ಬೇಸಿಗೆ ರಜೆಯಲ್ಲಿ ಬೇಡ ಮತ್ತದೇ ಬರಡು ಕಾಯಕ, ಮಕ್ಕಳಿಗೆ ಪರಿಚಯಿಸಿ ಕ್ರಿಯಾಶೀಲ ಮುಖ

author-shamaಮತ್ತೆ ಮತ್ತೆ ಬರುತಿದೆ ಎಂಬ ಹಾಗೆ ಬಂದಿದೆ ರಜೆಯ ಕಾಲ. ಮಣ ಭಾರದ ಬ್ಯಾಗುಗಳಿಲ್ಲದೇ, ತಲೆ ನೋವೆನಿಸುವ ಹೋಮ್ ವರ್ಕ್ ಇಲ್ಲದೇ ನಿರಾಳವಾಗಿರುವ ಭಾವ ಮಕ್ಕಳಿಗೆ. ಇತ್ತ ಬುತ್ತಿ ಕಟ್ಟಿ ವ್ಯಾನಿನ ಹೊತ್ತಿಗೆ ಸರಿಯಾಗಿ ಬಿಡೋದಕ್ಕಂತಲೇ ಬೆಳಗ್ಗೆ ಸೂರ್ಯ ಮೂಡುವ ಮುಂಚೆ ಏಳುವ ತರಾತುರಿಯಿಲ್ಲದೇ ಒಂದರ್ಧ ಗಂಟೆ ಹೆಚ್ಚು ಮಲಗುವ ಆರಾಮ ಅಮ್ಮಂದಿರಿಗೆ.

ಎದ್ದು ತಿಂಡಿ ತಿಂದು ಸ್ನಾನ ಆಗೋ ವರೆಗೂ ಎಲ್ಲವೂ ಸರಿಯಿರುತ್ತದೆ. ನಂತರ “ಅಮ್ಮಾ ಬೋರು”, “ಅಮ್ಮಾ ತಿನ್ನೋಕೇನಾದ್ರೂ ಕೊಡು” “ಅಮ್ಮಾ ಟಿ.ವಿ ಹಾಕಲಾ” “ಇಲ್ಲ ಅಂದ್ರೆ ನಿನ್ನ ಮೊಬೈಲ್ ಕೊಡು, ಆಟ ಆಡ್ತೀನಿ” ಶುರು ಒಂದೊಂದೇ ಕ್ಯಾತೆಗಳು. ಅಮ್ಮನಿಗೋ ದಿನಂಪ್ರತಿ ಇದನ್ನೇ ಕೇಳಿ ಹಾಂ ಅನ್ನಲೂ ಆಗದೇ ಉಹುಂ ಅನ್ನಲೂ ಆಗದೇ ಒದ್ದಾಡುವ ತಲೆಬಿಸಿ. ರಜೆ ಪ್ರಾರಂಭವಾಗಿ ಹತ್ತು ದಿನ ಆಗುವಷ್ಟರಲ್ಲೇ ಸದ್ಯ ಯಾವಾಗ ರಜೆ ಮುಗಿಯುತ್ತೋ ಅಂತಿರುವವರಿಗೇನು ಕಮ್ಮಿ ಇಲ್ಲ. ದಿನವಿಡೀ ತಿನ್ನೋಕೆ ಕೊಡೋಕಾಗಲ್ಲ, ಮೊಬೈಲ್ ಕೊಟ್ಟು ಕಳೆದ ಬಾರಿ ಹಾಳಾಗಿ ಮತ್ತೆ ರಿಪೇರಿಗೆ ದುಡ್ಡು ಸುರಿದಿದ್ದು ಇನ್ನೂ ಮರೆತಿರಲ್ಲ, ಹಾಗಂತ ಮಕ್ಕಳು ಬರೀ ಟಿವಿ ನೋಡ್ತಾನೇ ಇರೋದು ಇಷ್ಟವಿಲ್ಲದಾಗ ಹೆತ್ತವರೇನು ಮಾಡಬಹುದು? ಹೊರಗೆ ಆಟಕ್ಕೆ ಹೋಗಬಹುದೆಂದರೆ ಮೈ ಸುಡುವ ಬಿಸಿಲು. ಅಷ್ಟಲ್ಲದೇ ಆಡೋಕೆ ಜಾಗ, ಜತೆಗೆ ಗೆಳೆಯರು ಕೂಡ ಇರಬೇಕಲ್ಲ. ತಾವೇ ಹೊರಗೆ ಕರೆದೊಯ್ಯೋಣವೆಂದರೆ ಅಪ್ಪ ಅಮ್ಮ ಇಬ್ಬರಿಗೂ ರಜೆ ಸಿಗಬೇಕು, ದುಡ್ಡು ಹೊಂದಿಸಬೇಕು, ಹೋದಲ್ಲಿ ಉಳಕೊಳ್ಳುವ ವ್ಯವಸ್ಥೆ ಆಗಬೇಕು… ಹೀಗೆ ಬೆಳೆಯುತ್ತದೆ ಸಮಸ್ಯೆಗಳ ಪಟ್ಟಿ.

ಹೀಗಿರುವುದಕ್ಕೇ ಇವತ್ತು ಗಲ್ಲಿ ಗಲ್ಲಿಗಳಲ್ಲೂ ಸಮ್ಮರ್ ಕ್ಯಾಂಪ್ ಎಂಬ ಇನ್ನೊಂದು ಶಾಲೆ ಹುಟ್ಟಿಕೊಂಡಿರುವುದು. ದುಡಿಮೆಗೆ ಹೋಗುವ ಹೆತ್ತವರಿಗೆ ಇದು ಒಂದು ವರದಾನವೂ ಹೌದು. ಹಾಗಂತ ರಜೆಯಿಡೀ ಅಲ್ಲಿಗೇ ಬಿಡುವುದು ತರವಲ್ಲ. ಮಕ್ಕಳಿಗೂ ಸಿಗುವುದು ಒಂದು ರಜೆ, ಸಜೆಯಾಗದಂತೆ ಕಳೆಯುವುದು ಮುಖ್ಯ. ಮಕ್ಕಳ ಆಸಕ್ತಿ ಖುಷಿಗೆ ತಕ್ಕಂತೆ ಒಂದೋ ಎರಡೋ ವಾರ ಅಂಥ ಕಲಿಕೆಯ ತಾಣಕ್ಕೆ ಸೇರಿಸುವುದು ಸರಿ. ಶಾಲೆ ಇರುವ ಹೊತ್ತಿನಲ್ಲಿ ಕಲಿಯಲಾಗದ ಯಾವುದೋ ಹೊಸತನ್ನು ಅವರೂ ಕಲಿತಾರು. ಆದರೆ ಇದು ಇಷ್ಟಕ್ಕೇ ಸೀಮಿತಗೊಂಡರೆ ಚೆಂದ.

ಇಂಟರ್^ನೆಟ್ ಎಂಬ ಮಾಯಾ ಲೋಕದ ಮುಂದೆ ಕುಳಿತರೆ ಮನೆಯಲ್ಲೇ ಇದ್ದು ಮಕ್ಕಳು ಮಾಡಬಹುದಾದ್ದು ಇವತ್ತು ಸಾಕಷ್ಟಿದೆ. ಅವುಗಳಲ್ಲಿ ಬಹಳಷ್ಟು ದಿನ ಬಳಕೆಯ ಸಾಮಗ್ರಿಗಳನ್ನಿಟ್ಟುಕೊಂಡೇ ಮಾಡುವಂಥವು. ಹೇಗೆ ಅಂದಿರಾ ?

