400 ಕಿಲೋ ಮೀಟರ್ ಎತ್ತರದಿಂದ ಶೂಟ್ ಮಾಡಿದ 3D ಫಿಲಂ ‘ಎ ಬ್ಯೂಟಿಫುಲ್ ಪ್ಲಾನೆಟ್’ ನಾವು ಬಚ್ಚಿಟ್ಟ ಭಯ, ವಿಸ್ಮಯವನ್ನು ಇದು ಬಿಚ್ಚಿಟ್ಟಿದೆ

author-ananthramuಈ ಭೂಮಿಯ ಮೇಲಿರುವ 700 ಚಿಲ್ಲರೆ ಕೋಟಿ ಜನರಲ್ಲಿ ಎಷ್ಟು ಮಂದಿ ಆಕಾಶಕ್ಕೆ ಜಿಗಿದು ಅಂತರಿಕ್ಷದಲ್ಲಿ ತೇಲಾಡುವ ಅವಕಾಶ ಗಳಿಸಿದ್ದಾರೆ? ವಿಮಾನದ ಕಿಟಕಿಯ ಮೂಲಕವೇ ಸೂರೆಗೊಂಡ ಪ್ರಕೃತಿ, ನಗರಗಳ ಚಿತ್ರಗಳನ್ನು ಎದೆತುಂಬ ತುಂಬಿಕೊಂಡು ಮೆಲುಕು ಹಾಕುವ ಅವಕಾಶ ಬಹಳಷ್ಟು ಜನಕ್ಕಿದೆ.

ಈ ದಿನ (29-04-2016) ‘ಎ ಬ್ಯೂಟಿಫುಲ್ ಪ್ಲಾನೆಟ್’ 3ಆ ಚಿತ್ರ ಅಮೆರಿಕದಲ್ಲಿ ಆಯ್ದ ಕೆಲವು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿದೆ. ಡಿಸ್ನಿ ಲ್ಯಾಂಡ್ ಸ್ಟುಡಿಯೋ ಮತ್ತು ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್‍ಮಿನಿಸ್ಟ್ರೇಷನ್ (ನಾಸಾ) ಸಂಸ್ಥೆ ಜಂಟಿಯಾಗಿ ತಯಾರಿಸಿದ ಚಿತ್ರ ಇದು. ಬರೋಬರಿ ಹನ್ನೊಂದು ತಿಂಗಳು ಭೂಮಿಯಿಂದ 400 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ಇಡೀ ಫಿಲಂ ಶೂಟ್ ಮಾಡಿದ್ದಾರೆ. ಗಗನಯಾನ ಮಾಡದಿದ್ದರೇನಂತೆ ಈ ಫಿಲಂ ನೋಡಿದರೆ ನಿಮಗೆ ಆ ಅನುಭವ ಬರುತ್ತದೆ. 400 ಕಿಲೋ ಮೀಟರ್ ಎತ್ತರದಲ್ಲಿ ಯಾವುದೇ ವ್ಯಕ್ತಿ ಹೋಗಿ ತೇಲಾಡಲು ಸಾಧ್ಯವಿಲ್ಲ. ಈ ಫಿಲಂ ಶೂಟ್ ಮಾಡಿದ್ದು ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಎಂಬ ಮಾನವ ನಿರ್ಮಿತ ಮಹಾ ಉಪಗ್ರಹದಲ್ಲಿ. ಅದು 400 ಕಿಲೋ ಮೀಟರ್ ಎತ್ತರದಲ್ಲಿ ಗಂಟೆಗೆ 22,724 ಕಿಲೋ ಮೀಟರ್ ವೇಗದಲ್ಲಿ ಗಮಿಸುತ್ತ ಪ್ರತಿ 90 ನಿಮಿಷಕ್ಕೆ ಒಮ್ಮೆ ಈಗಲೂ ಭೂಮಿಯನ್ನು ಸುತ್ತುತ್ತಿದೆ. 1998ರಲ್ಲಿ ಕಕ್ಷೆಗೆ ಬಿಟ್ಟ ಈ ಉಪಗ್ರಹ ಬರೋಬರಿ 400 ಟನ್ನು ತೂಕವಿದೆ. ಇದುವರೆಗೆ 18 ದೇಶದ 222 ಮಂದಿ ಗಗನಯಾನಿಗಳು ಈ ಅಂತರಿಕ್ಷ ನಿಲ್ದಾಣವನ್ನು ಬಳಸಿದ್ದಾರೆ. ಇದನ್ನೇ ವೇದಿಕೆಯಾಗಿ ಬಳಸಿಕೊಂಡು ಭೂಮಿ ಕುರಿತು ಫಿಲಂ ಏಕೆ ಮಾಡಬಾರದು ಎಂದು ಯೋಚಿಸಿದವಳು ಟೋನಿ ಮೈಯರ್. ಈಗಾಗಲೇ ‘ಬ್ಲೂ ಪ್ಲಾನೆಟ್’ (1990) ಸ್ಪೇಸ್ ಸ್ಟೇಷನ್ 3D(2002) ಚಿತ್ರಗಳನ್ನು ತೆಗೆದ ಅನುಭವೀ ನಿರ್ದೇಶಕಿ. ಈ ಫಿಲಂನ ನಿರ್ಮಾಪಕಿ, ನಿರ್ದೇಶಕಿ, ಎಡಿಟಿಂಗ್, ಡಯಲಾಗ್ ಎಲ್ಲವೂ ಈಕೆಯದೇ. ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಹೆಸರನ್ನು ಹ್ರಸ್ವಗೊಳಿಸಿ ಐಎಸ್‍ಎಸ್ ಎಂದು ಹೇಳುವುದುಂಟು (ಇಸ್ಲಾಮಿಕ್ ಸ್ಟೇಟ್ ಎಂದು ತಪ್ಪಾಗಿ ಓದಬೇಡಿ).

ಈ ಅಂತರಿಕ್ಷ ನಿಲ್ದಾಣದಲ್ಲಿ ‘ಕ್ಯುಪೊಲ’ ಅಂದರೆ ಗೋಪುರ ರೂಪದ ರಚನೆ ಇದೆ. ಕ್ಯಾಮೆರಾ ಇಟ್ಟ ಜಾಗ ಅದು. ಇಡೀ ಭೂಮಿಯ ವಿರಾಟ್ ರೂಪದರ್ಶನ ಇಲ್ಲಿಂದ ಸಾಧ್ಯ. ಹಾಲಿವುಡ್‍ನಿಂದ ಯಾವ ಕ್ಯಾಮೆರಾಮನ್‍ನನ್ನು ಆಕೆ ಆಯ್ಕೆ ಮಾಡಿಕೊಳ್ಳಲಿಲ್ಲ. ಬದಲು ಟೆರಿವರ್ಡ್ಸ್ ಎಂಬ ಗಗನಯಾನಿಗೆ ತನ್ನ ಪ್ರಾಜೆಕ್ಟ್ ಕುರಿತು ಹೇಳಿದಳು. ಐಮ್ಯಾಕ್ಸ್ ಕ್ಯಾಮೆರಾ ಕೊಟ್ಟು ಟ್ರೈನಿಂಗ್ ಕೊಟ್ಟಳು. ಟೆರಿವರ್ಡ್ಸ್ ಬಾಹ್ಯಾಕಾಶದಲ್ಲಿ ಯಾನ ಮಾಡುವಾಗಲೇ ಐದು ಲಕ್ಷ ಫೋಟೋಗಳನ್ನು ಹಿಂದೆ ಕ್ಲಿಕ್ಕಿಸಿದ್ದ. ಅಂತರಿಕ್ಷದಲ್ಲಿ ಝೀರೋ ಗ್ರಾವಿಟಿಯಲ್ಲಿ ಏನಾಗುತ್ತದೆಂದು