ಸುದ್ದಿಸಂತೆ: ಸಂಸತ್ತಿನಲ್ಲೇನಾಯ್ತು?, ಸೋಮವಾರದ ನೆರಳಿಲ್ಲದ ಮಧ್ಯಾಹ್ನ, ಮಾಲೆಗಾಂವ್ 9 ಆರೋಪಿಗಳು ಮುಕ್ತ..,

ಬೆಂಗಳೂರಿನ ಹಲವು ಕಡೆಗಳಲ್ಲಿ ಸೋಮವಾರ ಸಂಜೆ ಐದರ ಮಳೆ. ಇಳೆ ತಂಪಾಯಿತು. ಕೆಲ ಮರಗಳೂ ಧರೆಗುರುಳಿದವು.

ಡಿಜಿಟಲ್ ಕನ್ನಡ ಟೀಮ್

ಸಂಸತ್ತಿನಲ್ಲಿ ಸಮಯ ತಿಂದ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದ ವಿಷಯ

ಸೋಮವಾರ ಆಂರಭವಾದ ಸಂಸತ್ ಅಧಿವೇಶನದಲ್ಲಿ ಸದ್ದು ಮಾಡಿದ್ದು, ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ ಕೇಂದ್ರದ ನಿರ್ಧಾರ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಈ ವಿಷಯವನ್ನು ಇಟ್ಟುಕೊಂಡು ಕೇಂದ್ರದ ಮೇಲೆ ಹರಿಹಾಯುವುದರಲ್ಲಿ ಹೆಚ್ಚು ಸಮಯ ವ್ಯಯವಾಯಿತು.

ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಈ ವಿಷಯ ಗದ್ದಲ ಎಬ್ಬಿಸಿದವು. ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಹ ಸಾಥ್ ನೀಡಿದರು.

ಬಾವಿಗಿಳಿದು ಪ್ರತಿಭಟನೆ ನಡೆಸುವ ವೇಳೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ನಿಲುವಳಿ ಸೂಚನೆಗಾಗಿ ಮನವಿ ಮಾಡಿದ್ದಾಗಿ ತಿಳಿಸಿದರು. ಆದರೆ, ಸ್ಪೀಕರ್ ಈ ಮನವಿಯನ್ನು ನಿರಾಕರಿಸಿದರು. ಈ ವೇಳೆ ಖರ್ಗೆ, ‘ಇದು ಪ್ರಜಾಪ್ರಭುತ್ವದ ಕೊಲೆ’ ಎಂದು ಕೂಗಿದರು. ‘ಕೇಂದ್ರ ಸರ್ಕಾರ ಶಾಸಕರನ್ನು ಖರೀದಿಸುವ ಮೂಲಕ ಸಂವಿಧಾನದ ಕೊಲೆ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದೆ. ಎನ್ ಡಿಎ ಸರ್ಕಾರ ಸಂವಿಧಾನ ಇದೆ ಎಂಬುದನ್ನು ಮರೆತು ಆತುರವಾಗಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸುವ ಪ್ರಯತ್ನದಲ್ಲಿದೆ’ ಎಂದರು. ಈ ವೇಳೆ ಕಾಂಗ್ರೆಸ್ ಜತೆಗೆ ಜೆಡಿಯು ಮತ್ತು ಎಎಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದವು.

ನಂತರ ಸ್ಪೀಕರ್, ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಈ ಬಗ್ಗೆ ಏನನ್ನು ಮಾತನಾಡಬಾರದು ಎಂದು ಖರ್ಗೆ ಅವರಿಗೆ ನೆನಪಿಸಿದರು.

ಈ ಆರೋಪಗಳಿಗೆ ಉತ್ತರಿಸಿದ ರಾಜನಾಥ್ ಸಿಂಗ್, ‘ಉತ್ತರಾಖಂಡದಲ್ಲಿನ ರಾಜಕೀಯ ಬಿಕ್ಕಟ್ಟಿಗೆ ಎನ್ ಡಿಎ ಅಥವಾ ಬಿಜೆಪಿ ಕಾರಣವಲ್ಲ. ಅದು ಆ ಪಕ್ಷದ ಆಂತರಿಕ ಕಲಹ. ಈ ವಿಚಾರ ಸುಪ್ರೀಂ ಕೋರ್ಟ್ ನಲ್ಲಿರುವಾಗ ಇದರ ಬಗ್ಗೆ ಮಾತನಾಡಬಾರದು ಎಂಬ ಸ್ಪೀಕರ್ ನಿರ್ಧಾರ ಉತ್ತಮವಾಗಿದೆ’ ಎಂದರು.

