ಸೆನ್ಸಾರ್ ಮಂಡಳಿ ಇರೋದು ಕತ್ತರಿ ಪ್ರಯೋಗಕ್ಕಲ್ಲ ಎಂದಿರುವ ಶ್ಯಾಮ್ ಬೆನಗಲ್ ವರದಿಯಲ್ಲಿರೋ ಶಿಫಾರಸುಗಳ್ಯಾವವು?

ಡಿಜಿಟಲ್ ಕನ್ನಡ ಟೀಮ್

ಸರ್ಕಾರದಿಂದ ನೇಮಿತಗೊಂಡಿದ್ದ ಶ್ಯಾಮ್ ಬೆನಗಲ್ ನೇತೃತ್ವದ ಸಮಿತಿ ತನ್ನ ವರದಿಯನ್ನು ಮಂಗಳವಾರ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಿಸಿದೆ. ಈ ವರದಿಯಲ್ಲಿ ತಿಳಿಸಿರೋ ಪ್ರಮುಖ ಅಂಶ ಎಂದರೆ, ಸೆನ್ಸಾರ್ ಮಂಡಳಿ ಸಿಬಿಎಫ್ ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ಯಾವುದೇ ಸಿನಿಮಾಗಳಲ್ಲಿ ಕತ್ತರಿ ಪ್ರಯೋಗ ಮಾಡಬಾರದು. ಕೇವಲ ಸಿನಿಮಾ ಯಾವ ವರ್ಗಕ್ಕೆ ಸೂಕ್ತ ಎಂದು ನಿರ್ಧರಿಸಿದರೆ ಸಾಕು ಎಂಬುದು ಈ ಸಮಿತಿಯ ಪ್ರಮುಖ ಶಿಫಾರಸ್ಸು.

ಸೆನ್ಸಾರ್ ನವ್ರು ಮನಬಂದಂತೆ ಕತ್ತರಿ ಪ್ರಯೋಗ ಮಾಡುತ್ತಿದ್ದಾರೆ ಎಂಬುದು ಭಾರತದ ಬಹುತೇಕ ಎಲ್ಲ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇರುವ ಅಸಮಾಧಾನ. ಇತ್ತೀಚೆಗೆ ಕನ್ನಡದ ಕಿರುಗೂರಿನ ಗಯ್ಯಾಳಿಗಳು ಚಿತ್ರದಲ್ಲೂ ಕೆಲ ಗ್ರಾಮೀಣ ಆಡು ಭಾಷೆಯ ಬೈಗುಳಕ್ಕೆ ಕತ್ತರಿ ಹಾಕಿದ್ದು ಅಸಮಾಧಾನಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದು.

ಕಳೆದ ವರ್ಷ ಸೆನ್ಸಾರ್ ಮಂಡಳಿ ಮುಖ್ಯಸ್ಥ ಫಹಲಾಜ್ ನಿಹಲಾನಿ, ಸಿನಿಮಾ ಪ್ರಮಾಣೀಕರಿಸುವ ಕುರಿತಂತೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಹಾಗಾಗಿ ಈ ಮಂಡಳಿ ವಿವಾದ ಮುಕ್ತವಾಗಿಸೋ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಅವರು ಜನವರಿ 1ರಂದು ಖ್ಯಾತ ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ನೇತೃತ್ವದ ಸಮಿತಿ ರಚಿಸಿತ್ತು. ಈ ಸಮಿತಿಯಲ್ಲಿ ಬೆನಗಲ್ ಜತೆ ಖ್ಯಾತ ನಟ ಕಮಲ್ ಹಾಸನ್, ರಾಕೇಶ್ ಒಂ ಪ್ರಕಾಶ್ ಮೆಹ್ರಾ, ಪಿಯೂಶ್ ಪಾಂಡೆ, ಗೌತಮ್ ಘೋಸೆ, ಭಾವನಾ ಸೋಮಯಾ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಇದ್ದರು. ಈ ಸಮಿತಿ ಮಂಗಳವಾರ ತನ್ನ ವರದಿ ಸಲ್ಲಿಸಿದೆ. ಈ ವರದಿಯಲ್ಲಿರುವ ಪ್ರಮುಖ ಅಂಶಗಳು ಈ ರೀತಿ ಇವೆ.

