ಸ್ವದೇಶಿ ತೇಜಸ್ ಯುದ್ಧವಿಮಾನ, ಶ್ರೀಲಂಕಾ- ಈಜಿಪ್ಟ್ ಗಳನ್ನು ಸೆಳೆದು ಪಾಶ್ಚಾತ್ಯರಿಗೆ ಪೈಪೋಟಿ ನೀಡುತ್ತಿರುವ ಅಭಿಮಾನ!

ಡಿಜಿಟಲ್ ಕನ್ನಡ ವಿಶೇಷ

ಭಾರತದ ಯುದ್ಧ ವಿಮಾನ ತೇಜಸ್ ಈಗ ವಿಶ್ವ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೇ ವರ್ಷ ಜೂನ್ ವೇಳೆಗೆ 4 ತೇಜಸ್ ಯುದ್ಧ ವಿಮಾನ ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿದ್ದು, ಈ ಯುದ್ಧ ವಿಮಾನವನ್ನು ಖರೀದಿಸಲು ಶ್ರೀಲಂಕಾ ಮತ್ತು ಈಜಿಪ್ಟ್ ರಾಷ್ಟ್ರಗಳು ಮುಂದೆ ಬಂದಿವೆ. ಈವರೆಗೆ ಭಾರತವು ರಷ್ಯಾ, ಫ್ರಾನ್ಸ್, ಅಮೆರಿಕಗಳಿಂದ ಯುದ್ಧ ವಿಮಾನ ಖರೀದಿಸಿದ್ದು ಮಾತ್ರ ಸುದ್ದಿಯಾಗುತ್ತಿದ್ದ ಸಂದರ್ಭದಲ್ಲಿ, ಈಗ ಸ್ವದೇಶಿ ನಿರ್ಮಿತ ಅತಿಹಗುರ ಯುದ್ಧ ವಿಮಾನ ತೇಜಸ್ ಗೆ ಬೇರೆ ರಾಷ್ಟ್ರಗಳಿಂದಲೂ ಬೇಡಿಕೆ ಬಂದಿರುವುದು ಪಾಶ್ಚಾತ್ಯ ರಾಷ್ಟ್ರಗಳು ಅಚ್ಚರಿ ಪಡುವಂತೆ ಮಾಡಿದೆ.

ವಿಶ್ವದ ಅತ್ಯಂತ ಹಗುರ ಯುದ್ಧ ವಿಮಾನ ಈ ತೇಜಸ್. ಏಕ ವ್ಯಕ್ತಿ ಚಾಲಿತ, ಏಕ ಯಂತ್ರ ಚಾಲಿತವಾಗಿರುವ ಈ ವಿಮಾನ ಬಹು ಉಪಯೋಗಿಯಾಗಿದೆ. ಕಳೆದ ಮೂರು ದಶಕಗಳಿಂದ ಇದರ ಅನ್ವೇಷಣೆ- ಅಭಿವೃದ್ಧಿ ನಡೆದಿದ್ದು, ಈ ವರ್ಷಾಂತ್ಯ ಅಥವಾ ಮುಂದಿನ ವರ್ಷ ಆರಂಭದಲ್ಲಿ ಭಾರತೀಯ ವಾಯು ಪಡೆಯಲ್ಲಿ ತನ್ನ ಸೇವೆ ಆರಂಭಿಸಲಿದೆ. ಕಡಿಮೆ ವೆಚ್ಚದ ಹಾಗೂ ಅದ್ಭುತ ಹಾರಾಟ ಸಾಮರ್ಥ್ಯ ಹೊಂದಿರುವ ತೇಜಸ್, ಭಾರತದ ಜತೆಗೆ ಇತರ ದೇಶಗಳ ಹಾಟ್ ಫೇವರಿಟ್.

ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ ನಲ್ಲಿ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿ ಸಹಯೋಗದಲ್ಲಿ ಈ ತೇಜಸ್ ನಿರ್ಮಾಣಗೊಂಡಿದೆ. ಈ ಜೂನ್ ವೇಳೆಗೆ ಐಎಎಫ್ ಸೇರ್ಪಡೆಗೊಳ್ಳಲಿರುವ 4 ತೇಜಸ್ ವಿಮಾನಗಳನ್ನು ತರಬೇತಿಗಾಗಿ ಬಳಸಿಕೊಳ್ಳಲಾಗುವುದು. ಈ ವರ್ಷ 6 ಯುದ್ಧವಿಮಾನ ತಯಾರಿಸಲಿದ್ದು, ಮುಂಬರುವ ವರ್ಷಗಳಲ್ಲಿ 8 – 16 ಯುದ್ಧ ವಿಮಾನ ತಯಾರಿಸುವ ಗುರಿ ಹೊಂದಲಾಗಿದೆ.

