ನಮ್ಮ ಕಲಾವಿದರಿಗೆ ಎಂತಹ ಕಾರಣಗಳಿಗೆ ಸುದ್ದಿ ಆಗಬೇಕು ಎನ್ನುವುದರ ಬಗ್ಗೆ ಅರಿವಿದ್ದರೆಷ್ಟು ಚೆಂದ!

 

sridharamurthyಎನ್.ಎಸ್.ಶ್ರೀಧರ ಮೂರ್ತಿ

ಕಳೆದ ವಾರ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಎರಡು ಘಟನೆಗಳು ಸುದ್ದಿಯಾದವು. ಒಂದು ‘ಉಪ್ಪು ಹುಳಿ ಖಾರ’ ಸಿನಿಮಾಕ್ಕೆ ಸಂಬಂಧಿಸಿದಂತೆ ನಾಯಕಿ ಮಾಲಾಶ್ರೀ ಮತ್ತು ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಡುವೆ ನಡೆದ ವಾಗ್ವಾದ. ಇನ್ನೊಂದು ‘ ಒಂದು ಕಾಲದ ನಾಯಕಿ ‘ಅನು ಪ್ರಭಾಕರ್ ಅವರ ಎರಡನೇ ಮದುವೆ. ಬೇಡಿಕೆಯ ಮಾನದಂಡವನ್ನು ಗಮನಿಸಿದರೆ ಮಾಲಾಶ್ರೀ ಕಳೆದ ಎರಡು ದಶಕಗಳಿಂದ ಪ್ರಧಾನ ಸ್ಥಾನದಲ್ಲಿರುವ ನಾಯಕಿ. ಇಂದಿಗೂ ನಾಯಕಿಯಾಗಿ ಅಭಿನಯಿಸಬಲ್ಲ ಅರ್ಹತೆ ಉಳಿಸಿಕೊಂಡ ಬೆರಳೆಣಿಕೆಯಷ್ಟು ಭಾರತದ ಕಲಾವಿದೆಯರಲ್ಲಿ ಒಬ್ಬರು. ಆದರೆ ಅನು ಪ್ರಭಾಕರ್ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರೂ ನಾಯಕಿಯಾಗಿ ಮರೆದಿದ್ದು ಬಹಳ ಕಡಿಮೆ. ಆ ಕಾಲದಲ್ಲೂ ದೊಡ್ಡ ಪ್ರಮಾಣದ ಸೂಪರ್ ಹಿಟ್ ಎನ್ನಿಸಿದ ಚಿತ್ರ ಇಲ್ಲ ಎಂದೇ ಹೇಳ ಬೇಕು.  ನಂತರ  ಪೋಷಕ ಪಾತ್ರಗಳಲ್ಲಿ ಮಿಂಚಿದ್ದೂ ಕೂಡ ಕಡಿಮೆಯೆ. ಈಗಂತೂ ಅವರ ಕೈಯಲ್ಲಿ ಯಾವ ಚಿತ್ರಗಳೂ ಇಲ್ಲ. ಆದರೆ ಇಬ್ಬರು ಘಟನೆಯನ್ನು ನಿರ್ವಹಿಸಿದ ಕ್ರಮದಲ್ಲಿ ಅಗಾಧ ವ್ಯತ್ಯಾಸವಿದೆ. ಇದರಲ್ಲಿ ಇಂದಿನ ಚಿತ್ರರಂಗ ಕಲಿಯಬೇಕಾದ ಪಾಠ ಕೂಡ ಇದೆ. ಅದರಲ್ಲೂ ಹೃತಿಕ್ ರೋಷನ್ ಮತ್ತು ಕಂಗನಾ ರಾವತ್ ಕೆಸರೆರಚಾಡಿಕೊಳ್ಳುತ್ತಿರುವುದನ್ನು ನೋಡಿದರೆ ಇದರ ಮಹತ್ವ ಗೊತ್ತಾಗುತ್ತದೆ.
13062127_10153790544903743_7901338183138252304_n