ಪರಿಸ್ಥಿತಿ ಸುಧಾರಿಸಿದ ನಂತರ ಲೋಕಸಭೆಯಲ್ಲಿ ಸಿಖ್ ಗುರುದ್ವಾರ ಬಿಲ್ 2016 (ತಿದ್ದುಪಡಿ) ಅನ್ನು ಜಾರಿಗೊಳಿಸಿತು. ನಂತರ ದ ರೀಜಿನಲ್ ಸೆಂಟರ್ ಫಾರ್ ಬಯೋಟೆಕ್ನಿಕಲ್ ಬಿಲ್ ಗೆ ಅನುಮೋದನೆ ನೀಡಲಾಯಿತು. ಲೋಕಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ 9 ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ಆನಂದ ಶರ್ಮಾ ಹಿಮಾಚಲ ಪ್ರದೇಶದಿಂದ, ನರೇಶ್ ಗುಜ್ರಾಲ್ (ಎಸ್ಎಡಿ), ತ್ರಿಪುರದಿಂದ ಸಿಪಿಐಎಂನ ಜರ್ನಾ ದಾಸ್ ಬೈದ್ಯ ಪುನರ್ ಆಯ್ಕೆಯಾದ ಸದಸ್ಯರಾಗಿದ್ದಾರೆ. ಉಳಿದಂತೆ ಕಾಂಗ್ರೆಸ್ ನ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಶಂಶೀರ್ ಸಿಂಗ್ ಡುಲ್ಲೊ ಮತ್ತು ಬಿಜೆಪಿಯ ಶ್ವಾತ್ ಮಲಿಕ್ ಪಂಜಾಬ್ ನಿಂದ ಆಯ್ಕೆಯಾದ ಸದಸ್ಯರು. ಅಸ್ಸಾಂನ ಕಾಂಗ್ರೆಸ್ ನಿಂದ ರಿಪುನ್ ಬೊರಾ ಮತ್ತು ರಾನೀ ನಾರಹ್, ಕೇರಳದಿಂದ ಸಿಪಿಐಎಂನ ಕೆ.ಸೋಮಪ್ರಸಾದ್ ಪ್ರಮಾಣವಚನ ಸ್ವೀಕರಿಸಿದ ಸದಸ್ಯರುಗಳು.

ಇನ್ಫೋಸಿಸ್ ಗೆ ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯದಿಂದ ಎಚ್ಚರಿಕೆ

ಕೇಂದ್ರ ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯದ ವೆಬ್ ಪುಟ ನಿರ್ವಹಣೆಯಲ್ಲಿ ಇನ್ಫೋಸಿಸ್ ವೈಫಲ್ಯ ಅನುಭವಿಸಿದೆ ಎಂದು ಆರೋಪಿಸಿದ್ದು, ಹಣ ಪಾವತಿ ವೇಳೆ ಕಡಿತ ಮಾಡುವುದಾಗಿ ಸಚಿವಾಲಯ ಎಚ್ಚರಿಕೆ ನೀಡಿದೆ. ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಕಂಪನಿಯಾಗಿರುವ ಇನ್ಫೋಸಿಸ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ವ್ಯವಸ್ಥೆ ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿವೆ. ಕಂಪ್ಯೂಟರ್ ಗಳ ಬದಲಾವಣೆ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಿದ್ದವು. ಅವುಗಳನ್ನೆಲ್ಲಾ ಬಗೆಹರಿಸಲಾಗಿದೆ ಎಂದು ಕಂಪನಿಯ ವಕ್ತಾರ ತಿಳಿಸಿದ್ದಾರೆ.

ಸಚಿವಾಲಯದ ವೆಬ್ ಪುಟದಲ್ಲಿ ಸಮಸ್ಯೆ ಇದ್ದ ಕಾರಣ, ಮೂರು ವಾರಗಳ ಹಿಂದೆಯೇ ಇನ್ಫೋಸಿಸ್ ಮುಖ್ಯಸ್ಥ ವಿಶಾಲ್ ಸಿಕ್ಕಾ ಅವರಿಗೆ ಪತ್ರ ಬರೆಯಲಾಗಿತ್ತು. ಆದರೂ ಕೆಲ ಸಮಸ್ಯೆಗಳು ಮುಂದುವರಿದಿರುವುದರಿಂದ ಎಚ್ಚರಿಕೆ ನೀಡಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ‘ಕಾರ್ಪೋರೆಟ್ ಸಚಿವಾಲಯದ ಕಾರ್ಯದರ್ಶಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ, ಪರಿಶೀಲನೆ ನಡೆಸಲಾಗಿದೆ. ಸೇವಾದಾರರಾಗಿ ಇನ್ಫೋಸಿಸ್ ದೇಶವೇ ಮುಜುಗರಕ್ಕೊಳಗಾಗುವಂತೆ ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನೆರಳಿಲ್ಲದ ಮಧ್ಯಾಹ್ನ