  • ಒಂದು ವೇಳೆ ಸಿನಿಮಾದಲ್ಲಿ 1952ರ ಸಿನಿಮಾಟೊಗ್ರಫಿ ಕಾಯ್ದೆಯ 5ಬಿ(1) ನಿಯಮ ಉಲ್ಲಂಘನೆಯಾಗಿದ್ದರೆ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡುವುದನ್ನು ತಿರಸ್ಕರಿಸಬಹುದು.
  • ಸಿನಿಮಾದ ವಿಷಯ ಅದರ ತನ್ನ ಗರಿಷ್ಠ ಮಿತಿ ದಾಟಿ ಉನ್ನತ ವರ್ಗಕ್ಕೆ ಸೇರಲು ಪ್ರಯತ್ನಿಸಿದರೆ, ಅದನ್ನು ಪ್ರಮಾಣೀಕರಿಸಲು ನಿರಾಕರಿಸಬಹುದು. ಈ ಅಂಶದ ಪ್ರಕಾರ, ಸಿನಿಮಾ ಸೆನ್ಸಾರ್ ಗೆ ಹೋಗುವಾಗ ಯಾವ ವರ್ಗದಲ್ಲಿ ಸಿನಿಮಾ ಇದೆ, ಯಾವ ಪ್ರೇಕ್ಷಕರಿಗಾಗಿ ನಿರ್ಮಿಸಲಾಗಿದೆ ಎಂಬುದನ್ನು ನಮೂದಿಸಬೇಕು.
  • ಸೆನ್ಸಾರ್ ಮಂಡಳಿಯ ಮುಖ್ಯಸ್ಥ, ಕೇವಲ ಸಿಬಿಎಫ್ ಸಿ ಉನ್ನತ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ಮಾರ್ಗದರ್ಶನ ನೀಡುವ ಪಾತ್ರ ನಿರ್ವಹಿಸಬೇಕು. ಪ್ರತಿ ಸಿನಿಮಾದ ಪ್ರಮಾಣೀಕರಣದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.
  • ಪ್ರಸ್ತುತ ಸಿಬಿಎಫ್ ಸಿ ನಿಯಮದಂತೆ ಸೆನ್ಸಾರ್ ಮಂಡಳಿ ಕಾರ್ಯನಿರ್ವಹಿಸಬೇಕು. ಮಂಡಳಿಯ ಕಾರ್ಯನಿರ್ವಹಣೆಯ ವಿಮರ್ಶೆ, ಸರ್ಕಾರಕ್ಕೆ ವಾರ್ಷಿಕ ವರದಿ ಸಲ್ಲಿಕೆ, ಸಿನಿಮಾಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯದ ವಿಶ್ಲೇಷಣೆ ನೀಡಬೇಕು.
  • ಪ್ರಾಣಿ ಕಲ್ಯಾಣ ನಿಗಮ ಮತ್ತು ಧೂಮಪಾನದ ಅಂಶ ಸಿನಿಮಾದಲ್ಲಿ ಬಳಕೆ ಕುರಿತಂತೆ ಶಿಫಾರಸ್ಸು ನೀಡಲು ಮತ್ತಷ್ಟು ಕಾಲಾವಕಾಶಬೇಕು ಎಂದು ಕೋರಿದೆ. ಈ ಅಂಶಗಳ ಕುರಿತ ಶಿಫಾರಸ್ಸನ್ನು ಜೂನ್ 20ರ ಒಳಗಾಗಿ ಸಲ್ಲಿಸುವುದಾಗಿ ತಿಳಿಸಿದೆ.
  • ಸಿನಿಮಾವನ್ನು ಟೆಲಿವಿಷನ್ ನಲ್ಲಿ ಅಥವಾ ಇತರೆ ಉದ್ದೇಶಗಳಲ್ಲಿ ಪ್ರಸಾರ ಮಾಡಲು ಮರು ಪ್ರಮಾಣೀಕರಣಕ್ಕೆ ಅನುಮತಿ ನೀಡಬೇಕು. ಆನ್ ಲೈನ್ ಅರ್ಜಿ, ಅರ್ಜಿಯನ್ನು ಮತ್ತಷ್ಟು ಸರಳಗೊಳಿಸುವಿಕೆ ಹಾಗೂ ದಾಖಲೆಗಳ ಸಲ್ಲಿಕೆ ಬಗ್ಗೆಯೂ ಸಮಿತಿ ತಮ್ಮ ಶಿಫಾರಸ್ಸಿನಲ್ಲಿ ತಿಳಿಸಿದೆ.
  • ಪ್ರಾದೇಶಿಕ ಸಲಹಾ ಸಮಿತಿಯಲ್ಲಿ ಶೇ.50ರಷ್ಟು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದೆ.

Leave a Reply