ಮಾಡಿದವರ ಆಸ್ತಿ ನೋಡಿದವರ ಕಣ್ಣಲ್ಲಿ.. ಈ ಸರ್ಕಾರಿ ಅಧಿಕಾರಿ ದೋಚಿಟ್ಟಿರೋ ಆಸ್ತಿ ಬರೀ 800 ಕೋಟಿ ರುಪಾಯಿ!

ಡಿಜಿಟಲ್ ಕನ್ನಡ ಟೀಮ್

ಸಾಕ್ಷಾತ್ ಕುಬೇರ ಕೂಡ ನಾಚಿ ನೀರಾಗ್ಬೇಕು. ಹಂಗ್ ಮಾಡಿಟ್ಟವನೇ ಇವಯ್ಯ ಆಸ್ತೀನಾ..!

ನಮ್ ದೇಶದಲ್ಲಿ ಬೇಜಾನ್ ಜನದ ಹತ್ರ ಇಷ್ಟು ಆಸ್ತಿ ಐತೆ. ಇವನದೇನ್ ಮಹಾ ಅಂದ್ರಾ.. ವಸಿ ತಡ್ಕಳಿ.. ಅಲ್ಲೇ ಇರೋದು ವಿಶೇಷ. ಇವನು ಟಾಟಾ-ಬಿರ್ಲಾ ಮಗಾನೂ ಅಲ್ಲಾ, ಅಂಬಾನಿ ವಂಶದ ತುಂಡೂ ಅಲ್ಲ. ಬದಲಿಗೆ, ಯಕಶ್ಚಿತ್ ಸರಕಾರಿ ಅಧಿಕಾರಿ.

ಯೆಸ್, ಆಂಧ್ರ ಪ್ರದೇಶ ಪೂರ್ವ ಗೋದಾವರಿ ಪ್ರದೇಶದ ಸಾರಿಗೆ ಇಲಾಖೆ ಉಪ ಆಯುಕ್ತ ಎ. ಮೋಹನ್ ಮನೆಗಳ ಮೇಲೆ ಏಕಕಾಲಿಕ ದಾಳಿ ನಡೆಸಿದ ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮೂರ್ಛೆ ಹೋಗದಿದ್ದುದೊಂದೇ ಬಾಕಿ. ಆ ಪಾಟಿ ಆಸ್ತಿಪಾಸ್ತಿ, ದುಡ್ಡುಕಾಸು, ಚಿನ್ನ-ಬೆಳ್ಳಿ, ವಜ್ರವೈಡೂರ್ಯ ಆಭರಣಗಳು ಪತ್ತೆ ಆಗಿವೆ. ಸದ್ಯಕ್ಕೆ ಪತ್ತೆ ಆಗಿರುವ ಆಸ್ತಿ ಮೌಲ್ಯ ಬರೋಬ್ಬರಿ 800 ಕೋಟಿ ರುಪಾಯಿ. ಬ್ಯಾಂಕ್ ಲಾಕರ್ ಗಳಲ್ಲಿ ಇರುವ ಮತ್ತಷ್ಟು ಆಸ್ತಿಪಾಸ್ತಿ ಲೆಕ್ಕ ಇನ್ನೂ ಮಾಡಬೇಕಿದೆ. ಎಲ್ಲ ಸೇರಿ ಸಾವಿರ ಕೋಟಿ ರುಪಾಯಿ ದಾಟುವ ನಿರೀಕ್ಷೆ ಇದೆ. ಈಗ ಪತ್ತೆ ಆಗಿರೋ ಆಸ್ತಿ ಹದಿಮೂರು ವರ್ಷದ ಹಿಂದಿನ ನಮ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಷಿಕ ಬಜೆಟ್ ಗೆ ಸಮ!

mohan photo 1

ಇಪ್ಪತ್ತೆಂಟು ವರ್ಷ ಸರಕಾರಿ ಸೇವೆಯಲ್ಲಿದ್ದ ಈ ಮೋಹನ್ ಮಾಡಿರೋ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ದೋಚೋದಿಕ್ಕು ಒಂದು ಇತಿಮಿತಿ ಬೇಡವೇ ಅಂತಾ. ಚಿತ್ತೂರು ಮೂಲದ ಮೋಹನ್ 1988 ರಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಆಗಿ ನೀರಾವರಿ ಇಲಾಖೆ ಸೇರಿದ. 1989 ರಲ್ಲಿ ಗ್ರೂಪ್-1 ಅಧಿಕಾರಿ ಹುದ್ದೆಗೆ ಬಡ್ತಿ ಪಡೆದು ಪ್ರಾದೇಶಿಕ ಸಾರಿಗೆ ಇಲಾಖೆ (ಆರ್ ಟಿಒ) ಸೇರಿ, ದುಡ್ಡು ಮಾಡಲು ಶುರು ಮಾಡಿದ ನಂತರ ಹಿಂತಿರುಗಿ ನೋಡಲೇ ಇಲ್ಲ.  1998ರಲ್ಲಿ ಸಾರಿಗೆ ಇಲಾಖೆ ಉಪ ಆಯುಕ್ತರಾಗಿ ನೆಲ್ಲುರು, ಚಿತ್ತೂರು, ಅನಂತಪುರಂ, ಪ್ರಕಾಶಂ, ಕಡಪ್ಪ ಮತ್ತು ಹೈದರಾಬಾದ್ – ಹೀಗೆ ಸೇವೆ ಸಲ್ಲಿಸಿದ ಕಡೆಯಲ್ಲೆಲ್ಲ ದೋಚಿದ್ದೇ ದೋಚಿದ್ದು, ಎರಡನ್ನು ಹತ್ತು ಕೈಗಳನ್ನಾಗಿ ಮಾಡಿಕೊಂಡು ಬಾಚಿದ್ದೇ ಬಾಚಿದ್ದು. ಆರು ತಿಂಗಳ ಹಿಂದಷ್ಟ್ ಪೂರ್ವ ಗೋದಾವರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದ ಈತ ಅದ್ಯಾವ ಮಟ್ಟಿಗೆ ಧನಪಿಶಾಚಿಯಾಗಿದ್ದ ಎಂದರೆ, ಲಂಚದ ಹಣವನ್ನು ಸಹೋದ್ಯೋಗಿಗಳ ಜತೆ ಹಂಚಿಕೊಳ್ಳುವುದು ಒತ್ತಟ್ಟಿಗಿರಲಿ, ಅವರಿಂದಲೇ ಲಂಚ ಪೀಕಿಸುತ್ತಿದ್ದ. ಹಾಗಂತ ಡೆಕ್ಕನ್ ಕ್ರೋನಿಕಲ್ ವರದಿ ಮಾಡಿದೆ.