ಸೋಮವಾರ ಮಧ್ಯಾಹ್ನ ಶೂಹ್ನ ನೆರಳಿನ ಮಧ್ಯಾಹ್ನವಾಗಿತ್ತು. ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವಾಗ ನೆರಳೂ ಶೂನ್ಯ ಪ್ರಮಾಣದಲ್ಲಿತ್ತು. ಇದನ್ನು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಮಧ್ಯಾಹ್ನ 12.17ಕ್ಕೆ ನಿರೂಪಿಸಲಾಯಿತು. ಈ ಸಂದರ್ಭದಲ್ಲಿ ಯಾವುದೇ ಕಂಬಕ್ಕೆ ನೆರಳು ಬಿದ್ದರೂ ಅದರ ನೆರಳು ಗೋಚರಿಸುವುದಿಲ್ಲ.

ನಿರ್ದಿಷ್ಟ 2 ದಿನಗಳಲ್ಲಿ ಮಾತ್ರ ಮದ್ಯಾಹ್ನ ನೆರಳು ಇಲ್ಲವಾಗುತ್ತದೆ. ಸದ್ಯ ಉತ್ತರಕ್ಕೆ ಚಲಿಸುತ್ತಿರುವ ಸೂರ್ಯ ಜೂನ್ 22ರಂದು ಗರಿಷ್ಠವನ್ನು ಮುಟ್ಟುತ್ತದೆ. ಆ ನಂತರ ದಕ್ಷಿಣ ದಿಕ್ಕಿಗೆ ಹಿಂದಿರುಗುತ್ತದೆ. ಇದೇ ದಕ್ಷಿಣಾಯನ. ಹೀಗೆ ದಕ್ಷಿಣಕ್ಕೆ ಸಾಗುವಾಗ ಆಗಸ್ಟ್ 19ರಂದು ಮತ್ತೆ ಸೂರ್ಯ ನೆತ್ತಿಯ ಮೇಲೆ ಹಾದುಹೋಗಲಿದ್ದು, ಆಗಲೂ ನೆರಳು ಶೂನ್ಯ ಪ್ರಮಾಣದ್ದಾಗಲಿದೆ.

ಇದು ಸಮಭಾಜಕ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದವರೆಗಿನ ಪ್ರದೇಶಗಳಿಗೆ ಬೇರೆ ಬೇರೆ ದಿನಗಳು ಅನ್ವಯವಾಗುತ್ತದೆ. ಅಲ್ಲದೇ 11.55ರಿಂದ 12.25ರವರೆಗೂ ಸ್ಥಳದಿಂದ ಸ್ಥಳಕ್ಕೆ ಸಮಯ ಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ ಗಾಜಿನ ಲೋಟವನ್ನು ಇಟ್ಟು ಶೂನ್ಯ ನೆರಳಿನ ಸಮಯವನ್ನು ಕಂಡುಹಿಡಿಯಬಹುದಾಗಿದೆ.

nehru taralaya

ಮಾಲೇಗಾಂವ್ ಸ್ಫೋಟ:  9 ಆರೋಪಿಗಳು ದೋಷಮುಕ್ತ

ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ 8 ಆರೋಪಿಗಳನ್ನು ಸಾಕ್ಷಾಧಾರ ಕೊರತೆಯಿಂದ ಮುಂಬೈ ನ್ಯಾಯಾಲಯ ಸೋಮವಾರ ದೋಷಮುಕ್ತಗೊಳಿಸಿದೆ.  2006ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್ ಎಂಬಲ್ಲಿ 35 ಮಂದಿಯ ಸಾವಿಗೆ ಕಾರಣರಾದ ಘಟನೆಯಲ್ಲಿ ಪಾಕಿಸ್ಥಾನದ ಲಷ್ಕರ್ ಇ

ತೋಯ್ಬಾ ಉಗ್ರ ಸಂಘಟನೆಗೆ ಬಾಂಬ್ ಸ್ಫೋಟಿಸಲು ಸಹಕರಿಸಿದ 9 ಮಂದಿಯನ್ನು ಬಂಧಿಸಲಾಗಿತ್ತು. ಒಬ್ಬ ಘಟನೆಯ ನಂತರ ಸಾವಿಗೀಡಾಗಿದ್ದರು, 2011ರಲ್ಲೇ 5 ಮಂದಿಗೆ ಜಾಮೀನು ದೊರೆತಿತ್ತು. ಇನ್ನೂ ಉಳಿದ ಇಬ್ಬರು 2006 ರ ರೈಲು ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದಾರೆ.

