ಚೀನಾ ಪ್ರಾಬಲ್ಯ ಸರಿದೂಗಿಸಲು ಭಾರತ ಸಮರ್ಥ, ಇದು ಅಮೆರಿಕ ಸಂಸತ್ತಿನಲ್ಲಿ ಹರಿದಾಡುತ್ತಿರುವ ಸದ್ಯದ ಮಾತು!

ಡಿಜಿಟಲ್ ಕನ್ನಡ ಟೀಮ್

ಗುರುವಾರವಷ್ಟೇ ಅಮೆರಿಕದ ಸಂಸದರು ಪಾಕಿಸ್ತಾನಕ್ಕೆ ತಮ್ಮ ದೇಶ ಯುದ್ಧ ವಿಮಾನ ಕೊಟ್ಟಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಣ್ವಸ್ತ್ರ ಅಸ್ಥಿರ ಪಾಕಿಸ್ತಾನವನ್ನು ಸರಿಮಾಡುವುದಕ್ಕೆ ಭಾರತದ ಸಹಾಯ ಬೇಕಾಗುತ್ತದೆ ಅಂತ ರಿಪಬ್ಲಿಕನ್ ಅಧ್ಯಕ್ಷೀಯ ಉಮೇದುವಾರ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದೀಗ ಅದೇ ಅಮೆರಿಕ ಸಂಸತ್ ಸದ್ಯರಿಂದ ಇನ್ನೊಂದು ಮಾತು ಹೊರಬಿದ್ದಿದೆ. ‘ಏಷ್ಯಾದಲ್ಲಿ ಚೀನಾ ಪ್ರಾಬಲ್ಯವನ್ನು ಸರಿದೂಗಿಸುವ ಸಾಮರ್ಥ್ಯ ಭಾರತಕ್ಕಿದೆ. ಇದರೊಂದಿಗಿನ ಸ್ನೇಹ ವೃದ್ಧಿಯಾಗಬೇಕು’ ಎಂಬ ಮಾತು ಈಗ ಅಮೆರಿಕ ಸಂಸತ್ತಿನಲ್ಲಿ ಹರಿದಾಡುತ್ತಿದೆ.

‘ಸದ್ಯದ ಮಟ್ಟಿಗೆ ಏಷ್ಯಾದಲ್ಲಿ ಚೀನಾ ಪ್ರಬಲ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ, ಮುಂದಿನ ದಿನಗಳಲ್ಲಿ ಚೀನಾಗೆ ಸರಿಸಮನಾಗಿ ನಿಲ್ಲುವ ತಾಕತ್ತು ಭಾರತಕ್ಕಿದೆ. ಭಾರತ ಈಗ ಯಾವುದೇ ವಿಷಯವಾದರೂ ತನ್ನ ಅಭಿಪ್ರಾಯವನ್ನು ಗಟ್ಟಿಯಾದ ಧ್ವನಿಯಲ್ಲಿ ಎಲ್ಲರ ಮನಸ್ಸಿಗೆ ನಾಟುವಂತೆ ಮಾತನಾಡುತ್ತಿದೆ. ಇನ್ನು ದಕ್ಷಿಣ ಚೀನಾ ಸಮುದ್ರ, ಹಿಂದೂ ಮಹಾಸಾಗರದಲ್ಲಿ ಸ್ವತಂತ್ರ ಸಮುದ್ರಯಾನವನ್ನು ಕಂಡುಕೊಂಡಿದೆ. ಈ ಅಂಶಗಳಲ್ಲಿ ಭಾರತ ಯಾರ ಮೇಲೂ ಅವಲಂಬಿತವಾಗಿಲ್ಲ. ಈ ಎಲ್ಲ ಅಂಶಗಳನ್ನು ತಂತ್ರಗಾರಿಕೆಯ ಆಯಾಮದಲ್ಲಿ ಗಮನಿಸಿದಾಗ ಭಾರತ ಏಷ್ಯಾದಲ್ಲಿ ತನ್ನದೇ ಆದ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವುದು ಅರಿವಾಗುತ್ತದೆ’ ಎಂಬುದು ಅಮೆರಿಕ ಸಂಸತ್ ಸದಸ್ಯ ಎಲಿಯಟ್ ಇಂಗಲ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಪೂರ್ವ ಏಷ್ಯಾಭಾಗದಲ್ಲಿ ಆರ್ಥಿಕತೆಯ ಪ್ರಾಬಲ್ಯ ಮೆರೆಯುವ ಎಲ್ಲ ಲಕ್ಷಣಗಳಿವೆ. ಸಮುದ್ರತೀರಾ ಯಾನದ ವಿಷಯದಲ್ಲಿ ಭಾರತ ಈಗಾಗಲೇ ತನ್ನ ಬಲವನ್ನು ಸಾಬೀತುಪಡಿಸಿದೆ. ಏಷ್ಯಾದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ, ವಿಶ್ವದಲ್ಲಿ ಸಮರ್ಥ ರಾಷ್ಟ್ರವಾಗಿ ಬಿಂಬಿತವಾಗುತ್ತಿದೆ.

ಈ ಎಲ್ಲ ಪ್ರಮುಖ ಅಂಶಗಳು ಈಗ ಅಮೆರಿಕನ್ನರ ಮನಸ್ಸಿಗೆ ಸೇರಿದ್ದು, ಭಾರತದೊಂದಿಗಿನ ಸ್ನೇಹ ವೃದ್ಧಿಗೆ ಪ್ರಯತ್ನಿಸಬೇಕು ಎಂದು ಸಂಸತ್ ಸದಸ್ಯರು ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಸಲಹೆ ನೀಡಿದ್ದಾರೆ.

‘ಭಾರತ-ಅಮೆರಿಕ ಸ್ನೇಹ ಸಂಬಂಧ ಪ್ರಮುಖವಾಗಿದೆ. ಅದರಲ್ಲೂ ರಕ್ಷಣಾ ವಿಷಯದಲ್ಲಿ ಪ್ರಗತಿ ಹೊಂದುತ್ತಲೇ ಇದೆ. ಮುಂದಿನ ಕೆಲವು ತಿಂಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಬರಾಕ್ ಒಬಾಮಾ ಅವರನ್ನು ಭೇಟಿಯಾಗಲು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಭಾರತದ ಜತೆಗಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು ಎಂಬುದು ಅಮೆರಿಕ ನಾಯಕರ ಸದ್ಯದ ಪ್ರಮುಖ ಗುರಿಯಾಗಬೇಕು.’ ಎಂದವರು ಸಲಹೆ ನೀಡಿದ್ದಾರೆ.

ಇದಕ್ಕೆ ಒಬಾಮಾ ಆಡಳಿತದ ಪರವಾಗಿಯೂ ಸಕಾರಾತ್ಮಕ ಉತ್ತರ ಬಂದಿದ್ದು, ‘ಭಾರತಕ್ಕೆ ಅದರದ್ದೇ ಆದ ಪ್ರಾದೇಶಿಕ ನೀತಿಗಳಿವೆ. ಅದು ನಮ್ಮೊಂದಿಗೂ ಸಮನ್ವಯ ಹೊಂದುತ್ತದೆ. ಈ ವಿಷಯದಲ್ಲಿ ಸಂಸತ್ ಸದಸ್ಯರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನೇ ನಾವೂ ಹೊಂದಿದ್ದೇವೆ’ ಎಂದಿದ್ದಾರೆ.

Leave a Reply