ಸಿನಿಮಾ ಎನ್ನುವುದು ಉಳಿದ ಲಲಿತ ಕಲೆಗಳಿಗಿಂತ ಭಿನ್ನವಾದದ್ದು. ಇದೊಂದು ಟೀಂ ವರ್ಕ. ಎಲ್ಲರೂ ಇಗೂ ಮರೆತು ಕಾರ್ಯ ನಿರ್ವಹಿಸಿದರೆ ಮಾತ್ರ ಇಲ್ಲಿ ಯಶಸ್ಸು ದೊರಕುವುದು ಸಾಧ್ಯ. ಕನ್ನಡ ಚಿತ್ರರಂಗ ಎಲ್ಲಾ ರೀತಿಯಿಂದಲೂ ಶ್ರೇಷ್ಠ ಕಲಾವಿದೆ ಎಂದು ಒಪ್ಪಿಕೊಂಡ ಒಂದು ಕಾಲದಲ್ಲಿ ನಾಯಕರಿಗೆ ಸಮನಾದ ಜನಪ್ರಿಯತೆ ಪಡೆದಿದ್ದ ಮಾಲಾಶ್ರೀಯವರ ಅಭಿನಯದ ಕುರಿತು ಇಮ್ರಾನ್ ತಕರಾರು ತೆಗೆದಿದ್ದು ತಪ್ಪು ಅನ್ನುವುದರಲ್ಲಿ ಯಾರ ತಕರಾರು ಇಲ್ಲ.  ಆದರೆ ಈ ಖಾಸಗಿ ವಿಚಾರವನ್ನು ಸಾರ್ವಜನಿಕಗೊಳಿಸಿದ್ದರಲ್ಲಿ ಯಾವ ಅರ್ಥವೂ ಇರಲಿಲ್ಲ. ವಿವರಗಳು ಚಿತ್ರರಂಗದ ಕುರಿತು ಸಾರ್ವಜನಿಕರಲ್ಲಿ ಇನ್ನಷ್ಟು ರೇಜಿಗೆ ಹುಟ್ಟಿಸಿತು ಅಷ್ಟೇ. ಈಗ ರಾಜಿಯ ಮಾತು ಬಂದಿದ್ದರೂ ಆಗಬಾರದಿದ್ದ ಹಾನಿ ಆಗಿ ಹೋಗಿದೆ. ಹಿಂದೆ ‘ನೀರು ದೋಸೆ’ ಚಿತ್ರದ ವಿಚಾರದಲ್ಲಿಯೂ ರಮ್ಯ ಇಂತಹದೇ ರಂಪಾಟಗಳನ್ನು ಮಾಡಿಕೊಂಡಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಕಲಾವಿದರು ಇತ್ತೀಚೆಗೆ ಇಂತಹ ತಪ್ಪು ಕಾರಣಗಳಿಂದಲೇ ಸುದ್ದಿಯಲ್ಲಿದ್ದಾರೆ. ಯಾವುದು ಖಾಸಗಿ ಯಾವುದು ಸಾರ್ವಜನಿಕ ಎನ್ನುವ ವಿವೇಚನೆಯನ್ನೇ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ.