ಆತನಿಗೆ ತಿಳಿದಿತ್ತು. ಭೂಮಿಯಲ್ಲೂ ಕುಣಿದು ತೇಲಾಡುವ ಭ್ರಮೆಗೀಡಾಗಬಹುದು ತಾನೆ? ಆದರೆ ಐಎಸ್‍ಎಸ್‍ನಲ್ಲಿ ತಮ್ಮ ನಿತ್ಯದ ಕೆಲಸ ಮಾಡಲು ಝೀರೋ ಗ್ರಾವಿಟಿಯಲ್ಲಿ ತೇಲಾಡಲೇಬೇಕು. ಐಎಸ್‍ಎಸ್‍ನಿಂದ ಏನೇನು ಫೋಟೋ ತೆಗೆಯಬೇಕೆಂದು ಕೂಡ ಮೊದಲೇ ನಿರ್ಧಾರವಾಗಿತ್ತು. ಆದರೆ ಗಗನಯಾನಿಗಳು ಅಲ್ಲಿ ಮಾಡುವ ಪ್ರಯೋಗಗಳು, ತೇಲುವ ಭಂಗಿ, ನಿತ್ಯ ಮಾಡುವ ಕೆಲಸಗಳು-ಇವು ಯಾವುದಕ್ಕೂ ಸ್ಕ್ರಿಪ್ಟ್ ಬೇಡವಾಗಿತ್ತು. ಎಲ್ಲಕ್ಕಿಂತಲೂ ದೊಡ್ಡ ಚಾಲೆಂಜ್ ಒದಗಿದ್ದು ವಿಂಡೋ ಪ್ಯಾನೆಲ್‍ನಿಂದ ಹೊರಜಗತ್ತನ್ನು ನೋಡಬೇಕಾಗಿತ್ತು. ಆ ಪ್ಯಾನೆಲ್ ಗೀರು ಗೀರಾಗಿದ್ದರಿಂದ ಫಿಲಂಗೆ ತೊಂದರೆಯಾದೀತೆಂದು ನಾಸಾ ಸಂಸ್ಥೆಯನ್ನು ಒಪ್ಪಿಸಿ, ಈ ಧೀರೆ ಕಿಟಕಿಗೆ ಹೊಸ ಪ್ಯಾನೆಲ್ ಅಳವಡಿಸಿದಳು. ಅಪೊಲೋ ಚಂದ್ರಯಾನ ಮಾಡುವಾಗ ಭೂಮಿ ನೀಲಿಯಾಗಿ ಕಾಣುತ್ತಿತ್ತು. ಇಲ್ಲಿ ಮಾಡಿದ ರೇಜಿಗೆಗಳು ಏನೂ ಕಾಣುತ್ತಿರಲಿಲ್ಲ. ಇಡೀ ಭೂಮಿಯೇ ಒಂದು ಗಗನನೌಕೆ ಎಂದು ಅಪೊಲೋ ಯಾನಿಗಳೇ ಭೂದೃಶ್ಯವನ್ನು ನೋಡಿ ಕೊಂಡಾಡಿದ್ದರು. ಆದರೆ ಐಎಸ್‍ಎಸ್‍ನಲ್ಲಿ ಈ ಚಿತ್ರಕ್ಕಾಗಿ ತೆಗೆದ ದೃಶ್ಯಗಳು ಬೇರೆಯನ್ನೇ ಹೇಳುತ್ತಿವೆ. ‘ನಾಳಿನ ಮಕ್ಕಳು ಭೂಮಿಗೆ ಏನಾಗುತ್ತಿದೆ ಎಂದು ತಿಳಿಯಬೇಡವ? ರಕ್ಷಿಸಬೇಡವೆ? ಈ ಸುಂದರ ಭೂಮಿಯನ್ನು ಹಾಳುಮಾಡುತ್ತಿದ್ದೇವಲ್ಲ ಎಂಬ ಸಂಕಟ ನಾಳೆ ಬರಬಾರದಲ್ಲ? ಅದಕ್ಕಾಗಿಯೇ ಭೂಮಿಯ ವಿಸ್ಮಯಕಾರಿ ದೃಶ್ಯಗಳ ಜೊತೆಗೆ ವಾಸ್ತವತೆಯನ್ನೂ ತೋರಿಸುವ ಉದ್ದೇಶ ‘ಎ ಬ್ಯೂಟಿಫುಲ್ ಪ್ಲಾನೆಟ್’ ಚಿತ್ರಕ್ಕಿದೆ’ ಎನ್ನುವುದೇ ಚಿತ್ರದ ಸಂದೇಶ.

