ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಬಾಬಾ ರಾಮ್ ದೇವ್ ರಣೋತ್ಸಾಹ, ಮುಲಾಜಿಲ್ಲದ ಮಾತಿನ ಪ್ರಹಾರ

ಡಿಜಿಟಲ್ ಕನ್ನಡ ಟೀಮ್

‘ಮುಂದಿನ ವರ್ಷದೊಳಗೆ ಆದಾಯಗಳಿಕೆಯಲ್ಲಿ ಕೊಲ್ ಗೇಟ್ ಕಂಪನಿಯನ್ನು ಹಿಂದಿಕ್ಕುತ್ತೇವೆ. 3 ವರ್ಷಗಳಲ್ಲಿ ಯುನಿಲಿವರ್ ಗಿಂತ ಮುನ್ನಡೆ ಸಾಧಿಸುತ್ತೇವೆ.’ ಇದು ಪತಂಜಲಿ ಆಯುರ್ವೇದ ಉತ್ಪನ್ನಗಳ ಸಂಸ್ಥಾಪಕ ಬಾಬಾ ರಾಮ್ ದೇವ್ ಅವರ ವಿಶ್ವಾಸದ ನುಡಿ. ಇತ್ತೀಚಿನ ದಿನಗಳಲ್ಲಿ ತಮ್ಮ ವ್ಯಾಪಾರ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಸದ್ದು ಮಾಡುತ್ತಿದ್ದ ರಾಮ್ ದೇವ್, ಮಂಗಳವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸಡ್ಡು ಹೊಡೆದಿದ್ದಾರೆ.

ಮುಂದಿನ ವರ್ಷ ಮಾರ್ಚ್ ವೇಳೆಗೆ ನಾವು ₹ 10 ಸಾವಿರ ಕೋಟಿ ಆದಾಯ ದಾಟುತ್ತೇವೆ ಎಂದಿರುವ ರಾಮ್ ದೇವ್, ‘ಇದು ಕೇವಲ ಆರಂಭ, ಮುಂದಿನ ದಿನಗಳಲ್ಲಿ ಕೋಲ್ ಗೇಟ್ ನ ಬಾಗಿಲು ಕೀಳಲಿದೆ, ನೆಸ್ಲೆಯ ಪಕ್ಷಿ ಹಾರಿಹೋಗಲಿದೆ, ಪ್ಯಾಂಟೀನ್ ನ ಪ್ಯಾಂಟ್ ಒದ್ದೆಯಾಗಲಿದೆ. ಯುನಿಲಿವರ್ ನ ಲಿವರ್ ಕೆಡಲಿದೆ’ ಎಂದು ಅಣಕಿಸಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಣಿಸುವುದಾಗಿ ಸಾರಿದ್ದಾರೆ.

2015-16ರಲ್ಲಿ ಪತಂಜಲಿಯ ಟೂತ್ ಪೇಸ್ಟ್ ದಂತಕಾಂತಿ ಈವರೆಗೂ ₹450 ಕೋಟಿ, ಕೇಶ್ ಕಾಂತಿ ಶಾಂಪೂ ₹350 ಕೋಟಿ ಆದಾಯ ಗಳಿಸಿವೆ.

ತಮ್ಮ ಉತ್ಪನ್ನಗಳ ಪ್ರಚಾರದ ಬಗ್ಗೆ ಮಾತನಾಡಿದ ಯೋಗ ಗುರು, ‘ಬಹುರಾಷ್ಟ್ರೀಯ ಕಂಪನಿಗಳಂತೆ, ನಾವು ನಮ್ಮ ತಾಯಂದಿರು, ಸಹೋದರಿಯರನ್ನು ಅರೆ ಬೆತ್ತಲಾಗಿಸಿ ಉತ್ಪನ್ನಗಳನ್ನು ಮಾರುವ ಪ್ರಯತ್ನ ಮಾಡುವುದಿಲ್ಲ. ಗ್ಲಾಮರ್, ಸೆಲೆಬ್ರಿಟಿ ರಾಯಭಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಉತ್ಪನ್ನಗಳಿಗೆ ನಾನೇ ವೇತನವಿಲ್ಲದ ರಾಯಭಾರಿ’ ಎಂಬುದು ಅವರ ವಾದ.

ಪತಂಜಲಿ ನೈಸರ್ಗಿಕ ಪಾನೀಯಗಳತ್ತಲೇ ಹೆಚ್ಚು ಗಮನಹರಿಸುತ್ತಿದೆ. ಹೊಸ ಉತ್ಪಾದನಾ ಘಟಕಗಳ ಆರಂಭಕ್ಕಾಗಿ ₹1000 ಕೋಟಿ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ₹150 ಕೋಟಿ ಬಂಡವಾಳ ಹೂಡಲು ನಿರ್ಧರಿಸಿದೆ. ಇನ್ನು ಇ ಕಾಮರ್ಸ್ ಸೂತ್ರದತ್ತಲೂ ಆಸಕ್ತಿ ತೋರಿದೆ. ಮುಂದಿನ ವರ್ಷದ ಒಳಗಾಗಿ 4 ಸಾವಿರ ವಿತರಕರು, ಹತ್ತು ಸಾವಿರಕ್ಕೂ ಹೆಚ್ಚು ಕಂಪನಿಯ ಶಾಖೆಗಳನ್ನು ಹೊಂದಲು ಚಿಂತನೆ ನಡೆಸಿದೆ.

ಇನ್ನು ಜನವರಿಯಲ್ಲಿ ಇಂಡಿಯಾ ಇನ್ಫೋಲೈನ್ ಲಿ. ಅಂದಾಜಿನ ಪ್ರಕಾರ ಪತಂಜಲಿ ಆದಾಯ 2020ರ ವೇಳೆಗೆ ₹ 20 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ.

Leave a Reply