ನಮ್ಮ ನೆರೆರಾಷ್ಟ್ರ ಶ್ರೀಲಂಕಾ ಚೀನಾ ಸಹಯೋಗದಲ್ಲಿ ಪಾಕಿಸ್ತಾನ ನಿರ್ಮಿತ ಜೆಎಫ್ 17 ಯುದ್ಧ ವಿಮಾನವನ್ನು ಖರೀದಿಸುವ ನಿರೀಕ್ಷೆಯಲ್ಲಿತ್ತು. ಆದರೆ ಈಗ ಅದೂ ತೇಜಸ್ ಬಗ್ಗೆ ಆಸಕ್ತಿ ವಹಿಸಿದೆ ಎನ್ನಲಾಗುತ್ತಿದ್ದು, 18-24 ಯುದ್ಧವಿಮಾನಗಳಿಗೆ ಬೇಡಿಕೆ ಇಟ್ಟಿದೆ ಎಂಬ ವರದಿಗಳು ವಿದೇಶಿ ಮಾಧ್ಯಮದಲ್ಲಿ ಪ್ರಕಟವಾಗಿವೆ. ಈಜಿಪ್ಟ್ ಸಹ ತೇಜಸ್ ಖರೀದಿ ಬಗ್ಗೆ ಆಸಕ್ತವಾಗಿದೆ.

1983ರಲ್ಲಿ ಲೈಟ್ ಕಾಂಬಾಟ್ ಏರ್ ಕ್ರಾಫ್ಟ್ ಯೋಜನೆ ಆರಂಭಿಸಲಾಗಿದ್ದು, ನಂತರ ಇದರ ನಿರ್ವಹಣೆಗಾಗಿ 1984ರಲ್ಲಿ ಏರೋನಾಟಿಕ್ ಡೆವಲಪ್ ಮೆಂಟ್ ಏಜೆನ್ಸಿ (ಎಡಿಎ) ಸ್ಥಾಪಿತವಾಯಿತು. ಈ ಯೋಜನೆಯಡಿ ಎಕೆ 2 ಯುದ್ಧ ವಿಮಾನ ತಯಾರಿಸುವ ಬದಲಿಗೆ, ಪ್ರಸ್ತುತ ತೇಜಸ್ ವಿಮಾನದಲ್ಲಿ 40 ಅಗತ್ಯ ಬದಲಾವಣೆಗಳನ್ನು ಮಾಡಲು ಐಎಎಫ್ ನಿರ್ಧರಿಸಿದೆ.

ಭಾರತೀಯ ವಾಯು ಪಡೆಗೆ 200 ಏಕವ್ಯಕ್ತಿ ಚಾಲಿತ ಹಾಗೂ ತರಬೇತಿಗಾಗಿ 20 ಎರಡು ವ್ಯಕ್ತಿ ಚಾಲಿತ ಫೈಟರ್ ಗಳ ಅಗತ್ಯವಿದೆ. ಇನ್ನು ಭಾರತೀಯ ನೌಕಾಪಡೆಗೆ 40 ಏಕವ್ಯಕ್ತಿ ಚಾಲಿತ ಫೈಟರ್ ಅಗತ್ಯವಿದ್ದು, ಇದು ಸೀ ಹ್ಯಾರಿಯರ್ ಎಫ್ಆರ್ಎಸ್ .51 ಮತ್ತು ಹ್ಯಾರಿಯರ್ ಟಿ.60 ಯುದ್ಧ ವಿಮಾನಗಳ ಸ್ಥಾನ ತುಂಬಲಿವೆ. ಭಾರತೀಯ ರಕ್ಷಣಾ ಇಲಾಖೆ, ಮೊದಲು ಭಾರತದ ಅಗತ್ಯವನ್ನು ಪೂರೈಸಿದ ನಂತರವಷ್ಟೇ ವಿದೇಶಗಳಿಗೆ ಮಾರಾಟ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದೆ.

ಚಿಕ್ಕ ಹಾಗೂ ಚುರುಕಿನ ಯುದ್ಧವಿಮಾನವಾಗಿರುವ ತೇಜಸ್, ವಿಶ್ವದ ಗಮನ ಸೆಳೆದಿದೆ. ವಿಶ್ವದಲ್ಲಿ ಸುಮಾರು 6 ಯುದ್ಧ ವಿಮಾನ ಹಾಗೂ ಜೆಟ್ ತಯಾರಕರಿದ್ದಾರೆ. ಈಗ ಇದರಲ್ಲಿ ಬಹುತೇಕ ತಯಾರಕರು ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದ ಜತೆ ಸಹಭಾಗಿತ್ವ ಹೊಂದಲು ಮುಂದಾಗಿದ್ದಾರೆ.

Leave a Reply