ಮುಂಬೈ- ಪಠಾಣ್ ಕೋಟ್ ದಾಳಿ ಕುರಿತಿಲ್ಲ ಉತ್ತರ, ಪಾಕಿಸ್ತಾನದ್ದು ಅದೇ ಹಳೆರಾಗ- ಜಮ್ಮು-ಕಾಶ್ಮೀರ

ಡಿಜಿಟಲ್ ಕನ್ನಡ ಟೀಮ್

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಂಗಳವಾರ ಕಾರ್ಯದರ್ಶಿಗಳ ಮಟ್ಟದ ಮಾತುಕತೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹ್ಮದ್ ಚೌಧರಿ ಭೇಟಿ ಮಾಡಿದ್ದು, 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಸುದ್ದಿಗಾರರು ಬೆಳಗಿಂದ ಮೈಕ್ ಹಿಡಿದುಕೊಂಡು ಸಂಭ್ರಮಿಸಿದ್ದಷ್ಟೇ ಬಂತು. ಮತ್ತದೇ ಕತೆ…. ಜಮ್ಮು-ಕಾಶ್ಮೀರದ ವಿಷಯ ಇತ್ಯರ್ಥವಾಗಬೇಕು ಅಂತ ಪಾಕಿಸ್ತಾನ ಹೇಳಿತು. ನೋಡಿ, ನೋಡಿ…. ನೀವು ಭಯೋತ್ಪಾದನೆ ಹತ್ತಿಕ್ಕಬೇಕು ಆಯ್ತಾ ಅಂತ ಭಾರತ ಕೇಳಿತು. ಇವಿಷ್ಟೇ ಕೊನೆಗೂ ಸಿಗುವ ಸಾರಾಂಶ.

ಈ ನಡುವೆ, ಪಾಕಿಸ್ತಾನವು ತಾನು ಬಂಧಿಸಿದ್ದೇನೆ ಎನ್ನುತ್ತಿರುವ ಗೂಢಚಾರಿಕೆ ಆರೋಪಿಯ ನೇರ ವಿಚಾರಣೆಗೂ ಭಾರತ ಆಗ್ರಹಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಮಾತುಕತೆ- ಶಾಂತಿ ಸ್ಥಾಪನೆ ಈ ಎಲ್ಲ ಉದಾತ್ತ ಧ್ಯೇಯಗಳು ಸರಿ. ಆದರೆ ಮುಂಬೈ ದಾಳಿ, ಪಠಾನ್ ಕೋಟ್ ದಾಳಿ ಯಾವುದಕ್ಕೂ ಪಾಕಿಸ್ತಾನ ಉತ್ತರದಾಯಿ ಆಗುತ್ತಿಲ್ಲ. ಜಮ್ಮು- ಕಾಶ್ಮೀರ ‘ವಿವಾದಿತ’ ಎಂಬುದನ್ನು ವಾದ ಮಾಡುವ ಮಟ್ಟಿಗೆ ಹೌದೆನ್ನುವುದಾದರೂ, ಅದಕ್ಕೋಸ್ಕರ ಮುಂಬೈನಲ್ಲಿ ಪಾಕಿಸ್ತಾನಿಯರ ಉಗ್ರದಾಳಿ ನಡೆಯಬೇಕೇ? ಪಂಜಾಬಿನಲ್ಲಿ ಭಯೋತ್ಪಾದನೆ ಬಿತ್ತಬೇಕೆ? ಇವ್ಯಾವುದಕ್ಕೂ ಉತ್ತರದಾಯಿಯಾಗದ ಪಾಕಿಸ್ತಾನ, ತಾನು ಬಾಂಧವ್ಯ ವೃದ್ಧಿಗೆ ಬದ್ಧ ಆದರೆ ಜಮ್ಮು-ಕಾಶ್ಮೀರ ಇತ್ಯರ್ಥವಾಗಲಿ ಎಂಬ ಎಂದಿನ ಹಳೆರಾಗದಲ್ಲಿದೆ.

ಮುಂಬರುವ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಪಾಕಿಸ್ತಾನ ತಿಳಿಸಿದೆ. ಈ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ವೇಳೆ ಪಾಕಿಸ್ತಾನ ಕಾಶ್ಮೀರದ ವಿಷಯವನ್ನು ಚರ್ಚಿಸಲು ಮುಂದಾಯಿತಾದರೂ, ಜೈಶಂಕರ್ ಮಾತ್ರ ಉಭಯ ದೇಶಗಳ ನಡುವಣ ಚರ್ಚೆಯಲ್ಲಿ ಭಯೋತ್ಪಾದನೆ ವಿಷಯದ ಮಹತ್ವವನ್ನು ಮುಂದಿಟ್ಟರು. ಆ ಮೂಲಕ ಪಾಕಿಸ್ತಾನ ತನಗೆ ಬೇಕಾದ ವಿಷಯ ತೆಗೆದರೆ, ಭಾರತವೂ ತನಗೆ ಬೇಕಾದ ವಿಷಯವನ್ನು ಪ್ರಸ್ತಾಪಿಸುವುದು ಮುಂದುವರಿದಿದೆ.

ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕರು ಹಾಗೂ ಸಂಘಟನೆಗಳು ಪಾಕಿಸ್ತಾನದಲ್ಲಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಅಲ್ಲದೆ ಉಭಯ ದೇಶಗಳ ಸಂಬಂಧದ ಮೇಲೆ ಭಯೋತ್ಪಾದನೆಯ ಪ್ರಭಾವವನ್ನು ಸಹ ಪಾಕಿಸ್ತಾನ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಜೈಶಂಕರ್ ತಿಳಿಸಿದ್ದಾರೆ.

ಪಠಾಣ್ ಕೋಠ್ ದಾಳಿಯ ಬಗ್ಗೆ ಮಾತನಾಡಲು ಮುಂದಾಗದ ಐಜಾಜ್, ಭಾರತದ ಗುಪ್ತಚರ ಸಂಸ್ಥೆ ‘ರಾ’ ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿನ ಕಾರ್ಯಾಚರಣೆ ಬಗ್ಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಜೈಶಂಕರ್,  ಯಾವುದೇ ಗುಪ್ತಚರ ದಳ ತನ್ನ ಸದಸ್ಯನನ್ನು ಪಾಸ್ ಪೋರ್ಟ್ ಕೊಟ್ಟು ಕಾರ್ಯಾಚರಣೆಗೆ ಇಳಿಸಲು ಮುಂದಾಗುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಆರೋಪವನ್ನು ನಿರಾಕರಿಸಿದರು.

Leave a Reply