ಸಜ್ಜನ ಮಾದರಿ ಬಿಟ್ಟುಹೋದ ಪುಂಡಲೀಕ ಹಾಲಂಬಿ

ಡಿಜಿಟಲ್ ಕನ್ನಡ ಟೀಮ್

ನಿಜ ಅರ್ಥದ ಕನ್ನಡ ಹೋರಾಟಗಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಇನ್ನಿಲ್ಲ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಿಧನರಾದರು. 66 ವರ್ಷವಾಗಿದ್ದ ಅವರಿಗೆ ಪತ್ನಿ ಸರೋಜಮ್ಮ, ಪುತ್ರರಾದ ರಾಘವ ಹಾಲಂಬಿ ಮತ್ತು ಭಾರ್ಗವ ಹಾಲಂಬಿ ಇದ್ದಾರೆ. ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಹಾಸನ ಜಿಲ್ಲೆ ಅರಸಿಕೆರೆಯಲ್ಲಿ ಚಂದ್ರಶೇಖರ ಹಾಲಂಬಿ ಮತ್ತು ವಾಸಂತಿ ಅವರ ಪುತ್ರನಾಗಿ ಹುಟ್ಟಿದ ಪುಂಡಲೀಕರು ಬೆಳೆದದ್ದು ಉಡುಪಿಯ ಕುಂದಾಪುರದ ಕೊಡೇರಿಯ ಅಜ್ಜನ ಮನೆಯಲ್ಲಿ. ಸಮುದ್ರ ದಂಡೆ ಮರಳಿನ ಮೇಲೆ ಕನ್ನಡ ಅಕ್ಷರಾಭ್ಯಾಸ ಆರಂಭಿಸಿದ್ದು ವಿಶೇಷ. ನಾಲ್ಕನೇ ಇಯತ್ತೆಯವರೆಗೂ ಅಲ್ಲಿಯೇ ಕಲಿತು, 5, 6 ನೇ ತರಗತಿಯನ್ನು ಅರಕಲಗೂಡಿನಲ್ಲಿ ಮುಗಿಸಿ, ಮತ್ತೆ ಅಜ್ಜನ ಮನೆಗೇ ವಾಪಸ್ಸಾಗಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು. ಕುಂದಾಪುರದ ಬೋರ್ಡಿಂಗ್ ಸ್ಕೂಲಲ್ಲಿ ಹೈಸ್ಕೂಲು ಮುಗಿಸಿ, ಬೆಂಗಳೂರಿನ ಎಪಿಎಸ್ ಕಾಲೇಜಿನಲ್ಲಿ ಪದವಿ ಮುಗಿಸುವ ಹೊತ್ತಿಗೆ ಅವರೊಬ್ಬ ಕನ್ನಡದ ‘ತುಂಟ ಹೋರಾಟಗಾರ’ರಾಗಿದ್ದರು.

ಅವರು ತುಂಟ ಹೋರಾಟಗಾರ ಏಕೆಂದರೆ, ಸಂಸ್ಕೃತ ಪ್ರಶ್ನೆಪತ್ರಿಕೆಗೆ ಕನ್ನಡದಲ್ಲಿ ಉತ್ತರ ಬರೆಯಬಹುದಾದರೆ, ಇಂಗ್ಲಿಷ್ ಪ್ರಶ್ನೆಪತ್ರಿಕೆಗೆ ಕನ್ನಡದಲ್ಲಿ ಏಕೆ ಉತ್ತರ ಬರೆಯಬಾರದು ಎಂದು ಪ್ರಶ್ನಿಸಿದ್ದು ಮಾತ್ರವಲ್ಲದೇ, ಕನ್ನಡ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕನ್ನಡದಲ್ಲೇ ಉತ್ತರ ಬರೆದಿದ್ದರು, ಬರೆಸಿದ್ದರು. ಅದಕ್ಕೆ ಅವರಿಗೆಲ್ಲ ಶೂನ್ಯ ಅಂಕ ಬಂದದ್ದು ಬೇರೆ ವಿಷಯ. ಆದರೆ ಅದಾಗಲೇ ಅವರಲ್ಲಿ ಕನ್ನಡದ ಹೋರಾಟಗಾರ ಅವಿರ್ಭವಿಸಿದ್ದ. ಸೆಂಟ್ರಲ್ ಕಾಲೇಜಿನಲ್ಲಿ ಎಂಎ ಮುಗಿಸಿ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗುವ ಹೊತ್ತಿಗೆ ಡಿ.ಆರ್. ನಾಗರಾಜ್, ಬಸವರಾಜ ಕಲ್ಗುಡಿ ಅವರಂತವರ ಸಾಂಗತ್ಯ ಕನ್ನಡದಲ್ಲಿ ಏನಾದರೂ ಮಾಡಬೇಕು ಎನ್ನುವ ಛಲ ತಂದಿತ್ತು. ಮುಂದೆ ಬೆಂಗಳೂರು ವಿವಿ ಪ್ರಸಾರಂಗದಲ್ಲಿ ನೌಕರಿಗೆ ಸೇರಿಕೊಂಡು, ಅಲ್ಲಿಯೇ ನಿವೃತ್ತರಾದರು. ಅಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡಿದ್ದು ಅವರ ಹೆಗ್ಗಳಿಕೆ.

ಯಕ್ಷಗಾನ, ನಾಟಕಾಭಿನಯದಲ್ಲಿ ಅಪಾರ ಒಲವಿದ್ದ ಹಾಲಂಬಿ ಅವರು ಬೆಳೆದ ವಾತಾವರಣ ಕನ್ನಡ ನಾಡು ಮತ್ತು ನುಡಿ ಬಗ್ಗೆ ಉತ್ಕಟ ಅಭಿಮಾನ ಮೂಡಿಸಿದ್ದೇ ಅಲ್ಲದೇ ಅವರನ್ನೊಬ್ಬ ಹೋರಾಟಗಾರನನ್ನಾಗಿ, ನಾಯಕನನ್ನಾಗಿ ರೂಪಿಸಿತ್ತು. ಜತೆಗೆ ಅವರೊಬ್ಬ ಉತ್ತಮ ವಾಗ್ಮಿಯೂ ಆಗಿದ್ದರು. ಮಾಜಿ ಸಚಿವ ಬಸವಲಿಂಗಪ್ಪ ಅವರ ವಿರುದ್ಧ ನಡೆದ ಬೂಸಾ ಚಳವಳಿ, ಗೋಕಾಕ್ ಚಳವಳಿ ಸೇರಿದಂತೆ ನಾನಾ ಚಳವಳಿಗಳಲ್ಲಿ ಭಾಗವಹಿಸಿದ್ದೇ ಅಲ್ಲದೇ, ನಾನಾ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಕನ್ನಡ ಜಾಗೃತ ಪರಿಷತ್, ಕರ್ನಾಟಕ ಸಂಘ, ದಕ್ಷಿಣ ಕನ್ನಡಿಗರ ಸಂಘ, ಬೆಂಗಳೂರಿ ವಿವಿ ಬೋಧಕೇತರ ನೌಕರರ ಸಂಘದ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ಹಾಲಂಬಿ ಅವರ ಬದುಕು ಆಕಸ್ಮಿಕಗಳ ಆಗರ. ಒಮ್ಮೆ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನ ನೌಕರನೊಬ್ಬ ಅಪಮಾನ ಮಾಡಿದ ಎಂಬ ಕಾರಣಕ್ಕೆ ಅದೇ ಬ್ಯಾಂಕ್ ನ ಚುನಾವಣೆಗೆ ನಿಂತು, ನಿರ್ದೇಶಕನಾಗಿ ಗೆದ್ದು, ಮುಂದೆ ಸಂಘದ ಅಧ್ಯಕ್ಷರೂ ಅದರು. ಅಲ್ಲದೇ 25 ವರ್ಷಗಳ ಸುದೀರ್ಘ ಕಾಲ ಅಧ್ಯಕ್ಷ ಗಾದಿಯಲ್ಲಿದ್ದರು. ಅದೇ ರೀತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕಕ್ಕೆ ಬಂದದ್ದೂ ಒಂದು ಆಕಸ್ಮಿಕ. 1996 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದ ಸಾ.ಶಿ. ಮರುಳಯ್ಯ ಅವರು ತಮ್ಮ ಪರ ಪ್ರಚಾರ ಮಾಡವಂತೆ ಹಾಲಂಬಿ ಅವರನ್ನು ಕರೆದರು. ಸರಿ, ಇವರು ಪ್ರಚಾರ ಮಾಡಿದರು. ಮರುಳಯ್ಯ ಗೆದ್ದರು. ಆಗಿನ್ನು ಹಾಲಂಬಿ ಪರಿಷತ್ ಸದಸ್ಯರೂ ಆಗಿರಲಿಲ್ಲ. ಮುಂದೆ ಪರಿಷತ್ತಿನ ಕಾರ್ಯದರ್ಶಿಗಳಿಗೂ ಮರುಳಯ್ಯನವರಿಗೂ ಅದೇನು ವೈಮನಸ್ಯ ಬಂತೋ, ಒಂದು ದಿನ ಕರೆದು ನೀನೇ ಕಾರ್ಯದರ್ಶಿ ಆಗು ಎಂದರು. ಸಾರ್ ನಾನಿನ್ನೂ ಮೆಂಬರ್ರೇ ಅಲ್ಲ ಅಂದರು ಹಾಲಂಬಿ. ಸರಿ, ಇವರನ್ನು ಸದಸ್ಯರನ್ನಾಗಿ ಮಾಡಿ, ಕಾರ್ಯದರ್ಶಿ ಹುದ್ದೆಯನ್ನೂ ಕೊಟ್ಟರು. ಅಲ್ಲಿಂದ ಶುರುವಾದ ಪರಿಷತ್ ಯಾನ ಮುಂದೆ ಹರಿಕೃಷ್ಣ ಪುನರೂರು, ಚಂಪಾ ಮತ್ತು ನಲ್ಲೂರು ಪ್ರಸಾದ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾನಾ ಹುದ್ದೆಗಳನ್ನು ಅಲಂಗರಿಸಿ, ಮುಂದೆ ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಅಧ್ಯಕ್ಷರೂ ಆಗಿ ಮೂರುವರೇ ವರ್ಷ ಸೇವೆ ಸಲ್ಲಿಸಿದರು.

