ಬರ, ಎಸಿಬಿಗೆ ಲೋಕಾಯುಕ್ತ ಕಡತ ವರ್ಗಾವಣೆಗೆ ಹೈಕೋರ್ಟ್ ತಡೆ, ಸಿಐಡಿ ಭ್ರಷ್ಟಾಚಾರ… ದಿನಾಂತ್ಯದ ಎಲ್ಲ ವಿದ್ಯಮಾನಗಳ ಸೂಪರ್ ಪೋಸ್ಟ್

ಕಬ್ಬನ್ ಪಾರ್ಕ್ ಮೆಟ್ರೋ ನೆಲಮಹಡಿ ನಿಲ್ದಾಣವನ್ನು ಮಂಗಳವಾರ ಸಚಿವ ಕೆ. ಜೆ. ಜಾರ್ಜ್, ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಪರಿಶೀಲಿಸಿದರು. 18 ಕಿ. ಮೀ. ಪಥ ಶುಕ್ರವಾರದಿಂದ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಬರ ಕುರಿತಂತೆ ಯಾರ್ಯಾರು ಏನು ಹೇಳಿದರು?

ಪ್ರಸ್ತುತ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಯಾರು ಏನು ಹೇಳಿದರು ಎಂಬುದು ಇಲ್ಲಿದೆ.

– ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೈಗೆತ್ತಿಕೊಂಡಿರುವ ಕಿರು ನೀರಾವರಿ ಹಾಗೂ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಜನರ ಬಾಯಾರಿಕೆ ನಿವಾರಿಸಬೇಕು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಮದ್ದೂರು, ಸೇರಿದಂತೆ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಿರು ಮತ್ತು ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರ್ಕಾರಕ್ಕೆ ಸಲಹೆ.

– ರಾಜ್ಯಾದ್ಯಂತ ಆವರಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಬಹುರಾಷ್ಟ್ರೀಯ ಕಂಪನಿಗಳು, ಐಟಿ-ಬಿಟಿ ಕಂಪನಿಗಳ, ಮಠ-ಮಾನ್ಯಗಳು ಸೇರಿದಂತೆ ಎಲ್ಲರೂ ನೆರವಿಗೆ ಬರುವಂತೆ, ಗೃಹ ಸಚಿವ ಡಾ||ಜಿ.ಪರಮೇಶ್ವರ್ ಮನವಿ.

– ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ವಿಶೇಷ ಅನುದಾನ ನೀಡಬೇಕು. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಅಧ್ಯಯನಕ್ಕೆ ಕರೆತರಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಆಗ್ರಹ.

ಎಸಿಬಿಗೆ ತನಿಖೆ ವರ್ಗಾವಣೆಗೆ ಹೈಕೋರ್ಟ್ ತಡೆ

ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ಪ್ರಕರಣಗಳ ತನಿಖೆಗಳನ್ನು ಎಸಿಬಿಗೆ ವರ್ಗಾಯಿಸುವುದಕ್ಕೆ  ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ. ಅಲ್ಲದೇ ಎಲ್ಲಾ ಪ್ರಕರಣಗಳ ತನಿಖೆಯನ್ನು ಲೋಕಾಯುಕ್ತ ಪೊಲೀಸರೇ  ಮುಂದುವರಿಸಿಲು ಕೋರ್ಟ್ ಆದೇಶ ನೀಡಿದೆ.

ಕೋರ್ಟ್ ನ ತೀರ್ಪು, ಭ್ರಷ್ಟಾಚಾರ ನಿಗ್ರಹ ದಳ ರಚನೆ ಬಳಿಕ ಹಲವು ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗವಾಗುವಂತೆ ಮಾಡಿದೆ.

ಚಿದಾನಂದ ಅರಸ್ ಅವರು ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿ ಹೈಕೋರ್ಟ್ ಇಂದು ತೀರ್ಪು ನೀಡಿದೆ. ನ್ಯಾಯಾಲಯದ ಈ ಆದೇಶದಿಂದ ಮುಖ್ಯಮಂತ್ರಿಯವರ ಆಪ್ತ ಶಾಸಕ ಮುನಿರತ್ನ ಅವರ ವಿರುದ್ಧ ಇರುವ ಪ್ರಕರಣ ಸೇರಿದಂತೆ 1500 ಪ್ರಕರಣಗಳಿಗೆ ವರ್ಗಾವಣೆಯಾಗುವುದನ್ನು ತಡೆಯಾಜ್ಞೆ ನೀಡಿದೆ.

