ಸುದ್ದಿಸಂತೆ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆಗಳು, ದೀಪಿಕಾ ದಾಖಲೆ, ಪಾಕಿಗರ ಅಸಹಿಷ್ಣುತೆ, ಬರಕ್ಕೆ ಸ್ಪಂದಿಸಿದ ಯಶ್… ನೀವು ತಿಳಿಬೇಕಿರೋ ಸಕಲ ವಿದ್ಯಮಾನಗಳು

ವಿಶ್ವದಾಖಲೆ ಸರಿಗಟ್ಟಿದ ದೀಪಿಕಾ ಕುಮಾರಿ

ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ, ಕೇಂದ್ರಕ್ಕೆ 7 ಪ್ರಶ್ನೆ ಕೇಳಿದ ಸುಪ್ರೀಂ ಕೋರ್ಟ್

ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ರದ್ದತಿಯ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರಕ್ಕೆ 7 ಪ್ರಶ್ನೆಗಳನ್ನು ಹಾಕಿದೆ.

ಬುಧವರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ, ಹೈಕೋರ್ಟ್ ತೀರ್ಪನ್ನು ತಡೆ ಹಿಡಿದು, ರಾಷ್ಟ್ರಪತಿ ಆಳ್ವಿಕೆ ಮುಂದುವರಿಸಿದೆ. ಈ ವೇಳೆ ಕೇಂದ್ರಕ್ಕೆ ಈ 7 ಪ್ರಶ್ನೆ ಕೇಳಿದೆ.

 1. ಬಹುಮತ ಸಾಬೀತು ತಡವಾಗಿದ್ದು ರಾಷ್ಟ್ರಪತಿ ಆಳ್ವಿಕೆಗೆ ಮೂಲ ಕಾರಣವೇ?
 2. ವಿಧಾನಸಭೆ ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದ್ದ ಕಾರಣಕ್ಕೇ ಅನುಚ್ಛೇಧ 356ರ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತೇ?
 3. ವಿಧಾನಸಭೆಯಲ್ಲಿನ ಪ್ರಕ್ರಿಯೆ ಆಧರಿಸಿ ಅಧಿಕಾರ ನಡೆಸಲು ರಾಷ್ಟ್ರಪತಿಯವರಿಗೆ ಅವಕಾಶ ಇದೆಯೇ?
 4. ನಿಯಮ 175(2)ರ ಪ್ರಕಾರದಂತೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲು ರಾಜ್ಯಪಾಲರು ಸಂದೇಶ ನೀಡಲು ಸಾಧ್ಯವೇ?
 5. ರಾಜ್ಯಪಾಲರು ಮತ್ತು ಸ್ಪೀಕರ್ ಸಂವಿಧಾನದ ಅಧಿಕಾರಿಗಳಾಗಿರುವುದರಿಂದ ರಾಜ್ಯಪಾಲರು ಮತ ವಿಭಜನೆ ಬಗ್ಗೆ ಸ್ಪೀಕರ್ ಅವರನ್ನು ಕೇಳುವ ಅಧಿಕಾರ ಇದೆಯೇ?
 6. ಹಣಕಾಸು ಮಸೂದೆ ಹೊರಡಿಸಲು ವಿಫಲವಾಗಿದೆ ಎಂಬುದು ಇಲ್ಲಿನ ವಾದ. ಸ್ಪೀಕರ್ ಹಣಕಾಸು ಮಸೂದೆ ಮಂಡಿಸಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಹಾಗಾದರೆ, ಇದನ್ನು ಹೇಳಿದವರಾರು?
 7. ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ಈ ಹಣಕಾಸು ಮಸೂದೆಯ ಸ್ಥಾನವೇನು?

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಲಿರುವ ಹಿನ್ನೆಲೆಯಲ್ಲಿ, ಹೈಕೋರ್ಟ್ ಸೂಚನೆಯಂತೆ ಏಪ್ರಿಲ್ 29ರಂದು ನಡೆಯಬೇಕಿದ್ದ ಬಹುಮತ ಸಾಬೀತು ಪ್ರಕ್ರಿಯೆಗೂ ಬ್ರೇಕ್ ಬಿದ್ದಿದೆ.

