ಚೀನಾ ಮೊಬೈಲ್ ಸೆಟ್, ಹಾಲಿನ ಉತ್ಪನ್ನಗಳಿಗೆ ಭಾರತದ ನಿಷೇಧ, ಹೇಗಿದೆ ಗೊತ್ತೇ ಚೀನಾ ಜತೆಗಿನ ವಹಿವಾಟು ಸಂಬಂಧ?

ಡಿಜಿಟಲ್ ಕನ್ನಡ ಟೀಮ್

ಸುದೀರ್ಘ ಬಾಳಿಕೆಯ ಖಾತರಿ ನೀಡದಿದ್ದರೂ ಹತ್ತಾರು ಸಾವಿರ ಮೊತ್ತದ ಮೊಬೈಲ್ ನ ಎಲ್ಲಾ ಸೌಕರ್ಯಗಳನ್ನು ನೀಡುತ್ತಿದ್ದ ಚೀನಾ ಮೊಬೈಲ್ ಸೆಟ್ ಗಳಲ್ಲಿ ಹಲವು ಮಾದರಿಯವು ಇನ್ಮುಂದೆ ಭಾರತದಲ್ಲಿ ಸಿಗಲ್ಲ. ಕಾರಣ, ಗುಣಮಟ್ಟ ಹಾಗೂ ಭದ್ರತಾ ನೀತಿಯನ್ನು ಪಾಲಿಸದ ಹಿನ್ನೆಲೆಯಲ್ಲಿ ಭಾರತ, ಚೀನಾದಿಂದ ಆಮದುವಾಗುತ್ತಿದ್ದ ಕೆಲವು ಮೊಬೈಲ್ ಫೋನ್ ಗಳನ್ನು ನಿಷೇಧಿಸಿದೆ. ಚೀನಾದ ಹಾಲು ಮತ್ತು ಹಾಲಿನ ಉತ್ಪನ್ನಗಳೂ ನಿಷೇಧಕ್ಕೆ ಒಳಗಾಗಿವೆ.

ಈ ನಿರ್ಧಾರವನ್ನು ಸೋಮವಾರ ಲೋಕಸಭೆಯಲ್ಲಿ ತಿಳಿಸಿದ ವಾಣಿಜ್ಯ ಸಚಿವೆ ನಿರ್ಮಲ ಸೀತಾರಾಮನ್, ‘ಚೀನಾದಿಂದ ಆಮದು ಆಗುತ್ತಿದ್ದ ಕಡಿಮೆ ಗುಣಮಟ್ಟದ ವಸ್ತುಗಳನ್ನು ನಿಷೇಧಿಸಲಾಗಿದೆ’ ಎಂದು ಘೋಷಿಸಿದ್ದಾರೆ. ಚೀನಾದ ಮೊಬೈಲ್ ಗಳು ಇಂಟರ್ ನ್ಯಾಷನಲ್ ಮೊಬೈಲ್ ಸ್ಟೇಷನ್ ಎಕ್ವಿಪ್ ಮೆಂಟ್ ಐಡೆಂಟಿಟಿ ಸಂಖ್ಯೆಯನ್ನು ಹೊಂದಿರುವುದಿಲ್ಲ. ಭದ್ರತಾ ದೃಷ್ಟಿಯಿಂದ ಚೀನಾದ ಮೊಬೈಲ್ ಗಳ ಆಮದನ್ನು ನಿಷೇಧಿಸಲಾಗಿದೆ.

ಚೀನಾವನ್ನು ನಾನಾ ಆಯಾಮಗಳಲ್ಲಿ ಎದುರಿಸುವ ಪ್ರಯತ್ನವನ್ನು ಈ ಸರ್ಕಾರ ಮಾಡುತ್ತಿರುವುದಕ್ಕೆ ಈ ವಿದ್ಯಮಾನವೂ ಒಂದು ಉದಾಹರಣೆ. ಕೆಲವು ಸಫಲಗೊಳ್ಳುತ್ತವೆ, ಕೆಲವಕ್ಕೆ ಒತ್ತಡದಿಂದ ಮಣಿಯಬೇಕಾಗುತ್ತದೆ.

‘ಯಾವುದೇ ದೇಶದ ಜತೆಗೆ ರಾಜತಾಂತ್ರಿಕ, ಬೌಗೋಳಿಕ ಹಾಗೂ ಸೇನಾ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಆ ದೇಶದಿಂದ ಸಂಪೂರ್ಣವಾಗಿ ಆಮದನ್ನು ನಿಷೇಧಿಸಲು ಸಾಧ್ಯವಿಲ್ಲ. ಡಬ್ಲ್ಯೂಟಿಒ ಹಾಗೂ ಅಂತಾರಾಷ್ಟ್ರೀಯ ಒಪ್ಪಂದದ ಕೆಲವು ನಿಯಮಗಳು ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

‘2015-16ನೇ ಸಾಲಿನಲ್ಲಿ ಚೀನಾ- ಭಾರತಗಳ ನಡುವೆ ಒಟ್ಟು 65.16 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವ್ಯವಹಾರ ನಡೆದಿದೆ. ಆದರೆ ಇದರಲ್ಲಿ ನಾವು 48.68 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಕೊರತೆ ಹೊಂದಿದ್ದೇವೆ. ಉಭಯ ರಾಷ್ಟ್ರಗಳ ವ್ಯವಹಾರದಲ್ಲಿ ಚೀನಾವೇ ಮೇಲುಗೈ ಸಾಧಿಸಿರುವುದಕ್ಕೆ ಕಾರಣವೇನೆಂದರೆ, ನಾವು ಚೀನಾಕ್ಕೆ ರಫ್ತು ಮಾಡುತ್ತಿರುವ ವಸ್ತುಗಳು ಪ್ರಾಥಮಿಕ ಹಂತದವು. ಆದರೆ ಅವರು ಬೃಹತ್ ಪ್ರಮಾಣದಲ್ಲಿ ಸಿದ್ಧವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದ್ದಾರೆ. ಇಂಧನ ಮತ್ತು ದೂರಸಂಪರ್ಕ ವಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವ ಭಾರತಕ್ಕೆ ಅವಶ್ಯವಿರುವ ಸಿದ್ಧವಸ್ತುಗಳು ಅವಾಗಿವೆ’ ಎಂದೂ ಭಾರತದ ಸ್ಥಿತಿಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

Leave a Reply