ಸಿಐಡಿಯಲ್ಲೂ ಭ್ರಷ್ಟಾಚಾರದ ಗಾಳಿ

ಉನ್ನತ ಮಟ್ಟದ ತನಿಖೆಗೆ ಮೀಸಲಾಗಿರುವ ಸಿಐಡಿ ಸಂಸ್ಥೆಯಲ್ಲೂ ಭ್ರಷ್ಟಚಾರ ಇದೆ ಎಂಬ ಮಾತು ಈಗ ದಟ್ಟವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಐಡಿ ಎಸ್ ಪಿ ಮಧುರವೀಣಾ ವಿರುದ್ಧ ಲಂಚ ಪಡೆದ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು ಭ್ರಷ್ಟಾಚಾರ ಆರೋಪದ ವರದಿ ಸಲ್ಲಿಸಿದ್ದಾರೆ.

ಮಧುರವೀಣಾ ಅವರು ಶಿವಾಜಿ ನಗರದ ಹೊಟೇಲ್ ಒಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿಕೊಳ್ಳುವ ಬೆದರಿಕೆ ಒಡ್ಡಿ 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಹೊಟೇಲ್ ಸಿಬ್ಬಂದಿ ಸಿಐಡಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಲಂಚ ಪಡೆದುದಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸಿದ್ದರು. ಈ ದೃಶ್ಯಾವಳಿಗಳ ಆಧಾರದ ಮೇಲೆ ಸೋನಿಯಾ ನಾರಂಗ್ ಅವರು ಮಧುರವೀಣಾ ಅವರ ವಿರುದ್ಧ ವರದಿ ತಯಾರಿಸಿ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಸಲ್ಲಿಸಿದ್ದಾರೆ.

 

ಯುಪಿಎ ವಿರುದ್ಧ ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ

ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಈ ನಡುವೆ ದೆಹಲಿಯ ಬಿಜೆಪಿಯ ನಾಯಕಿ ಮೀನಾಕ್ಷಿ ಲೆಖಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ಕುರಿತು ಪ್ರಶ್ನಿಸಿದ್ದಾರೆ. ಯುಪಿಎ ಸರ್ಕಾರ ವಿವಿಐಪಿಗಳಿಗಾಗಿ 12 ಹೆಲಿಕಾಪ್ಟರ್ ಖರೀದಿಸುವ ಉದ್ದೇಶಿತ ಪ್ರಕರಣ ಕುರಿತಂತೆ ತನಿಖೆ ನಡೆಸಬೇಕು ಎಂದು ಮೀನಾಕ್ಷಿ ಅವರು ಆಗ್ರಹಿಸಿದ್ದಾರೆ.

ಸಂಸತ್ತಿನಲ್ಲಿ ಈ ವಿಷಯ ಚರ್ಚೆಯಾಗಬೇಕು. ಈ ಬಗ್ಗೆ ರಕ್ಷಣಾ ಸಚಿವರು ಉತ್ತರಿಸಬೇಕು. ಮಿಲನ್ ನ ನ್ಯಾಯಾಲಯ ಸಹ ಈ ಡೀಲ್ ನಲ್ಲಿ ಯುಪಿಎ ಸರ್ಕಾರದ ಕೈವಾಡದ ಬಗ್ಗೆ ಪ್ರಶ್ನಿಸಿದೆ ಎಂದು ಲೆಖಿ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ದೂರಿದರು.

2013ರ ಏಪ್ರಿಲ್ ನಲ್ಲಿ ಈ ಬಗ್ಗೆ ದಾಖಲೆಗಳನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಕೇಳಲಾಗಿತ್ತು. ಆದರೆ, ಸರ್ಕಾರ 2014ರ ಮಾರ್ಚ್ ವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದಾದ ನಂತರ ಕೇವಲ ಮೂರು ದಾಖಲೆಗಳನ್ನಷ್ಟೇ ನೀಡಲಾಯಿತು. ಈ ವೇಳೆ ಯುಪಿಎ ಸರ್ಕಾರ ಇಟಲಿ ಮಾಫಿಯಾವನ್ನು ರಕ್ಷಿಸುವ ಹುನ್ನಾರ ನಡೆಸಿತ್ತೇ? ಎಂದು ಪ್ರಶ್ನಿಸಿದ್ದಾರೆ ಲೆಖಿ.

ಈ ವಿಷಯ ಪ್ರಸ್ತಾಪಿಸಿದಾಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಉಪಸ್ಥಿತಿರಿದ್ದರು. ಆದರೂ ಯಾವುದೇ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಮಾತನಾಡಲಿಲ್ಲ. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಈ ವಿಷಯದ ಕುರಿತು ರಕ್ಷಣಾ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.

ಈ ಹೆಲಿಕಾಪ್ಟರ್ ಪ್ರಕರಣ 2010ರ ಯುಪಿಎ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ್ದು. ಡೀಲ್ ಮೂಲಕ ಇಟಲಿಯ ಹೆಲಿಕಾಪ್ಟರ್ ತಯಾರಕರಾದ ಫಿನ್ಮೆಕಾನಿಕಾದಿಂದ 12 ಕಾಪ್ಟರ್ ಖರೀದಿಸುವ ಉದ್ದೇಶ ಹೊಂದಲಾಗಿತ್ತು. ವರದಿಗಳ ಪ್ರಕಾರ ಭಾರತದೊಂದಿಗೆ ಈ ಡೀಲ್ ಮಾಡಲು ಇಟಲಿ ಮಾಫಿಯಾ ₹3,565 ಕೋಟಿ ಲಂಚ ನೀಡಿತ್ತು ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್, ಈ ಒಪ್ಪಂದವನ್ನು ಯುಪಿಎ ಸರ್ಕಾರವೇ ರದ್ದುಗೊಳಿಸಿತ್ತು. ಈ ಕುರಿತು ಯಾವುದೇ ರೀತಿಯ ತನಿಖೆ ನಡೆದರೆ, ಅದನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಕೊಳವೆ ಬಾವಿಗೆ ಬಿದ್ದಿದ್ದ ಮಗು ಆಸ್ಪತ್ರೆಯಲ್ಲಿ ಸಾವು

ಗುಜರಾತಿನಲ್ಲಿ ತೆರೆದ ಕೊಳವೆಬಾವಿಗೆ ಬಿದ್ದಿದ್ದ 1 ವರ್ಷದ ಹೆಣ್ಣು ಮಗು ಸುಮಾರು 5 ಗಂಟೆಗಳ ಕಾಲ ಜೀವನ್ಮರಣ ನಡೆಸಿ ಹೊರಬಂದರು ಚಿಕಿತ್ಸೆ ಫಲಿಸದೇ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಇಲ್ಲಿನ ಸುರೇಂದ್ರನಗರ ಜಿಲ್ಲೆಯ ಜುನ ಘನ್ಶಾಮ್ ಗಡ ಗ್ರಾಮದಲ್ಲಿ ಸೋಮವಾರ ಸಂಜೆ 7 ರ ಸುಮಾರಿಗೆ ಮಗು 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ಮಗುವಿನ ತಂದೆ ಗ್ರಾಮದ ಮುಖ್ಯಸ್ಥನ ಸಹಾಯ ಪಡೆದು ಮಗುವಿನ ರಕ್ಷಣೆಗಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ ಡಿ ಆರ್ ಎಫ್)ದ ಸಿಬ್ಬಂದಿ, ಪೊಲೀಸ್ ಮತ್ತು ಅಗ್ನಿಶಾಮಕದಳ ಆಧಿಕಾರಿಗಳೊಂದಿಗೆ ಜೊತೆಗೂಡಿ ಸಿಸಿ ಕ್ಯಾಮರಾ, ಆಮ್ಲಜನಕದ ಸಿಲಿಂಡರ್ ಗಳು ಮತ್ತು ಹಗ್ಗಗಳನ್ನು ಬಳಸಿ ಮಗುವನ್ನು ಹೊರ ತೆಗೆದರು. ಆದರೆ ವೈದ್ಯರ ನೀಡಿದ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ.

