ಪಾಕಿಸ್ತಾನ ಖರೀದಿಸಬೇಕಿದ್ದ ಎಫ್ 16 ಯುದ್ಧ ವಿಮಾನಕ್ಕೆ ಸಬ್ಸಿಡಿ ನಿರಾಕರಿಸಿದ ಅಮೆರಿಕ, ಪ್ರಸ್ತುತ ಬೆಲೆಗಿಂತ ಎರಡೂವರೆ ಪಟ್ಟು ದುಬಾರಿ

ಡಿಜಿಟಲ್ ಕನ್ನಡ ಟೀಮ್

ಕೆಲವು ತಿಂಗಳ ಹಿಂದೆ ಪಾಕಿಸ್ತಾನಕ್ಕೆ ಎಂಟು ಎಫ್ 16 ಯುದ್ಧ ವಿಮಾನವನ್ನು ಕಡಿಮೆ ಬೆಲೆಗೆ ನೀಡಲು ಒಪ್ಪಿಗೆ ನೀಡಿದ್ದ ಅಮೆರಿಕ ಈಗ ತನ್ನ ನಿಲವು ಬದಲಿಸಿದೆ. ಆ ಮೂಲಕ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ನೀಡಿದ್ದ ಭಾರಿ ಪ್ರಮಾಣದ ಸಬ್ಸಿಡಿಯನ್ನು ಕೈಬಿಟ್ಟಿದೆ. ಇದರ ಪರಿಣಾಮ, ಒಂದು ವೇಳೆ ಪಾಕಿಸ್ತಾನ ಈ ಎಫ್ 16 ಅನ್ನು ಖರೀದಿಸಲು ಮುಂದಾದರೆ, ಈ ಹಿಂದೆ ನಿಗದಿಯಾಗಿದ್ದ ಮೊತ್ತಕ್ಕಿಂತ ಎರಡೂವರೆ ಪಟ್ಟು ಹೆಚ್ಚಿನ ಹಣ ನೀಡಬೇಕಿದೆ.

ಆರಂಭದಲ್ಲಿ ಈ ಯುದ್ಧ ವಿಮಾನವನ್ನು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ನೆರವಾಗಲಿ ಎಂಬುದು ಅಮೆರಿಕದ ಉದ್ದೇಶವಾಗಿತ್ತು. ಹಾಗಾಗಿ ಪಾಕಿಸ್ತಾನಕ್ಕೆ ಕಡಿಮೆ ಮೊತ್ತದಲ್ಲಿ ಅಂದರೆ, ಸುಮಾರು 270 ಮಿಲಿಯನ್ ಅಮೆರಿಕನ್ ಡಾಲರ್ (₹ 1793 ಕೋಟಿ) ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಿತ್ತು. ಉಳಿದ ಮೊತ್ತವನ್ನು ಅಮೆರಿಕ ವಿದೇಶಿ ಮಿಲಿಟರಿ ಆರ್ಥಿಕ ಆಯವ್ಯಯದಿಂದ ಭರಿಸಲು ಒಬಾಮಾ ಸರ್ಕಾರ ಮುಂದಾಗಿತ್ತು.

ಇತ್ತೀಚೆಗೆ ಅಮೆರಿಕ ಸಂಸತ್ ಸದಸ್ಯರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಪಾಕಿಸ್ತಾನ ಈ ಯುದ್ಧವಿಮಾನವನ್ನು ಉಗ್ರರ ಬದಲಿಗೆ ಭಾರತ ವಿರುದ್ಧ ಬಳಸುವ ಸಾಧ್ಯತೆ ಹೆಚ್ಚಿದೆ ಎಂದು ಒಬಾಮಾ ಅವರಿಗೆ ಮನವರಿಕೆ ಮಾಡಿದ್ದರು. ಈ ಎಲ್ಲ ಬೆಳವಣಿಗೆಯ ನಂತರ ಅಮೆರಿಕ ನೀಡಲು ನಿರ್ಧರಿಸಿದ್ದ ಸಬ್ಸಿಡಿಯನ್ನು ಕೈಬಿಟ್ಟಿದೆ. ಹಾಗಾಗಿ ಪಾಕಿಸ್ತಾನ ಈಗ ಈ ಯುದ್ಧ ವಿಮಾನಗಳ ಖರೀದಿಗೆ 270 ಅಮೆರಿಕನ್ ಡಾಲರ್ ಮೇಲೆ ಹೆಚ್ಚುವರಿಯಾಗಿ 700 ಮಿಲಿಯನ್ ಡಾಲರ್ (₹ 4650 ಕೋಟಿ) ನೀಡಬೇಕು. ಸಬ್ಸಿಡಿ ಕೈಬಿಟ್ಟ ನಂತರ, ಪಾಕಿಸ್ತಾನ ಇಷ್ಟು ದುಬಾರಿ ಪ್ರಮಾಣದಲ್ಲಿ ಹಣ ನೀಡಿ ಯುದ್ಧ ವಿಮಾನ ಖರೀದಿಸುವುದು ಕಷ್ಟ ಎಂದು ಈ ಒಪ್ಪಂದಕ್ಕೆ ಹತ್ತಿರವಾಗಿದ್ದ ಮೂಲಗಳು ಅಭಿಪ್ರಾಯಪಟ್ಟಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಆರಂಭದಲ್ಲಿ ಅಮೆರಿಕ, ಪಾಕಿಸ್ತಾನಕ್ಕೆ ಯುದ್ಧ ವಿಮಾನ ಮಾರಾಟ ಮಾಡುವ ಕುರಿತು ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಯಾಗಿ ‘ಉಗ್ರರ ವಿರುದ್ಧ ಹೋರಾಡಲು ಯುದ್ಧ ವಿಮಾನಗಳ ಅಗತ್ಯವಿದೆ. ಹಾಗಾಗಿ ಅಮೆರಿಕ ನಮಗೆ ನೆರವಾಗಬೇಕು’ ಎಂದು ಪಾಕಿಸ್ತಾನ ಸಮಜಾಯಿಷಿ ನೀಡಿತ್ತು. ಅಮೆರಿಕದ ಸಬ್ಸಿಡಿ ಕೈಬಿಟ್ಟ ನಿರ್ಧಾರ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ.

‘ಶಸ್ತ್ರಾಸ್ತ್ರ ಖರೀದಿ ಒಂದು ಸುದೀರ್ಘ ವ್ಯವಹಾರ. ಅದರ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ಪ್ರಸ್ತುತ ಉಗ್ರರ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಈ ಎಫ್ 16 ಯುದ್ಧ ವಿಮಾನ ಪಾಕಿಸ್ತಾನದ ಬಲ ಹೆಚ್ಚಿಸಲಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳು ಒಟ್ಟಾಗಿ ಕೈಜೋಡಿಸಬೇಕು’ ಎಂದು ವಾಶಿಂಗ್ಟನ್ ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ವಕ್ತಾರ ನದೀಮ್ ಹೊತಿಯಾನ ತಿಳಿಸಿದ್ದಾರೆ.

ಶುಕ್ರವಾರವಷ್ಟೇ ನಡೆದ ಅಮೆರಿಕ ಸಂಸತ್ ಸಭೆಯಲ್ಲಿ, ಏಷ್ಯಾದಲ್ಲಿ ಚೀನಾ ಪ್ರಾಬಲ್ಯವನ್ನು ಸರಿದೂಗಿಸಲು ಭಾರತಕ್ಕೆ ಸಾಮರ್ಥ್ಯವಿದೆ. ಹಾಗಾಗಿ ಅದರೊಂದಿಗಿನ ಸ್ನೇಹ ವೃದ್ಧಿಯಾಗಬೇಕು ಎಂಬ ಪ್ರಬಲ ವಾದ ಮಂಡನೆಯಾಗಿತ್ತು. ಅಮೆರಿಕ ಅಧ್ಯಕ್ಷೀಯ ಪದದ ಉಮೇದುವಾರ ಡೊನಾಲ್ಡ್ ಟ್ರಂಪ್ ಪ್ರಕಾರ ಪಾಕಿಸ್ತಾನವನ್ನು ಹದ್ದುಬಸ್ತಿನಲ್ಲಿಡಲು ಭಾರತದ ಸಹಕಾರ ಬೇಕು. ಕೆಲದಿನಗಳಿಂದ ಅಮೆರಿಕದ ನಡೆಗಳು ಭಾರತಕ್ಕೆ ಸಕಾರಾತ್ಮಕವಾಗಿ ಪರಿಣಮಿಸುತ್ತಿರುವುದಂತೂ ಹೌದು.

Leave a Reply