ಮುಗಿದವು ಸಿದ್ದರಾಮಯ್ಯನವರ ನೆಮ್ಮದಿ ದಿನಗಳು, ಕಾದಿವೆ ಮಾಡಿದ್ದನ್ನು ಉಣ್ಣಬೇಕಾದ ಕ್ಷಣಗಳು!

ಡಿಜಿಟಲ್ ಕನ್ನಡ ವಿಶೇಷ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಒಳಗೆ ಮತ್ತು ಹೊರಗೆ ಹರಳುಗಟ್ಟಿರುವ ಅಸಮಾಧಾನ ಇದೀಗ ಅವರ ಪದಚ್ಯುತಿಯತ್ತ ಹೊರಳುತ್ತಿದೆ. ಸ್ವಜನ ಪಕ್ಷಪಾತಿ, ಸರ್ವಾಧಿಕಾರಿ ಧೋರಣೆಯ ಸಿದ್ದರಾಮಯ್ಯ ಅವರನ್ನು ಕಿತ್ತೊಗೆಯಲು ಪಕ್ಷದ ಒಳ-ಹೊರಗಿನ ಹಳೇ ಶತ್ರುಗಳೆಲ್ಲ ಒಂದಾಗಿ ತಂತ್ರ ಹೆಣೆಯುತ್ತಿರುವುದು ಹೊಸ ಬೆಳವಣಿಗೆ.

ಜನತಾ ಪರಿವಾರದಿಂದ ತಮ್ಮೊಡನೆ ವಲಸೆ ಬಂದವರಿಗೆ ಆದ್ಯತೆ ನೀಡಿದ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಮುನಿಸಿಕೊಂಡಿದ್ದರು. ಹಿರಿಯ ತಲೆಗಳನ್ನು ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಈ ಮುನಿಸು ಮುಮ್ಮಡಿಯಾಗಿತ್ತು. ಇದೀಗ ಸಿದ್ದರಾಮಯ್ಯ ಬಿಟ್ಟು ಬಂದ ಜನತಾ ಪರಿವಾರದ ಹಿರಿಯ ತಲೆಗಳು ಹಾಗೂ ಕಾಂಗ್ರೆಸ್ ನ ಹಿರಿಯ ತಲೆಗಳು ಒಟ್ಟಿಗೆ ರಣತಂತ್ರ ರೂಪಿಸುತ್ತಿರುವುದು ಈ ಮುನಿಸು ನೂರ್ಮಡಿ ಆಗಿರುವುದರ ಸಂಕೇತ.

2004 ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ತಾವು ಮತ್ತೆ ಸಿಎಂ ಆಗುವುದನ್ನು ತಪ್ಪಿಸಿದರು ಎನ್ನುವ ಕಾರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮುನಿದಿದ್ದ ಎಸ್.ಎಂ. ಕೃಷ್ಣ ಆಗ ಗೌಡರಿಗೆ ಪಾಠ ಕಲಿಸಲು ಬಳಸಿದ್ದು ಇದೇ ಸಿದ್ದರಾಮಯ್ಯ ಎನ್ನುವ ದಾಳವನ್ನು. ಜನತಾ ದಳದಿಂದ ಕಾಂಗ್ರೆಸ್ಸಿಗೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವಲ್ಲಿ ಕೃಷ್ಣ ಅವರ ಕೊಡುಗೆ ಕಡಿಮೇ ಏನಿಲ್ಲ. ಆದರೆ ಮುಖ್ಯಮಂತ್ರಿ ಆದ ನಂತರ ಅದೆಲ್ಲವನ್ನೂ ಮರೆತು, ಕೊನೆಗೆ ಹಿರಿಯ ಕಾಂಗ್ರೆಸ್ಸಿಗ ಎನ್ನುವ ಕಾರಣಕ್ಕಾದರೂ ಕನಿಷ್ಟ ಗೌರವ ಕೊಡದಿರುವ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿರುವ ಕೃಷ್ಣ ಅವರು ಹೊಸ ಶತ್ರುವಿಗೆ ಪಾಠ ಕಲಿಸಲು ಹಳೇ ಶತ್ರು ದೇವೇಗೌಡರ ಜತೆ ಕೈಜೋಡಿಸಿರುವುದು ರಾಜಕೀಯ ಗಾಳಿಗೂ ದಿಕ್ಕುದೆಸೆ ಇಲ್ಲ ಎಂಬುದರ ದ್ಯೋತಕ.