 

ಮಹಿಳೆಯ ಸುರಕ್ಷತೆಗೆ ಮೊಬೈಲ್ ನಲ್ಲಿ ದಿಗಿಲು ಗುಂಡಿ ಕಡ್ಡಾಯ

ದೇಶದ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಇನ್ನು ಮುಂದೆ ದೇಶದ ಎಲ್ಲಾ ಮೊಬೈಲ್ ಪೋನ್ ಗಳಲ್ಲೂ ದಿಗಿಲು ಗುಂಡಿ (ಪ್ಯಾನಿಕ್ ಬಟನ್) ಕಡ್ಡಾಯವಾಗಿ ಆಳವಡಿಕೆಯಾಗಲಿದೆ. ಇದು 2017 ನೇ ಜನವರಿ 1 ರಿಂದಲೇ ಜಾರಿಯಾಗಲಿದ್ದು, ಬಳಕೆದಾರರು ತೊಂದರೆಗೆ ಸಿಲುಕಿಕೊಂಡಾಗ ಈ ಸೌಲಭ್ಯ ಬಳಸಿಕೊಂಡರೆ ಸಂಭವಿಸಬಹುದಾದ ಅನಾಹುತವನ್ನು ತಡೆಯಲು ಸಹಕಾರಿಯಾಗಲಿದೆ. ಪ್ರತಿ ಪೋನಿನಲ್ಲೂ ಅಂತರ್ ನಿರ್ಮಿತ ಜಿಪಿಎಸ್ ದಿಕ್ಸೂಚಿ ವ್ಯವಸ್ಥೆ (ಇನ್ ಬಿಲ್ಟ್ ಜಿಪಿಎಸ್ ನ್ಯಾವಿಗೇಶನ್ ಸಿಸ್ಟಮ್) ಒಳಗೊಂಡಿರಲಿದೆ. ಈ ಬಗ್ಗೆ ಎಲ್ಲಾ ಮೊಬೈಲ್ ತಯಾರಿಕಾ ಕಂಪನಿಗಳಿಗೂ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.

 

ಮಲ್ಯರ ಕಡಲಾಚೆಯ ಆಸ್ತಿ ವಿವರಗಳ ಬಹಿರಂಗಕ್ಕೆ ಕೋರ್ಟ್ ಸೂಚನೆ

ಸಾಲ ಮರುಪಾವತಿಸದೇ ದೇಶ ಬಿಟ್ಟಿರುವ ಮಲ್ಯ ಸುಪ್ರೀಂ ಕೋರ್ಟ್ ನಲ್ಲಿ ಕಡಲಾಚೆಯ ಸಂಪತ್ತಿನ ವಿವರಗಳ ಬಗ್ಗೆ ಗೌಪ್ಯತೆ ಕಾಪಾಡಲು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ನೀಡಿರುವ ಸಾಲವನ್ನು ಹಿಂಪಡೆಯಲು ಆಸ್ತಿಯ ವಿವರಗಳನ್ನು ಬಹಿರಂಗ ಪಡಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ. ಅಗತ್ಯವೆನಿಸಿದರೆ ಈ ವಿವರಗಳು ಇಲ್ಲದೆಯೂ ದಿವಾಳಿಯಾಗಿರುವ ವಿಜಯ್ ಮಲ್ಯರ ಕಡಲಾಚೆಯ ಸ್ವತ್ತುಗಳ ಮೂಲಕ ಸಾಲ ವಸೂಲಿಗೆ ಯುಕೆ ಸರ್ಕಾರವನ್ನು ಸಂಪರ್ಕಿಸಲು ಸಾಧ್ಯ ಎಂದು ಬ್ಯಾಂಕುಗಳು ನ್ಯಾಯಾಲಯಕ್ಕೆ ತಿಳಿಸಿವೆ.