ಸುಮ್ಮನೆ ಐಎಸ್‍ಎಸ್‍ನ ಕ್ಯುಪೊಲದಲ್ಲಿ ಕ್ಯಾಮೆರಾ ಚಾಲೂ ಮಾಡಿಟ್ಟರೂ ಸಾಕು, 90 ನಿಮಿಷದಲ್ಲಿ ಇಡೀ ಭೂಮಿಯ ಚಿತ್ರ ಕ್ಯಾಮೆರಾಕ್ಕೆ ಲಭ್ಯ. ಪ್ರಥಮ ಬಾರಿಗೆ ಡಿಜಿಟಲ್ ಕ್ಯಾಮೆರಾ ಬಳಸಿ ಆಕಾಶದಿಂದ 3D ಫಿಲಂ ರೂಪಿಸಿರುವುದು ಒಂದು ಹೆಗ್ಗಳಿಕೆ. ಇದಕ್ಕಾಗಿ ಮೂರು ತಂಡಗಳಲ್ಲಿ ಐಎಸ್‍ಎಸ್‍ಗೆ ಬಂದುಹೋಗುವ ಗಗನಯಾನಿಗಳ ಅನುಭವವನ್ನು ಚಿತ್ರಿಸಿದೆ. ಇಲ್ಲಿ ಹೀರೋ ಎಂಬುವರಿಲ್ಲ, ಎಲ್ಲರೂ ಹೀರೋಗಳೇ. ಕ್ಯಾಮೆರಾವನ್ನು ವಿಕಿರಣದ ಅಪಾಯದಿಂದ ತಪ್ಪಿಸಲು ಇಡೀ ತಂಡ ಹರಸಾಹಸ ಮಾಡಬೇಕಾಯಿತು. ಆರು ಮಂದಿ ಗಗನಯಾನಿಗಳು ತಮ್ಮ ವೃತ್ತಿಯ ಎಲ್ಲ ಮುಖಗಳನ್ನೂ ಇದರಲ್ಲಿ ತೋರಿಸುತ್ತಾರೆ. ವಿಶೇಷವಾಗಿ ಐಎಸ್‍ಎಸ್ ಬಿಟ್ಟು ಮನೆಗೆ ಹಿಂತಿರುಗುವಾಗ ಗಗನಯಾನಿಗಳು ಪಡುವ ನೋವು, ಧರೆಗೆ ಮರಳಿದಾಗ ಪಡುವ ಸಂಭ್ರಮ, ಸ್ಪೇಸ್ ಸೂಟ್ ಬಿಚ್ಚುವಾಗ ಪಡುವ ಫಜೀತಿ, ಹಾರುವ ಟೀ ಕಪ್ಪನ್ನು ಹಿಡಿದು ತುಟಿಗೆ ಹಚ್ಚುವ ರೀತಿ-ಇದು ಒಂದು ಬಗೆಯಾದರೆ, ದಟ್ಟ ಹಿಮಾಚ್ಛಾದಿತ ಭೂಮಿಯ ಧ್ರುವಗಳು, ಎದೆಯನ್ನು ಪುಲಕಗೊಳಿಸುವ ಅದೇ ಹೊತ್ತಿನಲ್ಲಿ ಕ್ಯಾಲಿಫೋರ್ನಿಯಾದ ಬೆಚ್ಚಿಬೀಳುವ ಬರಪೀಡಿತ ಪ್ರದೇಶ, ಕಾಡು ನಾಶವಾದ ಫಲವನ್ನು ಕಣ್ಣಮುಂದೆ ನಿಲ್ಲಿಸುತ್ತದೆ. ಇಡೀ ಮಡಗಾಸ್ಕರ್ ಉದ್ದಕ್ಕೂ ಕಾಣುವುದು ಬರೀ ಕಂದುನೆಲ, ಹಿಂದೆ ಕಾಡಿದ್ದ ಕುರುಹು ಅದು. ದಕ್ಷಿಣ ಅಮೆರಿಕದ ಅಮೆಜಾನ್ ಮಳೆಕಾಡಿನಿಂದ ಏಳುವ ಕಾಡ್ಗಿಚ್ಚು ವೀಕ್ಷಕರ ಎದೆಯನ್ನು ಕುಗ್ಗಿಸುತ್ತದೆ. ಐಎಸ್‍ಎಸ್ ಡಿಜಿಟಲ್ ಕ್ಯಾಮೆರಾ ಸ್ಪೇನ್‍ನ ಸೆರೆಹಿಡಿಯುವಾಗ ಅಲ್ಲಿನ ಮೆಡಿಟರೇನಿಯನ್ ಸಮುದ್ರವೇ ಬೆಂಕಿ ಹೊತ್ತಿಕೊಂಡು ಉರಿದಂತೆ ನಗರಗಳ ಝಗಮಗಿಸುವ ವಿದ್ಯುತ್ ದೀಪಗಳು ಕಾಣುತ್ತವೆ. ಅದೇ ಹೊತ್ತಿನಲ್ಲಿ ಉತ್ತರಧ್ರುವದಲ್ಲಿ ಕಾಣಿಸಿದ ಧ್ರುವಪ್ರಭೆ ಅರೋರ ನಿಸರ್ಗವೇ ಹೋಳಿಯ ಹಬ್ಬದಲ್ಲಿ ಪಾಲ್ಗೊಂಡಂತೆ ಕಾಣುತ್ತದೆ.

