ಇಲ್ಲಿ ಎಲ್ಲವೂ ‘ನೀಟ್’ ಅಲ್ಲ, ವಿದ್ಯಾರ್ಥಿಗಳಿಗೆ ಶುರುವಾಗಿದೆ ಆತಂಕ, ಗೊಂದಲ!

ಡಿಜಿಟಲ್ ಕನ್ನಡ ಟೀಮ್

ವೈದ್ಯಕೀಯ ಶಿಕ್ಷಣಗಳಾದ ಎಂಬಿಬಿಎಸ್, ಬಿಡಿಎಸ್ ಮತ್ತು ಪಿಜಿ ಪದವಿಗಳಿಗೆ ಎನ್ಇಇಟಿ ಅನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ. ಇದರ ಬೆನ್ನಲ್ಲೇ ಶುಕ್ರವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕೇಂದ್ರ ಸರ್ಕಾರವು, ಈ ವರ್ಷದಲ್ಲೇ ಇದರ ಅನುಷ್ಠಾನ ಕಷ್ಟವಾಗಿದ್ದು, 2016-17ರ ಶೈಕ್ಷಣಿಕ ಸಾಲಿಗೆ ಆಯಾ ರಾಜ್ಯಗಳು ಪ್ರತ್ಯೇಕ ಪರೀಕ್ಷೆ ಮಾಡುವುದಕ್ಕೆ ಅವಕಾಶ ಕೊಡಬೇಕೆಂದು ಮೇಲ್ಮನವಿ ಸಲ್ಲಿಸಿದೆ.

ಎನ್ಇಇಟಿ ಅಧಿಕೃತವಾಗುತ್ತಿದ್ದಂತೆ, ಸಿಇಟಿ ಹಾಗೂ ಕಾಮೆಡ್-ಕೆ ಪರೀಕ್ಷೆ ಬರೆಯಬೇಕೆ? ಬೇಡವೇ? ಬರೆದರೂ ಅದು ಎಷ್ಟರಮಟ್ಟಿಗೆ ಪ್ರಯೋಜನವಾಗಲಿದೆ? ಎಂಬ ಹಲವು ಪ್ರಶ್ನೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪುಂಖಾನುಪುಂಖವಾಗಿ ಪುಟಿಯುತ್ತಿವೆ.

ರಾಜ್ಯದಲ್ಲಿ ಮೇ 4 ಮತ್ತು 5ರಂದು ಸಿಇಟಿ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆ ಎಷ್ಟರ ಮಟ್ಟಿಗೆ ಊರ್ಜಿತ ಎಂಬುದು ವಿದ್ಯಾರ್ಥಿಗಳನ್ನು ಸದ್ಯ ಕಾಡುತ್ತಿರುವ ಗೊಂದಲ. ಸುಪ್ರೀಂ ಕೋರ್ಟ್ ತೀರ್ಪು 2016-17ನೇ ಸಾಲಿನಿಂದಲೇ ಅನ್ವಯವಾಗಲಿದೆ. ಹಾಗಾಗಿ ಇದೇ ಇನ್ನೊಂದು ವಾರದಲ್ಲಿ ಸಿಇಟಿ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ.

ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಿದ್ಯಾರ್ಥಿಗಳಿಂದ ಕರೆಗಳ ಮಹಾಪೂರವೇ ಹರಿದಿದೆ. ಅಲ್ಲದೆ, ಈ ಗೊಂದಲ ಬಗೆಹರಿಯುವವರೆಗೂ ಸಿಇಟಿ ಪರೀಕ್ಷೆ ಮುಂದೂಡುವಂತೆ ಮನವಿಯನ್ನು ಮಾಡಿದರು. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ತಿಳಿಯದ ಪ್ರಾಧಿಕಾರದ ಅಧಿಕಾರಿಗಳು, ‘ಪರೀಕ್ಷೆ ವೇಳಾಪಟ್ಟಿಯಂತೆ ನಡೆಯಲಿದೆ. ಯಾವುದೇ ಬದಲಾವಣೆಯಾದರೆ, ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗ ಸಿಇಟಿ ಪರೀಕ್ಷೆ ಬರೆದು ನಂತರ ಅದಕ್ಕೆ ಮಾನ್ಯತೆ ಇಲ್ಲ, ಅದನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರೆ ಏನು ಮಾಡೋದು ಎಂಬುದು ವಿದ್ಯಾರ್ಥಿಗಳಲ್ಲಿನ ತಳಮಳ. ಇಲ್ಲಿ ವಿದ್ಯಾರ್ಥಿಗಳನ್ನು ಕಾಡಿರುವ ಮತ್ತೊಂದು ಗೊಂದಲ ಎನ್ಇಇಟಿ ಪರೀಕ್ಷೆ ಹೇಗಿರುತ್ತದೆ ಎಂದು. ಈ ಪರೀಕ್ಷೆ ಸಿಬಿಎಸ್ ಸಿ ಪಠ್ಯಕ್ರಮದವರಿಗೆ ತಕ್ಕಂತೆ ಸಿದ್ಧಪಡಿಸಲಾಗಿರುತ್ತೆ ಎಂಬ ಭಯವೂ ಇದೆ. ಒಂದು ವೇಳೆ ಸಿಬಿಎಸ್ ಇ ಪಠ್ಯಕ್ರಮದಂತೆ ಪ್ರಶ್ನೆಪತ್ರಿಕೆ ಸಿದ್ಧವಾದರೆ, ರಾಜ್ಯ ಮಟ್ಟದ ಪಠ್ಯಕ್ರಮ ಓದಿದವರಿಗೆ ಕಷ್ಟವಾಗಲಿದೆ ಎಂಬುದು ವಿದ್ಯಾರ್ಥಿಗಳ ಚಿತ್ತ ಕೆಡಿಸಿದೆ.

ಇದು ಕೇವಲ ಕರ್ನಾಟಕದ ವಿದ್ಯಾರ್ಥಿಗಳ ಕಥೆಯಷ್ಟೇ ಅಲ್ಲ, ಮಹಾರಾಷ್ಟ್ರ, ತಮಿಳುನಾಡು ವಿದ್ಯಾರ್ಥಿಗಳ ಪರಿಸ್ಥಿತಿಯೂ ಇದೇ ರೀತಿ ಗೊಂದಲದ ಗೂಡಾಗಿದೆ. ಮೇ 5ರಂದು ಎಂಎಚ್ ಟಿ-ಸಿಇಟಿ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ.

ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ನಿರ್ಧಾರವು ವೈದ್ಯಕೀಯ ಶಿಕ್ಷಣದ ಪ್ರವೇಶ ನೀಡುವಾಗ ರಾಜ್ಯ ಸರ್ಕಾರದ ಅಧಿಕಾರವನ್ನು ಕಡಿಮೆ ಮಾಡಲಿದೆ. ಅಲ್ಲದೆ ಕೇಂದ್ರ ಸರ್ಕಾರ ಶೇ.100 ಅರ್ಹತೆ ಆಧಾರದ ಮೇಲೆ ನೀಡಿದರೆ, ಖಾಸಗಿ ಕಾಲೇಜುಗಳು ತಮಗೆ ಮನಬಂದಂತೆ ಶುಲ್ಕ ವಿಧಿಸುತ್ತವೆ ಎಂಬುದು ತಮಿಳುನಾಡು ಸರ್ಕಾರದ ವಾದ.

ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ನೇರವಾಗಿ ವಿದ್ಯಾರ್ಥಿಗಳ ಮೇಲೆ ಬೀರುತ್ತಿದ್ದು, ಈಗಾಗಲೇ ಹಲವು ರೀತಿಯಲ್ಲಿ ಹೈರಾಣಾಗಿರುವವರಿಗೆ ಮತ್ತಷ್ಟು ಒತ್ತಡ ಹಾಕಿದಂತಾಗಿದೆ. ಆದಷ್ಟು ಬೇಗ ಈ ಕುರಿತ ಎಲ್ಲಾ ಗೊಂದಲಗಳು ಪರಿಹಾರವಾಗಬೇಕು.

Leave a Reply