ಹಾಲಂಬಿ ಅವರು ಜಾತಿ ಮೀರಿದ ನಾಯಕರಾಗಿದ್ದರು. ಪರಿಷತ್ತಿನ ಅಂಗಳದಲ್ಲಿ ಜಾತಿಯ ಸೋಂಕು ತಗಲದಂತೆ ನೋಡಿಕೊಂಡಿದ್ದರು. ಇವರ ಅವಧಿಯಲ್ಲಿ ವಚನ ಸಾಹಿತ್ಯ ಸಮಾವೇಶ, ಕರಾವಳಿ ಕನ್ನಡಿಗರ ಸಮಾವೇಶ, ಜಾನಪದ ಸಮಾವೇಶ, ದಲಿತ ಸಮಾವೇಶ, ಮಹಿಳಾ ಸಮಾವೇಶ, ಗಡಿನಾಡು ಸಮಾವೇಶ ಸೇರಿದಂತೆ ನಾನಾ ಸಮಾವೇಶಗಳು ಕನ್ನಡ ಕಂಪನ್ನು ಪಸರಿಸಿದ್ದವು. ಶತಮಾನೋತ್ಸವ ಸಂದರ್ಭದಲ್ಲಿ ಕನ್ನಡದ ನೂರು ಶ್ರೇಷ್ಠ ಕೃತಿಗಳ ಮರುಮುದ್ರಣ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ದಾಖಲಿಸುವ ಹದಿನೇಳು ಸಂಪುಟಗಳು ಮುದ್ರಣ ಕಂಡವು.

ಹೀಗೆ ಕನ್ನಡದ ನಾನಾ ಉತ್ಕೃಷ್ಟ ಕಾರ್ಯಗಳಲ್ಲಿ ಸಾರ್ಥಕತೆ ಕಾಣುತ್ತಿದ್ದ ಹಾಲಂಬಿ ಅವರ ಮತ್ತಷ್ಟು ಕೆಲಸ ಮಾಡಬೇಕೆಂಬ ಹುಮ್ಮಸ್ಸಿಗೆ ಆರೋಗ್ಯ ಸಹಕರಿಸಲಿಲ್ಲ. ಎರಡೂ ಮೂತ್ರಪಿಂಡಗಳ ವೈಫಲ್ಯದಿಂದ ನರಳುತ್ತಿದ್ದ ಅವರು ಕೊನೆಗೆ ಅನಾರೋಗ್ಯಕ್ಕೆ ಮಣಿದು, ಹಿಂತಿರುಗಿ ಬಾರದ ಕಡೆ ಹೆಜ್ಜೆ ಹಾಕಿದ್ದಾರೆ. ಆದರೆ ಬಿಟ್ಟು ಹೋಗಿರುವ ಹೆಜ್ಜೆ ಗುರುತುಗಳಲ್ಲಿ ಅವರ ನೆನಪು ಶಾಶ್ವತವಾಗಿರುತ್ತದೆ.

Leave a Reply