ಹೊಗಳಿಕೆಯೆಲ್ಲ ಹಳ್ಳ ಹಿಡೀತು, ಚೀನಾ ಒತ್ತಡಕ್ಕೆ ಮಣಿದ ಭಾರತ ಯುಗರ್ ಮುಖಂಡನ ವೀಸಾ ರದ್ದುಪಡಿಸಿತು!

ಡಿಜಿಟಲ್ ಕನ್ನಡ ಟೀಮ್

ಚೀನಾ ಯಾರನ್ನು ಉಗ್ರವಾದಿ ಎಂದು ಪರಿಗಣಿಸಿತ್ತೋ ಅಂಥ ವ್ಯಕ್ತಿಗೆ ಭಾರತ ವೀಸಾ ಕೊಡುವ ಮೂಲಕ ಸರಿಯಾಗಿಯೇ ಟಾಂಗ್ ನೀಡಿದೆ ಅಂತ ಮೂರು ದಿನಗಳ ಹಿಂದೆ ಸಂಭ್ರಮಿಸಿದ್ದೆವು. ಏಕೆಂದರೆ ಜೈಷೆ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಅಡ್ಡಗಾಲು ಹಾಕಿತ್ತು.

ಆದರೆ ಇವತ್ತು ಬ್ಯಾಡ್ ನ್ಯೂಸ್. ಚೀನಾ ಒತ್ತಡಕ್ಕೆ ಮಣಿದ ಭಾರತ ಯುಗರ್ ಪ್ರತ್ಯೇಕತಾವಾದಿ ನಾಯಕ ದೊಲ್ಕುನ್ ಇಸಾ ಮತ್ತವರ ಸಹಚರರಿಗೆ ನೀಡಿದ್ದ ವೀಸಾವನ್ನು ರದ್ದುಗೊಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖಾ ಚಟುವಟಿಕೆಗಳ ಸಹಕಾರಕ್ಕೆ ರೂಪುಗೊಂಡಿರುವ ಇಂಟರ್ಪೋಲ್ ನಿಂದ ಇಸಾ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಇರುವುದೇ ಭಾರತ ಬಾಗಬೇಕಾಗಿ ಬಂದಿದ್ದಕ್ಕೆ ಪ್ರಮುಖ ಕಾರಣ.

ಭಾರತವು ಇಂಟರ್ಪೋಲ್ ವ್ಯವಸ್ಥೆಯನ್ನು ಗೌರವಿಸಬೇಕಾಗುತ್ತದೆ. ಹೀಗಾಗಿ ಇಸಾ ಭಾರತಕ್ಕೆ ಬಂದಾಗ ಬಂಧನಗೊಳ್ಳುವ ಸಾಧ್ಯತೆ ಇರುವುದರಿಂದ ವೀಸಾವನ್ನೇ ರದ್ದುಗೊಳಿಸಿದೆವು ಎಂದು ಸರ್ಕಾರದ ಮೂಲಗಳು ಹೇಳಿವೆ.

ಆದರೆ ರೆಡ್ ಕಾರ್ನರ್ ನೋಟೀಸ್ ಇದ್ದಾಗಲೇ ಇಸಾ ಅಮೆರಿಕ ಮತ್ತು ಜಪಾನ್ ಗಳಿಗೆ ಪ್ರವಾಸ ಹೋಗಿ ಬಂದಿದ್ದಾರೆ. ಅಷ್ಟೇ ಅಲ್ಲ, ಸರ್ಕಾರದ ಮುಖ್ಯಸ್ಥರನ್ನು ಭೇಟಿ ಮಾಡಿಯೂ ಇದ್ದಾರೆ. ಅರ್ಥವಿಷ್ಟೆ- ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸುವ, ಚುರುಕು ಮುಟ್ಟಿಸುವ ಶಕ್ತಿ ಪಡೆದುಕೊಂಡಿದೆಯಾದರೂ ತೀರ ವ್ಯವಸ್ಥೆಯೊಂದಕ್ಕೆ ಸಡ್ಡು ಹೊಡೆದು ನ್ಯಾಯ ಪ್ರಶ್ನಿಸುವಷ್ಟರಮಟ್ಟಿಗೆ ಇನ್ನೂ ಬೆಳೆದಿಲ್ಲ.

Leave a Reply