾದವು ಅಂದರೆ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಸಕ್ಕರೆ ರೂಪದಲ್ಲಿ ಅಷ್ಟೆಲ್ಲ ಅಂತರ್ಜಲವನ್ನು ಹೀರಿ ಕಳುಹಿಸಿ ನಾವು ಕುಡಿಯಲು ನೀರಿಲ್ಲದೇ ಬಡವಾದೆವು! ಆ ರಫ್ತಿನಿಂದ ಹಣ ಬಂದಿರಬಹುದು. ಆದರೆ ಮನೆಯಲ್ಲಿ ಬರವನ್ನು ಬರಮಾಡಿಕೊಂಡು ದುಡಿಯಬೇಕಿದೆಯೇ ಡಾಲರುಗಳನ್ನು?

ನಾವು ಹತ್ತಿಬೆಳೆಯಲ್ಲಿ ಭಾರೀ ವಿಕ್ರಮ ಸಾಧಿಸಿದ್ದೇವೆ ಅಂತ ಕೊಚ್ಚಿಕೊಳ್ಳುತ್ತೇವೆ? ಆದರೆ ತೆತ್ತ ಬೆಲೆ? ಒಂದು ಕೆಜಿ ಹತ್ತಿ ಬೆಳೆಯುವುದಕ್ಕೆ ಕನಿಷ್ಠ 7 ಸಾವಿರ ಲೀಟರ್ ನೀರು ಬೇಕು.

ಜೋಳ, ಬಾರ್ಲಿ, ತರಕಾರಿ, ಹಣ್ಣು, ಧಾನ್ಯಗಳು ಇವ್ಯಾವವೂ ಈ ಪರಿ ನೀರು ಬೇಡುವುದಿಲ್ಲ. ಮಿಶ್ರಬೆಳೆ ಪದ್ಧತಿ ಮಣ್ಣಿನ ಗುಣಮಟ್ಟ ಕಾಪಾಡುವುದಕ್ಕೆ, ಭೂಮಿಯ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸೋದಕ್ಕೆ ಪೂರಕ. ಇವುಗಳ ಸೇವನೆಯಿಂದ ನಮ್ಮ ದೇಹಕ್ಕೆ ಸಿಗುವ ಪೋಷಕಾಂಶಗಳೂ ಉತ್ಕೃಷ್ಟವೇ.

ಯಾವುದೋ ಒಂದನ್ನು ಅತಿಯಾಗಿ ಬೆಳೆದು ಉತ್ಪಾದನೆ ಹೆಚ್ಚಿತೆಂದು ತೋರಿಸುವುದೇ ಕೃಷಿಕ್ರಾಂತಿ ಎಂಬ ಭ್ರಮೆಯಲ್ಲಿರುವ ಸಮೂಹಕ್ಕೆ, ಈ ಕುರಿತ ಇನ್ನೂ ವಿಸ್ತಾರದ ‘ಮನ್ ಕೀ ಬಾತ್’ ಅಗತ್ಯವಿತ್ತು. ಆದರೂ ಉದಾಹರಣೆಯೊಂದರಲ್ಲಿ ಯೋಚನೆಯೊಂದನ್ನು ಬಿತ್ತಿದ್ದಾರೆ ಪ್ರಧಾನಿ. ಇದು ಹುಚ್ಚು ಓಟದಲ್ಲಿ ನಮ್ಮ ನೆಲದ ಜೀವಪಸೆಯನ್ನೇ ಬರಿದಾಗಿಸಿಕೊಳ್ಳುತ್ತಿರುವ ನಮ್ಮೆಲ್ಲರ ಮನಗಳಿಗೆ ನಾಟಲಿ.

Leave a Reply