ಆದರೆ ಅನು ಪ್ರಭಾಕರ್ ತಮ್ಮ ವೈಯಕ್ತಿಕ ವಿಚಾರವನ್ನು ಖಾಸಗಿಯಾಗಿಯೇ ಉಳಿಸಿಕೊಂಡ ರೀತಿ ಮಾದರಿ ಎನ್ನಿಸುವಂತಿದೆ. ಜಯಂತಿಯವರ ಮಗ ಕೃಷ್ಣಕುಮಾರ್ ಅವರ ಜೊತೆಗಿನ ಮೊದಲ ವಿವಾಹ ಸಂಬಂಧಕ್ಕೆ ವಿಚ್ಚೇದನ ಬೇಡಿದ್ದು, ನ್ಯಾಯಾಂಗದ ಮೆಟ್ಟಿಲನ್ನು ತುಳಿಯುವವರೆಗೂ ತೀರಾ ಹತ್ತಿರದವರಿಗೂ ಕೂಡ ಗೊತ್ತಿರಲಿಲ್ಲ. ಗೊತ್ತಾದ ನಂತರ ಕೂಡ ‘ಇದು ತೀರಾ ವೈಯಕ್ತಿಕ ವಿಷಯ ಇದರ ಕುರಿತು ಕೇಳಬೇಡಿ’ ಎಂದು ಚುಟುಕಾಗಿ ಉತ್ತರಿಸಿದರೇ ಹೊರತು ಅದನ್ನು ರಾಡಿ ಮಾಡಿಕೊಳ್ಳಲು ಹೋಗಲಿಲ್ಲ. ಕೃಷ್ಣಕುಮಾರ್ ಕೂಡ ಘನತೆಯಿಂದಲೇ ವರ್ತಿಸಿದರು ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ಈ ಕುರಿತು  ಗುಸು ಗುಸು ಹಬ್ಬಿದಾಗ ಏನನ್ನೂ ಬರೆಯದಂತೆ ನ್ಯಾಯಾಂಗದಿಂದಲೇ  ಅನುಪ್ರಭಾಕರ್ ಆದೇಶ ತಂದು ಆಗಬಹುದಾದ ಹಾನಿಯನ್ನು ತಡೆದರು. ನಂತರ ಕೂಡ ಅವರ ಹೆಸರು ಬೇರೆಯವರ ಜೊತೆ ಥಳಕು ಹಾಕಿಕೊಂಡು ಗಾಸಿಪ್ ಆದಾಗಲೂ ವಿವೇಚನೆ ತೋರಿಸಿದರು. ಈಗ ರಘು ಮುಖರ್ಜಿಯವರ ಜೊತೆಗೆ ಅಚ್ಚರಿ ಎನ್ನಿಸುವಂತೆ ಎರಡನೇ ಮದುವೆಯಾಗಿದ್ದಾರೆ. ಈ ಮದುವೆ ಗೆಲ್ಲುತ್ತದೆಯೋ ಇಲ್ಲವೋ ಎನ್ನುವುದು ಬೇರೆ ವಿಚಾರ. ಆದರೆ ಅದು ಸಾರ್ವತ್ರಿಕ ಚರ್ಚೆಯಾಗದಂತೆ ನೋಡಿಕೊಂಡಿದ್ದಾರೆ ಎನ್ನುವುದು ಮುಖ್ಯ.

