ಸ್ನೊಡೆನ್ ಎಂಬ ಅಮೆರಿಕ ಗೂಢಚಾರನ ಬದುಕಿನ ಸಿನಿಮಾ, ಸದ್ಯಕ್ಕೆ ಟ್ರೈಲರ್ ರೋಮಾಂಚನ

ಡಿಜಿಟಲ್ ಕನ್ನಡ ಟೀಮ್

ಎಡ್ವರ್ಡ್ ಸ್ನೊಡೆನ್. ಅಮೆರಿಕದ ಗುಪ್ತಚರ ವಿಭಾಗ ಸಿಐಎನಲ್ಲಿ ಕಂಪ್ಯೂಟರ್ ತಜ್ಞನಾಗಿದ್ದು, ಅಮೆರಿಕವು ತನ್ನದೇ ಪ್ರಜೆಗಳನ್ನು ಹಾಗೂ ಜಗತ್ತನ್ನು ಹೇಗೆಲ್ಲ ಕಣ್ಗಾವಲಲ್ಲಿ ಇರಿಸಿದೆ ಮತ್ತು ಖಾಸಗಿತನವನ್ನು ಹೇಗೆ ಆಕ್ರಮಿಸಿಕೊಂಡಿದೆ ಎಂಬೆಲ್ಲ ಮಾಹಿತಿಗಳನ್ನು ಹೆಕ್ಕಿತಂದು ಬಹಿರಂಗಗೊಳಿಸಿ ಜಗತ್ತನ್ನು ನಿಬ್ಬೆರಗಾಗಿಸಿದವನು.

ಅಮೆರಿಕ ಕೆಂಗಣ್ಣಿಗೆ ಗುರಿಯಾಗಿ ಸದ್ಯಕ್ಕೀತ ರಷ್ಯದಲ್ಲಿ ಆಶ್ರಯ ಪಡೆದಿದ್ದಾನೆ. ಈತನ ಸಾಹಸಕಾರ್ಯಗಳನ್ನು ಪರಿಚಯಿಸುವ ಚಿತ್ರವೊಂದು ಸೆಪ್ಟೆಂಬರ್ ನಲ್ಲಿ ತೆರೆ ಕಾಣಲಿದ್ದು, ಈಗದರ ಟ್ರೈಲರ್ ಬಿಡುಗಡೆಯಾಗಿ ಕುತೂಹಲ ಮೂಡಿಸಿದೆ. ಸಿನಿಮಾಕ್ಕೆ ಒಗ್ಗುವ ಉತ್ಪ್ರೇಕ್ಷೆಯನ್ನು ಚೆನ್ನಾಗಿಯೇ ದುಡಿಸಿಕೊಂಡಂತೆ ತೋರುತ್ತಿದೆಯಾದರೂ ಒಂದು ರೋಚಕ ಕತೆಗಂತೂ ಮೋಸವಿಲ್ಲ ಎಂಬ ಭರವಸೆಯನ್ನು ಟ್ರೈಲರ್ ಕಟ್ಟಿಕೊಡುತ್ತಿದೆ.

ಸ್ನೊಡೆನ್ ಬಗ್ಗೆ ತಿಳಿದಿದ್ದರೂ, ತಿಳಿಯದಿದ್ದರೂ ಗೂಢಚರನ ಬದುಕಿನಧ್ಯಾಯ ಯಾರಿಗೆ ತಾನೇ ಆಪ್ತವಾಗೋದಿಲ್ಲ ಹೇಳಿ? ಸ್ನೊಡೆನ್ ಬಗ್ಗೆ ಬಂದಿರುವ ಮೂರ್ನಾಲ್ಕು ಪುಸ್ತಕಗಳನ್ನು ಓದಿಕೊಂಡು, ಮಾಸ್ಕೊಕ್ಕೆ ಹಲವು ಬಾರಿ ತೆರಳಿ ಖುದ್ದು ಸ್ನೊಡೆನ್ ಜತೆ ಸಮಾಲೋಚಿಸಿ ಈ ಚಿತ್ರ ನಿರ್ದೇಶಿಸಿದ್ದಾರೆ ಆಲಿವರ್ ಸ್ಟೋನ್. ತಾನು ಬಹಳ ಅಭಿವ್ಯಕ್ತಿ ಮುಕ್ತ ರಾಷ್ಟ್ರ ಎನ್ನುವ ಅಮೆರಿಕದಲ್ಲಿ ಈ ಚಿತ್ರಕ್ಕೆ ಹೂಡಿಕೆ ಮಾಡಿಸಿಕೊಳ್ಳುವುದಕ್ಕೇ ಆಗಲಿಲ್ಲ ಎಂದು ನಿರ್ದೇಶಕ ದೂರಿರುವುದು, ಹೀಗೆ ಅಮೆರಿಕವು ಮುಚ್ಚಿಡಲು ಹೊರಟಿರುವ ಕತೆಯನ್ನು ನಾವು ಕಾಣದೇ ಹೋದರೆ ಹೇಗೆ ಎಂಬ ಕೆಟ್ಟ ಕುತೂಹಲವನ್ನೂ ಹುಟ್ಟುಹಾಕಿದೆ.

Leave a Reply