ಆಟೋರಿಕ್ಷಾ ಚಾಲನೆಯಿಂದಾರಂಭಿಸಿ ವಿಮಾನದ ಪೈಲಟ್- ಇದು ಶ್ರೀಕಾಂತ್ ಸಾಧನೆಯ ಎತ್ತರ!

ಡಿಜಿಟಲ್ ಕನ್ನಡ ಟೀಮ್

ಜೀವನದಲ್ಲಿ ಬಾನೆತ್ತರಕ್ಕೆ ಹಾರುವ ಕನಸು ಕಾಣುವವರು ಹಲವರು. ಆದರೆ, ಆ ಕನಸನ್ನು ನನಸಾಗಿಸುವತ್ತ ಪರಿಶ್ರಮ ಹಾಕಿ ಸಾಧನೆಯ ಗುರಿ ಮುಟ್ಟುವವರು ಮಾತ್ರ ಕೆಲವರು. ಈ ಕೆಲವರ ಸಾಧನೆಯ ಕಥೆ, ಮತ್ತೆ ಕೆಲವರ ಯಶಸ್ಸಿನ ಹಾದಿಗೆ ಸ್ಫೂರ್ತಿಯಾಗಿ ನಿಲ್ಲುತ್ತದೆ. ಈ ಪೈಕಿ ನಾಗ್ಪುರದ ಶ್ರೀಕಾಂತ್ ಪಂತವಾನೆ ಕಥೆಯೂ ಒಂದು. ಆರಂಭದಲ್ಲಿ ಡೆಲಿವರಿ ಬಾಯ್ ಆಗಿದ್ದ ಈತ, ನಂತರ ಆಟೋ ಡ್ರೈವರ್ ಆದ. ಅಲ್ಲಿಂದ ಈಗ ಏರ್ ಇಂಡಿಗೋದ ಪೈಲೆಟ್ ಆಗಿದ್ದಾನೆ.

ಶ್ರೀಕಾಂತ್ ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ಬಡ ಕುಟುಂಬದಲ್ಲಿ ಹುಟ್ಟಿದ ಶ್ರೀಕಾಂತ್ ಗೆ ಆಸೆಪಟ್ಟಿದ್ದೆಲ್ಲ ಬೇಗನೆ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶ್ರೀಕಾಂತ್ ತಂದೆ ಮೂಲತಃ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮನೆಯಲ್ಲಿನ ಬಡತನ ಸಹಜವಾಗಿಯೇ ಚಿಕ್ಕ ವಯಸ್ಸಿನಲ್ಲೇ ಈತನ ಮೇಲೆ ಕುಟುಂಬದ ಜವಾಬ್ದಾರಿ ಹಾಕಿತು. ಕುಟುಂಬದ ಆದಾಯಕ್ಕೆ ನೆರವಾಗಲು ಆರಂಭದಲ್ಲಿ ಡೆಲವರಿ ಬಾಯ್ ಆಗಿ ಕೆಲಸಕ್ಕೆ ಸೇರಿದ. ನಂತರ ಆಟೋ ಚಾಲಕನಾಗಿ ಕುಟುಂಬಕ್ಕೆ ಆಧಾರವಾದ. ಈ ಕೆಲಸದ ಜತೆಗೆ ಓದನ್ನು ಕಡೆಗಣಿಸದೇ ಈ ಎರಡೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ.

ಡಿಲವರಿ ಬಾಯ್ ಆಗಿ ಕಾರ್ಯ ನಿರ್ವಹಿಸುವಾಗ ಒಮ್ಮೆ, ಪಾರ್ಸೆಲ್ ಅನ್ನು ನೀಡಲು ವಿಮಾನ ನಿಲ್ದಾಣಕ್ಕೆ ತೆರಳಿದ. ಅಲ್ಲಿ ಕೆಡೆಟ್ ಗಳ ಜತೆ ಮಾತನಾಡುವಾಗ ‘ಯಾರು ಬೇಕಾದರೂ ಪೈಲೆಟ್ ಆಗಬಹುದು. ಪೈಲೆಟ್ ಆಗಲು ಏರ್ ಫೋರ್ಸ್ ಸೇರಲೇಬೇಕಿಲ್ಲ’ ಎಂಬುದನ್ನು ತಿಳಿದ. ಆಗ ಶ್ರೀಕಾಂತ್ ಮನಸ್ಸಿನಲ್ಲಿಬಾನೆತ್ತರದಲ್ಲಿ ವಿಮಾನ ಚಾಲಕನಾಗುವ ಕನಸಿನ ಬೀಜ ಮೊಳಕೆಯೊಡೆಯಿತು. ನಂತರ ವಿಮಾನ ನಿಲ್ದಾಣದ ಆಚೆ ಟೀ ಅಂಗಡಿಯ ಬಳಿ ಮಾತನಾಡುವಾಗ, ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಎವಿಯೇಷನ್ (ಡಿಜಿಸಿಎ) ಪೈಲೆಟ್ ಆಗಲು ಸ್ಕಾಲರ್ ಶಿಪ್ ನೀಡುತ್ತದೆ ಎಂಬುದನ್ನು ತಿಳಿದ. ಅಲ್ಲಿಂದ ಕನಸಿನ ಹಾದಿಯಲ್ಲಿ ಸಾಗಿದ ಶ್ರೀಕಾಂತ್ ಮತ್ತೆ ಹಿಂತಿರುಗಿ ನೋಡಲಿಲ್ಲ.

ಈ ಮಾಹಿತಿಗಳು ಶ್ರೀಕಾಂತ್ ಮನಸ್ಸಿನಲ್ಲಿ ಪೈಲೆಟ್ ಆಗುವ ಆಸೆ ಹೆಚ್ಚುವಂತೆ ಮಾಡಿತು. ತಕ್ಷಣವೇ ದ್ವಿತೀಯ ಪಿಯುಸಿ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿದ. ಹಗಲು ರಾತ್ರಿ ಎನ್ನದೇ ತನ್ನ ಕೆಲಸದ ಜತೆಗೆ ಓದಿಗೆ ತೊಂದರೆಯಾಗದಂತೆ ನೋಡಿಕೊಂಡ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಈ ಸ್ಕಾಲರ್ ಶಿಪ್ ಪಡೆಯುವಲ್ಲಿ ಯಶಸ್ವಿಯಾದ. ಆರಂಭದಲ್ಲಿ ಇಂಗ್ಲೀಷ್ ಈತನ ಹಾದಿಗೆ ಅಡ್ಡಿಯಾಗಿತ್ತು. ತನ್ನ ಸ್ನೇಹಿತರೊಂದಿಗೆ ಇಂಗ್ಲೀಷ್ ಕಲಿತ ಶ್ರೀಕಾಂತ್ ಸಮಸ್ಯೆ ಬಗೆಹರಿಸಿಕೊಂಡ. ಪೈಲೆಟ್ ಪರೀಕ್ಷೆಯಲ್ಲಿ ಉತ್ತಮವಾಗಿ ತೇರ್ಗಡೆ ಹೊಂದಿದ ಶ್ರೀಕಾಂತ್ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್ ಗಿಟ್ಟಿಸಿಕೊಂಡ.

ಇನ್ನೇನು ತನ್ನ ಕನಸಿನಂತೆ ಬಾನಂಗಳದಲ್ಲಿ ಹಾರಾಡುತ್ತೇನೆ ಎಂದು ಕೊಂಡಿದ್ದ ಶ್ರೀಕಾಂತ್ ಗೆ ಅದೃಷ್ಟ ಮಾತ್ರ ಸೂಕ್ತ ಬೆಂಬಲ ನೀಡಲಿಲ್ಲ. ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಆತ ಪೈಲೆಟ್ ಆಗಲು ಎಲ್ಲೂ ಅವಕಾಶ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಚಿತ್ತಗೆಡದ ಈತ ತನ್ನ ಮನೆಯ ಜವಾಬ್ದಾರಿ ಹಾಗೂ ಜೀವನ ನಿಭಾಯಿಸಲು ಕಂಪನಿಯೊಂದರಲ್ಲಿ ಎಕ್ಸಿಕ್ಯುಟಿವ್ ಆಗಿ ಕೆಲಸಕ್ಕೆ ಸೇರಿದ. ಈ ವೇಳೆ ಪೈಲೆಟ್ ಆಗುವ ಕನಸು ಶ್ರೀಕಾಂತ್ ಮನದಲ್ಲಿ ಮಾಸಲಿಲ್ಲ.

ಹೀಗೆ ಕಂಪನಿಯ ಕೆಲಸದಲ್ಲಿ ಮಗ್ನನಾಗಿದ್ದ ಶ್ರೀಕಾಂತ್ ಗೆ ಕಳೆದ ಎರಡು ತಿಂಗಳ ಹಿಂದೆ ಅಚ್ಚರಿಯ ಕರೆಯೊಂದು ಬಂದಿತು. ಅದೇನೆಂದರೆ, ಆ ಕರೆ ಬಂದಿದ್ದು ಇಂಡಿಗೊ ಏರ್ ಲೈನ್ಸ್ ನಿಂದ. ಆ ಮೂಲಕ ಶ್ರೀಕಾಂತ್ ಗೆ ಪೈಲೆಟ್ ಆಗುವ ಅವಕಾಶದ ಬಾಗಿಲು ತೆರೆಯಿತು.

ಒಟ್ಟಾರೆಯಾಗಿ ಮನೆಯಲ್ಲಿನ ಬಡತನದ ಪರಿಸ್ಥಿತಿ, ಹೆಗಲ ಮೇಲಿನ ಬೆಟ್ಟದಂತಹ ಜವಾಬ್ದಾರಿಯ ನಡುವೆಯೂ ಈತನ ಕನಸು ಮಾತ್ರ ಕಮರಲಿಲ್ಲ. ತನ್ನ ಗುರಿ ಮುಟ್ಟಲು ತಕ್ಕ ಹಾದಿಯಲ್ಲಿ ಸಾಗಿದ ಶ್ರೀಕಾಂತ್ ತನ್ನ ಆಸೆಗೆ ನೀರೆರೆದು ಪೋಷಿಸಿದ. ಗುರಿ ಸಾಧಿಸುವ ಛಲ, ಅದಕ್ಕೆ ಬೇಕಾದ ಪರಿಶ್ರಮ ಹಾಕಿದ ಶ್ರೀಕಾಂತ್, ಇಂದು ಬಾನೆತ್ತರದಲ್ಲಿ ಹಾರಾಡುತ್ತಿದ್ದಾನೆ.

1 COMMENT

Leave a Reply