malashri-7

ಹುಣಸೂರು ಕೃಷ್ಣಮೂರ್ತಿಗಳು ಮಹತ್ವಾಕಾಂಕ್ಷೆಯಿಂದ ಕನ್ನಡ ಕಲಿ ಎಚ್ಚಮ ನಾಯಕನ ಕುರಿತು ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದರು. ಆ ಕಾಲದ ಬಹು ಬೇಡಿಕೆಯ ನಾಯಕನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಈ ಕುರಿತು ಚರ್ಚೆ ಮುಗಿಸಿ ಹೋಟಲ್‍ ರೂಂನಿಂದ ಹೊರಗೆ ಬರುತ್ತಿರುವಾಗ ಆ ನಾಯಕ ಇರಬಾರದ ಸ್ಥಿತಿಯಲ್ಲಿ ಇರುವುದು ಕಾಣಿಸಿತು. ಕೂಡಲೇ ಆ ಪಾತ್ರದಿಂದ ನಾಯಕನನ್ನು ತೆಗೆದು ತಾವೇ ಆ ಪಾತ್ರವನ್ನು ನಿರ್ವಹಿಸಿದರು. ಹೀಗೆ ಮೂಡಿ ಬಂದ ಸಿನಿಮಾ ‘ವೀರ ಸಂಕಲ್ಪ’. ಅದು ವ್ಯವಹಾರಿಕವಾಗಿ ದೊಡ್ಡ ರಿಸ್ಕ್ ಆಗಿತ್ತು.  ಆದರೆ ನೈತಿಕವಾಗಿ ಸರಿಯಾಗಿತ್ತು. ಅವರೇ ಹೇಳಿಕೊಂಡಂತೆ ‘ದೇಶ ಭಕ್ತ ಎಚ್ಚಮ ನಾಯಕನ ಪಾತ್ರ ನಿರ್ವಹಿಸಿದ ನಟ ಸಾರ್ವಜನಿಕ ಜೀವನದಲ್ಲಿ ಆದರ್ಶ ನಡವಳಿಕೆ ಇಟ್ಟುಕೊಳ್ಳದಿದ್ದರೆ ಜನ ಏನನ್ನು ಕಲಿಯುತ್ತಾರೆ’ ಎಂಬ ಈ ಮಾತಿನಲ್ಲಿ ಇಂದಿನ ಚಿತ್ರ ನಟ ನಟಿಯರು ಕಲಿಯಬೇಕಾದ ಪಾಠವಿದೆ. ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಅವರು ಇಂದಿಗೂ ಆದರ್ಶವಾಗಿ ಕಾಣಿಸುತ್ತಾರೆ. ಅವರು ಮನೆಯಲ್ಲಿ ಚಾಮರಾಜನಗರದ ಭಾಗದ ಕನ್ನಡದಲ್ಲಿ ಮಾತನಾಡುತ್ತಿದ್ದರು ಎನ್ನುವುದು ಹತ್ತಿರದಿಂದ ಬಲ್ಲವರಿಗೆ ಗೊತ್ತಿರುವ ಸಂಗತಿ. ಆದರೆ ಸಾರ್ವಜನಿಕವಾಗಿ ಅವರು ಎಂದಿಗೂ ಆ ಭಾಷೆ ಬಳಸದೆ ಕರ್ನಾಟಕದ ಎಲ್ಲಾ ಭಾಗಕ್ಕೂ ಸ್ವೀಕಾರ್ಹವಾಗಬಲ್ಲ ಕನ್ನಡವನ್ನು ಬಳಸಿದರು. ವಿವಾದದ ಹೇಳಿಕೆಗಳನ್ನು ನೀಡದೆ ಅಂತರವನ್ನು ಕಾಪಾಡಿಕೊಂಡರು. ವಿನಯವನ್ನು ಸಾರ್ವತ್ರಿಕ ಮೌಲ್ಯವನ್ನಾಗಿಸಿದರು. ಹೀಗಾಗಿಯೇ ಅವರು ಕಲಾವಿದನ ಮಿತಿಯನ್ನು ದಾಟಿ ಸಾಂಸ್ಕೃತಿಕ ರೂಪಕ ಎನ್ನಿಸಿಕೊಂಡರು.

ತೆರೆಯ ಮೇಲೆ ಮಿಂಚುವವರನ್ನು ಲಕ್ಷಾಂತರ ಅಭಿಮಾನಿಗಳು ಆರಾಧಿಸುತ್ತಾರೆ. ಅವರ ವ್ಯಕ್ತಿತ್ವವನ್ನು ಅನುಸರಿಸುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಮಾದರಿಯಾಗುವಂತೆ ವರ್ತಿಸುವುದು ಬಹಳ ಮುಖ್ಯ. ಈ  ಮಾತನ್ನು ಬರೆಯುತ್ತಿರುವಾಗಲೇ ಯಶ್ ಉತ್ತರ ಕರ್ನಾಟಕದ ಕುಡಿಯುವ ನೀರಿನ ದಾಹ ನೀಗಿಸಲು ಕೈಜೋಡಿಸಿರುವ ಸುದ್ದಿ ಬಂದಿದೆ. ನಮ್ಮ ಕಲಾವಿದರು ಇಂತಹ ಕಾರಣಗಳಿಂದ ಸುದ್ದಿಯಲ್ಲಿದ್ದರೆ ಎಷ್ಟು ಚೆನ್ನ ಅಲ್ಲವೆ?

1 COMMENT

Leave a Reply