ರಕ್ಷಣೆಯಷ್ಟೇ ತಮ್ಮ ಕೆಲಸ ಎನ್ನದ ಬಿ ಎಸ್ ಎಫ್ ಯೋಧರು, ನಕ್ಸಲ್ ಪೀಡಿತ ಊರಿಗೆ ನೀರು ತಂದರು!

(ಪ್ರಾತಿನಿಧಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್

ಭಾರತದ ಯೋಧರು ಕೇವಲ ಗಡಿ ಕಾಯುವುದು ಮಾತ್ರ ತಮ್ಮ ಕರ್ತವ್ಯ ಎಂದುಕೊಂಡಿಲ್ಲ. ತಮ್ಮ ಕರ್ತವ್ಯದ ಚೌಕಟ್ಟಿನ ಹೊರತಾಗಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವುದನ್ನು ಮೈಗೂಡಿಸಿಕೊಂಡಿದ್ದಾರೆ. ಭಾರತೀಯ ಯೋಧರು ಗಡಿ ಹಾಗೂ ನಕ್ಸಲ್ ಪೀಡಿತ ಪ್ರದೇಶದಲ್ಲಿನ ಜನರಿಗೆ ಸಹಾಯ ಮಾಡಿದ ಪ್ರಕರಣಗಳನ್ನು ಹಾಗಾಗ್ಗೆ ನೋಡುತ್ತಲೇ ಇದ್ದೀವಿ. ಈಗ ನಾವು ಹೇಳುತ್ತಿರೋ ವಿಷಯ, ಚತ್ತೀಸ್ ಗಢದಲ್ಲಿ ಮಾವೋವಾದಿ ನಕ್ಸಲರ ಪ್ರದೇಶ ಕಂಕೇರ್ ಜಿಲ್ಲೆಯ ಕೆಲ ಪ್ರದೇಶದ ಜನರಿಗೆ ಬದುಕಿನ ಆಶಾಕಿರಣವಾಗಿರೋ ಭಾರತೀಯ ಯೋಧರ ಯಶೋಗಾಥೆ ಬಗ್ಗೆ.

ಚತ್ತೀಸ್ ಗಢದ ಕಂಕೇರ್ ಜಿಲ್ಲೆಯ ಅಂಜ್ರೇಲ್ ಮತ್ತು ರಾವ್ಗಾಟ್ ಹಳ್ಳಿಗಳು ಮಾವೋವಾದಿಗಳ ಪ್ರಭಾವ ಹೆಚ್ಚಿರುವ ಪ್ರದೇಶ. ಈ ಪ್ರದೇಶ ಎಷ್ಟು ಅಪಾಯದ ಪರಿಸ್ಥಿತಿಯಲ್ಲಿದೆ ಎಂದರೆ, ಮಾವೋವಾದಿಗಳು ಕೆಲವೇ ಮೀಟರ್ ಅಂತರಕ್ಕೆ ಇಲ್ಲಿ ನೆಲಬಾಂಬ್ ಗಳನ್ನು ಅಳವಡಿಸಿರುತ್ತಾರೆ. ಇದಕ್ಕೆ ಯಾರು, ಯಾವಾಗ ಬಲಿಯಾಗುತ್ತಾರೆ ಹೇಳಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಸೇನಾ ಅಧಿಕಾರಿ ಸೇರಿದಂತೆ ಮೂವರು ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರು.

ಈ ಪರಿಸ್ಥಿತಿಯಲ್ಲಿ ಇಲ್ಲಿನ ಸುತ್ತಮುತ್ತಲಿನ ಜನರು ಕುಡಿಯುವ ನೀರಿಗೆ ಪ್ರತಿ ದಿನ 12 ಕಿ.ಮೀ ದೂರ ಕ್ರಮಿಸುವ ಪರಿಸ್ಥಿತಿಯಲ್ಲಿ ನರಳಾಡುತ್ತಿದ್ದರು. ಈ ಬಗ್ಗೆ ರಾವ್ಗಾಟ್ ದೇವಾಲಯದ ಅರ್ಚಕರು ಗಡಿ ಭದ್ರತಾ ಪಡೆಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ, ಸಹಾಯ ಮಾಡುವಂತೆ ಕೋರಿಕೊಂಡರು. ಮರುದಿನವೇ ಸೂಕ್ತ ಯೋಜನೆಯೊಂದಿಗೆ ಆಗಮಿಸಿದ ಯೋಧರು, ಈ ಹಳ್ಳಿಗಳಿಗೆ ಪೈಪ್ ಲೈನ್ ವ್ಯವಸ್ಥೆ ಕಲ್ಪಿಸಿದರು. ಒಂದು ಹೆಗಲ ಮೇಲೆ ಉದ್ದುದ್ದನೆಯ ಕಬ್ಬಿಣದ ಪೈಪ್ ಗಳು, ಮತ್ತೊಂದು ಹೆಗಲ ಮೇಲೆ ಬಂದೂಕು ಹೊತ್ತುಕೊಂಡು ಈ ಕಾಮಗಾರಿ ನಡೆಸಿದರು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು 15 ದಿನಗಳ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಿ, ಜನರ ನೀರಿನ ಕೊರತೆಯನ್ನು ನೀಗಿಸಿದರು.

ಈ ಯೋಧರಿಗೆ ಸರ್ಕಾರವಾಗಲಿ ಅಥವಾ ಯಾವುದೇ ಮೇಲಾಧಿಕಾರಿಯಾಗಲಿ ಈ ಕೆಲಸ ಮಾಡಲು ಆದೇಶ ನೀಡಿರಲಿಲ್ಲ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಪ್ರಾಣಕ್ಕೆ ಯಾವುದೇ ಖಾತರಿ ಇಲ್ಲದ ಪರಿಸ್ಥಿತಿಯಲ್ಲಿ ಈ ಕಾರ್ಯಸಾಧನೆ ಮಾಡಿದ್ದಾರೆ.

ಭಾರತೀಯ ಯೋಧರು ಕೇವಲ ನೀರಿನ ಪೈಪ್ ಲೈನ್ ಸಂಪರ್ಕವನ್ನಷ್ಟೇ ಅಲ್ಲ, ಇತರೆ ಸೌಕರ್ಯಗಳನ್ನು ಕಲ್ಪಿಸಿದ್ದು, ಈ ಗುಡ್ಡಗಾಡು ಪ್ರದೇಶದ ಅಲ್ಲಿನ ಬುಡಕಟ್ಟು ಜನಾಂಗದವರ ಬದುಕಿಗೆ ಆಶಾಕಿರಣವಾಗಿದ್ದಾರೆ. ಈ ಜನರಿಗಾಗಿ ಬಿಎಸ್ಎಫ್ ಯೋಧರು ಮಾಡಿರುವ ಕೆಲಸಗಳೇನು? ಇಲ್ಲಿವೆ ನೋಡಿ.

– ಕಳೆದ ಮಾರ್ಚ್ 23ರಂದು ಅಂಜ್ರೆಲ್ ನಲ್ಲಿ ಆರೋಗ್ಯ ಶಿಬಿರ ಆಯೋಜನೆ, ಗುಡ್ಡಗಾಡು ಪ್ರದೇಶದವರಿಗೆ ಔಷಧಗಳ ಪೂರೈಕೆ.

– ಏ.9ರಂದು ಇಲ್ಲಿನ ದಂಡಕವನ ಪ್ರದೇಶದಲ್ಲಿ ಹೊಲಿಗೆ ತರಬೇತಿ ಕೇಂದ್ರ ಆರಂಭಿಸಿದ್ದು, 60 ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಧರ ಬಟ್ಟೆಗಳನ್ನು ಹೊಲಿಯುವ ಗುತ್ತಿಗೆಯನ್ನು ಈ ಬುಡಕಟ್ಟಿನವರಿಗೆ ನೀಡಲು ನಿರ್ಧರಿಸಲಾಗಿದೆ.

– ಕಂಕೇರ್ ಜಿಲ್ಲೆಯ ಬುಡಕಟ್ಟು ಜನರಿಗಾಗಿ 6 ಹಾಸಿಗೆಯ ಚಿಕ್ಕ ಆಸ್ಪತ್ರೆ ಆರಂಭಿಸಿದ್ದು, ಇವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ದಂಡಕವನ ಪ್ರದೇಶದ 30 ಕಿ.ಮೀ ಸುತ್ತಮುತ್ತಲ ಪ್ರದೇಶಕ್ಕೆ ಇರೋದು ಇದೊಂದೆ ಆಸ್ಪತ್ರೆ.

– ಹಲವು ಕಡೆಗಳಲ್ಲಿ ಬಸ್ ನಿಲ್ದಾಣ, ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಬಿಎಸ್ಎಫ್ ಯೋಧರು ಬಂದ ನಂತರ ನಮಗೆ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ. ಈ ಬಾರಿ ನಾವು ಸಂತೋಷದಿಂದ ಹೋಳಿ ಆಡಿದ್ದೇವೆ ಎಂದು ಅಲ್ಲಿನ ಗ್ರಾಮಸ್ಥರು ಸಂತಸ ಹಂಚಿಕೊಂಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಧರ ಈ ಕಾರ್ಯ ಶ್ಲಾಘನೀಯ. ಬಿಎಸ್ಎಫ್ ಯೋಧರಿಲ್ಲದ ಜೀವನವನ್ನು ಈ ಪ್ರದೇಶದ ಜನ ಊಹಿಸಲು ಸಾಧ್ಯವಿಲ್ಲ. ಆ ಮಟ್ಟಿಗೆ ಭಾರತೀಯ ಯೋಧರು ಇಲ್ಲಿನ ಜನರ ಜೀವನಾಡಿಯಾಗಿದ್ದಾರೆ.

Leave a Reply