ಅಹಿಂದ ಪ್ರತಿಪಾದನೆ ನೆಪದಲ್ಲಿ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸಮುದಾಯ ಸೇರಿದಂತೆ ಮೇಲ್ವರ್ಗದವರನ್ನು ತುಚ್ಚೀಕರಿಸಿರುವ ಸಿದ್ದರಾಮಯ್ಯ ಕಾರ್ಯವೈಖರಿಯನ್ನು ಆಗಾಗ್ಗೆ ಕುಟುಕುತ್ತಲೇ ಬಂದಿರುವ ಕೃಷ್ಣ ಸಮಾನ ಮನಸ್ಕ ಹಿರಿಯ ಕಾಂಗ್ರೆಸ್ಸಿಗರ ಜತೆ ಇದೀಗ ಜನತಾ ಪರಿವಾರದ ದೇವೇಗೌಡರ ಹಸ್ತಲಾಘವ ಆಗುತ್ತಿದ್ದಂತೆ ದಿಲ್ಲಿ ನಾಯಕರ ತಲೆದುಂಬುವ ಕಾರ್ಯಾಚರಣೆಯನ್ನು ಮತ್ತಷ್ಟು ತ್ವರಿತಗೊಳಿಸಿದ್ದಾರೆ. ರೈತರ ಸಂಕಷ್ಟ ಸ್ಪಂದನೆಯಲ್ಲಿ ಸಿದ್ದರಾಮಯ್ಯನವರಿಗೆ ಮೇಲ್ಪಂಕ್ತಿ ಆಗಿರುವ ಕೃಷ್ಣ ಈ ರಾಜ್ಯದ ಚುಕ್ಕಾಣಿ ಹಿಡಿಯಬೇಕು ಎನ್ನುವ ಗೌಡರ ಇರಾದೆಯಲ್ಲಿ ಅಡಗಿರುವುದು ಕೃಷ್ಣಾಧಿಕಾರ ಅಲಂಕಾರಕ್ಕಿಂತ ಸಿದ್ದರಾಮಯ್ಯ ಅಧಿಕಾರ ಅಸ್ಥಿರ ವಿಚಾರಾದ್ಯತೆಯೇ. ಈವರೆಗೂ ಸಿದ್ದರಾಮಯ್ಯ ಸ್ಥಾನಪಲ್ಲಟಕ್ಕಷ್ಟೇ ಸೀಮಿತವಾಗಿದ್ದ ಬಯಕೆಯನ್ನು ಕೃಷ್ಣ ಮತ್ತೊಂದು ಸುತ್ತಿನ ಪದಗ್ರಹಣಕ್ಕೂ ವಿಸ್ತರಿಸಿಕೊಳ್ಳುವಂತೆ ಪ್ರಚೋದಿಸಿರುವ ಅವರ ವಿಚಾರಲಹರಿಯಲ್ಲಿ ಇರುವುದು ಗುರಿ ತಪ್ಪಬಾರದೆಂಬ ತಂತ್ರ.

