ಆ್ಯಪಲ್ ಉತ್ಪನ್ನಗಳ ಮಾರಾಟದಲ್ಲಿ ಕುಸಿತ, ಷೇರಿನ ಮೌಲ್ಯ ಶೇ.8ರಷ್ಟು ಇಳಿಮುಖ

ಡಿಜಿಟಲ್ ಕನ್ನಡ ಟೀಮ್

ವಿಶ್ವದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಆ್ಯಪಲ್, ಈಗ ತನ್ನ ಬೇಡಿಕೆಯನ್ನು ಕಳೆದುಕೊಳ್ಳುತ್ತಿದೆ. ಕಂಪನಿ ಕಳೆದ ಕೆಲವು ವರ್ಷಗಳಿಂದ ಐ ಫೋನ್ ಮಾರಾಟ ಹಾಗೂ ತ್ರೈಮಾಸಿಕ ಆದಾಯದಲ್ಲಿನ ಕುರಿತ ವರದಿಯನ್ನು ಪ್ರಕಟಿಸಿದೆ. ಆ ಮೂಲಕ ಪ್ರಸಕ್ತ ತ್ರೈಮಾಸಿಕದಲ್ಲಿ ಕಂಪನಿಯ ಷೇರು ಶೇ.8ರಷ್ಟು ಕುಸಿತ ಕಂಡಿರುವುದು ಬೆಳಕಿಗೆ ಬಂದಿದೆ.

ಈ ತ್ರೈಮಾಸಿಕದಲ್ಲಿ ಒಟ್ಟು 50.6 ಬಿಲಿಯನ್ ಅಮೆರಿಕನ್ ಡಾಲರ್ ಮಾರಾಟದ ಮೊತ್ತ ತೋರಿಸಿದೆ ಆ್ಯಪಲ್. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ ಗಳ ಮಾರಾಟಕ್ಕಿಂತ ಶೇ.13ರಷ್ಟು ಕುಂಠಿತವಾಗಿದೆ.

ಈ ಕಂಪನಿಗೆ ಚೀನಾ ಎರಡನೇ ಅತಿ ದೊಡ್ಡ ಮಾರುಕಟ್ಟೆ. ಇಲ್ಲಿ ತನ್ನ ಸೇವೆ ಹಾಗೂ ಇತರೆ ಉತ್ಪನ್ನಗಳಲ್ಲಿ ಕ್ರಮವಾಗಿ ಶೇ.20 ಹಾಗೂ ಶೇ.30ರಷ್ಟು ಬೆಳವಣಿಗೆ ಕಂಡಿದೆಯಾದರೂ, ಈ ತ್ರೈಮಾಸಿಕದಲ್ಲಿ ಒಟ್ಟು 12.4 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು, ಅಂದರೆ ಶೇ.26ರಷ್ಟು ಕಡಿಮೆಯಾಗಿದೆ.

ಈ ವರ್ಷ ಜನವರಿಯಿಂದ ಮಾರ್ಚ್ ವರೆಗೆ 50.6 ಬಿಲಿಯನ್ ನಷ್ಟು ಮಾರಾಟವಾದರೆ, ತ್ರೈಮಾಸಿಕ ಬೆಳವಣಿಗೆಯಲ್ಲಿ – 15ರಷ್ಟು ಕುಸಿತ ಕಂಡಿದೆ. ಚೀನಾ ಮಾರುಕಟ್ಟಿಯಲ್ಲಿ ಈ ವರ್ಷದ ಬೆಳವಣಿಗೆ ಶೇ.-30ರಷ್ಟು ಇಳಿಮುಖವಾಗಿದೆ. ಇನ್ನು ಭಾರತದಲ್ಲಿನ ಅಂಕಿ ಅಂಶಗಳನ್ನು ಪ್ರತ್ಯೇಕವಾಗಿ ಬಹಿರಂಗಗೊಳಿಸಲು ಕಂಪನಿ ಹಿಂದೇಟು ಹಾಕಿದೆ. ಭಾರತದಲ್ಲಿನ ಮಾರಾಟದ ಅಂಕಿ ಅಂಶಗಳನ್ನು ಇತರೆ ಏಷ್ಯಾ ಫೆಸಿಫಿಕ್ ವರ್ಗದಲ್ಲಿ ಸೇರಿಸಿದೆ. ಇಲ್ಲಿ ಕಳೆದ ವರ್ಷಕ್ಕಿಂತ ಕಂಪನಿಯ ಆದಾಯಗಳಿಕೆಯಲ್ಲಿ ಶೇ.25ರಷ್ಟು ಅಂದರೆ, 3.2 ಬಿಲಿಯನ್ ಅಮೆರಿಕನ್ ಡಾಲರ್ ಕಡಿಮೆಯಾಗಿದೆ.

‘ಪ್ರಸ್ತುತ ಭಾರತದಲ್ಲಿ ಕಡಿಮೆ ದರದ, 4ಜಿ ರಹಿತ ಸ್ಮಾರ್ಟ್ ಫೋನ್ ಹೆಚ್ಚು ಪ್ರಾಬಲ್ಯ ಮೆರೆದಿವೆ. ಇಲ್ಲಿನ ಮಾರುಕಟ್ಟೆ ನಮಗೆ ಹೆಚ್ಚು ಅವಕಾಶ ನೀಡಿಲ್ಲ. 7-10 ವರ್ಷಗಳ ಹಿಂದೆ ಚೀನಾ ಮಾರುಕಟ್ಟೆ ಹೇಗಿತ್ತೋ ಆ ಮಟ್ಟದಲ್ಲಿ ಭಾರತದ ಮಾರುಕಟ್ಟೆ ಇದೆ’ ಎಂಬುದು ಕಂಪನಿಯ ಸಿಇಒ ಟಿಮ್ ಕುಕ್ ಅಭಿಪ್ರಾಯ.

Leave a Reply