ಮಲ್ಯರಿಗೆ ನಿಜವಾಗಲು ನ್ಯಾಯಕ್ಕೆ ದ್ರೋಹ ಮಾಡಿರುವ ಬಗ್ಗೆ ಕಿಂಚಿತ್ತಾದರು ನೋವಿದ್ದರೆ, ದೇಶಕ್ಕೆ ಮತ್ತೆ ವಾಪಸ್ಸು ಬರಬೇಕು ಅನ್ನಿಸಿದರೆ ಏಕ ಪ್ರಯಾಣದ ಅನುಮತಿ ಒದಗಿಸಲು ನಾವು ಸಿದ್ದ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಇದರ ನಡುವೆ ಮಲ್ಯ ಕೂಡ ಹೇಳಿಕೆ ನೀಡಿದ್ದು, ನನ್ನ ಕಡಲಾಚೆಯ ಸ್ವತ್ತುಗಳನ್ನು ಕೇಳಿದರೆ ಗೌಪ್ಯತೆಯ ನಿಯಮಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದಿದ್ದಾರೆ.

ಮುಂಬೈ ಸರಣಿ ಸ್ಫೋಟದ ಶಂಕಿತ ಐಎಂ ಉಗ್ರ ಬಂಧನ

2011ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಂಡಿಯನ್ ಮುಜಾಯಿದಿನ್ (ಐಎಂ) ಉಗ್ರ ಸಂಘಟನೆಯ ಶಂಕಿತ ಉಗ್ರ ಜುನುಲ್ ಅಬೆದೀನ್ ಎಂಬಾತನನ್ನು ನಗರದ ವಿಮಾನ ನಿಲ್ದಾಣದಲ್ಲಿ ಉಗ್ರ ನಿಗ್ರಹ ದಳ ಮಂಗಳವಾರ ಬಂಧಿಸಿದೆ. ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸು 10 ದಿನಗಳ ಕಾಲ ವಿಚಾರಣೆಗೆ ಪಡೆದುಕೊಂಡಿದೆ. ಅಂದಿನ ಘಟನೆಯಲ್ಲಿ 26 ಮಂದಿ ಮೃತಪಟ್ಟು, 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈತ ಕರ್ನಾಟಕ ಮತ್ತು ಗುಜರಾತಿನ ಉಗ್ರ ನಿಗ್ರಹ ದಳಗಳಿಗೆ ಬೇಕಿದ್ದಂತಹ ಆರೋಪಿಯಾಗಿದ್ದಾನೆ.

ಇನ್ನುಳಿದಂತೆ…..

ದಾವೂದ್ ಇಬ್ರಾಹಿಂ ಕಾಲಿನ ಗ್ಯಾಂಗ್ರೀನ್ ಗೆ ತುತ್ತಾಗಿ ಕರಾಚಿಯ ಲಿಖಾಯತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ಯಾಂಗ್ರಿನ್ ಅದಾಗಲೇ ಅಪಾಯದ ಹಂತ ತಲುಪಿರುವುದರಿಂದ, ಕಾಲು ಕತ್ತರಿಸುವುದೇ ಪರಿಹಾರ ಎಂದು ಆಸ್ಪತ್ರೆ ವೈದ್ಯರು ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ವರದಿ ಮಾಡಿದೆ.

ದೆಹಲಿಯ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಅಗ್ನಿ ಅನಾಹುತಕ್ಕೆ ಒಳಗಾಗಿದ್ದು, ಸಂಪೂರ್ಣ ಸಂಗ್ರಹಾಲಯವೇ ಉರಿದುಹೋಗಿದೆ.

ಭಾರತ- ಪಾಕಿಸ್ತಾನ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಸಭೆ ವೇಳೆ ಪಾಕಿಸ್ತಾನ ಕಾಶ್ಮೀರದ ವಿಷಯವನ್ನು ಚರ್ಚಿಸಲು ಮುಂದಾಯಿತಾದರೂ, ಜೈಶಂಕರ್ ಮಾತ್ರ ಉಭಯ ದೇಶಗಳ ನಡುವಣ ಚರ್ಚೆಯಲ್ಲಿ ಭಯೋತ್ಪಾದನೆ ವಿಷಯದ ಮಹತ್ವವನ್ನು ಮುಂದಿಟ್ಟರು. ಆ ಮೂಲಕ ಪಾಕಿಸ್ತಾನ ತನಗೆ ಬೇಕಾದ ವಿಷಯ ತೆಗೆದರೆ, ಭಾರತವೂ ತನಗೆ ಬೇಕಾದ ವಿಷಯವನ್ನು ಪ್ರಸ್ತಾಪಿಸುವುದು ಮುಂದುವರಿದಿದೆ.

ಅಸ್ಸಾಮಿನ ಬ್ರಹ್ಮಪುತ್ರ ಪ್ರವಾಹದಿಂದ ಸುಮಾರು 92 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಜತೆಯಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ, ಭೂಕುಸಿತದಿಂದ ಸಹ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮುಂದಿನ ವರ್ಷ ಮಾರ್ಚ್ ವೇಳೆಗೆ ನಾವು ₹ 10 ಸಾವಿರ ಕೋಟಿ ಆದಾಯ ದಾಟುತ್ತೇವೆ. ಆದಾಯಗಳಿಕೆಯಲ್ಲಿ ಕೊಲ್ ಗೇಟ್ ಕಂಪನಿಯನ್ನು ಹಿಂದಿಕ್ಕುತ್ತೇವೆ. 3 ವರ್ಷಗಳಲ್ಲಿ ಯುನಿಲಿವರ್ ಗಿಂತ ಮುನ್ನಡೆ ಸಾಧಿಸುತ್ತೇವೆ.’ ಇದು ಪತಂಜಲಿ ಆಯುರ್ವೇದ ಉತ್ಪನ್ನಗಳ ಸಂಸ್ಥಾಪಕ ಬಾಬಾ ರಾಮ್ ದೇವ್ ಅವರ ವಿಶ್ವಾಸದ ನುಡಿ. ಇತ್ತೀಚಿನ ದಿನಗಳಲ್ಲಿ ತಮ್ಮ ವ್ಯಾಪಾರ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಸದ್ದು ಮಾಡುತ್ತಿದ್ದ ರಾಮ್ ದೇವ್, ಮಂಗಳವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸಡ್ಡು ಹೊಡೆದಿದ್ದಾರೆ.

ಬೇನಾಮಿ ಆಸ್ತಿಗಳಿಗೂ ಚಿದಂಬರಂ ಕುಟುಂಬಕ್ಕೂ ಇರುವ ಕೊಂಡಿಯನ್ನು ‘ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಅರ್ಥವಾಗುವಂತೆ ತೆರೆದಿಟ್ಟಿದೆ. ಇಲ್ಲಿನ ವಿಧಾನ ಹೀಗಿದೆ. ಕಾರ್ತಿ ಚಿದಂಬರಂ ಅವರ ಪಕ್ಕದ ಮನೆಯವನೂ ಸೇರಿದಂತೆ ಹಲವರು ಯಾವ್ಯಾವುದೇ ಕಂಪನಿಗಳನ್ನು ಕಟ್ಟಿದ್ದಾರೆ. ಇವರೆಲ್ಲರೂ ಈ ಪ್ರಮಾಣದ ಆಸ್ತಿ ತಮ್ಮ ಮರಣಾನಂತರ ಯಾರಿಗೆ ಸೇರಬೇಕು ಅಂತ ವಿಲ್ ಬರೆದಿಟ್ಟಿದ್ದಾರೆ. ಆ ಎಲ್ಲ ಉಯಿಲುಗಳೂ ಇವರ ಆಸ್ತಿಯನ್ನು ಮರಣ ಸಂದರ್ಭದಲ್ಲಿ ಅದಿತಿ ಚಿದಂಬರಂಗೆ ಹಸ್ತಾಂತರಿಸಬೇಕು ಅಂತ ಉಲ್ಲೇಖಿಸಿವೆ. ಈ ಅದಿತಿ ಬೇರೆ ಯಾರೂ ಅಲ್ಲ, ಕಾರ್ತಿ ಚಿದಂಬರಂ ಮಗಳು!

ಉತ್ತರ ಕರ್ನಾಟಕದ ಬಹುಭಾಗ ಕುಡಿಯುವ ನೀರಿಗೇ ಅಭಾವ ಎದುರಿಸುತ್ತಿರುವಾಗ, ಇದು ಬರವಲ್ಲ- ಕಟು ಬೇಸಿಗೆ ಅಂತ ಸಚಿವ ಎಚ್. ಕೆ. ಪಾಟೀಲರು ಬರ ಶಬ್ದಾರ್ಥ ಚಿಂತನೆಗೆ ಇಳಿಯೋದು ಬೇಕಿತ್ತಾ ಅಂತ ಪ್ರಶ್ನಿಸುವ ಬರಹ…

Leave a Reply