ಸ್ತ್ರೀಗೆ ಸಮಾನ ಹಕ್ಕು ಎಂಬುದೇ ಆಕೆಯ ಶೋಷಣೆಗೆ ದಾರಿಯಾಗಬಾರದಲ್ಲವೇ?

author-geetha“ಎಲ್ಲಾ ಒಂದೇ ಆಂಟೀ… ಕೋರ್ಟ್ ಕೂಡ ಹೇಳಿದೆ. ಹೆಣ್ಣು ಮಕ್ಕಳು, ಗಂಡು ಮಕ್ಕಳು ಎಲ್ಲಾ ಒಂದೇ ಹಕ್ಕು, ಜವಾಬ್ದಾರಿ ಇಬ್ಬರಿಗೂ ಸರಿಸಮಾನ ಅಂತ..”

“ಹೂಂ..”

“ಏನು ಕಥೆ ಹೇಳ್ತಾ ಇದೀನಾ?.. ಹೂಂಗುಟ್ಟುತ್ತಾ ಇದೀರಲ್ಲ… ನೀವು ನಿಮ್ಮ ಮಗಳ ಮನೆಗೆ ಏಕೆ ಹೋಗಿ ಇರಬಾರದು?.. ಅವಳು ಅಷ್ಟೊಂದು ಕರಿತಾಳೆ..”

“ಕರಿತಾಳೆ.. ನಾನೆಲ್ಲಿ ಇಲ್ಲ ಅಂದೆ?.. ಈಗೇನು ಕಷ್ಟ?.. ಮಗನ ಮನೆಯಲ್ಲಿ ಇದ್ದೇನೆ.. ಇರ್ತೇನೆ..”

“ಅಲ್ಲಾ ನಿಮ್ಮ ಸೊಸೆ ಜೊತೆ ಕಷ್ಟ..”

“ಕಷ್ಟ ಅಂದು ಕೊಂಡರೆ ಕಷ್ಟ.. ಸುಖ ಅಂದು ಕೊಂಡರೆ ಸುಖ.. ಇಷ್ಟೇ ಬದುಕು! ಗಂಡ ಅಂತ ಯಜಮಾನ್ರು ಇದ್ದಾಗ ಇನ್ನೂ ಕಷ್ಟ ಇತ್ತು. ಕೂತ್ರೆ ತಪ್ಪು.. ನಿಂತ್ರೆ ತಪ್ಪು ಅಂತ ಇತ್ತು.. ಓಡಿ ಹೋದ್ನಾ?..”

“ಆ ವಿಷಯ ಬಿಡಿ. ಈಗಿನದು ಹೇಳಿ. ಹಿಂದೆ ಮಗನಿಗೇ ಆಸ್ತಿ ಎಂದು ಇತ್ತು.. ಆಗ ಮಗನ ಮನೆಯಲ್ಲೇ ಇರಬೇಕಾಗಿತ್ತು. ಈಗ ಹಾಗಿಲ್ಲ.. ಆಸ್ತಿಯಲ್ಲಿ ಸಮಪಾಲು ಅಂತ ಸುಪ್ರೀಂ ಕೋರ್ಟೇ ಹೇಳಿದೆ..”

“ಏನು ಹೇಳಿದೆ?..”

“1996 ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ಹೇಳಿದೆ,” ಮಗ ತನಗೆ ಪತ್ನಿ ಬರುವವರೆಗೂ ಮಗನಾಗಿರುತ್ತಾನೆ. ಆದರೆ ಮಗಳು ತನ್ನ ಕೊನೆ ಉಸಿರಿರುವವರೆಗೂ ಮಗಳ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಾಳೆ..” ಇತ್ತೀಚೆಗೆ ಹೈಕೋರ್ಟ್ ಇದನ್ನು ಉದ್ದರಿಸಿತು.. ಎಷ್ಟು ಚೆನ್ನಾಗಿ ಹೇಳಿದ್ದಾರಲ್ಲವೇ?..”

