ಇಟಲಿಯಲ್ಲಿ ಲಂಚ ಕೊಟ್ಟಿರೋದು ಸಾಬೀತಾಗಿದೆಯಂದ್ರೆ ಇಲ್ಲಿ ತಗೋಂಡಿರೋದು ಖರೆ, ಇದೂ ಬೋಫೋರ್ಸ್ ನಂತೆ ಬೋರಲು ಬೀಳದಿರಲಿ ಅನ್ನೋದೆ ಆಶಯ

ಪ್ರವೀಣ್ ಕುಮಾರ್

ಆಗಸ್ಟಾ ವೆಸ್ಟ್ಲ್ಯಾಂಡ್. ಇಟಲಿಯ ಕಂಪನಿಯೊಂದರಿಂದ ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿತ್ತು ಎಂಬ ವಿಷಯದಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಇಟಲಿ ನ್ಯಾಯಾಲಯದಲ್ಲಿ ವಿಚಾರಣೆಯಾಗಿ, ಲಂಚ ನೀಡಿದ ಇಬ್ಬರಿಗೆ ಜೈಲುಶಿಕ್ಷೆಯಾಗಿದೆ. ಕಂಪನಿಯ ಇನ್ನಿಬ್ಬರು ಉನ್ನತ ಉದ್ಯೋಗಿಗಳಿಗೆ ಭಾರಿ ಪ್ರಮಾಣದ ದಂಡವನ್ನೂ ವಿಧಿಸಲಾಗಿದೆ.

ಇಟಲಿ ಕೋರ್ಟಿನ 225 ಪುಟಗಳ ಆದೇಶ, ಅದರಲ್ಲಿನ ತಾಂತ್ರಿಕ ಶಬ್ದಗಳು, ಇವುಗಳನ್ನೆಲ್ಲ ಪಕ್ಕಕ್ಕಿಟ್ಟು ನೋಡಿದಾಗ ಉಳಿದುಕೊಳ್ಳುವ ಪ್ರಶ್ನೆ ಇಷ್ಟೆ. ಇಟಲಿಯ ನ್ಯಾಯಾಲಯವು ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರುಗಳನ್ನು ಭಾರತಕ್ಕೆ ಮಾರುವಲ್ಲಿ ಕಂಪನಿಯ ಕೆಲವರು ಭಾರತದ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಲಂಚ ಕೊಟ್ಟಿರುವುದು ಹೌದು ಎಂದಿದೆ. ಹಾಗಾದರೆ, ಲಂಚ ಕೊಟ್ಟವರಿದ್ದಾರೆ ಎಂದರೆ ಇತ್ತ ತೆಗೆದುಕೊಂಡವರೂ ಇರಬೇಕಲ್ಲ? ಹಾಗಾದರೆ ಭಾರತದಲ್ಲಿ ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಪ್ರಕರಣದಲ್ಲಿ ಲಂಚ ಸಂದಾಯವಾಗಿದ್ದು ಯಾವ ರಾಜಕಾರಣಿಗಳಿಗೆ ಎಂಬುದು ಈಗ ಉತ್ತರ ಕಂಡುಕೊಳ್ಳಬೇಕಿರುವ ಪ್ರಶ್ನೆ.

