ಸುದ್ದಿ ಸಂತೆ: ಬರದ ಮಾತುಗಳು, ಮಾಧ್ಯಮಕ್ಕೂ ಆಗಸ್ಟಾ ದುಡ್ಡು?, ದರ್ಗಾ ಪ್ರವೇಶಕ್ಕೆ ದೇಸಾಯಿ… ದಿನದ ಸುದ್ದಿಗಳ ಕಣಜ

ಹಿರಿಯ ಪತ್ರಕರ್ತ ಜಯಶೀಲರಾವ್ (87)ಗುರುವಾರ ಮೃತರಾದರು. ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ರಾವ್, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಒಂದು ಸಂಗ್ರಹಚಿತ್ರ.

 ಅಂತರ್ಜಲವನ್ನು ರಾಜ್ಯದ ಆಸ್ತಿಯಾಗಿಸಿ-ಬಿಜೆಪಿ

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಿ.ಟಿ.ರವಿ ಹೇಳಿದ್ದಿಷ್ಟು- ‘ಅಂತರ್ಜಲ ದಿನೇ ದಿನೇ ಕುಸಿಯುತ್ತಿದೆ. ಟ್ಯಾಂಕರ್‍ಗಳಲ್ಲಿ ಪೂರೈಸುವ ನೀರಿನಲ್ಲೂ ಫ್ಲೋರಿನ್ ಅಂಶ ಕಂಡು ಬರುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಅಂತರ್ಜಲವನ್ನು ರಾಜ್ಯದ ಆಸ್ತಿ ಎಂದು ಘೋಷಿಸಬೇಕು. ಅದರ ಮಿತ ಬಳಕೆಗೆ ಮಾರ್ಗಸೂಚಿಯನ್ನು ರೂಪಿಸಬೇಕು.’

‘ಬರ ನಿರ್ವಹಣೆಯಲ್ಲಿ ಕೇಂದ್ರದತ್ತ ಬೊಟ್ಟು ಮಾಡುವುದು ಸಲ್ಲ. ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡಿಲ್ಲ. ಬಿಜೆಪಿ ತಂಡಗಳು ಭೇಟಿ ನೀಡಿದ 15 ಜಿಲ್ಲೆಗಳಲ್ಲೂ ಗೋ ಶಾಲೆಗಳು ಆರಂಭಗೊಂಡಿರಲಿಲ್ಲ. ಮೇವು ಕೊರತೆ ಎದ್ದುಕಾಣುತ್ತಿತ್ತು’ ಎಂದು ಆರೋಪಿಸಿದರು.

– ಆಗಾಗ ಹೋಗುವ ಕರೆಂಟು, ತಿರುಗದ ಫ್ಯಾನು, ಅಸಾಧ್ಯ ಸೆಕೆ, ಬಯ್ದಾಟ ಇವೆಲ್ಲ ನಿಮ್ಮ ಅನುಭವಗಳಾಗಿದ್ದಿರಬಹುದು. ಆದರೆ ಕರ್ನಾಟಕದ ಇಂಧನ ಸಚಿವರ ಪ್ರಕಾರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಆಗುತ್ತಿದೆ. ಕೃಷಿ ಪಂಪ್ ಸೆಟ್ ಮತ್ತು ಕುಡಿಯುವ ನೀರಿಗಂತೂ ಏನೂ ತೊಂದರೆ ಇಲ್ಲ ಅನ್ನೋದು ಸಚಿವರ ಪ್ರತಿಪಾದನೆ. ಪ್ರಸ್ತುತ 9 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಇನ್ನೂ ಹೆಚ್ಚಿನ ಬೇಡಿಕೆ ಬಂದರೂ ಪೂರೈಸುತ್ತೇವೆ ಅಂತ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

– ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲರದ್ದೂ ಇಂಥದೇ ವಿಶ್ವಾಸದ ನುಡಿ. ಜಲಾಶಯಗಳಲ್ಲಿ ಜೂನ್ ವರೆಗೂ ಕುಡಿಯುವ ನೀರಿನ ಲಭ್ಯತೆ ಇರುತ್ತದೆ, ನಂತರವೂ ಮಳೆ ತಡವಾದರೆ ಬೇರೆ ವ್ಯವಸ್ಥೆ ಮಾಡಬೇಕಾಗುತ್ತದೆ ಅಷ್ಟೆ ಎಂದಿದ್ದಾರೆ. ಸ್ಥಳೀಯ ಸಂಸ್ಥೆಗಳು ನೀರನ್ನು ಮಿತಬಳಕೆ ಮಾಡಬೇಕೆಂದೂ ಕರೆ ಕೊಟ್ಟಿದ್ದಾರೆ.

ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ಆಗಸ್ಟಾ ವೆಸ್ಟ್ಲ್ಯಾಂಡ್ ಪಿಐಎಲ್ ಅರ್ಜಿ ವಿಚಾರಣೆ

ಸದ್ಯ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಗದ್ದಲ ಸೃಷ್ಟಿಸಿರುವ ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಕುರಿತಂತೆ ವಕೀಲ ಎಂ.ಎಲ್ ಶರ್ಮಾ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಮತ್ತು ನ್ಯಾ. ಆರ್.ಭಾನುಮತೆ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಮುಂದಿನ ವಾರ ಈ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಈ ಅರ್ಜಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಮತ್ತು ಸೋನಿಯಾ ಅವರ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಈ ಪ್ರಕರಣದ ವಿಚಾರಣೆಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಮತ್ತೊಂದೆಡೆ ಗುರುವಾರ ಲೋಕಸಭೆಯ ಶೂನ್ಯ ಅವಧಿಯಲ್ಲಿ ಈ ಪ್ರಕರಣದ ಕುರಿತು ಮಾತನಾಡಿದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, ಈ ಪ್ರಕರಣದಲ್ಲಿ ಮಾಧ್ಯಮಗಳನ್ನು ನಿರ್ವಹಿಸಲೆಂದೇ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ₹50 ಕೋಟಿ ಹಣ ಮೀಸಲಿಟ್ಟಿದ್ದ ಎಂಬ ಮಾಹಿತಿ ತಿಳಿಸಿದ್ದಾರೆ. ‘ಆರೋಗ್ಯಕರ ಸಮಾಜದ ಭಾಗವಾಗಿರುವ ಮಾಧ್ಯಮಗಳು, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿರುವುದು ದುರಾದೃಷ್ಟಕರ. ಇದು ಮಾಧ್ಯಮಗಳ ಬೇಜವಾಬ್ದಾರಿಯನ್ನು ತೋರುತ್ತದೆ’ ಎಂದು ಲೇಖಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ರಾಜ್ಯಸಭೆಯಲ್ಲಿ ಏನಾಯ್ತೆಂದು ಅರಿಯುವುದಕ್ಕೆ ಈ ವರದಿ ಓದಿ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಸುದ್ದಿ ಸಾಲುಗಳು..

– ಉದ್ದೇಶಿತ ಸುಸ್ಥಿದಾರನಾಗಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯರನ್ನು ದೇಶದಿಂದ ಹೊರ ಹಾಕುವಂತೆ ಭಾರತ ಸರ್ಕಾರ ಬ್ರಿಟನ್ ಗೆ ಪತ್ರಬರೆದಿದೆ. ಈಗಾಗಲೇ ಕೇಂದ್ರ ಸರ್ಕಾರ ಮಲ್ಯ ಪಾಸ್ ಪೋರ್ಟ್ ರದ್ದುಗೊಳಿಸಿದ್ದು, ಈ ಬೆಳವಣಿಗೆ ಮಲ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

– ವೈದ್ಯಕೀಯ ಶಿಕ್ಷಣಗಳಾದ ಎಂಬಿಬಿಎಸ್, ಬಿಡಿಎಸ್ ಮತ್ತು ಪಿಜಿ ಪದವಿಗಳಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನ್ಯಾಷನಲ್ ಎಲಿಜಿಬಿಲಿಟಿ ಎಂಟರೆನ್ಸ್ ಟೆಸ್ಟ್ ಅನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ. ಆ ಮೂಲಕ ಈ ಉನ್ನತ ವ್ಯಾಸಂಗಕ್ಕೆ ಒಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಹಾಗೂ ಸಿಬಿಎಸ್ ಸಿ ಸೂಚನೆ ನೀಡಿದೆ.

ಕೇಂದ್ರ ಅರೆ ಸೇನಾಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶೇ.33ರಷ್ಟು ಮೀಸಲಾತಿಯನ್ನು ನೀಡಲು ನಿರ್ಧರಿಸಿದೆ.

ಹಜಿ ಅಲಿ ದರ್ಗಾ ಪ್ರವೇಶಿಸಿದರೆ ಮಸಿ ಬಳೆಯುತ್ತೇವೆ: ಎಐಎಂಐಎಂ ಬೆದರಿಕೆ

ಹಜಿ ಅಲಿ ದರ್ಗಾದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಪ್ರತಿಭಟಿಸುತ್ತಾ ಈ ದರ್ಗಾಕ್ಕೆ ಪ್ರವೇಶಿಸುವುದಾಗಿ ತಿಳಿಸಿರುವ ಭೂಮಾತಾ ಬ್ರಿಗೆಡ್ ಮುಖ್ಯಸ್ಥೆ ತೃಪ್ತಿ ದೇಸಾಯ್ ಗೆ ಎಐಎಂಐಎಂ ಬೆದರಿಕೆ ಹಾಕಿದೆ. ಗುರುವಾರ ಈ ಕುರಿತು ಮಾತನಾಡಿರುವ ಈ ಸಂಘಟನೆಯ ಹಜಿ ರಾಫತ್ ಹುಸೇನ್, ‘ತೃಪ್ತಿ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರು ಆಕೆಯನ್ನು ತಡೆಯಬೇಕು. ತೃಪ್ತಿ ಅವರು ದೇವಸ್ಥಾನಗಳಲ್ಲಿ ಮಾಡಿದ ಕ್ರಮದ ಬಗ್ಗೆ ನಾವೇನು ಹೇಳುವುದಿಲ್ಲ. ಆದರೆ, ನಮ್ಮ ವಿರುದ್ಧ ಆಕೆ ಬೆಟ್ಟು ಮಾಡಿ ತೋರಿದರೆ, ಮುಸ್ಲಿಮರು ಸಹಿಸುವುದಿಲ್ಲ. ಆಕೆಗೆ ಮಸಿ ಬಳಿಯುತ್ತೇವೆ’ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಹಜಿ ಅಲಿ ಫಾರ್ ಆಲ್ ಆಂದೋಲನ ನಡೆಸುತ್ತಿರುವ ತೃಪ್ತಿ ದೇಸಾಯ್ ಮಾತನಾಡಿದ್ದು, ‘ಮಹಿಳೆಯರಿಗೆ ಆಗುತ್ತಿರುವ ತಾರತಮ್ಯದ ವಿರುದ್ಧ ಹೋರಾಟ ನಡೆಸಲು, ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಬೆಂಬಲ ವ್ಯಕ್ತಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಚೀನಾದ ಇನ್ನಿಬ್ಬರು ಪ್ರತ್ಯೇಕವಾದಿಗೂ ವಿಸಾ ನಿರಾಕರಣೆ

ಇತ್ತೀಚೆಗೆ ಚೀನಾದ ಪ್ರತ್ಯೇಕತಾವಾದಿ ಡೊಲ್ಕುನ್ ಇಸಾಗೆ ವಿಸಾ ನಿರಾಕರಿಸಿದ್ದ ಭಾರತ, ಈಗ ಮತ್ತಿಬ್ಬರು ಪ್ರತ್ಯೇಕತಾವಾದಿಗಳಾದ ರೇ ವಾಂಗ್ ಮತ್ತು ಲು ಜಿಂಗುಹಾಗೆ ವಿಸಾ ನಿರಾಕರಿಸಿದೆ. ಇದೇ ತಿಂಗಳು ಧರ್ಮಶಾಲಾದಲ್ಲಿ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಭೇಟಿಗೆ ಈ ಇಬ್ಬರು ವಿಸಾ ಕೋರಿದ್ದರು. ನ್ಯೂಯಾರ್ಕ್ ನ ಜೆಕೆಎಫ್ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಏರ್ ಇಂಡಿಯಾ ವಿಸಾ ನಿರಾಕರಣೆ ಬಗ್ಗೆ ಮಾಹಿತಿ ನೀಡಿರುವುದಾಗಿ ಲು ಜಿಂಗುಹಾ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಬೆಂಕಿ ಅವಘಡ ತಡೆಯಲು ಬಿಹಾರದಲ್ಲಿ ಹಗಲಿನ ವೇಳೆ ಹೋಮ, ಪೂಜಾ ಕಾರ್ಯಗಳಿಗೆ ತಡೆ

ಬಿಹಾರದಲ್ಲಿ ಸೂರ್ಯ ಸುಡುವ ವೇಳೆ ಅಡಿಗೆ ಮಾಡಿದರೆ 2 ವರ್ಷ ಜೈಲು ಶಿಕ್ಷೆ! ಊಹಿಸಿಕೊಳ್ಳಲು ಕಷ್ಟ ಆದರೂ ಬಿಹಾರದ ಜನ ಅನುಭವಿಸಲೇಬೇಕು. ಅಂತೆಯೇ ಹೋಮ, ಹವನ ಮತ್ತು ಪೂಜಾ ಕಾರ್ಯಕ್ರಮಗಳನ್ನು ಮಾಡದಂತೆ ಆದೇಶಿಸಿದೆ.

ಹೇಳಿ ಕೇಳಿ ಇದು ಬೇಸಿಗೆ ಕಾಲ. ಈ ಬಿಸಿಲ ಜೊತೆಗೆ ಮನೆಗಳಲ್ಲಿ ಬಳಸುವ ಬೆಂಕಿ ಇತ್ತೀಚಿನ ಅವಘಡಗಳಿಗೆ ಕಾರಣವಂತೆ. ಕಳೆದ ಎರಡು ವಾರಗಳಿಂದ ಬಿಹಾರದ ಹಲವೆಡೆ ಸರಣಿ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, 66 ಜನರು ಬೆಂಕಿ ಅವಘಡಗಳಿಂದ ಮೃತಪಟ್ಟಿದ್ದಾರೆ. 1200 ಕ್ಕೂ ಹೆಚ್ಚು ಪ್ರಾಣಿಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಇನ್ನೂ ಎರಡು ದಿನಗಳ ಹಿಂದೆಯಷ್ಟೇ ಬೆಗುಸಾರಾಯ್ ಜಿಲ್ಲೆಯಲ್ಲಿ 300 ಗುಡಿಸಲುಗಳು ಸುಟ್ಟು ಕರಕಲಾಗಿದ್ದವು. ಇವನ್ನು ತಡೆಗಟ್ಟಲು ಸಲುವಾಗಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗಿನ ಸಮಯದಲ್ಲಿ ಜನರು ಬೆಂಕಿಯ ಬಳಕೆ ಮಾಡಬಾರದು ಎಂಬುದೊಂದು ಆದೇಶ ಹೊರಬಿದ್ದಿದೆ. ಇದೊಂದು ಮೌಖಿಕ ಆದೇಶವಾಗಿರುವುದರಿಂದ, ಕೇವಲ ಹೋಮ ಮತ್ತು ಅಗ್ನಿ ಆಧರಿತ ಪೂಜಾ ಕಾರ್ಯಕ್ರಮಗಳಿಗೆ ಮಾತ್ರ ನಿರ್ಬಂಧವೋ ಅಥವಾ ಅಡುಗೆಗೂ ಹೌದೋ ಸ್ಪಷ್ಟವಿಲ್ಲ.

ಇವೇನೇ ಇರಲಿ, ಇಸ್ರೋದ ಉಪಗ್ರಹ ಉಡಾವಣೆ ಮೂಲಕ ನಮ್ಮದೇ ದಿಕ್ಸೂಚಿ ವ್ಯವಸ್ಥೆ ಕನಸು ನನಸಾಗಿದ್ದೇ ಇಂದಿನ ಮುಖ್ಯ ವಿದ್ಯಮಾನ.

ಜತೆಗೆ, ಕೆಲವು ಅಮೆರಿಕನ್ನರಿಗಾದರೂ ತಾವು ನಂಬಬೇಕಿರೋದು ಪಾಕಿಸ್ತಾನವನ್ನಲ್ಲ, ಭಾರತವನ್ನು ಎಂದೆನಿಸಿರೋದು ಆಶಾದಾಯಕ ಬೆಳವಣಿಗೆ.

ಬೇಸಿಗೆ ರಜೆಯಲ್ಲಿ ಮಕ್ಕಳ ನಿರ್ವಹಣೆ ಹೇಗೆ? ಶಮ ನಂದಿಬೆಟ್ಟ ಅವರ ಅಂಕಣ ಓದಿ.

ಸಿನಿಮಾ ಮಸಾಲೆಗೆ ಕನ್ನಡದ್ದೊಂದು ಚಿತ್ರಪಟ. ಹಾಗೆಯೇ ಸ್ನೊಡೆನ್ ಎಂಬ ಹಾಲಿವುಡ್ ಚಿತ್ರದ ರೋಚಕ ಟ್ರೈಲರ್ ನೋಡಿ.

Leave a Reply