ಎಪ್ಪತ್ತು ದಾಟಿದ ನನ್ನ ಆಂಟಿ ನನ್ನತ್ತ ಕಣ್ಣು ಕಿರಿದುಗೊಳಿಸಿ ನೋಡಿದರು.

“ನೀವ್ಯಾರು ಇದನ್ನು ವಿರೋಧಿಸಲಿಲ್ಲವೇ? ಹೆಣ್ಣು ಮಕ್ಕಳನ್ನು ಪರೋಕ್ಷವಾಗಿ ಬೈದಿದ್ದಾರೆ. ನೀನೇ ಯೋಚಿಸು..” ಎಂದು ಹೇಳಿ ಎದ್ದು ಹೊರಟು ಹೋದರು. ಹೌದಲ್ಲವೇ?..

ತನ್ನ ಪತ್ನಿ ಬಂದ ತಕ್ಷಣ, ಅವಳ ಮಾತು ಕೇಳಿ, ಬದಲಾಗಿ, ಮಗ ಕರ್ತವ್ಯಚ್ಯುತನಾಗುತ್ತಾನೆ ಎಂದರೆ ಅದಕ್ಕೆ ಇನ್ನೊಂದು ಮನೆಯಿಂದ ಬಂದ ಮಗಳು (ಈ ಮನೆಯ ಸೊಸೆ ಇನ್ನೊಂದು ಮನೆಯ ಮಗಳಲ್ಲವೇ?) ಕಾರಣಳಾಗುತ್ತಾಳೆ ಎಂದರೆ ಸೂತ್ರದ ಬೊಂಬೆ ಎಂದು ಗಂಡನ್ನು ಅಂದಂತೆ ಆಯಿತು. ಜೊತೆಗೆ ಭೇದ ಮಾಡುವ ಕಪಟ ಸಣ್ಣ ಬುದ್ಧಿಯವಳು ಹೆಣ್ಣು ಎಂದು ಅಂದಂತೆಯೂ ಆಯಿತು.

ಮದುವೆಯಾದ ಮೇಲೂ ಮಗಳು ತನ್ನ ಕರ್ತವ್ಯ ನಿರ್ವಹಿಸುತ್ತಾಳೆ ಎಂದರೆ ತಿರುಗಿ ಅತ್ತೆ ಮಾವನನ್ನು ಕಡೆಗಾಣಿಸಿ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾಳೆ ಅಂದರೆ ಅಳಿಯನಾಗಿ ಬರುವ ಗಂಡು ಅವಳಿಗೆ ಸಹಕರಿಸುತ್ತಾನೆ ಎಂದಾಯಿತಲ್ಲವೇ?..

ಮದುವೆ ಮಾಡಿಕೊಂಡು ಬೇರೆ ಸಂಸಾರ ಹೂಡುವ ಅಥವಾ ಅತ್ತೆ ಮನೆಗೆ ಹೋಗುವ ಮಗಳು ಯಾವ ರೀತಿ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾಳೆ?.. ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುವ ಹೆಣ್ಣು ಅತ್ತೆ ಮಾವನನ್ನು ನೋಡಿಕೊಳ್ಳುವುದಿಲ್ಲವೇ?..

ಸೊಸೆಯನ್ನು ಮನೆ ತುಂಬಿಸಿಕೊಳ್ಳುವ, ಮಗಳನ್ನು ಕಳಿಸಿಕೊಡುವ ಪರಂಪರೆ ಹಾಗೂ ಹಿಂದೂ ಪದ್ಧತಿಯನ್ನು ಬಿಟ್ಟು ಬಿಡುವುದೇ ಸೂಕ್ತವೇನೋ?..

ಮಗ ಅವನ ತಂದೆ ತಾಯಿಯನ್ನು ನೋಡಿಕೊಳ್ಳುವುದಿಲ್ಲ. ಸರಿ. ಮಗಳು ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದರೆ ಅಲ್ಲಿ ಅಳಿಯನ ಪಾತ್ರವೇನು?.. ತನ್ನ ಹೆಂಡತಿ ಅವಳ ತಂದೆತಾಯಿಯಡೆ ತನ್ನ ಕರ್ತವ್ಯ(?!) ನಿರ್ವಹಿಸುತ್ತಾ ತನ್ನ ತಂದೆ ತಾಯಿಯನ್ನು ನಿರ್ಲಕ್ಷಿಸುತ್ತಿದ್ದರೆ ಅವನು ಸುಮ್ಮನಿರುತ್ತಾನೆಯೇ?.. ತಂದೆ ತಾಯಿಯ ಮಾತು ಕೇಳಿ ವರದಕ್ಷಿಣೆಗಾಗಿ ಪೀಡಿಸುವ ಅಳಿಯ, ಮಗಳು ಕರ್ತವ್ಯ ನಿರ್ವಹಿಸುತ್ತಿರುವಾಗ ಅಡ್ಡಿ ಮಾಡದ ಅಳಿಯ ಇಬ್ಬರೂ ಒಂದೆಯಾ? ಕರ್ತವ್ಯ ಎಂದು ತನ್ನ ತಂದೆ ತಾಯಿಗೆ ತನ್ನ ಮನೆಯಲ್ಲಿ ಆಶ್ರಯವಿತ್ತಿರುವ ಹೆಣ್ಣು ಮಕ್ಕಳು ರೂಲ್ಗೆ  Exceptions ಅಷ್ಟೇ.

ನಾಲ್ಕು ಜನ ಏನನ್ನುತ್ತಾರೆ ಎಂದಾದರೂ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಗಂಡು ಮಕ್ಕಳಿದ್ದಾರೆ. ದೂರವಿದ್ದರೆ ತಮ್ಮ ಸಂಬಳದ ಒಂದು ಭಾಗವನ್ನು ಅವರಿಗೆ ಕಳುಹಿಸುವ ಗಂಡು ಮಕ್ಕಳಿದ್ದಾರೆ. ಮದುವೆಯಾದ ನಂತರ ತನ್ನ ಸಂಬಳದ ಭಾಗವನ್ನು ತಂದೆತಾಯಿಗೆ ಕೊಡುವ ಹೆಣ್ಣು ಮಕ್ಕಳು ಅಪರೂಪವೇ..

ಹೊರೆಗೆ ದುಡಿದು ಸಂಪಾದಿಸದ ಹೆಣ್ಣು ಮಕ್ಕಳು ತಮ್ಮ ಅವಶ್ಯಕತೆಗೇ ಗಂಡನತ್ತ ಕೈಚಾಚುವ ಪರಿಸ್ಥಿತಿ ಇರುವ ನಮ್ಮ ಸಮಾಜದಲ್ಲಿ ಅವನ ಸಂಬಳದ ಒಂದು ಭಾಗವನ್ನು ತನ್ನ ತೌರಿಗೆ ಕಳಿಸಲು ಸಾಧ್ಯವೇ?.. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ತಾನು ದುಡಿದ ಹಣದ ಮೇಲೇ ಪೂರಾ ಹಕ್ಕಿಲ್ಲ ಹೆಣ್ಣಿಗೆ. ಹೀಗಿರುವಾಗ ಕೊನೆಯವರೆಗೂ ಮಗಳಾಗಿ ಕರ್ತವ್ಯ ನಿರ್ವಹಿಸುತ್ತಾಳೆ ಎಂದು ಬಿಟ್ಟರೆ ಆಯಿತೇ?..

ಪಿತ್ರಾರ್ಜಿತ, ಸ್ವಯಾರ್ಜಿತ ಆಸ್ತಿಯಲ್ಲಿ ಪಾಲುಗಾರಳಾದ ಮೇಲೆ.. ಆಸ್ತಿಯೇ ಇಲ್ಲದೆ ಬರೀ ಸಾಲಗಳನ್ನು ಮಾಡಿದ ತಂದೆ ತೀರಿಕೊಂಡರೆ ಆ ಸಾಲ ತೀರಿಸುವ ಭಾದ್ಯತೆಯೂ ಮಗಳದಾಗುತ್ತದೆಯೇ?.. ಅವಳು ನಿರುದ್ಯೋಗಿಯಾಗಿದ್ದರೆ ಅಳಿಯ ಸಾಲ ತೀರಿಸುತ್ತಾನೆಯೇ?..