ಈಗ ಅನುಮಾನವು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಅಹ್ಮದ್ ಪಟೇಲರವರೆಗೆ ಬಂದು ನಿಂತಿದೆ. ಈ ಪ್ರಕರಣದಲ್ಲಿ ಮಧ್ಯವರ್ತಿ ಪಾತ್ರ ವಹಿಸಿದ್ದ ಗುಯ್ದೊ ಪಚ್ಕೆ ಎಂಬಾತ ಕಾಂಗ್ರೆಸ್ ನೇತಾರರನ್ನೆಲ್ಲ ಕಟಕಟೆಯಲ್ಲಿ ನಿಂತು ಫೋಟೋದಲ್ಲಿ ಗುರುತಿಸಿದ್ದಾನೆ ಎಂದು ಆದೇಶಪ್ರತಿಯಲ್ಲಿದೆ. ಅಲ್ಲದೆ ತೀರ್ಪಿನ ಪ್ರತಿಯಲ್ಲಿ ಸೋನಿಯಾ ಗಾಂಧಿಯವರ ಹೆಸರು ನಾಲ್ಕು ಬಾರಿ ಉಲ್ಲೇಖಿತವಾಗಿದೆ. ರಾಜ್ಯಸಭೆಯಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಸೋನಿಯಾ ಹೆಸರು ಪ್ರಸ್ತಾಪಿಸಿದ್ದಕ್ಕೆ, ಸಂಸತ್ತಿನಲ್ಲಿ ಗದ್ದಲ ಎದ್ದಿರುವುದಕ್ಕೆ, ಸೋನಿಯಾ ಗಾಂಧಿ ಪ್ರತಿಕ್ರಿಯಿಸಿ- ‘ಎರಡು ವರ್ಷದಿಂದ ನಿಮ್ಮದೇ ಸರ್ಕಾರವಿದೆ. ಸಿಬಿಐ ತನಿಖೆ ತ್ವರಿತಗೊಳಿಸಿ. ನಾನೇನೂ ಹೆದರುವುದಿಲ್ಲ’ ಎಂದಿರುವುದಕ್ಕೆ ಇಟಲಿ ಕೋರ್ಟಿನ ಉಲ್ಲೇಖಗಳೇ ಕಾರಣ.

ವಿವಿಐಪಿಗಳ ಹಾರಾಟಕ್ಕೆ ಅನುಕೂಲವಾಗುವಂತೆ 3600 ಕೋಟಿ ರುಪಾಯಿಗಳಿಗೆ 12 ಹೆಲಿಕಾಪ್ಟರ್ ಗಳ ಖರೀದಿಗೆ ಸರ್ಕಾರ ಉದ್ದೇಶಿಸಿತ್ತು. ಇಂಗ್ಲೆಂಡ್ ನ ಆಗಸ್ಟಾ ವೆಸ್ಟ್ಲ್ಯಾಂಡ್ ಪರವಾಗಿ ಇಟಲಿಯ ಫಿನ್ ಮೆಕೆನ್ಶಿಯಾ ಒಪ್ಪಂದದ ಅನುಷ್ಠಾನದ ಪಾತ್ರ ವಹಿಸಿತ್ತು. ಈ ಹೆಲಿಕಾಪ್ಟರ್ ಗಳು ಉನ್ನತ ಎತ್ತರಕ್ಕೆ ಹಾರುವ ಕ್ಷಮತೆ ಹೊಂದಿಲ್ಲ ಎಂದು ನಮ್ಮದೇ ದೇಶದ ವಾಯುಪಡೆ ಸರ್ಕಾರಕ್ಕೆ ನೀಡಿದ್ದ ವರದಿಯನ್ನು ಎಸ್ ಪಿ ತ್ಯಾಗಿ ಐಎಎಫ್ ನೇತೃತ್ವ ವಹಿಸುತ್ತಲೇ ಬದಲಿಸಲಾಯಿತು. ತ್ಯಾಗಿ ಮತ್ತವರ ಸಂಬಂಧಿಕರಿಗೆ ಲಂಚ ಸಂದಾಯವಾಗಿದೆ ಅಂತ ಇಟಲಿ ಕೋರ್ಟು ನಿರ್ಧಾರಕ್ಕೆ ಬಂದಿದೆಯಾದರೂ, ಭಾರತದ ವಿಚಾರಣಾ ನ್ಯಾಯಾಲಯದಲ್ಲಿ ತ್ಯಾಗಿ ದೋಷಮುಕ್ತರಾಗಿದ್ದಾರೆ.

