ಇಸ್ರೋ ಉಪಗ್ರಹ ಉಡ್ಡಯನ, ಇನ್ಮುಂದೆ ಅಮೆರಿಕದ ಜಿ ಪಿ ಎಸ್ ಅಲ್ಲ- ನಮ್ದೇ ದಿಕ್ಸೂಚಿ ಸಾಧನ!

 

ಡಿಜಿಟಲ್ ಕನ್ನಡ ಟೀಮ್

ಐ ಆರ್ ಎನ್ ಎಸ್ ಎಸ್ ಸರಣಿಯ ಏಳನೇ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡುವ ಮೂಲಕ ಗುರುವಾರ ಭಾರತವು ತನ್ನದೇ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿದಂತಾಗಿದೆ.

ಈ ಮೊದಲೇ ಆರು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ‘ಇಂಡಿಯನ್ ರೀಜಿನಲ್ ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಮ್’ ಎಂಬ ಏಳು ಉಪಗ್ರಹಗಳನ್ನೊಳಗಂಡ ಈ ಸರಣಿ, ಹೆಸರೇ ಸೂಚಿಸುವಂತೆ ಪ್ರಾದೇಶಿಕ ಸಂಚಾರ ಮಾರ್ಗಸೂಚಿಗೆ ತಂತ್ರಜ್ಞಾನ ಸಹಕಾರವನ್ನು ನೀಡುವಂಥದ್ದು. ಇದರಿಂದ ಅಮೆರಿಕದ ಜಿಪಿಎಸ್ ವ್ಯವಸ್ಥೆ ನೆಚ್ಚಿಕೊಂಡಿದ್ದ ಭಾರತ, ತನ್ನದೇ ದೇಶಿ ವ್ಯವಸ್ಥೆ ರೂಪಿಸಿಕೊಂಡಂತಾಗಿದೆ. ಭಾರತದ ಒಳಗೆ ಮತ್ತು ಸುತ್ತಲಿನ 1500 ಕಿ.ಮೀ. ವ್ಯಾಪ್ತಿಯ ಮಾರ್ಗಸೂಚಿ ಗುರುತುಗಳನ್ನು ನೀಡಲಿರುವ ಈ ಉಪಗ್ರಹಗಳು ಎರಡು ಬಗೆಯ ಸೇವೆ ಒದಗಿಸುತ್ತವೆ. ಒಂದು- ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸಿಸ್ಟಮ್. ಇದು ಎಲ್ಲ ಬಳಕೆದಾರರಿಗೆ ಲಭ್ಯ. ಇನ್ನೊಂದು- ಸರ್ಕಾರ, ಆಡಳಿತ ಮಟ್ಟದಲ್ಲಿ ಕೆಲವೇ ಅಧಿಕೃತ ಬಳಕೆದಾರರಿಗೆ ನೀಡಲಾಗುವ ನಿರ್ಭಂದಿತ ಸೇವೆ.

ದೇಶದ ಬೇರೆ ಬೇರೆ ಭಾಗಗಳ 18 ಕೇಂದ್ರಗಳ ಮೂಲಕ ಈ ಸಮಗ್ರ ಉಪಗ್ರಹ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ. ಈ ಪೈಕಿ ನಮ್ಮ ರಾಜ್ಯದ ಹಾಸನ ಕೇಂದ್ರವೂ ನಿಯಂತ್ರಣ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದೆ.

ನಾಲ್ಕು ಉಪಗ್ರಹಗಳನ್ನು ಹೊಂದಿದ್ದಾಗಲೇ ದಿಕ್ಸೂಚಿ ವ್ಯವಸ್ಥೆ ಸಂಪನ್ನವಾಗಿತ್ತು. ಈಗ ಏಳೂ ಉಪಗ್ರಹಗಳನ್ನು ಹೊಂದಿರುವುದು ತುಂಬ ಖಚಿತ ದಿಕ್ಸೂಚಿ ಮಾಹಿತಿಗಳನ್ನು ಒದಗಿಸಲು ನೆರವಾಗಲಿದೆ.

‘ಈ ಸಾಧನೆಯಿಂದ ತನ್ನದೇ ದಿಕ್ಸೂಚಿ ಹೊಂದಿರುವ ಐದು ರಾಷ್ಟ್ರಗಳ ಸಾಲಿನಲ್ಲಿ ಭಾರತ ಗರ್ವದಿಂದ ನಿಂತಿದೆ. ಇನ್ನು ಮುಂದೆ ತಂತ್ರಜ್ಞಾನ ಸಹಾಯದಿಂದ ನಮ್ಮ ದಾರಿಯನ್ನು ನಾವೇ ನೋಡಿಕೊಳ್ಳಲಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಾರ್ಮಿಕವಾಗಿ ಹೇಳುತ್ತ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

isro-modi

‘ಈ ದಿಕ್ಸೂಚಿ ವ್ಯವಸ್ಥೆ ಮೀನುಗಾರರಿಗೆ ಸಮುದ್ರದ ಯಾವ ಭಾಗದಲ್ಲಿ ಹೆಚ್ಚು ಮೀನಿದೆ ಎಂಬ ಸುಳಿವು ನೀಡುವುದರಿಂದ ಹಿಡಿದು ವಿಮಾನವು ಕೆಳಗಿಳಿಯುವಾಗ ನಮ್ಮದೇ ವ್ಯವಸ್ಥೆ ನೆಚ್ಚಿಕೊಂಡು ನಿಖರವಾಗಿ ಇಳಿಯುವುದಕ್ಕೆ ಸಹಕರಿಸಲಿದೆ. ರಾಷ್ಟ್ರೀಯ ವಿಪತ್ತುಗಳ ಸಂದರ್ಭದಲ್ಲೂ ನಮ್ಮನ್ನು ನಿಖರವಾಗಿ ಮಾರ್ಗದರ್ಶನ ಮಾಡಲಿದೆ’ ಎಂದು ದಿಕ್ಸೂಚಿ ವ್ಯವಸ್ಥೆಯ ಹೆಚ್ಚುಗಾರಿಕೆ ಬಗ್ಗೆ ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply