ಕಾಂಗ್ರೆಸ್ ಚಿಂತನಕೂಟದಲ್ಲಿದ್ದ ನರೇಂದ್ರ ಜಾಧವ್ ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದೇಕೆ?

ಮೋಹನ್ ಭಾಗವತ್ ಜತೆ ನರೇಂದ್ರ ಜಾಧವ್. ಚಿತ್ರಕೃಪೆ- ಔಟ್ ಲುಕ್

ಡಿಜಿಟಲ್ ಕನ್ನಡ ವಿಶೇಷ

ಬಿಜೆಪಿಯಿಂದ ರಾಜ್ಯ ಸಭೆಗೆ ನಾಮನಿರ್ದೇಶನಗೊಂಡವರು 6 ಮಂದಿ. ಈ ಪೈಕಿ ಬಲಪಂಥೀಯ ಚಿಂತನಕೂಟದಲ್ಲಿ ಚಿರಪರಿಚಿತರಾದ ಸುಬ್ರಮಣಿಯನ್ ಸ್ವಾಮಿ ಮತ್ತು ಸ್ವಪನ್ ದಾಸ್ ಗುಪ್ತ ಅವರ ನಾಮನಿರ್ದೇಶನದ ಬಗ್ಗೆ ಅಚ್ಚರಿ ಏನಿಲ್ಲ. ಅರುಣ್ ಜೇಟ್ಲಿಗಾಗಿ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಥಾನ ತೆರವುಗೊಳಿಸಿದ್ದ ನವಜೋತ್ ಸಿಂಗ್ ಸಿಧು ಅವರಿಗೆ ರಾಜ್ಯಸಭೆ ಸೀಟು ಸಿಕ್ಕಿದ್ದು ಅಪೇಕ್ಷಿತ. ಮೇರಿ ಕೊಮ್ ದೇಶವನ್ನೇ ಸೆಳೆದ ಕ್ರೀಡಾಳು. ಇವರ ನಾಮನಿರ್ದೇಶನವೂ ಬಿಜೆಪಿಗೆ ಒಂದು ಗುಡ್ ವಿಲ್ ದೊರಕಿಸಿಕೊಡುವಂಥದ್ದು. ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿಒಂದು ಪ್ರಭಾವಳಿ ನಿರ್ಮಿಸಿಕೊಳ್ಳುವ ಯತ್ನದ ಭಾಗವಾಗಿ ಮಲಯಾಳಿ ನಟ ಸುರೇಶ್ ಗೋಪಿ ಅವರ ನಾಮನಿರ್ದೇಶನವನ್ನೂ ಅರ್ಥಮಾಡಿಕೊಳ್ಳಬಹುದು.

ಆದರೆ…

ನರೇಂದ್ರ ಜಾಧವ್ ಎಂಬ ಒಂದು ಹೆಸರು ಮಾತ್ರ ಬಿಜೆಪಿ ಬೆಂಬಲಿಗರನ್ನು ಹಾಗೂ ಕಾಂಗ್ರೆಸಿಗರನ್ನೂ ಏಕಕಾಲಕ್ಕೆ ಬೆಚ್ಚಿಬೀಳಿಸಿದೆ. ಏಕೆಂದರೆ ಈ ಹಿಂದಿನ ಸರ್ಕಾರದಲ್ಲಿ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಸಮಿತಿಯನ್ನು ಬಿಜೆಪಿ ಅಗ್ದೀ ಖಡಕ್ಕಾಗಿ ವಿರೋಧಿಸಿಕೊಂಡು ಬಂದಿತ್ತು. ಯಾವ ಸಮಿತಿ ಸಂವಿಧಾನಬಾಹಿರ ಅಧಿಕಾರ ಅನುಭವಿಸುತ್ತಿದೆ ಅಂತ ಬಿಜೆಪಿಗರಿಂದಟೀಕೆಗೆ ಒಳಗಾಗಿತ್ತು ಆ ಸಮಿತಿ ಸದಸ್ಯರಾಗಿದ್ದವರು ನರೇಂದ್ರ ಜಾಧವ್! ಕಾಂಗ್ರೆಸ್ ಪಾಳೆಯದಲ್ಲಿ ಲಾಗಾಯ್ತಿನಿಂದ ಗುರುತಿಸಿಕೊಂಡಿದ್ದ, ಯೋಜನಾ ಆಯೋಗದ ಸದಸ್ಯರೂ ಆಗಿದ್ದ, ಒಂದು ಹಂತದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಜಾಧವ್ ಈಗ ಬಿಜೆಪಿಯಿಂದ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವುದು ಏಕೆ?