ವಿಶಾಖಪಟ್ಟಣದ ತೈಲ ಫ್ಯಾಕ್ಟರಿಗೆ ಬೆಂಕಿ, ಒಡಿಶಾ ಸಿಎಂ ಕಚೇರಿಯಲ್ಲೂ ಬೆಂಕಿ

ವಿಶಾಖಪಟ್ಟಣದ ಬಯೋಡಿಸೆಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಕಚ್ಚಾ ಇಂಧನ ಹೊಂದಿದ್ದ 18 ಟ್ಯಾಂಕ್ ಗಳ ಪೈಕಿ 12 ಟ್ಯಾಂಕ್ ಗಳು ಹೊತ್ತಿ ಉರಿದಿವೆ. ರಾತ್ರಿ 7.30ರ ಸುಮಾರಿಗೆ ದುವ್ವಡ ಸ್ಪೆಷಲ್ ಎಕನಾಮಿಕ್ ಜೋನ್ (ಎಸ್ಇಜಡ್) ನಲ್ಲಿ ಈ ಅವಘಡ ಸಂಭವಿಸಿದೆ. ಈ ವೇಳೆ 40 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಆರಿಸಲು ಪ್ರಯತ್ನಿಸಿವೆ. ಬುಧವಾರ ಬೆಳಗ್ಗೆ ವಾಯುಪಡೆಯ ವಿಮಾನ ಪರಿಶೀಲನೆ ನಡೆಸಿದಾಗ 8 ಟ್ಯಾಂಕರ್ ಉರಿಯುತ್ತಿತ್ತು ಎಂದು ತಿಳಿಸಲಾಗಿದೆ. ಈ ಘಟನೆಯ ವೇಳೆ ಅಲ್ಲಿದ್ದ 15 ನೌಕರರು ತಪ್ಪಿಸಿಕೊಂಡಿದ್ದು, ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ. ಪ್ರತಿ ಟ್ಯಾಂಕ್ 3 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದು, ಎಲ್ಲವೂ ಶೇ.30 ರಿಂದ 70ರಷ್ಟು ತುಂಬಿತ್ತು. ಈ ಘಟನೆಯಿಂದ ಸುಮಾರು ₹ 120 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇನ್ನು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿಯಲ್ಲೂ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅದನ್ನು ಆರಿಸಲಾಗಿದೆ. ಯಾವುದೇ ಪ್ರಾಣಾಪಾಯ ಅಥವಾ ದಾಖಲೆ ನಷ್ಟವಾಗಿಲ್ಲ ಎಂಬ ಮಾಹಿತಿ ಬಂದಿದೆ.

ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಗೆ ಕರಾಚಿ ವಿಮಾನ ನಿಲ್ದಾಣದಲ್ಲಿ ಅಪಮಾನ

ಪಾಕಿಸ್ತಾನವನ್ನು ಉಗ್ರರ ಸ್ವರ್ಗ ಎಂದು ಸಿನಿಮಾದಲ್ಲಿ ಬಿಂಬಿಸಿದ್ದಾರೆ ಎಂದು ಆರೋಪಿಸಿ ಕರಾಚಿ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ ಪ್ರತಿಭಟನಾಕಾರರು ಬಾಲಿವುಡ್ ನಟ ಕಬೀರ್ ಖಾನ್ ಗೆ ಶೂ ತೋರಿಸಿ ಅಪಮಾನ ಮಾಡಿದ್ದಾರೆ. ಬುಧವಾರ ಲಾಹೋರ್ ಗೆ ಪ್ರಯಾಣ ಬೆಳೆಸಲು ವಿಮಾನ ನಿಲ್ದಾಣಕ್ಕೆ ಭಜರಂಗಿ ಭಾಯಿಜಾನ್ ಚಿತ್ರ ನಿರ್ದೇಶಕ ಕಬೀರ್ ಆಗಮಿಸಿದರು. ಈ ವೇಳೆ ಪ್ರತಿಭಟನಾಕಾರರು, ಭಾರತದ ಗುಪ್ತಚರ ಸಂಸ್ಥೆ ರಾ ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಯಾಕೆ ಸಿನಿಮಾ ಮಾಡುತ್ತಿಲ್ಲ ಎಂದು ಪ್ರಶ್ನಿಸಿ, ಭಾರತ ವಿರೋಧಿ ಘೋಷಣೆ ಕೂಗಿದ್ದಾರೆ.