ತಾತನ, ತಂದೆಯ ಆಸ್ತಿಯಿಲ್ಲದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಮದುವೆ ಮತ್ತಷ್ಟು ದುಸ್ತರವಾಗುತ್ತದೆ. ವರದಕ್ಷಿಣೆಯೊಂದಿಗೆ (ಆ ಸಮಸ್ಯೆಯೇ ಇನ್ನೂ ಭೂತಾಕಾರವಾಗಿ ಇದೆ!) ಆಸ್ತಿಯಲ್ಲಿ ಭಾಗವೂ ಕೊಡಬೇಕಾಗಿ ಬಂದು ಹೆಣ್ಣು ಹೆತ್ತವರ ಸಂಕಟ ಮತ್ತಷ್ಟು ಹೆಚ್ಚಾಗುತ್ತದೆ.

ತಂಗಿಯರ ಮದುವೆ ಮಾಡುವ ಸಾಮಾಜಿಕ ಹೊಣೆಯಿಂದ ಗಂಡುಮಕ್ಕಳು ಮುಕ್ತರಾಗುತ್ತಾರೆ. ತಂದೆಯಿಲ್ಲದ ಹೆಣ್ಣುಮಕ್ಕಳಿಗೆ ತಂದೆ ಸ್ಥಾನದಲ್ಲಿ ನಿಲ್ಲಲು ಅಣ್ಣನಾದವನು ನಿರಾಕರಿಸಬಹುದು.

ಸಂಬಂಧಗಳು ದುಡ್ಡು, ಆಸ್ತಿ, ಸಾಲದ ಸುತ್ತಲೇ ಗಿರಿಕಿ ಹೊಡೆಯುತ್ತಾ ಶಿಥಿಲವಾಗುತ್ತಾ ಸಾಗುತ್ತದೆ. ಜಗಳ, ವ್ಯಾಜ್ಯ, ಕೋರ್ಟ್, ಪಾಲು, ಕೇಸು, ಹಕ್ಕು, ಸಮಾನತೆ,. ಇವೇ ಹೆಚ್ಚಾಗಿ ಹಬ್ಬ, ಹರಿದಿನ, ಗೌರಿ ಬಾಗಿನ, ಪೂಜೆ, ಸೀಮಂತ, ತಿಥಿ ಇತ್ಯಾದಿಗಳು ಮಾಯಾವಾಗುತ್ತದೆ.

ಆಸ್ತಿಯಲ್ಲಿ ಪಾಲು ಎಂಬುದೊಂದನ್ನು ಹಿಡಿದುಕೊಂಡು ಪ್ರತಿಯೊಂದು ಖರ್ಚು ವೆಚ್ಚವೂ ಲೆಕ್ಕಕ್ಕೆ ಬಂದು, ತಂದೆ ತಾಯಿಗೆ ಪ್ರತಿನಿತ್ಯ ಹಾಕುವ ಊಟ, ನೀಡುವ ತಿಂಡಿ, ಕೊಡಿಸುವ ಬಟ್ಟೆ ಎಲ್ಲವೂ ಎಲ್ಲರೂ ಮಾಡಬೇಕು, ಲೆಕ್ಕಹಾಕಿ ಎಲ್ಲರೂ ಭರಿಸಬೇಕು ಎಂತಲ್ಲಾ ಬಂದರೆ ವಯಸ್ಸಾದವರು ನೆಮ್ಮದಿಯಿಂದ ಇರಲಾದೀತೇ?..

ನಾಳೆ ಆಸ್ತಿಯಲ್ಲಿ ಸಮಾನ ಪಾಲುಗಾರಳಾಗುವ ಮಗಳು ಇಂದು ಹೆತ್ತವರನ್ನು ಸಾಕಲು ಸಮಾನ ಪಾಲುಗಾರಳಾಗಬೇಕು ಎಂದಾದರೆ ಹೆತ್ತವರು ಸೂಟ್ ಕೇಸ್ ಹಿಡಿದು ಮಕ್ಕಳೆಲ್ಲರ ಮನೆಗಳಲ್ಲಿ ತಿಂಗಳುಗಳ ಅತಿಥಿಗಳಾಗಬೇಕು ಅಥವಾ ಒಂಟಿಯಾಗಿ ಇರಬೇಕು.

ಎಲ್ಲಾ ಲೆಕ್ಕಾಚಾರವಾದರೆ ಸಂಬಂಧಗಳು ಅರ್ಥಹೀನವಾಗುತ್ತವೆ. ಬೆಲೆ ಕಳೆದುಕೊಳ್ಳುತ್ತವೆ.

ಮದುವೆಗೆ ಮಾಡಿದ ಖರ್ಚು, ಕೊಟ್ಟ ಉಡುಗೊರೆ ಆಸ್ತಿಯ ಲೆಕ್ಕಾಚಾರದಲ್ಲಿ ಬರುತ್ತದೆಯೇ?.. ಬಂದರೂ ಕಷ್ಟ.. ಬಿಟ್ಟರೂ ಕಷ್ಟ. ವರದಕ್ಷಿಣೆ ಪೀಡಕರು, ಆಸ್ತಿ ಪೀಡಕರೂ ಆಗುತ್ತಾರೆ.

ಅತ್ತೆ, ಅಮ್ಮ, ಸೊಸೆ, ಮಗಳು.. ನಾಲ್ವರೂ ಹೆಣ್ಣೇ ಯಾರಿಗೆ ಅನ್ಯಾಯವಾದರೂ ಅನ್ಯಾಯವೇ ಅಲ್ಲವೇ? ಕಾನೂನುಗಳು ಸಮಾಜದಲ್ಲಿ ಭದ್ರತೆ ಮೂಡಿಸಬೇಕು, ಸ್ವಾಸ್ಥ್ಯ ಕಾಪಾಡಬೇಕು, ಸಂಬಂಧಗಳ ಸೂಕ್ಷ್ಮತೆ ಅರಿತುಕೊಂಡು ಅವನ್ನು ಬೆಳೆಸುವಂತೆ, ಉಳಿಯುವಂತೆ ಕೆಲಸ ಮಾಡಬೇಕು. ಹೊತ್ತ ಹೊಣೆಗೆ ತಕ್ಕಂತೆ ಅಸ್ತಿ ಭಾಗವಾಗಬೇಕು. ಒಂದೇ ಸಿದ್ಧ ಸೂತ್ರ ಎಲ್ಲಾ ಪ್ರಕರಣಗಳಲ್ಲೂ ಅನ್ವಯಿಸಲಾಗುವುದಿಲ್ಲ.

ಹೀಗೇ ಮುಂದುವರಿದರೆ ಮೊದಲೇ ದ್ವಿಗುಣವಾಗುತ್ತಿರುವ ವೃದ್ಧಾಶ್ರಮಗಳು ಹತ್ತು ಪಟ್ಟು ಜಾಸ್ತಿಯಾಗುವ ಸಾಧ್ಯತೆಗಳು ಹೆಚ್ಚು. ಹಿಂದುಗಳಿಗೆ ಅನ್ವಯವಾಗುವ ಕಾನೂನಾದ್ದರಿಂದ ಹಿಂದುಗಳ ಸಾಮಾಜಿಕ ಪದ್ಧತಿ, ನಂಬಿಕೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ರೂಪಿಸಬೇಕಾದ ಅವಶ್ಯಕತೆಯಿದೆ.

ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಕೊಡುವುದರೊಂದಿಗೆ ಅದರಿಂದ ಅವಳು ಶೋಷಿತಳಾಗದಂತೆ ಎಚ್ಚರ ವಹಿಸುವುದೂ ಅವಶ್ಯವಾಗುತ್ತದೆ.

Leave a Reply