ಸಾಲ ತೀರಿಸೋ ವಿಷಯದಲ್ಲಿ ಚೌಕಾಶಿಗೆ ಬನ್ನಿ- ಪತ್ರಿಕಾ ಸಂದರ್ಶನದ ಮೂಲಕ ಮಲ್ಯ ಸಾರುತ್ತಿರುವ ಸಾರಾಂಶ

ಡಿಜಿಟಲ್ ಕನ್ನಡ ಟೀಮ್

‘ಬಲವಂತದಿಂದ ನನ್ನನ್ನು ದೇಶದಿಂದ ಹೊರ ಹಾಕಿದ್ದು, ಸದ್ಯ ಭಾರತಕ್ಕೆ ಬರುವ ಯಾವುದೇ ಯೋಚನೆ ಇಲ್ಲ. ನನ್ನನ್ನು ಬಂಧಿಸಿದರೆ ಅಥವಾ ಪಾಸ್ ಪೋರ್ಟ್ ವಶಪಡಿಸಿಕೊಂಡರೆ ಒಂದು ನಯಾ ಪೈಸೆಯನ್ನು ನನ್ನಿಂದ ಪಡೆಯಲು ಸಾಧ್ಯವಿಲ್ಲ. ಬ್ಯಾಂಕುಗಳಿಂದ ಪಡೆದ ಸಾಲದ ವಿಚಾರವನ್ನು ನ್ಯಾಯಸಮ್ಮತವಾಗಿ ಇತ್ಯರ್ಥಪಡಿಸಿಕೊಳ್ಳಲು ನಾನು ಸಿದ್ಧ.’ ಹೀಗೆಂದವರು ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಗೆ ದೇಶದ ವಿವಿಧ ಬ್ಯಾಂಕುಗಳಿಂದ ಸುಮಾರು 9400 ಕೋಟಿ ಪಡೆದು ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಒಂದು ಕಾಲದ ಕಿಂಗ್ ಆಫ್ ಗುಡ್ ಟೈಮ್ಸ್ ಎಂಬ ಹೆಸರು ಪಡೆದಿದ್ದ ವಿಜಯ್ ಮಲ್ಯ. ಪೈನಾನ್ಶಿಯಲ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ ಮಲ್ಯ.

ನಿನ್ನೆಯಷ್ಟೇ ಕೇಂದ್ರ ಸರ್ಕಾರ ಬ್ರಿಟನ್ ಸರ್ಕಾರಕ್ಕೆ ಪತ್ರ ಬರೆದು, ಮಲ್ಯರನ್ನು ದೇಶದಿಂದ ಗಡಿಪಾರು ಮಾಡಿ ಎಂದು ಮನವಿ ಮಾಡಿತ್ತು. ಇದಕ್ಕೆ ಪ್ರತಿ ಉತ್ತರ ನೀಡಿರುವ ಮಲ್ಯ, ‘ನನಗೆ ಭಾರತಕ್ಕೆ ಬರುವ ಬಯಕೆ ಇದೆ. ಆದರೆ ನನ್ನ ವಿರುದ್ದ ಹಲವು ಸುದ್ದಿಗಳು ಶರ ವೇಗದಲ್ಲಿ ಹರಿದಾಡುತ್ತಿವೆ. ಈಗಾಗಲೇ ನನ್ನ ಪಾಸ್ ಪೋರ್ಟ್ ಅನ್ನು ಅಮಾನ ತುಗೊಳಿಸಲಾಗಿದೆ. ಈಗ ಭಾರತ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ’ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಸಂದರ್ಶನದಲ್ಲಿ ಹೇಳಿರುವ ಪ್ರಕಾರ ವಿಜಯ್ ಮಲ್ಯರಿಗೆ ಅವರ ನಡೆ ಬಗ್ಗೆ ಯಾವುದೇ ಅಪರಾಧಿ ಪ್ರಜ್ಞೆ ಇಲ್ಲವಂತೆ. ಏಕೆಂದರೆ ಸಾಲ ಪಡೆದ ಹಣವನ್ನು ಉದ್ಯಮದಲ್ಲಿ ತೊಡಗಿಸಿದ್ದೆ. ನಷ್ಟವಾದ್ರೆ ನಾನೇನು ಮಾಡ್ಲಿ ಎಂಬ ಪ್ರಶ್ನೆ ಅವರದ್ದು. ಇದೇ ಹಂತದಲ್ಲಿ ಸಂದರ್ಶಕ, ನಿಮ್ಮ ವೈಭವೋಪೇತ ಬದುಕಿನ ಬಗ್ಗೆ ಏನಂತೀರಿ ಅಂತ ಕೇಳಿದಾಗ ಮಲ್ಯ ಹೇಳಿದ್ದು- ‘ನನ್ನ ಐಷಾರಾಮಿ ಜೀವನದ ಬಗ್ಗೆ ಜನರು ವರ್ಣರಂಜಿತವಾಗಿ ಊಹಿಸಿಕೊಳ್ಳುತ್ತಾರೆ. ನನ್ನ ಜೀವನ ಕ್ರಮ ಬಹಳ ಸರಳ’. ತಕ್ಷಣವೇ ಸಂದರ್ಶಕನ ಗಮನ ಮಲ್ಯ ಧರಿಸಿದ್ದ ಬಣ್ಣ ಬಣ್ಣದ ಟೈ ಕಡೆ ಹರಿಯಿತು. ಇದೊಂಥರ ಚಮಕ್ಕಾಗಿಯೇ ಇದೆ ಎಂದು ಸಂದರ್ಶಕ ಕೆಣಕಿದಾಗ- ‘ಒಳ್ಳೊಳ್ಳೆ ಬಟ್ಟೆ ಹಾಕೋದ್ರಲ್ಲಿ ತಪ್ಪೇನು’ ಅಂತ ಪ್ರತಿಪ್ರಶ್ನೆ ಕೇಳಿದ್ರು ಮಲ್ಯ.