ಇನ್ನು ಸಿದ್ದರಾಮಯ್ಯ ‘ಪದಸಂಚಲನ’ದತ್ತ ಹಿರಿಯ ಕಾಂಗ್ರೆಸ್ಸಿಗರ ‘ಪಥಸಂಚಲನ’ ಕೂಡ ಗಹನ ಪಡೆದಿದೆ. ಅಲ್ಲಲ್ಲಿ ಚದುರಿದ ಮಳೆಯಂತೆ ಮುಖ್ಯಮಂತ್ರಿ ಅವರನ್ನು ಆಗಾಗ್ಗೆ ಪ್ರತ್ಯೇಕವಾಗಿ ಜರಿಯುತ್ತಿದ್ದವರೆಲ್ಲ ಈಗ ಒಗ್ಗೂಡಿ, ಒಂದೇ ವೇದಿಕೆಯಲ್ಲೇ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಮಲ್ಲಿಕಾರ್ಜುವ ಖರ್ಗೆ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್ ಮತ್ತಿತರ ಸಂಸದರು ಮೊಯ್ಲಿ ಅವರ ದಿಲ್ಲಿನಿವಾಸದಲ್ಲಿ ನೆರೆದಿದ್ದ ಸಭೆಯಲ್ಲಿ ಹೊರಹೊಮ್ಮಿರುವುದು ಕೃತಘ್ನ, ಸರ್ವಾಧಿಕಾರಿ, ಆಹಂಕಾರಿ ಮುಖ್ಯಮಂತ್ರಿ ಬದಲಾಗಬೇಕು ಎನ್ನುವ ಸಂದೇಶ. ಮೂರು ವರ್ಷಗಳ ಆಳ್ವಿಕೆಯಲ್ಲಿ ಕಾಂಗ್ರೆಸ್ ವರ್ಚಸ್ಸು ಆಪೋಶನ ತೆಗೆದುಕೊಂಡಿರುವ ಸಿದ್ದರಾಮಯ್ಯ ಇನ್ನುಳಿದ ಎರಡು ವರ್ಷವೂ ಆಳಿದರೆ ಪಕ್ಷ ಅಳಿಯುತ್ತದೆ, ಪಕ್ಷ ಉಳಿಯಲು ಸಿದ್ದರಾಮಯ್ಯ ಅಧಿಕಾರದಿಂದ ದೂರ ಉಳಿಯಬೇಕು ಎನ್ನುವ ಸಂದೇಶ.

ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಕರೆತಂದ ಮಾಜಿ ಸಂಸದ ವಿಶ್ವನಾಥ್, ಎಚ್.ಡಿ. ರೇವಣ್ಣ ಅವರಂಥವರಿಗಾಗಲಿ, ಕಷ್ಟದ ದಿನಗಳಲ್ಲಿ ಸಿದ್ದರಾಮಯ್ಯ ತಲೆ ಕಾಯ್ದ ಬಿ.ಕೆ. ಹರಿಪ್ರಸಾದ್ ಅವರಂಥವರಿಗಾಗಲಿ, ಅವರು ಪ್ರತಿನಿಧಿಸುತ್ತಿರುವ ಶಾಸಕಾಂಗ ಪಕ್ಷಕ್ಕಾಗಲಿ, ಸಚಿವ ಸಂಪುಟಕ್ಕಾಗಲಿ ಅವರ ಮೇಲೆ ವಿಶ್ವಾಸವಿಲ್ಲ. ಜನತಾ ಪರಿವಾರದಿಂದ ಅವರೊಟ್ಟಿಗೆ ಬಂದು ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿರುವ ಕೆಲವರನ್ನು ಬಿಟ್ಟರೆ ಉಳಿದವರಿಗೆಲ್ಲ ಸಿದ್ದರಾಮಯ್ಯ ವ್ಯಕ್ತಿತ್ವವಾಗಲಿ, ಕಾರ್ಯವೈಖರಿಯಾಗಲಿ ಸಂಪೂರ್ಣ ಅಪಥ್ಯ. ಮನಸ್ಸಿನಲ್ಲಿ ದೂರುತ್ತಿದ್ದವರು ಬಹಿರಂಗವಾಗಿ ಚುಚ್ಚುತ್ತಿದ್ದಾರೆ, ಬಹಿರಂಗವಾಗಿ ಮಾತಾಡುತ್ತಿದ್ದವರೆಲ್ಲ ಒಗ್ಗಟ್ಟಾಗಿ ಸಿಡಿಯುತ್ತಿದ್ದಾರೆ. ಕಾಲ ಮನಸಿನ ಮಾತುಗಳನ್ನು ಬದಲಿಸಿಬಿಟ್ಟಿದೆ. ಸಿದ್ದರಾಮಯ್ಯ ಕುರ್ಚಿಯತ್ತ ಹರಿಯಹೊರಟಿದೆ. ದಲಿತ ಮುಖ್ಯಮಂತ್ರಿ, ಪರ್ಯಾಯ ನಾಯಕತ್ವ ಮಂತ್ರಗಳನ್ನು ತೇಲಿಸುತ್ತಾ.

