ಪಾಕ್ ಹದ ಮಾಡೋಕೆ ಭಾರತದ ಸಹಾಯ ಬೇಕೆಂದ ಟ್ರಂಪ್, ಯುದ್ಧ ವಿಮಾನ ಕೊಡುತ್ತಿರೋದಕ್ಕೆ ಅಮೆರಿಕ ಸಂಸದರದ್ದೇ ಅಸಮಾಧಾನ, ಬದಲಾಗ್ತಿದೆಯೇ ಅಮೆರಿಕದ ಯೋಚನಾ ಕ್ರಮ?

ಡಿಜಿಟಲ್ ಕನ್ನಡ ಟೀಮ್

ಸದ್ಯ ಅಮೆರಿಕದಿಂದ ಭಾರತಕ್ಕೆ ಸಕಾರಾತ್ಮಕ ಸಂದೇಶಗಳು ರವಾನೆಯಾಗುತ್ತಿವೆ. ಆ ಪೈಕಿ ಒಂದು ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನ ಮಾರಾಟದ ಅಮೆರಿಕದ ನಿರ್ಧಾರವನ್ನು ಸ್ವತಃ ಅಮೆರಿಕ ಸಂಸತ್ತಿನ ಸದಸ್ಯರೇ ವಿರೋಧಿಸಿರುವುದು. ಇದಕ್ಕೆ ಕಳಶವಿಟ್ಟಂತಹ ಮತ್ತೊಂದು ಬೆಳವಣಿಗೆ ಎಂದರೆ ‘ಅಣ್ವಸ್ತ್ರ ಹೊಂದಿರುವ ಅಸ್ಥಿರ ಪಾಕಿಸ್ತಾನವನ್ನು ಸ್ಥಿರವಾಗಿಡಲು ಅಮೆರಿಕ ಭಾರತದ ನೆರವು ಪಡೆಯಬೇಕು’ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಉಮೇದುವಾರ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿರೋದು.

ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಪಾಕಿಸ್ತಾನಕ್ಕೆ ಎಂಟು ಎಫ್-16 ಫೈಟರ್ ಜೆಟ್ ನೀಡಲು ಸಮ್ಮತಿ ಸೂಚಿಸಿದ್ದರು. ಇದಕ್ಕೆ ನೀಡಿದ್ದ ಕಾರಣ ಎಂದರೆ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪಾಕಿಸ್ತಾನಕ್ಕೆ ಸಹಾಯರೂಪವಿದು ಅಂತ. ಈಗ ಸ್ವತಃ ಅಮೆರಿಕ ಸಂಸತ್ ಸದಸ್ಯರೇ ಈ ನಿರ್ಧಾರಕ್ಕೆ ಅಸಮಾಧಾನ ತೋರಿದ್ದಾರೆ. ಪಾಕಿಸ್ತಾನಕ್ಕೆ ಈ ಯುದ್ಧ ವಿಮಾನವನ್ನು ಉಗ್ರರ ವಿರುದ್ಧ ಹೋರಾಡಲು ನೀಡಲಾಗಿದೆಯಾದರೂ ಆ ದೇಶ ಇದನ್ನು ಕೇವಲ ಭಾರತ ವಿರುದ್ಧ ದಾಳಿ ಮಾಡಲು ಬಳಸುವ ಸಾಧ್ಯತೆಗಳಿವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಒಬಾಮಾ ತಮ್ಮ ನಿರ್ಧಾರವನ್ನು ಪರಾಮರ್ಶಿಸಬೇಕು ಎಂದು ಹಿರಿಯ ಅಧಿಕಾರಿಗಳು ಒಬಾಮಾ ಅವರಿಗೆ ಪತ್ರ ಬರೆದಿದ್ದಾರೆ.

‘ನಾನು ಸೇರಿದಂತೆ ಹಲವು ಕಾಂಗ್ರೆಸ್ (ಅಮೆರಿಕ ಸಂಸತ್) ಸದಸ್ಯರು ಈ ಯುದ್ಧ ವಿಮಾನ ಮಾರಾಟದ ನಿರ್ಧಾರವನ್ನು ಪ್ರಶ್ನಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡುವಣ ಬಿಕ್ಕಟ್ಟು ಇನ್ನು ತಣ್ಣಗಾಗಿಲ್ಲ. ಹಾಗಾಗಿ ಈ ಎಫ್ 16 ಫೈಟರ್ ಜೆಟ್ ಅನ್ನು ಭಾರತದ ವಿರುದ್ಧ ಹೋರಾಡಲು ಅಥವಾ ಸ್ಥಳೀಯವಾಗಿ ತನ್ನ ಪ್ರಾಬಲ್ಯ ಮೆರೆಯಲು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಉಗ್ರರ ವಿರುದ್ಧ ಕಾರ್ಯಚರಣೆ ನಡೆಸಲು ಅಲ್ಲ’ ಎಂಬುದು ಅಲ್ಲಿನ ಸಂಸತ್ ಸದಸ್ಯ ಮ್ಯಾಟ್ ಸಲ್ಮೋನ್ ಅಭಿಮತ.

2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿಯ ನಂತರ, ಅಮೆರಿಕ ಉಗ್ರರರ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಸಾಕಷ್ಟು ನೆರವು ನೀಡಿದೆ. ಆದರೂ ಪಾಕಿಸ್ತಾನ ಈವರೆಗೂ ಯಾವುದೇ ಕಾರ್ಯಾಚರಣೆ ನಡೆಸಿಲ್ಲ. ಬದಲಿಗೆ ಪಾಕಿಸ್ತಾನದಲ್ಲೇ ಇದ್ದುಕೊಂಡು ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ರಿಚರ್ಡ್ ವಾದ.

ಮತ್ತೊಂದೆಡೆ ಪಾಕಿಸ್ತಾನದಂತಹ ದ್ವಿನೀತಿ ಧೋರಣೆ ತಾಳಿರುವ ದೇಶಗಳನ್ನು ನಿಭಾಯಿಸುವುದು ಹೇಗೆ ಎಂಬ ಚರ್ಚೆಯಲ್ಲಿ ಭಾಗವಹಿಸಿದ್ದ ಡೊನಾಲ್ಡ್ ಟ್ರಂಪ್, ‘ಪಾಕಿಸ್ತಾನ ಅರೆ ಅಣ್ವಸ್ತ್ರ ದೇಶವಾಗಿದೆ. ತಾವೇನಾದರೂ ಅಧಿಕಾರಕ್ಕೆ ಬಂದರೆ ಇದನ್ನು ಸ್ಥಿರವಾಗಿ ಇಡಲು ಭಾರತದ ನೆರವು ಪಡೆಯುತ್ತೇನೆ’ ಮುಕ್ತವಾಗಿ ತಿಳಿಸಿದ್ದಾರೆ.

ಇವೆರಡು ವಿದ್ಯಮಾನಗಳನ್ನು ಗಮನಿಸಿದರೆ ಅಮೆರಿಕದ ರಾಜಕೀಯ ವಾತಾವರಣವು ನಿಧಾನಕ್ಕೆ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಮಾರ್ಗದಲ್ಲಿ ಬದಲಾಗುತ್ತಿರುವ ಆಶಾದಾಯಕ ಚಿತ್ರಣವೊಂದು ಕಾಣುತ್ತಿದೆ.

Leave a Reply