ಈ ಶನಿವಾರ ಸಂಜೆ ನೀವು ಪಾಲ್ಗೊಳ್ಳಬೇಕಾದ ಕಾರ್ಯಕ್ರಮ- ಪ. ಗೋ. ಪ್ರಪಂಚ ಪುಸ್ತಕ ಬಿಡುಗಡೆ

ಡಿಜಿಟಲ್ ಕನ್ನಡ ಟೀಮ್

ಹಗರಣಗಳು ವರದಿಯಾಗುವ ಹೊತ್ತಿನಲ್ಲೇ, ಮಾಧ್ಯಮದ ಕೆಲವರಿಗೂ ಇಷ್ಟು ಸಂದಿದೆಯಂತೆ ಎಂದು ಚರ್ಚೆಯಾಗುವ ಕಾಲಘಟ್ಟವಿದು. ಅಂಥದ್ದರಲ್ಲಿ ಪತ್ರಿಕಾ ವ್ಯವಸಾಯದ ನಿಷ್ಠುರತೆ, ಪ್ರಾಮಾಣಿಕತೆ ಹಾಗೂ ಆ ಮಾರ್ಗದಲ್ಲಿ ಸಾಗುವಾಗ ಎದುರಾದ ಸವಾಲುಗಳು ಇಂಥವೆಲ್ಲದರ ಮಾದರಿ ಹುಡುಕಿಕೊಳ್ಳುವ ಅವಶ್ಯವೂ ಇದೆ.

ಇಂಥ ಸಮಯದಲ್ಲಿ ಏಕಂ ಪ್ರಕಾಶನವು ನಮ್ಮ ನಡುವೆ ಆಗಿಹೋದ ಪತ್ರಕರ್ತ, ಧೀಮಂತಿಕೆಯ ಮಾದರಿ ಪದ್ಯಾಣ ಗೋಪಾಲಕೃಷ್ಣಭಟ್ಟರ ಬದುಕು ಪರಿಚಯಿಸುವ ‘ಪ. ಗೋ. ಪ್ರಪಂಚ’ ಎಂಬ ಪುಸ್ತಕ ಹೊರತರುತ್ತಿದೆ. ಚಿದಂಬರ ಬೈಕಂಪಾಡಿ ಬರೆದಿರುವ ಕೃತಿ ಶನಿವಾರ, ಏಪ್ರಿಲ್ 30ಕ್ಕೆ ಸಂಜೆ 5.30ಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದ ಕೃಷ್ಣರಾಜಪರಿಷನ್ಮಂದಿರ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ. ವೈದ್ಯ ಸಾಹಿತಿ ಡಾ. ಎಂ. ಬಿ. ಮರಕಿಣಿ, ಹಿರಿಯ ಪತ್ರಕರ್ತರಾದ ಕೆ. ಸತ್ಯನಾರಾಯಣ, ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ, ಕೃತಿಕಾರ ಚಿದಂಬರ ಬೈಕಂಪಾಡಿ ಉಪಸ್ಥಿತರಿರುತ್ತಾರೆ.

ಮಂಗಳೂರಿನ ಪತ್ರಿಕಾ ವೃತ್ತಿ ಜೀವನದಲ್ಲಿ ಪ.ಗೋ. ಅವರು ಗಳಿಸಿದ್ದ ವರ್ಚಸ್ಸು, ಪತ್ರಿಕಾಗೋಷ್ಠಿಗಳಲ್ಲಿ ನಿಷ್ಠುರವಾಗಿ ನೇತಾರರ ಎದುರು ಪರತಿಪ್ರಶ್ನೆಗಳ ಮಳೆಗರೆಯುತ್ತಿದ್ದ ರೀತಿ, ಇವೆಲ್ಲದರ ಜತೆಗೆ ವೈಯಕ್ತಿಕ ಬದುಕನ್ನು ಶುದ್ಧವಾಗಿ ಇಟ್ಟುಕೊಂಡಿದ್ದ, ಆಮಿಷಗಳನ್ನು ಹತ್ತಿರಕ್ಕೂ ಸುಳಿಯದಂತೆ ಬದುಕಿದ್ದ ಬಗೆ ಇವೆಲ್ಲದರ ಆಸಕ್ತಿಕರ ನೋಟ ಒದಗಿಸಲಿದೆ ಪುಸ್ತಕ.

Leave a Reply