beautiful2

ಹೌದು. ಈ ಚಿತ್ರ ಶೂಟ್ ಮಾಡುವಾಗ ಅಲ್ಲಿನ ಗಗನಯಾತ್ರಿಗಳ ನಿತ್ಯ ಕೆಲಸಕ್ಕೆ ಅಡ್ಡಿಬಾರದಂತೆ ನೋಡಿಕೊಳ್ಳಬೇಕು. ಅದೂ ಒಂದು ಸವಾಲೇ. ಏಕೆಂದರೆ 15 ರಾಷ್ಟ್ರಗಳು, ಐದು ಸ್ಪೇಸ್ ಏಜೆನ್ಸಿಗಳು ನೂರು ಬಿಲಿಯನ್ ಡಾಲರ್ ವೆಚ್ಚದಲ್ಲಿ ಐಎಸ್‍ಎಸ್ ನಿರ್ಮಾಣಮಾಡಿ, ಅವರಿಂದ ಹತ್ತಾರು ಕ್ಷೇತ್ರಗಳ ಕುರಿತು ಸಂಶೋಧನ ಮಾಹಿತಿ ಬೇಡುತ್ತವೆ. ಅಂತರಿಕ್ಷದ ಸೂಕ್ಷ್ಮ ಗುರುತ್ವದಲ್ಲಿ ದೇಹದ ಮೇಲೆ ಏನಾಗುತ್ತದೆಂದು ಅರಿಯಲು ಅಲ್ಲಿ ಅಲ್ಟ್ರಾ ಸೌಂಡ್ ಬಳಸಿ ಅಧ್ಯಯನ ಮಾಡುತ್ತಿದ್ದಾರೆ. ಸ್ನಾಯುಗಳ ಸೆಳೆತ, ಅಸ್ಥಿಪಂಜರ ದುರ್ಬಲವಾಗುತ್ತ ಹೋಗುವುದು, ನಿದ್ರಾಹೀನತೆ ಇನ್ನೂ ಇಂಥ ಎಷ್ಟೋ ವಿಚಾರಗಳನ್ನು ಕುರಿತು ಇಲ್ಲಿ ಸಂಶೋಧಿಸಬೇಕು. ಇದನ್ನು ಆಧರಿಸಿಯೇ ಮುಂದೆ ಮನುಷ್ಯ ಅನ್ಯಗ್ರಹಗಳಿಗೆ ವಲಸೆ ಹೋದರೆ ಹೇಗೆ ನಿಭಾಯಿಸುತ್ತಾನೆ ಎಂಬುದು ತಿಳಿಯಬೇಕು.

‘ಎ ಬ್ಯೂಟಿಫುಲ್ ಪ್ಲಾನೆಟ್’ ಚಿತ್ರೀಕರಿಸುವ ಹೊತ್ತಿಗೆ ಐಮ್ಯಾಕ್ಸ್ ಕ್ಯಾಮೆರ ಭೂಮಿಯನ್ನು ಏಳು ಸಾವಿರ ಬಾರಿ ಸುತ್ತಿತ್ತು. ಐಎಸ್‍ಎಸ್‍ನಲ್ಲಿ ಕುಳಿತೇ 302 ಮಿಲಿಯನ್ ಕಿಲೋ ಮೀಟರ್ ದೂರ ಪ್ರಯಾಣಮಾಡಿತ್ತು. ವೀಕ್ಷಕರಿಗೆ ಮರೆಯಲಾಗದ ದೃಶ್ಯ ಒದಗಿಸಿರುವ ಐಮ್ಯಾಕ್ಸ್ ಡಿಜಿಟಲ್ ಕ್ಯಾಮೆರ ಮತ್ತೆ ಭೂಮಿಯನ್ನು ನೋಡುವುದಿಲ್ಲ. ಐಎಸ್‍ಎಸ್‍ನ ಜಂಕ್ ಪದಾರ್ಥಗಳು ಭೂವಾತಾವರಣವನ್ನು ಮರುಪ್ರವೇಶ ಮಾಡುವಾಗ ಉರಿದುಹೋಗುತ್ತವೆ. ಈ ಕ್ಯಾಮೆರಾ ಕೂಡ.

Leave a Reply