ಬರ ಮೆಟ್ಟಿ ನಿಂತ ಸಾಧನಾಗಾಥೆಗಳು, ಕೇವಲ ಸರ್ಕಾರಗಳನ್ನು ಬಯ್ದರೆ ತೀರದು ಗೋಳು!

ಡಿಜಿಟಲ್ ಕನ್ನಡ ವಿಶೇಷ

ಎರಡು ತಿಂಗಳಿನಿಂದ ದೇಶ ಭೀಕರ ಬರಕ್ಕೆ ಸಿಲುಕಿ ತತ್ತರಿಸಿರುವ ಸಾಕಷ್ಟು ಉದಾಹರಣೆ ನೋಡಿದ್ದೇವೆ. ಈ ಸವಾಲನ್ನು ಎದುರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅನೇಕ ರೈತರು ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು, ಹಳ್ಳಿಗಳಲ್ಲಿ ಜನರು ನೆಲವನ್ನು ಬಗೆದು ಸಿಕ್ಕ ಅಲ್ಪಸ್ವಲ್ಪ ನೀರನ್ನು ಸೋಸಿಕೊಂಡು ಕುಡಿಯುತ್ತಿರುವುದು, ನೀರು ತರುವುದಕ್ಕೆಕಿಲೋಮೀಟರ್ ಗಟ್ಟಲೆ ನಡೆಯುವುದು, ಬೇರೆ ರಾಜ್ಯಗಳಿಂದ ರೈಲಿನಲ್ಲಿ ನೀರನ್ನು ತಂದು ವಿತರಿಸುತ್ತಿರುವುದು…. ಹೀಗೆ ಅನೇಕ ಸುದ್ದಿಗಳನ್ನು ಓದಿದ್ದೇವೆ. ಈ ಎಲ್ಲದರ ನಡುವೆ, ಸವಾಲಿಗೆ ತೊಡೆ ತಟ್ಟಿನಿಂತು ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಾಧನೆ ಮಾಡಿದವರು ಇದ್ದಾರೆ.

ಕಷ್ಟದಿಂದ ಬಂದ ವ್ಯಾಪಾರಿ ದೊಡ್ಡ ಉದ್ಯಮಿಯಾಗೋ ಕಥೆಗಳನ್ನು ಕೇಳಿರಿರುವ ನಾವು, ಕೃಷಿ ಕ್ಷೇತ್ರದಲ್ಲಿ ದಿನ ನಿತ್ಯದ ಸವಾಲಿನ ಹೊರತಾಗಿ ಸಾಧನೆ ಮಾಡಿದವರ ಕಥೆಯನ್ನು ಓದಿಕೊಳ್ಳಬೇಕಿದೆ. ಇವು ನಮ್ಮೆಲ್ಲರಿಗೂ ಸ್ಫೂರ್ತಿ ಚಿಲುಮೆಯಾಗುವುದರಲ್ಲಿ ಅನುಮಾನವಿಲ್ಲ. ದೇಶದ ವಿವಿಧೆಡೆಗಳಲ್ಲಿ ಪರಿಸ್ಥಿತಿಯನ್ನು ಮೀರಿನಿಂತು ಆದರ್ಶವಾಗಿರೋ ಪ್ರಮುಖ ಉದಾಹರಣೆಗಳು ಇಲ್ಲಿವೆ.

  • ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯ ಮಲಕ್ ಪುರ ಹಳ್ಳಿಯ ನಿವಾಸಿಗರು 1830ರಲ್ಲಿ ಕಳೆದುಹೋದ ಕಥಾ ನದಿಗೆ ಮತ್ತೆ ಜೀವ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿನ ಸುತ್ತಮುತ್ತಲಿನ ಹಲವು ಹಳ್ಳಿಗರು ಸೇರಿ, ಸ್ಥಳೀಯ ಇಂಜಿನಿಯರ್ ಯೋಜನೆ ಮೂಲಕ 5-40 ಅಡಿ ಆಳದ ನದಿ ತೀರವನ್ನು ನಿರ್ಮಿಸುತ್ತಿದ್ದು, ಅಲ್ಲಲ್ಲಿ ಚೆಕ್ ಡ್ಯಾಮ್ ಗಳನ್ನು ನಿರ್ಮಿಸುತ್ತಿದ್ದಾರೆ. ಆ ಮೂಲಕ ಮುಂದಿನ ಮಾನ್ಸೂನ್ ನಲ್ಲಿ ನೀರು ಶೇಖರಣೆಗೆ ಮುಂದಾಗಿದ್ದಾರೆ.
  • ಬರದ ಹಿನ್ನೆಲೆಯಲ್ಲಿ ನೀರಿನ ಅಭಾವ ಎದುರಿಸಿದ ಮಧ್ಯಪ್ರದೇಶದ ರೈತ ಜುಪಿಂದರ್ ಜಿತ್ ಸಿಂಗ್ ಗೋಧಿ ಬೆಳೆಯನ್ನು ಕೈಬಿಟ್ಟು, ಕೊತ್ತಂಬರಿಯನ್ನು ಬೆಳೆಯಲು ನಿರ್ಧರಿಸಿದ. ಕೇವಲ ತಾನೊಬ್ಬ ಮಾತ್ರವಲ್ಲದೇ ಸುತ್ತಮುತ್ತಲಿನ ರೈತರಿಗೂ ಸಲಹೆ ನೀಡಿ ಸುಮಾರು 160 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕೊತ್ತಂಬರಿ ಬೆಳೆ ಬೆಳೆದಿದ್ದಾನೆ. ಇಲ್ಲಿ ಪ್ರತಿ ಎಕರೆಗೆ 7ರಿಂದ 8 ಸಾವಿರ ವೆಚ್ಚ ಮಾಡಿದ್ದು, 5 ಕ್ವಿಂಟಾಲ್ ನಷ್ಟು ಬೆಳೆ ಬೆಳೆದಿದ್ದಾರೆ. ಪ್ರತಿ ಕ್ವಿಂಟಾಲ್ ಗೆ 10 ಸಾವಿರ ಬೆಲೆ ಪಡೆದಿದ್ದಾರೆ.
  • ಭಾರತದ ಹಲವು ಹಳ್ಳಿಗಳಲ್ಲಿ ಮಳೆ ನೀರಿನ ಕೊಯ್ಲು ಪದ್ಧತಿಯನ್ನು ಪರಿಣಾಮಕಾರಿ ಬಳಸಿಕೊಂಡು ನೀರಿನ ಸಮಸ್ಯೆಬಾರದಂತೆ ನೋಡಿಕೊಂಡಿವೆ. ಆ ಪೈಕಿ ಗುಜರಾತ್ ನ ದಾಹೊದ್ ಜಿಲ್ಲೆಯಲ್ಲಿ 1994ರಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ಸದ್ಗುರು ಫೌಂಡೇಷನ್ ಎಂಬ ಎನ್ ಜಿಒ ಪರಿಶ್ರಮದ ನೆರವಿನಿಂದ ವಾಟರ್ ಶೆಡ್ ಮ್ಯಾನೆಜ್ ಮೆಂಟ್ ಮತ್ತು ಚೆಕ್ ಡ್ಯಾಮ್ ನಿರ್ಮಿಸಲಾಯಿತು. ರಾಜ್ ಕೋಟ್ ನ ರಾಜ್ ಸಮಾಧಿಯಾಲಾ ಹಳ್ಳಿ, ಗಾಂಧಿಗ್ರಾಮದಲ್ಲಿ 1990ರಲ್ಲಿ ಚೆಕ್ ಡ್ಯಾಮ್ ನಿರ್ಮಿಸಿ, ಮಂಡ್ಲಿಕ್ ಪುರ ಮತ್ತು ಜಬುವಾದಲ್ಲಿ ಮಳೆ ನೀರಿನ ಕೊಯ್ಲಿನಿಂದ ಮಳೆ ನೀರನ್ನು ಬಾವಿಗೆ ಸೇರಿಸಿ ಅದನ್ನು ಅಗತ್ಯ ಸಂದರ್ಭದಲ್ಲಿ ಬಳಸಿವೆ. ಉಳಿದಂತೆ ಪುಣೆಯ ಮುತುಲಾನೆ, ಸತಾರಾದ ರಂಡುಲಬಾದ್, ಪುರಂದರ್ ನ ಪೊಂಧೆ ಹಳ್ಳಿಗಳು ವೈಜ್ಞಾನಿಕ ಅಂತರ್ಜಲ ನೀರು ನಿರ್ವಹಣೆ ಮೂಲಕ ನೀರಿನ ಸಮಸ್ಯೆ ದೂರ ಮಾಡಿಕೊಂಡಿವೆ. ಇನ್ನು ಪಂಜಾಬ್ ನ ಪಟಿಯಾಲದಲ್ಲಿ ಕಳೆದ ವರ್ಷ ಬರ ಪರಿಸ್ಥಿತಿ ನಿರ್ಮಾಣವಾದಾಗ ಸಂದರ್ಶಿ ಹಳ್ಳಿ ಜನರು ಚಿಕ್ಕ ಚಿಕ್ಕ ಕಟ್ಟೆಗಳ ನಿರ್ಮಾಣಕ್ಕೆ ಮುಂದಾದರು. ಹರ್ಮೇಶ್ ಸಿಂಗ್ ಎಂಬಾತ 37 ಲಕ್ಷ ಲೀಟರ್ ನೀರು ಶೇಖರಿಸಬಲ್ಲ ಕಟ್ಟೆ ಕಟ್ಟಿಕೊಂಡ. ಈ ಪದ್ಧತಿಯನ್ನು ಸುತ್ತಮುತ್ತಲ ಹಳ್ಳಿಯವರು ಅಳವಡಿಸಿಕೊಂಡರು. ಪ್ರಸಕ್ತ ವರ್ಷ ಆಂಧ್ರದ ಮಹಬೂಬನಗರ್ ಮತ್ತು ಅನಂತಪುರದಲ್ಲಿ ಬರ ಇದ್ದರೂ ಚೆಲ್ಲಾಪುರ ಎಂಬ ಹಳ್ಳಿ ಮಾತ್ರ ಇದರ ಪರಿಣಾಮಕ್ಕೆ ಒಳಗಾಗಿಲ್ಲ. ಐದು ಬೋರ್ ವೆಲ್ ಗಳನ್ನು ಪೈಪ್ ಲೈನ್ ಮೂಲಕ ಸಂಪರ್ಕಿಸಿ ಇಡಿ ಊರಿನ ಜನರು ನೀರು ಪಡೆಯುತ್ತಿದ್ದಾರೆ. ಸ್ಪ್ರಿಂಕ್ಲರ್ ಮೂಲಕ ಕೃಷಿಗೆ ನೀರು ಬಳಸುತ್ತಿದ್ದು ಇರುವ ನೀರನ್ನೇ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿದ್ದಾರೆ.
  • ಉತ್ತರ ಪ್ರದೇಶದ ಬುಂದೇಲಖಂಡ್ ಪ್ರದೇಶದಲ್ಲಿ ನೀರಿನ ಸಮಸ್ಯೆಯಿಂದಾಗಿ ಕಳೆದ ದಶಕದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರೆ ಮತ್ತೆ ಕೆಲವರು ವಲಸೆ ಹೋಗಿದ್ದಾರೆ. ಆದರೆ, ಇದೇ ಪ್ರದೇಶದಲ್ಲಿ ಸುಸ್ಥಿರ ಮತ್ತು ಸಾಂಪ್ರದಾಯಿಕ ಕೃಷಿ ಸೂತ್ರವನ್ನು ಅಳವಡಿಸಿಕೊಂಡ ಪ್ರೇಮ್ ಸಿಂಗ್ ಇತರರಿಗೆ ಮಾದರಿಯಾಗಿದ್ದಾರೆ. ಅವರ ಸುಮಾರು 32 ಎಕರೆ ತೋಟ ಎಲ್ಲರಿಗೂ ಸ್ಫೂರ್ತಿದಾಯಕ. ಕೇವಲ ಒಂದು ಬೆಳೆಯನ್ನು ಅತಿಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಜಿದ್ದಿಗೆ ಬೀಳದೇ ಪೂರಕ ಕೃಷಿ ವಾತಾವರಣ ನಿರ್ಮಿಸಿದರೆ ಸುಸ್ಥಿರತೆ ಸಾಧ್ಯ ಎಂಬುದು ಇವರ ಪ್ರತಿಪಾದನೆ. ಹಾಗೆಂದೇ ಇಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರು ಸೌಲಭ್ಯ, ಹಲವಾರು ಹಣ್ಣಿನ ಮರಗಳು, ಆರೋಗ್ಯಕರ ಪಶುಗಳು, ಅತ್ಯುತ್ತಮ ಮಣ್ಣಿನ ಗುಣಮಟ್ಟ, ನೈಸರ್ಗಿಕ ಗೊಬ್ಬರ ಬಳಕೆ, ಸ್ಥಿರ ಆದಾಯ ಈ ಎಲ್ಲ ಅಂಶಗಳು ಈ ತೋಟದಲ್ಲಿ ಸಿಗುತ್ತವೆ.

ಇವೆಲ್ಲ ಹೇಳುತ್ತಿರುವ ಪಾಠ ಇಷ್ಟೆ. ಬರ ಎನ್ನುತ್ತ ಸರ್ಕಾರಗಳನ್ನು ಬಯ್ಯುತ್ತ ಕೂರುವುದರಿಂದ ಪ್ರಯೋಜನವಿಲ್ಲ. ಬರ ಎದುರಿಸುವುದಕ್ಕೆ ಸಮುದಾಯದ ಜಾಗೃತಿ- ಒಗ್ಗಟ್ಟಿಗಿಂತ ದೊಡ್ಡ ಶಕ್ತಿ ಇಲ್ಲ. ಉದ್ಯಮಿಯೊಬ್ಬ ಸಾಮ್ರಾಜ್ಯ ಕಟ್ಟಿದ ಯಶೋಗಾಥೆಗಳನ್ನು ಓದಿಕೊಳ್ಳುವಂತೆಯೇ ಇವುಗಳನ್ನೂ ಆಪ್ತವಾಗಿ ಗಮನಿಸಬೇಕಿದೆ.

Leave a Reply