ಈತನ ಆಸ್ತಿ ಮೇಲೆ ರೈಡ್ ಮಾಡಲು ಕೇಂದ್ರ ತನಿಖಾ ದಳದ ಡಿಎಸ್ಪಿ ಎ.ರಮಾದೇವಿ ನೇತೃತ್ವದ ಎಸಿಬಿ ತಂಡಕ್ಕೆ ಎರಡು ದಿನ ಬೇಕಾಯಿತು. ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಒಟ್ಟು 9 ಕಡೆ ಈತ ಹೊಂದಿರುವ ಮನೆಗಳ ಮೇಲೆ ಗುರುವಾರ ಆರಂಭವಾದ ಶೋಧ ಕಾರ್ಯ ಶುಕ್ರವಾರವೂ ಮುಂದುವರಿದಿದೆ. ಆಸ್ತಿ ಲೆಕ್ಕ ಇನ್ನೂ ಮುಗಿದಿಲ್ಲ.

ಮಾರುಕಟ್ಟೆ ಮೌಲ್ಯ ಆಧರಿಸಿ ಈತನ ಸಂಪತ್ತು 800 ಕೋಟಿ ಎಂದಿದ್ದಾರೆ ಅಧಿಕಾರಿಗಳು. 100 ರಿಂದ 120 ಕೋಟಿ ರುಪಾಯಿ ಮೌಲ್ಯದ ಭೂಮಿ ಜತೆ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ, ಹರಳುಗಳು ಪತ್ತೆಯಾಗಿವೆ. ತನ್ನ ಮನೆಯಲ್ಲಿ ಸಾಲದು ಎಂದು ಸಂಬಂಧಿಕರ ಮನೆಯಲ್ಲೂ ಆಸ್ತಿಪಾಸ್ತಿ ದಾಖಲೆಗಳನ್ನು ಅಡಗಿಸಿಟ್ಟಿದ್ದ. ಹತ್ತಾರು ಬ್ಯಾಂಕ್ ಲಾಕರ್ ಗಳನ್ನು ಇನ್ನಷ್ಟೇ ತೆರೆಯಬೇಕಿದೆ. ಅಲ್ಲದೆ ಮೋಹನ್ ತನ್ನ ಮಗಳ ಹೆಸರಿನಲ್ಲಿ ಎಂಟು ಕಂಪನಿಗಳನ್ನು ನಡೆಸುತ್ತಿದ್ದು, ಅವುಗಳ ಮೌಲ್ಯ ಲೆಕ್ಕ ಹಾಕಬೇಕಿದೆ.

ದಾಳಿಯ ವೇಳೆ 2 ಕೆ.ಜಿ ಚಿನ್ನ, 5 ಕೆ.ಜಿ ಬೆಳ್ಳಿ, ಹೈದರಾಬಾದ್ ಸುತ್ತಮುತ್ತ 14 ಫ್ಲಾಟ್, ಪಂಜಗುಟ್ಟದ ಬಳಿ ಒಂದು ಕಟ್ಟಡ, ಜುಬಲಿ ಹಿಲ್ಸ್ ಬಳಿ ಐದಂತಸ್ತಿನ ಕಟ್ಟಡ, ನೆಲ್ಲೂರು, ಪ್ರಕಾಶಂ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ 50 ಎಕರೆ ಜಮೀನು, ₹ 83 ಸಾವಿರ ನಗದು ಸಿಕ್ಕಿದೆ. ಇಲ್ಲಿರುವ ಹರಳುಗಳು, ಬ್ಯಾಂಕ್ ಖಾತೆಯಲ್ಲಿರುವ ಹಣ, 12 ಲಾಕರ್ ಗಳಲ್ಲಿರುವ ವಸ್ತುಗಳ ಮೌಲ್ಯ ಇನ್ನಷ್ಟೇ ಪಟ್ಟಿ ಮಾಡಬೇಕಿದೆ. ಮೋಹನ್ ಬಳ್ಳಾರಿಯಲ್ಲಿದ್ದ ಜಮೀನನ್ನು ಇತ್ತೀಚೆಗೆ ತನ್ನ ಮಾವನ ಹೆಸರಿಗೆ ವರ್ಗಾಯಿಸಿದ್ದ’ ಎಂದು ದಾಳಿಯ ನಂತರ ರಮಾದೇವಿ ತಿಳಿಸಿದ್ದಾರೆ. ಇದನ್ನ, ‘ಮಾಡಿದವರ ಆಸ್ತಿ ನೋಡಿದವರ ಕಣ್ಣಲ್ಲಿ’ ಅಂತ ವರ್ಣಿಸಬಹುದೇನೋ!

Leave a Reply