ಇಲ್ಲಿ ಬರಿಯ ಸಿದ್ದರಾಮಯ್ಯ ಧೋರಣೆ, ವ್ಯಕ್ತಿತ್ವ, ವರ್ತನೆ ಮಾತ್ರ ಹಿರಿತಲೆಗಳ ಪರಾಮರ್ಶೆ ವಸ್ತುವಾಗಿಲ್ಲ. ಭರವಸೆಗಳ ಒರತೆ, ಅನುಷ್ಠಾನದ ಕೊರತೆ, ಕುಂಠಿತಗೊಂಡ ಪ್ರಗತಿ ಕಾರ್ಯ, ರಾಜಕೀಯ ಕಾರಣಕ್ಕೆ ಕೆಲವು ಕಡೆಗಷ್ಟೇ ಸೀಮಿತಗೊಂಡ ಯೋಜನೆಗಳು, ಬರ ನಿರ್ವಹಣೆಯಲ್ಲಿ ವೈಫಲ್ಯ, ಅದನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ರಾಜಕೀಯದ ಮೊರೆ, ರೈತರ ಆತ್ಮಹತ್ಯೆ, ಕುಡಿಯುವ ನೀರಿಗೂ ಹಾಹಾಕಾರ, ವಿದ್ಯುತ್ ಅಭಾವ ಅವರ ಸಿಟ್ಟಿಗೆ ಕಾರಣವಾಗಿದ್ದರೆ, ಅಭಿವೃದ್ಧಿ ಕಾರ್ಯಗಳ ಕುರಿತು ಸಂಸದರ ಸಭೆ ಕರೆಯುವಷ್ಟು ಸೌಜನ್ಯ ಇಲ್ಲದಿರುವುದು ನಖಶಿಖಾಂತ ಉರಿಸಿದೆ. ಇದರಲ್ಲೆಲ್ಲ ಅವರು ಕಂಡಿರುವುದು ಸಿದ್ದರಾಮಯ್ಯನವರ ಮತ್ತದೇ ಉಡಾಫೆ ಮನೋಭಾವ.