ವಿಶ್ವದಾಖಲೆ ಸಮಗೊಳಿಸಿದ ದೀಪಿಕಾ

ಭಾರತದ ಖ್ಯಾತ ಆರ್ಚರಿಪಟು ದೀಪಿಕಾ ಕುಮಾರಿ ಶಾಂಘೈನಲ್ಲಿ ನಡೆಯುತ್ತಿರುವ ವಿಶ್ವಕಪ್ ನ ಮಹಿಳೆಯರ ರಿಕರ್ವ್ ವಿಭಾಗದ ಶ್ರೇಣಿ ಸುತ್ತಿನಲ್ಲಿ ವಿಶ್ವ ದಾಖಲೆಯನ್ನು ಸಮಗೊಳಿಸಿದ್ದಾರೆ. 72 ಬಾಣಗಳಲ್ಲಿ 686 ಅಂಕಗಳನ್ನು ಕಲೆಹಾಕಿದ ದೀಪಿಕಾ, 2015ರಲ್ಲಿ ದಕ್ಷಿಣ ಕೊರಿಯಾದ ಕಿ ಬೊಬೇ ಅವರ ಸಾಧನೆಯನ್ನು ಸರಿದೂಗಿಸಿದ್ದಾರೆ.

ಸ್ಪರ್ಧೆಯ ಮೊದಲಾರ್ಧದಲ್ಲಿ 346 ಅಂಕಗಳನ್ನು ಸಂಪಾದಿಸಿದ್ದ ದೀಪಿಕಾ, ವಿಶ್ವದಾಖಲೆಯನ್ನು ಮುರಿಯಲು ದ್ವಿತಿಯಾರ್ಧದಲ್ಲಿ 341 ಅಂಕಗಳ ಅಗತ್ಯವಿತ್ತು. ಅಂತಿಮ ಹಂತದಲ್ಲಿ ಎರಡು ಅವಕಾಶದಲ್ಲಿ 9 ಅಂಗಳನ್ನು ಗಳಿಸಿದ ಪರಿಣಾಮ ದೀಪಿಕಾ ದಾಖಲೆ ಸಮಗೊಳಿಸಲಷ್ಟೇ ಶಕ್ತರಾದರು. ಈಗಾಗಲೇ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿರುವ ಹಾಗೂ ಅಗ್ರಶ್ರೇಯಾಂಕಿತೆ ದೀಪಿಕಾ, ನೇರವಾಗಿ ಮೂರನೇ ಸುತ್ತಿನಲ್ಲಿ ಸೆಣಸಲಿದ್ದಾರೆ. ಕಡಿಮೆ ಶ್ರೇಣಿ ಹೊಂದಿರುವ ಭಾರತದ ಲಕ್ಷ್ಮಿರಾಣಿ (45) ಮತ್ತು ರಿಮಿಲ್ ಬ್ರೂಲಿ (75) ಮೊದಲ ಸುತ್ತಿನಿಂದ ಸ್ಪರ್ಧಿಸಲಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಸುದ್ದಿ ಸಾಲುಗಳು..

 • ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ ಮುಂದಾಗಿದ್ದಾರೆ. ಕಲುಬರಗಿಯ 25 ಹಳ್ಳಿಗಳು ಮತ್ತು ವಿಜಯಪುರದ 25 ಹಳ್ಳಿಗಳಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ನಿರ್ಧರಿಸಿರುವುದಾಗಿ ಯಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
 • ಮಹಾರಾಷ್ಟ್ರದಲ್ಲಿ ಮೇ 1ರ ನಂತರ ಐಪಿಎಲ್ ಯಾವುದೇ ಪಂದ್ಯ ನಡೆಯಬಾರದು ಎಂಬ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಐಪಿಎಲ್ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಬೇಕೆಂಬ ಎಂಸಿಎ ಅರ್ಜಿಯನ್ನು ಉನ್ನತ ನ್ಯಾಯಾಲಯ ತಿರಸ್ಕರಿಸಿದೆ. ಆ ಮೂಲಕ ಮೇ 1ರ ನಂತರ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಯಾವುದೇ ಅವಕಾಶವಿಲ್ಲದಂತಾಗಿದೆ.
 • ತಮಿಳುನಾಡಿನ 21 ಮೀನುಗಾರರನ್ನು ಶ್ರಿಲಂಕಾ ನೌಕಾದಳ ಬುಧವಾರ ಬಂಧಿಸಿದೆ. ಅಂತರಾಷ್ಟ್ರೀಯ ಕಡಲತೀರ ಗಡಿರೇಖೆಯನ್ನು ಪ್ರವೇಶಿಸಿದ ಕಾರಣ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
 • ಗೋಧಿ ಬೆಳೆಯನ್ನು ಕಟಾವು ಮಾಡುವು ಯಂತ್ರವೊಂದು ಉರುಳಿ ಬಿದ್ದು ಒಡ ಹುಟ್ಟಿದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸದಿಯಾಪುರ್ ಎಂಬ ಹಳ್ಳಿಯಲ್ಲಿ ನಡೆದಿದೆ. ಕೋಮಲ್(14), ಈಕೆಯ ಸಹೋದರ ಹರಿ ಓಂ(12) ಎಂಬುವರೆ ಸಾವಿಗೀಡಾದ ದುರ್ದೈವಿಗಳು.

 

ಬಯೋ ಡೀಸೆಲ್ ಬಳಕೆಗೆ ಮಾರ್ಗಸೂಚಿಯಾಗಲಿದೆ ಮರ್ಸಿಡಿಸ್ ಬೆನ್ಜ್ ಕಾರು

ಐಷಾರಾಮಿ ಡೀಸಲ್ ಕಾರುಗಳು ತನ್ನ ದಿಕ್ಕನ್ನು ಬದಲಿಸಲು ಚಿಂತನೆ ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಮರ್ಸಿಡಿಸ್ ಬೆನ್ಜ್ ಕಾರು ತಯಾರಿಕಾ ಕಂಪನಿ ಭಾರತಕ್ಕೆ ಬಯೋ ಡೀಸೆಲ್ ಬಳಸುವಂತ ಕಾರು ಮತ್ತು ಇತರ ವಾಹನಗಳನ್ನು ನೀಡುವುದಾಗಿ ತಿಳಿಸಿದೆ. ಈ ಬಗ್ಗೆ ರಸ್ತೆ ಸಾರಿಗೆ ಮತ್ತು ರಾಷ್ಷ್ರೀಯ ಹೆದ್ದಾರಿ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದಿದ್ದು. ಇದರಲ್ಲಿ ಕಂಪನಿಯ ಕಾರು ಮತ್ತು ಟ್ರಕ್ಕುಗಳಿಗೆ ಶೇಕಡಾ 100 ರಷ್ಟು ಶುದ್ದವಾದ ಬಯೋ ಡೀಸೆಲ್ ಬಳಕೆಯಾಗಲಿದೆ ಎಂದಿದೆ. ಪ್ರಮುಖ ವಾಹನ ತಯಾರಿಕ ಕಂಪನಿಗಳಾದ ಜೆಸಿಬಿ ಮತ್ತು ಇತರ ಕಂಪನಿಗಳೂ ಸಹ ಬಯೋ ಡೀಸೆಲ್, ಎಥೇನಾಲ್ ಮತ್ತು ಇದಕ್ಕೆ ಸಮನಾದ ತೈಲಗಳು ಬಳಸಲು ಇಚ್ಚಿಸಿದ್ದು, ಇದು ಕಾರ್ಯಗತಗೊಂಡರೆ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ಮಹತ್ವದ ಮಟ್ಟ ತಲುಪುತ್ತೇವೆ ಎಂದಿದ್ದಾರೆ ಸಚಿವರು. ಈ ಮೂಲಕ ದೆಹಲಿಯಲ್ಲಿ ಡಿಸೇಲ್ ಚಾಲಿತ ಎಸ್ ಯು ವಿಗಳಿಗೆ ಇರುವ ಪ್ರತಿಬಂಧವನ್ನು ನಿವಾರಿಸಿಕೊಳ್ಳುವ ಯತ್ನ ಇದಾಗಿದೆ.

ಮುಂದುವರಿದು….

ಇವತ್ತು ಭಾರಿ ಸುದ್ದಿ ಮಾಡಿದ ಸಂಗತಿ ಎಂದರೆ ಆಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದದಲ್ಲಿ ಆಗಿನ ಕಾಂಗ್ರೆಸ್ ಪಾತ್ರ. ರಾಜ್ಯಸಭೆಯಲ್ಲಿ ಇಟಲಿ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸುತ್ತ ಸುಬ್ರಮಣಿಯನ್ ಸ್ವಾಮಿ, ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸಿದರು. ಆಗ ಕಾಂಗ್ರೆಸಿಗರು ಗದ್ದಲ ಎಬ್ಬಿಸಿ ಕಲಾಪ ಬಲಿಯಾಯಿತು. ಸಭೆಯ ಸದಸ್ಯರಲ್ಲದವರ ಹೆಸರನ್ನು ಪ್ರಸ್ತಾಪಿಸಿದ್ದು ತಪ್ಪೆಂಬ ಕಾರಣಕ್ಕೆ ಸೋನಿಯಾ ಪ್ರಸ್ತಾಪವನ್ನು ಕಡತದಿಂದ ತೆಗೆದುಹಾಕಲಾಯಿತು. ಈ ವಿಶ್ಲೇಷಣೆ ಓದಿದರೆ ಒಟ್ಟಾರೆ ಪ್ರಕರಣದ ಹೂರಣ ತಿಳಿಯುತ್ತದೆ.

ಹೆಚ್ಚುವರಿಯಾಗಿ ಈ ವರದಿಯನ್ನೂ ಓದಬಹುದು.

ಸೆನ್ಸಾರ್ ಮಂಡಳಿ ಮರುರಚನೆ ಶಿಫಾರಸಿಗೆ ಶ್ಯಾಮ್ ಬೆನಗಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದು ಸರ್ಕಾರಕ್ಕೆ ಕೊಟ್ಟಿರುವ ಶಿಫಾರಸುಗಳು ಇಲ್ಲಿವೆ.

ಆರ್ಬಿಐ ಗವರ್ನರ್ ರಘುರಾಮ ರಾಜನ್ ಕುರಿತು ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಆಕ್ಷೇಪಗಳಿವೆ. ನಿಜಕ್ಕೂ ಅವರೇನು ಎಂಬುದನ್ನು ಅವರ ಬಿಡಿ ಹೇಳಿಕೆಗಳಲ್ಲೇ ಕಂಡುಕೊಳ್ಳಬಹುದು.

ಆಸ್ತಿಯಲ್ಲಿ ಪಾಲು ಎಂಬುದೊಂದನ್ನು ಹಿಡಿದುಕೊಂಡು ಪ್ರತಿಯೊಂದು ಖರ್ಚು ವೆಚ್ಚವೂ ಲೆಕ್ಕಕ್ಕೆ ಬಂದು, ತಂದೆ ತಾಯಿಗೆ ಪ್ರತಿನಿತ್ಯ ಹಾಕುವ ಊಟ, ನೀಡುವ ತಿಂಡಿ, ಕೊಡಿಸುವ ಬಟ್ಟೆ ಎಲ್ಲವೂ ಎಲ್ಲರೂ ಮಾಡಬೇಕು, ಲೆಕ್ಕಹಾಕಿ ಎಲ್ಲರೂ ಭರಿಸಬೇಕು ಎಂತಲ್ಲಾ ಬಂದರೆ ವಯಸ್ಸಾದವರು ನೆಮ್ಮದಿಯಿಂದ ಇರಲಾದೀತೇ?..ನಾಳೆ ಆಸ್ತಿಯಲ್ಲಿ ಸಮಾನ ಪಾಲುಗಾರಳಾಗುವ ಮಗಳು ಇಂದು ಹೆತ್ತವರನ್ನು ಸಾಕಲು ಸಮಾನ ಪಾಲುಗಾರಳಾಗಬೇಕು ಎಂದಾದರೆ ಹೆತ್ತವರು ಸೂಟ್ ಕೇಸ್ ಹಿಡಿದು ಮಕ್ಕಳೆಲ್ಲರ ಮನೆಗಳಲ್ಲಿ ತಿಂಗಳುಗಳ ಅತಿಥಿಗಳಾಗಬೇಕು ಅಥವಾ ಒಂಟಿಯಾಗಿ ಇರಬೇಕು. ಎಲ್ಲಾ ಲೆಕ್ಕಾಚಾರವಾದರೆ ಸಂಬಂಧಗಳು ಅರ್ಥಹೀನವಾಗುತ್ತವೆ. ಬೆಲೆ ಕಳೆದುಕೊಳ್ಳುತ್ತವೆ. ನಿಮ್ಮನ್ನು ಚಿಂತನೆಗೆ ಹಚ್ಚುವ ಗೀತಾ ಬಿ. ಯು. ಅಂಕಣ…

ನಮ್ಮಲ್ಲೂ ಆ್ಯಪಲ್ ಕಂಪನಿ ಅಭಿಮಾನಿಗಳು ಸಾಕಷ್ಟಿದ್ದಾರೆ. ಅದ್ಯಾಕೋ ಈ ಬಾರಿ ಆ್ಯಪಲ್ ಬಿಸಿನೆಸ್ ಡೌನಂತೆ… ಇಲ್ಲಿ ಓದಿ.

Leave a Reply