ಈ ಸರಸದ ಕತೆ ರೋಚಕವೇ. ರಾಜ್ಯಸಭೆಯನ್ನು ನಾಗಪುರದ ಆರೆಸ್ಸೆಸ್ ಹೆಬ್ಬಾಗಿಲ ಮೂಲಕ ತಲುಪಿಕೊಂಡವರು ನರೇಂದ್ರ ಜಾಧವ್. ಎಲ್ಲರನ್ನೂ ಕೂಡಿಕೊಳ್ಳುವ ಕಾರ್ಯಸೂಚಿ ಜಾರಿಗೆ ಆರೆಸ್ಸೆಸ್- ಬಿಜೆಪಿಗಳೆರಡಕ್ಕೂ ‘ಅಂಬೇಡ್ಕರ್ ಚಿಂತಕ’ರೊಬ್ಬರು ಬೇಕಿದ್ದರು. ಸ್ವದೇಶಿ, ಹಿಂದುತ್ವ ಇತ್ಯಾದಿ ಪ್ರಖರ ಚಿಂತಕರೆಲ್ಲ ಆರೆಸ್ಸೆಸ್ ಪಾಳೆಯದಲ್ಲಿ ದಂಡಿಯಾಗಿಯೇ ಇದ್ದಾರೆ. ಅಷ್ಟೇ ಪ್ರಖರವಾಗಿ ಅಂಬೇಡ್ಕರ್ ಅವರನ್ನು ಆರೆಸ್ಸೆಸ್ ನೆಲೆಯಲ್ಲಿ ನಿರ್ವಚಿಸುವ ಬುದ್ಧಿಜೀವಿಯನ್ನು ತಯಾರಿಸಬೇಕಿದ್ದರೆ ಅದಕ್ಕೆ ತುಸು ಸಮಯ ಹಿಡಿಯುತ್ತದಷ್ಟೆ. ಇದರ ಉಸಾಬರಿಯೇ ಬೇಡ ಅಂತ ಆಗಲೇ ಸಿದ್ಧಗೊಂಡ ನರೇಂದ್ರ ಜಾಧವ್ ರನ್ನು ಆಮದು ಮಾಡಿಕೊಂಡಿದೆ ಪರಿವಾರ!

ಆರೆಸ್ಸೆಸ್ ನಿಯತಕಾಲಿಕಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್ ಗಳಿಗೆ ಹಿಂದಿನ ವರ್ಷದ ಅಂಬೇಡ್ಕರ್ ಸಂಚಿಕೆಗೆ ಜಾಧವರಿಂದ ಲೇಖನ ಬರೆಸುವುದರೊಂದಿಗೆ ಸಲ್ಲಾಪ ಶುರುವಾಯಿತು. ಅಂಬೇಡ್ಕರ್ ಅವರ 125ನೇ ಜನ್ಮದಿನದ ಅಂಗವಾಗಿ ಸ್ಮಾರಕ ರೂಪಿಸುವ ಸಮಿತಿಯಲ್ಲಿ ಜಾಧವ್ ಸ್ಥಾನ ಪಡೆದರು. ಸರಸಂಘಚಾಲಕ ಮೋಹನ್ ಭಾಗವತ್ ಅವರೊಂದಿಗೆ ನರೇಂದ್ರ ಜಾಧವ್ ವೇದಿಕೆ ಹಂಚಿಕೊಂಡರು. ಇವರ ನಾಲ್ಕು ಪುಸ್ತಕಗಳನ್ನು ಭಾಗವತರೇ ಬಿಡುಗಡೆ ಮಾಡಿದರು.

ಜಾಧವ್ ಅವರನ್ನು ಆಯ್ಕೆಯ ಮೂಲಕ ತನ್ನ ದಲಿತ ಒಲವನ್ನುಬಿಜೆಪಿ ಬಿಂಬಿಸುತ್ತಿದೆ. ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಅಪಾರ ಜ್ಞಾನ ಹೊಂದಿರುವ ಜಾಧವ್, ಪ್ರಮುಖ ದಲಿತ ಚಿಂತಕರು. ಇವರ ಸುಮಾರು 36 ಕೃತಿಗಳ ಪೈಕಿ 20 ಕೃತಿಗಳು ಅಂಬೇಡ್ಕರ್ ಅವರ ಕುರಿತಾಗಿವೆ.

ರಾಜ್ಯಸಭೆ ಪ್ರವೇಶದ ಸಂದರ್ಭದಲ್ಲೂ ನರೇಂದ್ರ ಜಾಧವ್ ಅವರು ಮನಮೋಹನ ಸಿಂಗರನ್ನು ತಮ್ಮ ರಾಜಕೀಯ ಗುರುಗಳೆಂದು ಜ್ಞಾಪಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ಇಲ್ಲೇನೂ ತೀರ ಅರ್ಥಗೆಟ್ಟಿಲ್ಲ. ಏಕೆಂದರೆ ವಾಸ್ತವದಲ್ಲಿ ಮೋದಿ ಸರ್ಕಾರ ಮುಂದುವರಿಸಿಕೊಂಡುಹೋಗುತ್ತಿರುವುದು ಮನಮೋಹನ ಸಿಂಗರ ಉದಾರೀಕರಣ ನೀತಿಗಳನ್ನೇ. ಹಿಂದಿನ ಸರ್ಕಾರದಲ್ಲಿ ನೀತಿಗಳು ಮಾತ್ರವಿದ್ದು, ಕಾರ್ಯವೇ ಇರಲಿಲ್ಲ. ಅದಕ್ಕೆ ಹೋಲಿಸಿದರೆ ಈ ಸರ್ಕಾರದ ಕಾರ್ಯಪ್ರವೃತ್ತಿ ಚುರುಕಾಗಿದೆ ಎಂಬುದೇ ವ್ಯತ್ಯಾಸ.

Leave a Reply