ಮುಂದಿನ ವರ್ಷ ವಾಘಾ ಗಡಿಯಲ್ಲಿ ಹಾರಲಿರುವ ತ್ರಿವರ್ಣ ಪಾಕಿಸ್ತಾನದ ಲಾಹೋರ್ ಗೂ ಕಾಣುತ್ತೆ!

ಡಿಜಿಟಲ್ ಕನ್ನಡ ಟೀಮ್

ಪಂಜಾಬ್ ನ ಗಡಿ ಪ್ರದೇಶವಾಗಿರುವ ವಾಘಾ ಬಾರ್ಡರ್ ಎಲ್ಲರಿಗೂ ಪರಿಚಿತ. ಇಲ್ಲಿ ನಡೆಯುವ ಮಿಲಿಟರಿ ಬ್ರಾಂಡಿನ ರಿಟ್ರೀಟ್ ಸಮಾರಂಭ ಪ್ರವಾಸಿಗರ ಪ್ರಮುಖ ಆಕರ್ಷಣೆಯೂ ಹೌದು. ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಗಡಿ ಭದ್ರತಾ ದಳ (ಬಿಎಸ್ಎಫ್) ಹೊಸ ಯೋಜನೆ ರೂಪಿಸಿದೆ. ಅದೇನೆಂದರೆ, ಮುಂದಿನ ವರ್ಷ ಜನವರಿ ವೇಳೆಗೆ ಈ ಪ್ರದೇಶದಲ್ಲಿ 350 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ನಿರ್ಧರಿಸಲಾಗಿದೆ.

ಪ್ರತಿನಿತ್ಯ ಇಲ್ಲಿಗೆ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಸದ್ಯ ಪ್ರವಾಸಿಗರು ರಿಟ್ರೀಟ್ ಸಮಾರಂಭ ನೋಡಲು 7 ಸಾವಿರ ಸಾಮರ್ಥ್ಯದ ಗ್ಯಾಲರಿ ಇದೆ. ಕೆಲವೊಮ್ಮೆ ಈ ಸಾಮರ್ಥ್ಯಕ್ಕೂ ಮೀರಿದ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಾಗಾಗಿ ಈ ಗ್ಯಾಲರಿಯನ್ನು 20 ಸಾವಿರ ಸಾಮರ್ಥ್ಯಕ್ಕೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿಯೇ ದೇಶದ ಅತಿ ದೊಡ್ಡ ರಾಷ್ಟ್ರಧ್ವಜ ಸ್ಥಾಪನೆಗೂ ತೀರ್ಮಾನಿಸಲಾಗಿದೆ.

ಈ ರಾಷ್ಟ್ರಧ್ವಜ ಭಾರತದ ಅಮೃತಸರದಿಂದ ಹಾಗೂ ಪಾಕಿಸ್ತಾನದ ಲಾಹೋರ್ ನಿಂದಲೂ ಕಾಣಿಸುತ್ತದೆ. ಈ ರಾಷ್ಟ್ರಧ್ವಜ ಅಳವಡಿಕೆ ನಂತರ ರಿಟ್ರೀಟ್ ಸಮಾರಂಭ ಸಂದರ್ಭದಲ್ಲಿ ಹೆಚ್ಚು ಉತ್ಸಾಹ ಕಾಣಲಿದೆ. ಯೋಧರಿಂದ ಹಿಡಿದು ಅಲ್ಲಿ ಉಪಸ್ಥಿತವಿರೊ ಪ್ರವಾಸಿಗರಲ್ಲಿ ದೇಶಪ್ರೇಮದ ರೋಮಾಂಚನ ಇಮ್ಮಡಿಯಾಗಲಿದೆ ಎಂದಿದ್ದಾರೆ ಬಿಎಸ್ಎಫ್ ಹಿರಿಯ ಅಧಿಕಾರಿ.

ಜಾರ್ಖಂಡ್ ನ ರಾಂಚಿಯಲ್ಲಿ 293 ಅಡಿಯ ರಾಷ್ಟ್ರಧ್ವಜ ದೇಶದ ಅತಿದೊಡ್ಡ ಬಾವುಟವಾಗಿತ್ತು. ಈಗ ವಾಘಾ ಗಡಿಯ ಬಾವುಟವೇ ಅತಿ ದೊಡ್ಡದೆಂಬ ಹಿರಿಮೆಗೆ ಪಾತ್ರವಾಗಲಿದೆ.

ಈ ರಾಷ್ಟ್ರಧ್ವಜ ಅತಿ ಎತ್ತರದಲ್ಲಿ ಹಾರಾಡುವುದರಿಂದ ಅತಿಯಾದ ಮಳೆ ಮತ್ತು ಗಾಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಈ ಬಾವುಟ ತಯಾರಿಸಲು ಯಾವ ವಸ್ತು ಬಳಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಅಲ್ಲದೆ ಈ ಬಾವುಟದ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಯನ್ನು ಮಾಡಲು ನಿರ್ಧರಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರು ಇನ್ನುಮುಂದೆ ಆನ್ ಲೈನ್ ಮೂಲಕ ತಮ್ಮ ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply