ಅರೆಸೇನಾಪಡೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ

ಡಿಜಿಟಲ್ ಕನ್ನಡ ಟೀಮ್

ಕೇಂದ್ರ ಅರೆ ಸೇನಾಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶೇ.33ರಷ್ಟು ಮೀಸಲಾತಿಯನ್ನು ನೀಡಲು ನಿರ್ಧರಿಸಿದೆ. ಆ ಮೂಲಕ ಸಿಆರ್ ಪಿಎಫ್ ಮತ್ತು ಸಿಐಎಸ್ಎಫ್ ನ ಕಾನ್ಸ್ ಸ್ಟೇಬಲ್ ಹಂತದಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರದಿಂದ ಇನ್ಮುಂದೆ ಮಹಿಳೆಯರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇನೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

ಪ್ರಸ್ತುತ ಅರೆ ಸೇನಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ‘ಗಡಿ ಭದ್ರತಾ ದಳದಲ್ಲಿ ಹೆಚ್ಚುವರಿಯಾಗಿ 29 ಬೆಟಾಲಿಯನ್ ನೇಮಕ ಮಾಡಲಾಗಿದ್ದು, ಸಿಆರ್ ಪಿಎಫ್ ಬಲಪಡಿಸಲು 38 ಬೆಟಾಲಿಯನ್ ನೇಮಿಸುವ ಪ್ರಕಿಯೆ ನಡೆಯುತ್ತಿದೆ. ಈ ಪೈಕಿ 22 ಬೆಟಾಲಿಯನ್ ಗಳ ನೇಮಕ ಪೂರ್ಣಗೊಂಡಿದ್ದು, 16 ಬೆಟಾಲಿಯನ್ ಗಳ ನೇಮಕ ಬಾಕಿ ಉಳಿದಿವೆ. ಬಿಎಸ್ಎಫ್, ಎಸ್ಎಸ್ ಬಿ ಮತ್ತು ಐಟಿಬಿಪಿಯಂತಹ ಗಡಿ ಸೇನಾ ಪಡೆಗಳ ಕಾನ್ಸ್ ಟೇಬಲ್ ಮಟ್ಟದಲ್ಲಿ ಶೇ.14ರಿಂದ 15ರಷ್ಟು ನೇಮಕ ಮಾಡಿಕೊಳ್ಳುವುದಾಗಿ’ ಕಿರಣ್ ಮಾಹಿತಿ ನೀಡಿದ್ದಾರೆ.

‘ಈ ಎಲ್ಲ ನೇಮಕಾತಿ ಪ್ರಕ್ರಿಯೆಗೆ 16-18 ತಿಂಗಳು ಅಗತ್ಯವಿದ್ದು, ಸಾಧ್ಯವಾದಷ್ಟು ಒಂದು ವರ್ಷದ ಒಳಗೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ. ಬಿಎಸ್ಎಫ್ ಪಡೆಯನ್ನು ಹೆಚ್ಚಿಸುವ ಬಗ್ಗೆ 21 ಪ್ರಸ್ತಾವ ಸಲ್ಲಿಸಿದ್ದು ಆ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನೇಮಕಾತಿಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕು ಎಂಬ ಯಾವುದೇ ನಿಯಮವಿಲ್ಲ. ಎಸ್ ಸಿ, ಎಸ್ ಟಿ, ಒಬಿಸಿ ಮೀಸಲಾತಿಯನ್ನು ಸರ್ಕಾರದ ಸೂಚನೆಯಂತೆ ಅಳವಡಿಸಿಕೊಳ್ಳಲಾಗಿದೆ. ಈಗಿನವರೆಗೂ ಕೇಂದ್ರ ಅರೆಸೇನಾಪಡೆಯಲ್ಲಿನ ನೇಮಕಾತಿಯಲ್ಲಿ ಇರುವುದಕ್ಕಿಂತ ಹೆಚ್ಚಿನ ಮೀಸಲಾತಿಯನ್ನೇ ನೀಡಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply