ಪಾಟೀಲರ ಬರಮೀಮಾಂಸೆ, ಇದು ಬುದ್ಧಿಜೀವಿಗಳೆಲ್ಲ ಬಹುತ್ವದ ನೆಲೆಯಲ್ಲಿ ಸರಿಪಡಿಸಬೇಕಾದ ಸಮಸ್ಯೆ!

ಡಿಜಿಟಲ್ ಕನ್ನಡ ವಿಡಂಬನೆ

ಕರ್ನಾಟಕದಲ್ಲಿ ಅರ್ಜೆಂಟಾಗಿ ಬುದ್ಧಿಜೀವಿ ಚಿಂತಕರ ಹೈ ಲೆವಲ್ ಸಮಿತಿಯೊಂದನ್ನು ನೇಮಿಸಬೇಕಾಗಿದೆ. ಅವರ ಕೆಲಸ ಮತ್ತೇನಿರುವುದಿಲ್ಲ, ಆದರೆ ‘ಬರ’ ಎಂಬ ಶಬ್ದವನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಭಾರೀ ಮೀಮಾಂಸೆ ಆಗಬೇಕಿದೆ.

ಏಕೆಂದರೆ ಈವರೆಗೆ ಕರ್ನಾಟಕದ ಮಹಾಜನಗಳು ತಿಳಿದುಕೊಂಡಿದ್ದೇನೆಂದರೆ, ಅತಿಯಾದ ಅಭಾವಕ್ಕೆ ಬರ ಎಂಬ ಶಬ್ದವನ್ನು ಉಪಯೋಗಿಸಲಾಗುತ್ತದೆ ಅಂತ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವು- ನೀರಿಗೆ ತತ್ತ್ವಾರ, ನೀರು ಹುಡುಕಿಹೋಗುವುದರಲ್ಲೇ ಮನುಷ್ಯನ ಶ್ರಮ- ಸಮಯವೆಲ್ಲ ಬಸಿದುಹೋಗುತ್ತಿದೆ. ಇಂಥ ಸ್ಥಿತಿಗೆ ಜನ ಬರ ಎನ್ನುತ್ತಿದ್ದಾರೆ. ಏಕೆಂದರೆ ಇಲ್ಲಿ ಇಲ್ಲಗಳ ಸರಮಾಲೆ ಇದೆ, ಅದು ಬದುಕನ್ನು ಬರಡಾಗಿಸಿದೆ.

ಆದರೆ ಯಾವತ್ತೂ ಸಂವೇದನಾಶೀಲರಾಗಿರುತ್ತಿದ್ದ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಎಚ್. ಕೆ. ಪಾಟೀಲರು ಮಾತ್ರ, ಸುದ್ದಿಗಾರರ ಜತೆ ವಾದ ಮಾಡುವ ಭರದಲ್ಲಿ ಬರವನ್ನೇ ಇಲ್ಲವಾಗಿಸಿದ್ದಾರೆ! ಅವರು ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದ ಮಾತುಗಳನ್ನು ನಾವು ಚೂರು- ಪಾರು ಅರ್ಥ ಮಾಡಿಕೊಳ್ಳುವುದಕ್ಕೆ ಯತ್ನಿಸಿದರೆ ಬಹುಶಃ ಅವರ ವಾದ ಹಿಂಗಿದೆ- ‘ಮಳೆಯಾಗದೇ ಇರುವ ಸ್ಥಿತಿಯನ್ನು ಬರ ಎನ್ನಬೇಕು. ಆದರೆ ಇದು ಬೇಸಿಗೆ ಕಾಲ. ಹೀಗಾಗಿ ಇದನ್ನು ಬಹಳ ಕೆಟ್ಟ ಬೇಸಿಗೆ ಎನ್ನಬಹುದೇ ಹೊರತು ಬರ ಎನ್ನುವುದಕ್ಕಾಗುವುದಿಲ್ಲ’ ಎಂಬರ್ಥದಲ್ಲಿ ಅವರ ವ್ಯಾಖ್ಯಾನ.

ಜಗ್ಗಿ ವಾದ ಮಾಡುವುದಕ್ಕೆ ಭಾಳ್ ಚಲೋ ಟಾಪಿಕ್ಕೇ ಹೌದಿದು. ಆದ್ರೆ ಇಂಥ ಅರ್ಥ ಮೀಮಾಂಸೆಗಳನ್ನೆಲ್ಲ ಹೊಟ್ಟೆ ತುಂಬಿರುವಾಗ ಮಾಡಬೇಕು. ಈಗಿರುವ ಸ್ಥಿತಿಯನ್ನು ಬರ ಅಂತಾದ್ರೂ ಕರೀರಿ, ಬಿಸಿಲು ಅಂತಾದ್ರೂ ಕರೀರಿ… ಸದ್ಯಕ್ಕೆ ಆಗಬೇಕಿರೋದು ನೀರು ತಲುಪಿಸೋ ವ್ಯವಸ್ಥೆ. ಅಷ್ಟಕ್ಕೇ ತೃಪ್ತರಾಗಿ ಬೆನ್ನು ಚಪ್ಪರಿಸಿಕೊಳ್ಳದೇ, ಇನ್ನೆರಡು ತಿಂಗಳಲ್ಲಿ ಮಳೆ ಬಂದಾಗ ನೆಲದ ಉಡಿಯಲ್ಲಿ ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಕುರಿತೂ ಕಾರ್ಯಮಗ್ನವಾಗಬೇಕಿರುವ ಕಾಲವಿದು. ಹಳ್ಳಿಗರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯದಲ್ಲಿ ಲಾಗಾಯ್ತಿನಿಂದ ತೊಡಗಿಕೊಂಡಿರುವ ಪಾಟೀಲರಿಗೆ ಇದೆಲ್ಲ ಗೊತ್ತಿಲ್ಲ ಅಂತೇನಲ್ಲ. ಆದರೂ ಅವರು ಸಲ್ಲದ ಟೈಮಿನಲ್ಲಿ ಬರ ಮೀಮಾಂಸೆಗೆ ಕುಳಿತುಬಿಟ್ಟರು!

ಮತ್ತೇನೂ ಅಲ್ಲದಿದ್ದರೂ ಬರ ಎಂಬ ಶಬ್ದ ಉಪಯೋಗಿಸಿದಾಗ ಅದೊಂದು ಭೀಕರತೆ ಚಿತ್ರಣವನ್ನು ಕೊಡುತ್ತದೆ. ಒಂದ್ಕಡೆ ಇವರದೇ ಪಕ್ಷದ ಉಗ್ರಪ್ಪನವರು ರಾಜ್ಯದ ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಅಂತ ಪರಿಗಣಿಸಿ ಕೇಂದ್ರದವರು ವಿಶೇಷ ಅನುದಾನ ಕೊಡಬೇಕು ಅಂತ ಹೇಳ್ತಿದ್ರೆ, ಪಾಟೀಲರು ಇದು ಬರ ಅಲ್ಲ ಭಯಂಕರ ಬಿಸಿಲು ಅಂದ್ಬಿಟ್ರೆ ಡ್ಯಾಮೇಜಾಗಲ್ವಾ?

ಪಾಟೀಲ್ರು ಎತ್ತಿರೋ ಪಾಯಿಂಟ್ ಏನಿದೆ… ಇದು ಒಳ್ಳೆ ಮಳೆ ಬೀಳುವಾಗ ಬಜ್ಜಿ ತಿನ್ತಾ ಚರ್ಚೆ ಮಾಡೋಕೆ ಸಖತ್ತು ಟಾಪಿಕ್ಕು. ‘ಸಮುದ್ರದ ನಂಟು, ಉಪ್ಪಿಗೆ ಬರ’ ಅಂತ ಯಾರಾದ್ರೂ ಹೇಳಿದ್ರೆ- ಈ ಮಾತು ಬೇಸಿಗೇಲಿ ಹೇಳಂಗಿಲ್ಲ, ಮಳೆಗಾಲದಲ್ಲಿ ಸಮುದ್ರದ ಮೇಲೆ ಮಳೆ ಬರದಿದ್ರೆ ಆಗ ಹೇಳ್ಬಹುದು ಅಂತ ಲಾಜಿಕ್ಕು ಹಾಕಬಹುದೇನೋ. ಹೆಸರು ಕ್ಷೀರಸಾಗರ, ಹಾಲು- ಮಜ್ಜಿಗೆಗೆ ತತ್ತ್ವಾರ ಅಂತ ಹೇಳುವಲ್ಲಿ ಹಾಲು- ಮಜ್ಜಿಗೆಗೆ ಬರ ಅಂತಲೂ ಉಪಯೋಗಿಸಬಹುದು. ಪ್ರಾಸ ಕೂಡುತ್ತೆ. ಆದ್ರೆ ಬರ ಶಬ್ದಪ್ರಯೋಗಕ್ಕೆ ಇಳಿವಾಗ ಬೇಸಿಗೆಕಾಲ- ಮಳೆಗಾಲ ಸರ್ಯಾಗ್ ಲೆಕ್ಕ ಹಾಕ್ಕಬೇಕು ಆಯ್ತಾ?

ಇಂಥ ತಲೆಹರಟೆ ಸುಮಾರು ಮಾಡಬಹುದು. ಆದರೆ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಕುಡಿಯೋದಕ್ಕೇ ನೀರಿಲ್ಲದ ಸ್ಥಿತಿಯನ್ನು ಸದ್ಯಕ್ಕೆ ‘ಬರ’ ಅಂತಲೇ ದೊಡ್ಡ ಮನಸ್ಸು ಮಾಡಿ ಒಪ್ಪಿಕೊಂಡರೆ, ಅದಕ್ಕೆ ಪರಿಹಾರಮಾರ್ಗದತ್ತ ಎಳೆಸುವುದಕ್ಕೆ ಅನುಕೂಲವಾಗುತ್ತೆ. ಪರಿಹಾರ ಕಾರ್ಯವೆಲ್ಲ ಚೆಂದವಾಗಿ ಸಾಗಿ, ಮೇ ಅಂತ್ಯಕ್ಕೆ ಮಳೆ ಕಾಲಿಟ್ಟು, ಹವಾಮಾನ ಇಲಾಖೆ ಹೇಳಿರುವಂತೆ ಸರಾಸರಿಗಿಂತ ಉತ್ತಮ ಮಳೆಯಾದಲ್ಲಿ… ಆಗ ಸುಭಿಕ್ಷ ಕರುನಾಡಿನ ಸಲಹೆಗಾರ- ಚಿಂತಕ- ಬುದ್ಧಿಜೀವಿ- ವಿಚಾರವಾದಿಗಳನ್ನೆಲ್ಲ ಕೂರಿಸಿಕೊಂಡು ಬರವೆಂಬ ಪದದ ಅರ್ಥ ಚಿಂತನೆಯನ್ನು ಇವತ್ತಿನ ಸಮಕಾಲೀನ, ಪಾರಿಸರಿಕ, ಆಧುನೀಕರಣದ, ಜಾಗತೀಕರಣದ, ಸ್ತ್ರೀವಾದಿ, ಪ್ರಗತಿಪರ, ನೆಲಮೂಲದ, ಗಾಢ ಮಣ್ಣಿನ ವಾಸನೆಯ, ಬಹುತ್ವದ ಆಯಾಮಗಳಲ್ಲಿ ಮಾಡಬಹುದಾಗಿದೆ.

Leave a Reply