ಬಣ್ಣಗಳ ಲೋಕ: ಹೇಗೂ ಶಾಲೆಗೆ ಹೋಗುವಾಗ ಕೊಂಡೊಯ್ಯುವ ಥರಾವರಿ ಬಣ್ಣಗಳು ಇದ್ದೇ ಇರುತ್ತವೆ. ಮಕ್ಕಳು ಅವನ್ನೇ ಬಳಸಿಕೊಂಡು ಒಂದಷ್ಟು ಚಿತ್ರ ಬಿಡಿಸಲಿ. ಅವು ಶಾಲೆಯಲ್ಲಿ ಹೇಳಿದಂತಲ್ಲ, ಮನಕ್ಕೆ ತೋಚಿದ ತಮಗಿಷ್ಟವಾದ ಚಿತ್ರಗಳು. ಇವಕ್ಕೆ ಯಾವುದೇ ಚೌಕಟ್ಟು ರೂಲ್ಸ್ ಹಾಕದೇ ಇರುವುದು ನೆನಪಿರಲಿ. ಬರೀ ಕಾಗದದ ಮೇಲಲ್ಲ, ಹಳೆಯದೊಂದು ಗ್ಲಾಸ್, ಯಾವತ್ತೋ ಊರಿಂದ ಬರುವಾಗ ತಂದ ನುಣುಪು ಕಲ್ಲು, ಒಣಗಿದ ಗಿಡದ ರೆಂಬೆ ಹೀಗೆ ವಿಶೇಷವಾದ ದುಬಾರಿಯಲ್ಲದ ವಸ್ತುಗಳೂ ಬಣ್ಣಗಟ್ಟಲಿ. ಭಾವನಾತ್ಮಕವಾಗಿಯೂ ಇದು ತುಂಬ ಒಳ್ಳೆಯ ಚಟುವಟಿಕೆ.

ಹೊಸ ಪೇಪರ್ ಓದಲಿ ಹಳೆಯ ಪೇಪರ್ ಹರಿಯಲಿ : ಅವತ್ತಿನ ಪೇಪರ್ ತೆಗೆದು ಏನೋ ಒಂದು ಸುದ್ದಿಯನ್ನೋ, ಬರಹವನ್ನೋ ಓದಿ ಅಮ್ಮ ಅಥವಾ ಅಪ್ಪನಿಗದನ್ನು ವಿವರಿಸಲಿ. ಸುತ್ತ ಮುತ್ತ ಏನು ನಡೀತಿದೆ ಅನ್ನೋದರ ಬಗ್ಗೆ ಕಿಂಚಿತ್ತೂ ಗಮನ ಕೊಡದಿರುವ ಇಂದಿನ ಮಕ್ಕಳಿಗೆ ಪ್ರಚಲಿತ ವಿದ್ಯಮಾನಗಳ ಕಡೆ ಗಮನ ಹೋಗುವುದು, ದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಯಲು ಇದು ದಾರಿಯಾಗುತ್ತೆ. ಒಂದೆರಡು ದಿನ ಮಕ್ಕಳಿಗೆ ರುಚಿಸಲಿಕ್ಕಿಲ್ಲ; ಬಿಡುವಿನ ಹೊತ್ತಲ್ಲಿ ಅವರ ಜತೆ ಕೂತು ಸುದ್ದಿಯ ಚರ್ಚೆಗಿಳಿದರೆ ಎಂಥ ಮಗುವೂ ಅಭಿರುಚಿ ಬೆಳೆಸಿಕೊಳ್ಳುವುದು.

ಹಳೆಯ ಪೇಪರ್ ಒಂದಷ್ಟನ್ನು ಮಕ್ಕಳ ಸುಪರ್ದಿಗೆ ಕೊಡಿ. ಅದನ್ನು ಹರಿದು ಅಂಟಿಸಿ ಬೇಕಾದ್ದನ್ನು ಮಾಡಲಿ. ಕೊಲಾಜ್, ಗ್ರೀಟಿಂಗ್ ಕಾರ್ಡ್, ಓರಿಗಾಮಿ, ಪೆನ್ ಸ್ಟ್ಯಾಂಡ್ ಹೀಗೆ ತಮ್ಮ ಮನಸ್ಸಿಗೆ ಬಂದಿದ್ದನ್ನು ಮಾಡುವುದು ಅದನ್ನ ಹೆತ್ತವರಿಗೋ ಪಕ್ಕದ ಮನೆಯವರಿಗೋ ತೋರಿಸಿ ಬೀಗುವುದು ಮಕ್ಕಳಿಗೆ ಯಾವತ್ತೂ ಪ್ರಿಯವೇ. ಕ್ರಿಯಾಶೀಲತೆಯೂ ಬೆಳೆಯುತ್ತದೆ.

ಸುಡೊಕು, ಪದಬಂಧಗಳು: ಶಾಲೆಯಿದ್ದಾಗ ಪುರುಸೊತ್ತಿಲ್ಲ ಎಂದು ಬಿಟ್ಟ ಇಂಥವೆಲ್ಲ ರಜೆಯ ಸಮಯಕ್ಕೆ ಬಹಳ ಸೂಕ್ತವಾದವು. ಅಕ್ಕ ಪಕ್ಕದ ಮಕ್ಕಳೂ ಸೇರಿ ಜತೆಗೇ ಮಾಡುವಂತಿದ್ದರೆ ಇನ್ನೂ ಚೆನ್ನ. ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಯುವ ಜತೆಗೇ ಮೆದುಳು ಕೂಡ ಸಾಣೆಯಾಗುತ್ತದೆ. ಪದಕೋಶ ಬೆಳೆಯುತ್ತದೆ. ಸಹಜವಾಗಿ ಮಕ್ಕಳ ಕೌಶಲ್ಯ, ಆತ್ಮ ವಿಶ್ವಾಸ ಎರಡೂ ಹೆಚ್ಚುತ್ತದೆ.

ಮಗುವಿಗೊಂದು ಗಿಡ: ಸಾಧ್ಯವಾದರೆ ಮನೆಯ ಪಕ್ಕದ ಪಾರ್ಕಿನಲ್ಲಿ ಪುಟ್ಟದೊಂದು ಗಿಡ ನೆಡಲಿ. ಸಾಧ್ಯವಾಗದಿದ್ದಲ್ಲಿ ಮನೆಯಲ್ಲೇ ಒಂದು ಕುಂಡ ತಂದಿಟ್ಟರೂ ಆಯ್ತು. ಅದೇನು ಗ್ಯಾಲನ್ ಲೆಕ್ಕದಲ್ಲಿ ನೀರು ಕೇಳೋಲ್ಲ. ದಿನಕ್ಕೊಂದು ಬಾಟಲಿ ನೀರು ಹಾಕುವ ಕೆಲಸ ನೆಟ್ಟವರದೇ ಆಗಿರಬೇಕು. ಜೀವವೊಂದನ್ನು ಸಾಕುವ, ದಿನಾ ಅದನ್ನು ಪೋಷಿಸುವ ಖುಷಿ, ಜವಾಬ್ದಾರಿಗೆ ಹೆಗಲು ಕೊಡುವ ಗುಣ ಬೆಳೆಯುವುದು ಇಂಥ ಚಿಕ್ಕ ಚಿಕ್ಕವುಗಳಿಂದಲೇ. ಗಿಡವೊಂದು ಮರವಾಗುವ ವಿಸ್ಮಯಕ್ಕೆ ತೆರೆದುಕೊಂಡ ಮಗು ನಾಳೆ ಕೃಷಿ ವಿಜ್ಞಾನಿಯೇ ಆದರೆ ಅದು ದೇಶಕ್ಕೆ ಆದ ಲಾಭವೇ ಹೌದು. ತಾವು ಸಾಕುವ ಗಿಡದ ಮೇಲೆ ಪ್ರೀತಿ ತೋರಿಸುತ್ತ ಹೆತ್ತವರು ತಮ್ಮ ಮೇಲೆ ತೋರುವ ಮಮಕಾರವೂ ಅರ್ಥವಾಗುತ್ತ ಹೋಗುತ್ತದೆ.

 “ಇಂದಿನ ಮಕ್ಕಳು ಮುಂದಿನ ಜನಾಂಗ” ಎನ್ನುವಾಗ ಅವರನ್ನು ಮುಂದಿನ ದಿನಗಳಿಗೆ ಸಮರ್ಥವಾಗಿ ತರಾರು ಮಾಡುವ ಹೊಣೆ ಪಾಲಕರದ್ದೇ. ಆಡಾಡುತ್ತ ಕಲಿತ ಇಂಥ ಪಾಠಗಳು ಮಾತ್ರ ಬದುಕಿನುದ್ದಕ್ಕೂ ಕೈ ಹಿಡಿದಾವೇ ಹೊರತು ಶಾಲೆಯ ಗೋಡೆಗಳ ನಡುವಿನ ಬರೀ ಮಾರ್ಕು ಮಾತ್ರ ಸಾಲದು. ದಿನ ನಿತ್ಯದ ಜಂಜಾಟಗಳಿಂದ ಹೊರ ಬಂದು ಹೊರ ಜಗತ್ತು, ಬರೀ ಓದು, ಬರಹ, ಫಸ್ಟ್ Rank ಗಳಿಸುವ ಒತ್ತಡದ ಬೇಲಿಯಾಚೆ ಜಿಗಿದು ಹೊಸ ದಿಗಂತವನ್ನೂ ಮಕ್ಕಳು ನೋಡಲಿ. ರಜೆಯೆನ್ನುವುದು ಸಜೆಯಾಗದೇ ಮುಂದಿನ ರಜೆಗೆ ಮಕ್ಕಳೂ ಪೋಷಕರೂ ಎದುರು ನೋಡುವಂತಾಗಲಿ.

3 COMMENTS

 1. ಮಕ್ಕಳ ಕುರಿತಾದ ಕಾಳಜಿಯ ಲೇಖನಗಳು ತಮ್ಮಿಂದ ಬರುತ್ತಿರುವುದು ಖಂಡಿತ ಸ್ವಾಗತಾರ್ಹ. ಮಕ್ಕಳ ಕುರಿತಾಗಿ ನಾವು ಏನು ಮಾಡಬಹುದು ಎಂಬ ತಮ್ಮ ಕಿರು ಕಾರ್ಯಸೂಚಿ ಚೆನ್ನಾಗಿದೆ.

  ಇಂದಿನ ದಿನದಲ್ಲಿ ಮಕ್ಕಳನ್ನು ಹೆಚ್ಚು ಅಂದ್ರೆ ಅವರನ್ನು ಟೆಕ್ನಾಲಜಿ ಒರಿಯೆಂಟ್ ಮಾಡ್ತೀವೇ ಅಂತ ವಿಡಿಯೋ ಗೇಮ್ಸ್, ಕಂಪ್ಯೂಟರ್ ಗೇಮ್ಸ್ ಇತ್ಯಾದಿಗಳ ಕಡೆಗೆ ತುರುಕಿ ಅವರಲ್ಲೊಂದು ಚಟ ಹತ್ತಿಸ್ತೇವೆ. ಇಲ್ಲ ನಮಗೆ ಸಮಯ ಇಲ್ಲ ಅಂತ ಯಾವುದೋ ಸಿಕ್ಕ ಸಮ್ಮರ್ ಕ್ಯಾಂಪ್ಗೆ ತಳ್ಳುತ್ತೇವೆ.

  ಮಕ್ಕಳ ವಿಚಾರದಲ್ಲಿ ಮಕ್ಕಳು ಏನ್ಮಾಡಬಹುದು ಎಂಬುದಕ್ಕಿಂತ ನಾವೇನು ಮಾಡಿ ಮಕ್ಕಳಲ್ಲಿ ಒಂದು ವಿಶಿಷ್ಟ ರೀತಿಯ ಆಸಕ್ತಿ ಹುಟ್ಟಿಸಲಿಕ್ಕೆ ನಾವೇ ಅವರಿಗೆ ಒಂದು ಮಾಡೆಲ್ ಆಗಬಹ್ದು ಎಂಬ ಕುರಿತಾಗಿ ಹಿರಿಯರಾದ ನಾವು ಚಿಂತನ ಮಂಥನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ ಏನೋ ಎಂಬ ಭಾವ ನನ್ನಲ್ಲಿ ಆಗಾಗ ಮೂಡುತ್ತದೆ.

 2. ಮಕ್ಕಳ ರಜಾದಿನಗಳನ್ನು ಸುಂದರವಾಗಿವಾಗಿಸೋಕೆ ಚಂದದ ಉಪಾಯಗಳು 🙂

 3. Really a nice article shame. At present I am going through the same situation. I have given my daughter a list which include her kathak practice and reading because today’s children don’t don’t read good books.
  summer camp is good activity but some time parents should also give time to their children in spite of their busy schedule. Parents only can give shape to their child’s life.
  good going shama keep it up.

Leave a Reply