ಉದ್ದೇಶಪೂರ್ವಕ ಸುಸ್ತಿದಾರ ಅಂತ ತಮ್ಮನ್ನು ಏಕೆ ಹೆಸರಿಸಿದರು ಎಂಬುದೇ ಅರ್ಥವಾಗಲಿಲ್ಲ ಎಂದಿರುವ ಮಲ್ಯ ತಮ್ಮ ಪರ ಸಮರ್ಥನೆಯಲ್ಲಿ ಆಡಿದ ಮಾತುಗಳಿವು- ‘ಸರ್ಕಾರ ಪ್ರಪಂಚದ ಅತ್ಯುತ್ತಮ ನ್ಯಾಯಯುತ ಆಡಿಟರ್ ಒಬ್ಬರನ್ನು ನೇಮಿಸಿ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯ ಎಲ್ಲಾ ಖಾತೆಗಳನ್ನು ಪರಿಶೀಲಿಸಲಿ ಎಂದಿದ್ದಾರೆ. ಸಂಸ್ಥೆಗೆ 610 ಮಿಲಿಯನ್ ಪೌಂಡ್ (₹5920 ಕೋಟಿ) ನಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ಇದನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಬೃಹತ್ ಆರ್ಥಿಕತೆಯ ಅಂಶಗಳು ಮತ್ತು ಸರ್ಕಾರದ ನೀತಿಗಳು ಒಟ್ಟುಗೂಡಿದ ಪರಿಣಾಮ ದುರಾದೃಷ್ಟವಶಾತ್ ಸಂಸ್ಥೆ ಸಾಲದ ಸುಳಿಗೆ ಸಿಲುಕುವಂತಾಯಿತು. ಇದರಿಂದ ಸಂಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’

‘ಬ್ಯಾಂಕುಗಳ ಸಾಲದ ವಿಚಾರವನ್ನು ಇತ್ಯರ್ಥ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇನ್ನುಮುಂದೆ ಶಾಂತಿಯತವಾದ ಜೀವನ ನಡೆಸಲು ಬಯಸುತ್ತಿದ್ದು, ಇದರ ಕಡೆಗೆ ಹೆಚ್ಚಿನ ಗಮನ ನೀಡುವೆ’. ಎಂದಿರುವ ವಿಜಯ್ ಮಲ್ಯ ಮಾತುಗಳ ಒಟ್ಟಾರೆ ಸಾರಾಂಶ ಇಷ್ಟೆ. ಸಾಲ ವಾಪಸಾತಿ ವಿಷಯದಲ್ಲಿ ಸ್ವಲ್ಪ ಚೌಕಾಶಿಗೆ ಬನ್ನಿ, ಇದ್ದಷ್ಟನ್ನೂ ತೀರಿಸು ಅಂತಂದ್ರೆ ಏನೂ ಸಿಗಲ್ಲ ಹುಷಾರು… ಹೀಗಂತ ಸಂದೇಶ ನೀಡುವುದಕ್ಕೆ ವಿಜಯ್ ಮಲ್ಯ ತಮ್ಮೆಲ್ಲ ಪ್ರಯತ್ನ ವಿನಿಯೋಗಿಸಿದ್ದಾರೆ.

Leave a Reply