ಈ 9 ಮಂದಿ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವುದರ ಬಗ್ಗೆ ಯಾವುದೇ ಸಾಕ್ಷಾಧಾರಗಳು ಇಲ್ಲ ಎಂದು ಕಳೆದ ವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಮುಂಬೈ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಈ ಹಿನ್ನೆಯಲ್ಲಿ ನ್ಯಾ.ವಿ ವಿ ಪಾಟೀಲ್ ಪ್ರಕರಣದ ಎಲ್ಲಾ 9 ಆರೋಪಿಗಳು ದೋಷಮುಕ್ತರೆಂದು ತೀರ್ಪು ನೀಡಿದ್ದಾರೆ.

ಬೀದಿಯಲ್ಲಿ ಭಿಕ್ಷೆ ಬೇಡುವುದಕ್ಕಿಂತ ಬಾರ್ ನಲ್ಲಿ ನೃತ್ಯ ಮಾಡುವುದೇ ಲೇಸು ಎಂದ ಸುಪ್ರೀಂ

ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ಗಳ ವಿರುದ್ಧ ಇಲ್ಲಿನ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಬೀದಿಗಳಲ್ಲಿ ಭಿಕ್ಷೆ ಬೇಡುವುದಕ್ಕಿಂತ ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯ ಮಾಡುವುದೇ ಲೇಸು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಇಲ್ಲಿನ ಸರ್ಕಾರ ಡ್ಯಾನ್ಸ್ ಬಾರ್ ಗಳಿಗೆ ಪರವನಾಗಿ ನೀಡಲು ನಿರಾಕರಿಸಿತ್ತು. ಸರ್ಕಾರದ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂನ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಶಿವ ಕೀರ್ತಿ ಸಿಂಗ್ ಅವರ ಜಂಟಿ ಪೀಠ ಡ್ಯಾನ್ಸ್ ಬಾರ್ ಗಳಿಗೆ ರಾಜ್ಯದಲ್ಲಿ ಹೇರಿರುವ ನಿಷೇಧವನ್ನು ತೆರವುಗೊಳಿಸುವ ಬಗ್ಗೆ ಚಿಂತಿಸಿ ಎಂದು ಸಲಹೆ ನೀಡಿದ್ದು, ಮಹಿಳೆ ಡ್ಯಾನ್ಸ್ ಬಾರ್ ನಲ್ಲಿ ಸಂಪಾದನೆ ಮಾಡುವುದಾದರೇ ಇದು ಆಕೆಯ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿದೆ.

ಡ್ಯಾನ್ಸ್ ಬಾರ್ ಗಳ ನೌಕರರ ಬಗ್ಗೆ ಪೊಲೀಸರ ಪರಿಶೀಲನೆ ಮುಗಿಸಿ ವಾರದೊಳಗೆ ಬಾರ್ ಗಳಿಗೆ ಪರವಾನಗಿ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

ಕನ್ಹಯ್ಯಗೆ ₹ 10 ಸಾವಿರ ದಂಡ, ಖಾಲಿದ್ ಗೆ 1 ಸೆಮಿಸ್ಟರ್ ನಿಷೇಧ ಹೇರಿದ ಜೆಎನ್ ಯು

ದೇಶದ್ರೋಹ ಘೋಷಣೆಯ ಆರೋಪ ಎದುರಿಸುತ್ತಿರುವ ಜೆಎನ್ ಯು ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್ ಗೆ ₹ 10 ಸಾವಿರ ದಂಡ ಮತ್ತು ಉಮರ್ ಖಾಲಿದ್ ಗೆ ಒಂದು ಸೆಮಿಸ್ಟರ್ ಅವಧಿ ವಿವಿಯಿಂದ ಹೊರಹಾಕಿರುವುದಾಗಿ ಜೆಎನ್ ಯು ತನಿಖಾ ಸಮಿತಿ ಹೇಳಿದೆ. ದೇಶದ್ರೋಹದ ಪ್ರಕರಣದಲ್ಲಿ ಗುರುತಿಸಿಕೊಂಡು, ಬಂಧನಕ್ಕೆ ಒಳಗಾಗಿ, ಜೈಲು ಶಿಕ್ಷೆಗೆ ಗುರಿಯಾಗಿರುವ ಕಾರಣ ವಿವಿಯ ಉನ್ನತ ಮಟ್ಟದ ತನಿಖಾ ಸಮಿತಿ (ಎಚ್ಎಲ್ಇಸಿ)ಯ ನೀಡಿರುವ ವರದಿ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಇವರೊಂದಿಗೆ ಇನ್ನೂ 14 ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.

Leave a Reply