ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅತ್ತಿದ್ದೇಕೆ? ಕುಸ್ತಿಪಟು ಯೋಗೇಶ್ವರ ದತ್ತ ಸಿಟ್ಟಾಗಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್

  • ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು , ನ್ಯಾಯಾಧೀಶರ ಮೇಲಿರುವ ಒತ್ತಡವನ್ನು ವಿವರಿಸುತ್ತ ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಕಣ್ಣೀರಾದ ಘಟನೆ ಭಾನುವಾರ ನಡೆಯಿತು.

ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳ ವಾರ್ಷಿಕ ಸಭೆಯಲ್ಲಿ ಅವರು ಸರ್ಕಾರದ ಬಳಿ ಜಡ್ಜ್ ಗಳ ಸಂಖ್ಯೆ ಹೆಚ್ಚಿಸಿ ಅಂತ ಭಾವನಾತ್ಮಕವಾಗಿ ಮಾತಾಡಿದ್ದರಲ್ಲಿ ಅರ್ಥವಿಲ್ಲದೇ ಇಲ್ಲ. ನ್ಯಾಯಾಂಗ ತುಂಬ ನಿದಾನ ಎಂದು ಸಾಮಾನ್ಯರೇನೋ ಅಲವತ್ತುಕೊಂಡುಬಿಡುತ್ತಾರೆ, ಆದರೆ ನ್ಯಾಯದಾನ ತ್ವರಿತವಾಗಬೇಕಿದ್ದರೆ ಜಡ್ಜ್ ಗಳ ಸಂಖ್ಯೆ ತೀರ ಕೆಳಮಟ್ಟದಲ್ಲಿದ್ದರೆ ಪ್ರಕರಣಗಳು ಬಾಕಿಯಾಗದೇ ಇನ್ನೇನಾಗುತ್ತವೆ. ಇದನ್ನೇ ತಮ್ಮ ಮಾತುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದರು ಮುಖ್ಯ ನ್ಯಾಯಮೂರ್ತಿಗಳು. ಅವರು ಮುಂದಿಟ್ಟ ಅಂಕಿಅಂಶಗಳು ಗಮನಾರ್ಹ. 1950ರಲ್ಲಿ ಸುಪ್ರೀಂಕೋರ್ಟ್ 8 ನ್ಯಾಯಮೂರ್ತಿಗಳನ್ನು ಹೊಂದಿದ್ದಾಗ 100 ಪ್ರಕರಣಗಳು ಬಾಕಿ ಉಳಿದಿದ್ದವು. 1977ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 18 ಆದಾಗ ಬಾಕಿ ಉಳಿದಿದ್ದ ಪ್ರಕರಣಗಳ ಸಂಖ್ಯೆ 27881. 2014ರಲ್ಲಿ ಜಡ್ಜ್ ಗಳ ಸಂಖ್ಯೆ 31 ಆಯಿತು. ಪ್ರಕರಣಗಳು ಮಾತ್ರ ಬರೋಬ್ಬರಿ 81, 583 ಬಾಕಿ ಉಳಿದಿವೆ. ಇದು ಸುಪ್ರೀಂಕೋರ್ಟ್ ಕತೆಯಾದರೆ ಅಧೀನ ನ್ಯಾಯಾಲಯಗಳ ವ್ಯವಸ್ಥೆಯಲ್ಲಿರಬಹುದಾದ ಒತ್ತಡವನ್ನು ನೀವೇ ಊಹಿಸಿಕೊಳ್ಳಿ ಎನ್ನುತ್ತ ನ್ಯಾಯಾಂಗದ ಘೋರ ಅವ್ಯವಸ್ಥೆ ಬಿಚ್ಚಿಟ್ಟರು ಮುಖ್ಯ ನ್ಯಾಯಮೂರ್ತಿ ಠಾಕೂರರು. ಹೈಕೋರ್ಟುಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 38.68 ಲಕ್ಷ ಎಂದು ಖಿನ್ನರಾದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭಾಷಣದ ನಂತರ ಪ್ರಧಾನಿ ಮೋದಿ ಅವರು ಪ್ರತ್ಯೇಕವಾಗಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

  •  ‘ರಾಯಭಾರಿ ಆಗಿಸುವುದರ ಉದ್ದೇಶವಾದರೂ ಏನು? ದೇಶದ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಸಿ’- ಇದು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್ತ ಅವರ ಸಿಟ್ಟಿನ ಟ್ವೀಟ್. ನಟ ಸಲ್ಮಾನ್ ಖಾನ್ ಅವರನ್ನು ರಿಯೊ ಒಲಿಂಪಿಕ್ ನ ರಾಯಭಾರಿಯಾಗಿಸಿರುವ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ರೀತಿ ಇದು. ಇದರ ಬೆನ್ನಲ್ಲೇ ಸಲ್ಮಾನ್ ಖಾನ್ ರಾಯಭಾರದ ಬಗ್ಗೆ ಪರ- ವಿರೋಧ ಚರ್ಚೆಗಳೆದ್ದಿವೆ. ಎಲ್ಲವಕ್ಕೂ ನಮಗೆ ಬಾಲಿವುಡ್ ಸೆಲೆಬ್ರಿಟಿಗಳೇ ಆಗಬೇಕೆ? ಅದೇಕೆ ಕ್ರೀಡಾಪಟುವನ್ನು ರಾಯಭಾರಿಯಾಗಿಸಿ ಒಲಿಂಪಿಕ್ ಗೆ ತಯಾರುಗೊಳ್ಳುತ್ತಿರುವ ಕ್ರೀಡಾಳುಗಳಲ್ಲಿ ಹುಮ್ಮಸ್ಸು ವೃದ್ಧಿಸುವ ಯೋಚನೆ ಯಾರಿಗೂ ಇಲ್ಲ? ಈ ಎಲ್ಲ ಪ್ರಶ್ನೆಗಳನ್ನು ಮಿಲ್ಖಾ ಸಿಂಗ್ ಸೇರಿದಂತೆ ಹಲವರು ಕೇಳುತ್ತಿದ್ದಾರೆ.

ಆದರೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ತನ್ನ ನಿಲುವು ಸಮರ್ಥಿಸಿಕೊಳ್ಳುತ್ತ, ‘ಇದಕ್ಕಾಗಿ ಸಲ್ಮಾನ್ ಹಣವನ್ನೇನೂ ಪಡೆಯುತ್ತಿಲ್ಲ’ ಎಂದಿದೆ. ಆದರೆ ವಿಷಯ ಅದಲ್ಲ. ಮಿಲ್ಖಾ ಸಿಂಗ್ ಪ್ರಶ್ನಿಸುವಂತೆ, ‘ಪಿ. ಟಿ ಉಷಾ, ರಾಜವರ್ಧನ್ ಸಿಂಗ್ ರಾಥೋಡ್, ಅಜಿತ್ ಪಾಲ್ ಇಂಥ ಕ್ರೀಡಾಳುಗಳು ತಮ್ಮ ಶ್ರಮ ಅರ್ಪಿಸಿದ್ದಾರೆ. ಇಂಥವರಿಗೇಕಿಲ್ಲ ರಾಯಭಾರತ್ವದ ಗೌರವ.’

ಸಲ್ಮಾನ್ ಹಣ ತೆಗೆದುಕೊಂಡಿಲ್ಲ ಅನ್ನೋದು ವಿಷಯವಲ್ಲ. ಈತ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಲ್ತಾನ್ ಚಿತ್ರ ಹತ್ತಿರದಲ್ಲಿದೆ. ಯೋಗೇಶ್ವರ ದತ್ತ ಅವರು ಟ್ವೀಟ್ ನಲ್ಲಿ ಬರೆದಿದ್ದು ಈ ನಿಟ್ಟಿನಲ್ಲಿ ಸೂಕ್ತವಾಗಿದೆ. ‘ಭಾರತದಲ್ಲಿ ಚಿತ್ರ ಪ್ರಚಾರ ಕಾರ್ಯಕ್ಕೆ ಎಲ್ಲರಿಗೂ ಹಕ್ಕಿದೆ. ಆದರೆ ಒಲಿಂಪಿಕ್ಸ್ ಇದಕ್ಕೆ ವೇದಿಕೆ ಆಗಬಾರದು.’

Leave a Reply