ನಿಷ್ಠ ನೌಕರರ ಹೆಸರಿಗೆ ಕಂಪನಿ ಶೇರು ಪತ್ರ ಬರೆದು ನಿಬ್ಬೆರಗಾಗಿಸಿದ ಅಮೆರಿಕದ ಈ ಒಡೆಯ!

ಡಿಜಿಟಲ್ ಕನ್ನಡ ವಿಶೇಷ

 ಚೊಬಾನಿ..

ಇದು ಅಮೆರಿಕದಲ್ಲಿ ಮೊಸರು ಆಧರಿತ ಸಂಸ್ಕರಿತ ಆಹಾರ ಮಾರುವ ಅಗ್ರ ಕಂಪನಿ. ಬಿಲಿಯನ್ ಡಾಲರ್ ಮೌಲ್ಯದ ಕಂಪನಿಗಳ ಸಾಲಿನಲ್ಲಿ ಸೇರುವ ಇದರ ಕೆಲಸಗಾರರಿಗೆ ಮಂಗಳವಾರ ಅಚ್ಚರಿಯೊಂದು ಕಾದಿತ್ತು. ಕಂಪನಿ ಮಾಲಿಕ ಹಮ್ದಿ ಉಲುಕ್ಯ, ಬೆಳಗ್ಗೆ ಕೆಲಸಕ್ಕೆ ಆಗಮಿಸಿದ ನೌಕರರಿಗೆ ಒಂದು ಬಿಳಿ ಬಣ್ಣದ ಕವರ್ ನೀಡಿದರು. ಅದನ್ನು ತೆರೆದು ನೋಡಿದ ಕೆಲವು ನೌಕರರಿಗೆ ಅಚ್ಚರಿಯಾದರೆ ಮತ್ತೆ ಕೆಲವರು ಭಾವುಕರಾದರು! ಅಲ್ಲಿದ್ದದ್ದು ಕಂಪನಿಯ ಷೇರುಪತ್ರ ಮತ್ತು ಸೇವಾಹಿರಿತನ ಆಧಾರದ ಮೇಲೆ ಇಂತಿಷ್ಟು ಷೇರುಗಳು ಅಂತ,ಎಲ್ಲ 2 ಸಾವಿರ ಪೂರ್ಣಾವಧಿ ನೌಕರರಿಗೆ ಪಾಲುದಾರಿಕೆ ಸಂದಾಯವಾಗಿತ್ತು!

ಸಂಸ್ಥೆಯ ಮಾಲಿಕತ್ವದ ಶೇಕಡಾ 10 ರಷ್ಟು ಪಾಲನ್ನು ನೌಕರರಿಗೆ ಹಂಚಿದ್ದಾರೆ ಹಮ್ದಿ.

2005 ರಲ್ಲಿ ಟರ್ಕಿಯಿಂದ ವಲಸೆ ಬಂದ ಹಮ್ದಿ ಉಲುಕ್ಯ ಎಂಬುವರು ನ್ಯೂಯಾರ್ಕ್ ನಗರದಲ್ಲಿ ಚೊಬಾನಿ ಸಂಸ್ಥೆ ಸ್ಥಾಪಿಸಿದರು. ಕಳೆದ ಹತ್ತು ವರ್ಷಗಳಿಂದ ಅಂದರೆ ಸಂಸ್ಥೆ ಪ್ರಾರಂಭವಾದಾಗಿನಿಂದ ಸಂಸ್ಥೆಯನ್ನು ಬೆಳೆಸಲು ನೌಕರರು ಸಾಕಷ್ಟು ಶ್ರಮವಹಿಸಿದ್ದಾರೆ. ಈಗ ಚೊಬಾನಿಯ ಮೌಲ್ಯ ಸಹಸ್ರ ಬಿಲಿಯನ್ ಡಾಲರ್ ಗಳು ಎಂದು ಪರಿಗಣಿಸಲಾಗಿದೆ. ‘ಈ ಮಟ್ಟಕ್ಕೆ ಯಶಸ್ಸು ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ ಚೊಬಾನಿ ಕಂಪನಿ ಇಷ್ಟು ಅಭಿವೃದ್ದಿ ಹೊಂದಲು ನೌಕರರ ಸಹಕಾರವೇ ಪ್ರಮುಖ ಕಾರಣ. ಈಗ ಪಾಲುದಾರಿಕೆ ನೀಡಿರುವುದರಿಂದ ಸಂಸ್ಥೆಯನ್ನು ಮತ್ತಷ್ಟು ಬೆಳಸಲು ಪ್ರೊತ್ಸಾಹಿಸಿದಂತಾಗಿದೆ’ ಎನ್ನುತ್ತಾರೆ ಹಮೀದ್.

ಎರಡು ವರ್ಷದ ಹಿಂದೆ ಚೊಬಾನಿ ಸಂಸ್ಥೆ ಟಿಪಿಜಿ ಕ್ಯಾಪಿಟಲ್ ಎಂಬ ಖಾಸಗಿ ಸಂಸ್ಥೆಯಿಂದ ಸಾಲ ಪಡೆದುಕೊಂಡಿತ್ತು. ಆಗ ಸಂಸ್ಥೆಯ ಮೌಲ್ಯ $ 3 ಬಿಲಿಯನ್ ಡಾಲರ್ ನಿಂದ $ 5 ಬಿಲಿಯನ್ ಗಳು ಎಂದು ಅಂದಾಜಿಸಲಾಗಿತ್ತು. ನೌಕರರಿಗೆ ಸರಾಸರಿ $ 1,50,000 ಮೌಲ್ಯದ ಷೇರು ಸಿಕ್ಕಿದೆ. ಇದನ್ನು ಇವರು ಕಂಪನಿಗೇ ಮಾರಿ ಹಣ ಪಡೆಯಬಹುದು. ಇಲ್ಲವೇ ಭವಿಷ್ಯದಲ್ಲಿ ಸಾರ್ವಜನಿಕ ಷೇರುಗಳಿಗೆ ಕಂಪನಿ ತೆರೆದುಕೊಂಡರೆ, ಯಾರಿಗಾದರೂ ಮಾರಬಹುದು.

‘ಈ ಮೂಲಕ ತಾವೇನೂ ದಾನಧರ್ಮ ಮಾಡುತ್ತಿಲ್ಲ. ಬದಲಿಗೆ ನೌಕರರಿಗೆ ಇದು ತಮ್ಮದೇ ಕಂಪನಿ ಎಂಬ ಜವಾಬ್ದಾರಿ ಹೆಚ್ಚಾಗುತ್ತದೆ. ಇದು ಪರಸ್ಪರ ಸಹಕಾರಿ’ ಎಂದಿದ್ದಾರೆ ಹಮ್ದಿ. ಆದರೆ ಅವರ ಈ ಕ್ರಮದಿಂದ, ಸಾಲ ಕೊಟ್ಟಿರುವ ಟಿಜಿಪಿ ಕ್ಯಾಪಿಟಲ್ ಗೆ ಆಕ್ಷೇಪ ಎನ್ನಿಸಬಹುದೇ? ಸದ್ಯಕ್ಕೆ ಅದರಿಂದ ಅಂಥ ಪ್ರತಿಕ್ರಿಯೆಗಳೇನೂ ಬಂದಿಲ್ಲ.

ಟಿಪಿಜಿ ಕ್ಯಾಪಿಟಲ್, ಚೊಬಾನಿ ಸಂಸ್ಥೆಗೆ $ 750 ಮಿಲಿಯನ್ ನಷ್ಟು ಸಾಲವನ್ನು ಯಾವುದೇ ಜಾಮೀನು ಭದ್ರತೆ ಇಲ್ಲದೇ ನೀಡಿದೆ. ಮೂಲ ಒಪ್ಪಂದದನ್ವಯ ಸಂಸ್ಥೆಯ ಶೇ.20 ಅಥವಾ ಇದಕ್ಕಿಂತ ಹೆಚ್ಚಿನ ಪ್ರಮಾಣದ ಷೇರುಗಳ ಟಿಪಿಜಿ ಸಿಗಲಿವೆ. ಹೀಗಾಗಿ ಶೇ. 10ರಷ್ಟು ಷೇರನ್ನು ನೌಕರರಿಗೆ ನೀಡಿದ್ದಕ್ಕೆ ಆಕ್ಷೇಪವೇನೂ ನೀಡುವಂತಿಲ್ಲ.

ಚೊಬಾನಿ ಉತ್ಪನ್ನಗಳ ಸ್ವಾದವನ್ನು ಅಮೆರಿಕನ್ನರು ಬಲ್ಲರು. ಆದರೆ ಮಾಲಿಕ ಹಮ್ದಿ ಉಲುಕ್ಯ ತಮ್ಮ ನಡೆಯ ಮೂಲಕ ಪಸರಿಸಿರುವ ಸಹೃದಯ ಸ್ವಾದ ಜಗತ್ತನ್ನೇ ತಬ್ಬುವಂಥದ್ದು!

Leave a Reply