ಮೂರು ವರ್ಷದ ಅಧಿಕಾರ ಪೂರೈಸುತ್ತಿರುವ ಸಿದ್ದರಾಮಯ್ಯನವರು ಹಿಂದಿನ ಅವಧಿಯಲ್ಲಿನಂತೆ ಪಕ್ಷದ ಮುಖಂಡರು ಮೌನದ ಮೊರೆ ಹೋಗುತ್ತಾರೆ ಎಂದು ಎಣಿಸಿದ್ದು ಸುಳ್ಳಾಗಿದೆ. ತಾಳ್ಮೆಯ ಅವಧಿ ಮುಗಿದಿದ್ದು, ಒಬ್ಬೊಬ್ಬರಾಗಿ, ಒಗ್ಗಟ್ಟೊಗ್ಗಟ್ಟಾಗಿ ಅವರೆಲ್ಲ ಟೀಕಾಸ್ತ್ರ ಹಿಡಿದು ಬಯಲಿಗೆ ಬಂದಿದ್ದಾರೆ. ದುಬಾರಿ ವಾಚು ಉಡುಗೊರೆ, ಅರ್ಕಾವತಿ ಡಿನೋಟಿಫಿಕೇಷನ್, ಮಗನ ಪಾಲುದಾರಿಕೆ ಸಂಸ್ಥೆಗೆ ಲ್ಯಾಬ್ ಟೆಂಡರ್, ಕೋಟ್ಯಂತರ ಬೆಲೆಯ ಭೂಮಂಜೂರು, ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಯಂತ್ರಣ ದಳ (ಎಸಿಬಿ) ರಚನೆ, ಅದಕ್ಕಾಗಿ ಹೈಕೋರ್ಟ್ ನಿಂದ ತರಾಟೆ ಬೆನ್ನಲ್ಲೇ ಶಾಸಕರು, ಸಚಿವರು, ನಾಯಕರು ಎನ್ನದೆ ಪಕ್ಷದ ಎಲ್ಲೆಡೆಯಿಂದ ಟೀಕೆ ಕಾಂಗ್ರೆಸ್ ವರ್ಚಸ್ಸು ಹರಾಜು ಹಾಕುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಬಿದ್ದಿರುವ ರಾಜಕೀಯ ಬೀಳುಗಳಿಂದ ತತ್ತರಿಸುತ್ತಿರುವ ಪಕ್ಷದ ಮುಖಂಡರು ಮತ್ತಷ್ಟು ಅನಾಹುತ ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಕರ್ನಾಟಕ ವಿಷಯದಲ್ಲಿ ಸುಮ್ಮನಿದ್ದುದು ಸಿದ್ದರಾಮಯ್ಯ ಅವರ ಡೋಂಟ್ ಕೇರ್ ವ್ಯಕ್ತಿತ್ವವನ್ನು ಮತ್ತಷ್ಟು ಪ್ರೇರೇಪಿಸಿತ್ತು. ಇದರಿಂದ ಪಕ್ಷಕ್ಕೆ ಇನ್ನಷ್ಟು ಹೊಡೆತ ಬಿದ್ದಿದ್ದು, ಹೈಕಮಾಂಡ್ ಕೂಡ ಸಮಾಧಾನ ಕಳೆದುಕೊಂಡಿದೆ. ಪ್ರತಿಪಕ್ಷಗಳ ಟೀಕೆಗಳನ್ನು ರಾಜಕೀಯ ಎನ್ನುವ ಕಾರಣಕ್ಕೆ ಅಲಕ್ಷ್ಯ ಮಾಡಬಹುದೇನೋ, ಆದರೆ ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಪಕ್ಷದೊಳಗೇ ಭುಗಿಲೇಳುತ್ತಿರುವ ಅಸಮಾಧಾನವನ್ನು ಸಹಿಸಿಕೊಳ್ಳಲು ಅದಕ್ಕೂ ಆಗುತ್ತಿಲ್ಲ. ಸಮರ್ಥನೆಯ ಕಾಲಮಿತಿ ಮುಗಿದಿರುವುದರಿಂದ ಹೈಕಮಾಂಡ್ ಯೋಚನಾ ಕ್ರಮ ಬದಲಿಸಿಕೊಳ್ಳುವ ಅನಿವಾರ್ಯತೆಯೂ ಸೃಷ್ಟಿಯಾಗಿದ್ದು, ಇವೆಲ್ಲವೂ ಸಿದ್ದರಾಮಯ್ಯನವರ ನೆಮ್ಮದಿ ಕೆಡಿಸಲಿವೆ ಎಂಬುದು ಕಹಿಸತ್ಯ!

2 COMMENTS

  1. ಸರ್, ಪರಿಪಕ್ವವಾದ ವಿಶ್ಲೇಷಣೆ. ಸದ್ಯ ಸಿದ್ದರಾಮಯ್ಯ ಅವರಿಗೆ ಮೊಯ್ಲಿಯೇ ಗಾಡ್ ಫಾದರ್ ಅಂತ ಕೇಳಲ್ಪಟ್ಟೆ.

Leave a Reply