ಯುಪಿಎ-2ರ ಅವಧಿಯಲ್ಲಿ ಆಗಸ್ಟಾ ವೆಸ್ಟ್ಲ್ಯಾಂಡ್ ಸಂಪೂರ್ಣ ಒಪ್ಪಂದವನ್ನೇ ರದ್ದುಗೊಳಿಸಿ 1818 ಕೋಟಿ ರುಪಾಯಿಗಳ ಮುಂಗಡ ಹಣವನ್ನು ಹಿಂದಕ್ಕೆ ಪಡೆಯಿತು. ಈಗ ಕಾಂಗ್ರೆಸ್ ತನ್ನ ರಕ್ಷಣೆಗೆ ಬಳಸುತ್ತಿರುವ ಅಂಶ ಇದೇ ಆಗಿದೆ. ‘ನಾವು ಆಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದವನ್ನು ಸಂಪೂರ್ಣ ರದ್ದುಗೊಳಿಸಿದ್ದಲ್ಲದೇ ಅದನ್ನು ಕಪ್ಪುಪಟ್ಟಿಗೂ ಸೇರಿಸಿದ್ದೆವು. ಆದರೆ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಈ ಕಂಪನಿ ಮೇಲಿನ ಪ್ರತಿಬಂಧ ತೆಗೆದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿಸಿಕೊಂಡಿದೆ’ ಎನ್ನೋದು.

ಇಲ್ಲಿ ಎರಡು ಸೂಕ್ಷ್ಮಗಳಿವೆ. ಯುಪಿಎ ಸರ್ಕಾರವು ಒಪ್ಪಂದ ರದ್ದುಗೊಳಿಸಿದ್ದು ಇಟಲಿ ಸರ್ಕಾರವು ಈ ಪ್ರಕರಣ ಸಂಬಂಧ ಕೆಲ ಮಧ್ಯವರ್ತಿಗಳನ್ನು ಬಂಧಿಸಿ, ಸ್ಫೋಟಕ ಮಾಹಿತಿಗಳು ಹೊರಬರಲು ಆರಂಭಿಸಿದ ಮೇಲಷ್ಟೆ. ಇನ್ನು, ಆಗಸ್ಟಾ ವೆಸ್ಟ್ಲ್ಯಾಂಡ್ ಜತೆ ವ್ಯವಹಾರ ಇಟ್ಟುಕೊಳ್ಳುವುದೇ ಅಕ್ರಮವಲ್ಲವೇ ಎಂಬ ಅಂಶಕ್ಕೆ ಬಿಜೆಪಿ ಸಮಜಾಯಿಷಿ ಹೀಗಿದೆ- ‘ಒಪ್ಪಂದದಲ್ಲಿ ಲಂಚದ ವ್ಯವಹಾರ ನಡೆದಿದೆ ಎಂಬುದನ್ನು ಒಪ್ಪಿಕೊಂಡು, ಇಟಲಿ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಆಗಸ್ಟಾ ವೆಸ್ಟ್ಲ್ಯಾಂಡ್ ಸಹಕರಿಸಿದೆ. ಇಲ್ಲಿ ಚರ್ಚೆಯಾಗಬೇಕಿರುವುದು ವ್ಯವಹಾರದಲ್ಲಿ ಲಂಚ ತೆಗೆದುಕೊಂಡವರು ಯಾರು ಎಂಬುದರ ಕುರಿತೇ ಹೊರತು, ಪಾರದರ್ಶಕವಾಗಿ ವ್ಯವಹರಿಸಲು ಸಿದ್ಧವಿರುವ ಕಂಪನಿಯನ್ನು ಶಿಕ್ಷಿಸುವ ಅತಾರ್ಕಿಕ ವಾದವಲ್ಲ. ಒಪ್ಪಂದವೊಂದು ಸಂಪನ್ನವಾಗಬೇಕಾದರೆ ಅಲ್ಲಿ ಲಂಚ ಸಿಗಲೇಬೇಕು ಎಂಬ ವಾತಾವರಣ ಸೃಷ್ಟಿಸಿದ್ದ ರಾಜಕಾರಣಿಗಳು ಯಾರು ಎಂಬುದು ಸ್ಪಷ್ಟವಾಗಬೇಕಿದೆ.’

ಅಂದಹಾಗೆ, ಇಟಲಿ ಕೋರ್ಟಿನ ತೀರ್ಪಿನಲ್ಲಿ ಸೋನಿಯಾ ಗಾಂಧಿ ಇಲ್ಲವೇ ಕಾಂಗ್ರೆಸ್ ನಾಯಕರು ಲಂಚ ಸ್ವೀಕರಿಸಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ಆದರೆ ಒಪ್ಪಂದದಲ್ಲಿ ಲಂಚ ಕೊಟ್ಟಿರುವುದು ಸಾಬೀತಾಗಿ, ಅವರಿಗೆಲ್ಲ ಶಿಕ್ಷೆಯಾಗಿದೆಯಲ್ಲ. ಹಾಗಾದರೆ ಅವರೆಲ್ಲ ಕೊಟ್ಟ ಲಂಚದ ಹಣ ಭಾರತದಲ್ಲಿ ಯಾರೆಲ್ಲರ ಖಾತೆಗೆ ಬಂದು ಬಿದ್ದಿದೆ?

ಆಫ್ ಕೋರ್ಸ್, ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ರಾಜಕಾರಣಿಗಳಿಗೇ ಸಂದಾಯವಾಗಿರಬೇಕಷ್ಟೆ ಎಂಬುದು ಸರಳ ತರ್ಕ. ಆದರೆ ಇದನ್ನು ನಿರೂಪಿಸಬೇಕಿರುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್ ಡಿ ಎ ಸರ್ಕಾರ ಹೊರತು ಮತ್ಯಾರಲ್ಲ. ತನಿಖಾ ಸಂಸ್ಥೆಗಳಿಗೆ ಹಸ್ತಕ್ಷೇಪವಿಲ್ಲದ ಅಧಿಕಾರ ನೀಡಿ, ಯೋಗ್ಯರನ್ನು ಕೂರಿಸಿದರೆ ಆಗದ ಕೆಲಸವೇನಲ್ಲ. ಆದರೆ ಕೇವಲ ಸೋನಿಯಾ ಗಾಂಧಿ ಹೆಸರೆತ್ತಿಕೊಂಡು ಬೊಬ್ಬೆ ಹೊಡೆಯುವುರಿಂದ ಯಾವ ಆರೋಪಿಗಳೂ ಸಿಗುವುದಿಲ್ಲ. ಇಷ್ಟು ದಿನ ಕಾಂಗ್ರೆಸ್ ಅನ್ನು ವಿರೋಧಿಸಬೇಕಾದಾಗ ಬೋಫೋರ್ಸ್ ಹೆಸರು ಬಳಸಿಕೊಳ್ಳುತ್ತಿದ್ದರು, ಈಗ ಇನ್ನೊಂದು ಆಗಸ್ಟಾ ವೆಸ್ಟ್ಲ್ಯಾಂಡ್ ಸಿಕ್ತು ಅಂತ ಸಂತೋಷಿಸುವುದಾದರೆ, ಅದರಿಂದ ಬಿಜೆಪಿಯ ರಾಜಕೀಯ ಅಹಮಿಕೆಗೆ ಒಂದಿಷ್ಟು ಮೆರಗು ಸಿಗಬಹುದಾಗಲೀ, ದೇಶಕ್ಕೇನೂ ಫಾಯಿದೆ ಇಲ್ಲ.

ಹೀಗೆ ಆಗಾಗ ಹಗರಣಗಳು ಸುದ್ದಿಯಾಗಿ ನಮಗೆಲ್ಲ ವಾದ- ಪ್ರತಿವಾದಗಳಲ್ಲಿ ಮುಳುಗೇಳುವುದಕ್ಕೆ ಒಂದಿಷ್ಟು ಸರಕು ಒದಗಿಸುತ್ತಿವೆ ಅನ್ನೋದು ಬಿಟ್ಟರೆ ತಾರ್ಕಿಕ ಅಂತ್ಯ ಮಾತ್ರ ಎಲ್ಲೂ ಕಾಣುತ್ತಿಲ್ಲ. ಬೋಫೋರ್ಸ್ ಹಗರಣದಲ್ಲಿ ಯಾರಿಗೆ ಶಿಕ್ಷೆಯಾಯಿತು? ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣದಲ್ಲಿ ಲಂಚ ಕೊಟ್ಟವರನ್ನು ತನಿಖೆಗೆ ಒಳಪಡಿಸಿ, ನಾಲ್ಕು ವರ್ಷಗಳ ಅವಧಿಯಲ್ಲಿತೀರ್ಪನ್ನೂ ನೀಡಿ ಶಿಕ್ಷಿಸುವುದು ಇಟಲಿಗೆ ಸಾಧ್ಯವಾಗುತ್ತದೆ ಎನ್ನುವುದಾದರೆ ನಮ್ಮ ವ್ಯವಸ್ಥೆಗೆ ಏನಾಗಿದೆ? ಇಟಲಿ ತೀರ್ಪನ್ನಿಟ್ಟುಕೊಂಡು ಚರ್ಚಿಸುವುದೇನೋ ಸರಿ, ಆದರೆ ನಮ್ಮದೇ ಸಿಬಿಐ ಕಳೆದೆರಡು ವರ್ಷಗಳಿಂದ ನಡೆಸುತ್ತಿರುವ ತನಿಖೆ ಎಲ್ಲಿಗೆ ಬಂತು? ಟಿವಿ ವಾಹಿನಿಗಳಲ್ಲಿ ದೊಡ್ಡ ಗಂಟಲಿನ ವಾಗ್ವಾದ ನಡೆಸುವುದಷ್ಟೇ ನಮ್ಮ ಜವಾಬ್ದಾರಿ, ಉಳಿದಂತೆ ಲಾ ವಿಲ್ ಟೇಕ್ ಇಟ್ಸ್ ಓನ್ ಕೋರ್ಸ್… ಎಂಬ ಮಾತೇ ಬಿಜೆಪಿಯವರದ್ದೂ ಆದರೆ ವ್ಯತ್ಯಾಸವೇನುಳಿಯಿತು? ಹರ್ಯಾಣಾ ಭೂ ವ್ಯವಹಾರಗಳಿಗೆ ಸಂಬಂಧಿಸಿ ರಾಬರ್ಟ್ ವಾದ್ರಾ ಮೇಲೆ ಅಷ್ಟೆಲ್ಲ ಆರೋಪಗಳು ಹಾರಾಡಿದವಲ್ಲ… ಹರ್ಯಾಣ ಮತ್ತು ಕೇಂದ್ರಗಳೆರಡರಲ್ಲೂ ಬಿಜೆಪಿ ಸರ್ಕಾರವೇ ಇದ್ದಾಗಲೂ ಗುರ್ಗಾಂವ್ ಅನ್ನೋದು ಗುರುಗ್ರಾಮವಾಗಿದ್ದು ಬಿಟ್ಟರೆ ಮತ್ತೇನು ಸತ್ವ ಸಿಕ್ಕಿದೆ ವ್ಯವಸ್ಥೆಗೆ?

ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣ ಸದ್ದು ಮಾಡುತ್ತಿರುವಾಗ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆಗಳು ಇವೆಲ್ಲ…

1 COMMENT

  1. soniya madam helta idaare naanu tagondilla anta, eega BJP governmentalliro ministers tagondidaare anta proove maadokke try maadta idaare. Press supportinda adanne prove bekaadru maadtaare. aa takattu ide soniya madamge.

Leave a Reply