ಕಪ್ಪು ಬಾವುಟ ಸಹಿಸಲಾಗದ ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರ್ಯ- ಆಜಾದಿಗಳು ಕನ್ಹಯ್ಯನ ಪುಂಡ ಬೆಂಬಲಿಗರ ಸ್ವತ್ತೇ?

 

ಪ್ರವೀಣ ಕುಮಾರ್

ಅಭಿವ್ಯಕ್ತಿ ಸ್ವಾತಂತ್ರ್ಯ, ಉದಾರವಾದ, ಬಹುತ್ವ, ಬಂಡಾಯ ಇವೆಲ್ಲದರ ಆಜಾದಿ ಇರೋದು ತಮಗೆ ಮಾತ್ರ. ಇದನ್ನು ಬೇರೆಯವರು ಉಪಯೋಗಿಸಿಕೊಳ್ಳುವುದಾದರೆ ಅವರ ಮೇಲೆ ಬಲಪ್ರಯೋಗವೇ ತಮ್ಮ ಉತ್ತರ!

ಹೀಗಂತ ಕನ್ಹಯ್ಯ ಕುಮಾರ್ ಬೆಂಬಲಿಗರು ಭಾನುವಾರ ಪಟ್ನಾದಲ್ಲಿ ನಿರೂಪಿಸಿದ್ದಾರೆ. ಜೆ ಎನ್ ಯುದಲ್ಲಿ ದೇಶದ್ರೋಹದ ಘೋಷಣೆ ಕೂಗಿರುವ ಪ್ರಕರಣದಲ್ಲಿ ತಮ್ಮ ಬೆಂಬಲಕ್ಕೆ ನಿಂತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಲಾಲು ಪ್ರಸಾದರಿಗೆ ಧನ್ಯವಾದ ಹೇಳಿದಂತೆಯೂ ಆಯಿತು, ಒಂದು ಭಾಷಣ ಕುಟ್ಟಿದಂತೆಯೂ ಆಯಿತು ಎಂಬಂತೆ ಕನ್ಹಯ್ಯ ಕುಮಾರ್ ತಮ್ಮ ನೆಲ ಬಿಹಾರಕ್ಕೆ ಬಂದಿದ್ದರು. ಇವರ ಭಾಷಣ ಮಧ್ಯದಲ್ಲಿ ಯುವಕನೊಬ್ಬ ಕಪ್ಪುಬಾವುಟ ಪ್ರದರ್ಶಿಸಿದ. ಎಡಪಂಥೀಯ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಪಾದಕರಾದ ಕನ್ಹಯ್ಯ ಗ್ಯಾಂಗಿಗೆ, ಆ ವ್ಯಕ್ತಿಯನ್ನು ಹಿಡಿದು ಥಳಿಸುವುದಕ್ಕೆ ಇಷ್ಟು ಸಾಕಾಯಿತು.

ಕಪ್ಪು ಬಾವುಟ ಪ್ರದರ್ಶನ ಲಾಗಾಯ್ತಿನಿಂದ ಪ್ರತಿಭಟನೆಯ ಒಂದು ವಿಧ. ರಾಜಕೀಯ ಸಮಾರಂಭಗಳಲ್ಲಿ ಆಗಾಗ ಇದು ವ್ಯಕ್ತವಾಗುತ್ತಿರುತ್ತದೆ. ಇಂಥ ವ್ಯಕ್ತಿಗಳನ್ನು ಪೋಲೀಸರು ಸಭಾಂಗಣದಿಂದ ಹೊರಗೆಳೆದುಕೊಂಡು ಹೋಗುವ ರೂಢಿಯೂ ಗೊತ್ತಿರುವಂಥದ್ದೆ. ಆದರೆ ಕನ್ಹಯ್ಯ ಬೆಂಬಲಿಗರು ಇಂಥ ಕಾನೂನು ಪಾಲನೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆಲ್ಲ ಅತೀತರಲ್ಲವೇ? ಹಾಗೆಂದೇ ಶಾಂತಿಯುತ ರೀತಿಯಲ್ಲೇ ಕಪ್ಪುಬಾವುಟ ಪ್ರದರ್ಶಿಸಿ ತನ್ನ ಆಕ್ರೋಶವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ವ್ಯಕ್ತಪಡಿಸಿದ ಆ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಹೊಡೆದರು. ‘ಆ ವ್ಯಕ್ತಿ ಬಿಜೆಪಿ- ಎಬಿವಿಪಿಗೆ ಸೇರಿದವನಾಗಿದ್ದ’ ಅಂತ ಎಂದಿನ ಉರುಹೊಡೆದಂತಿರುವ ವಾಕ್ಯಗಳನ್ನು ಒಪ್ಪಿಸಿ ತಮ್ಮ ಘನಂದಾರಿ ಕೃತ್ಯವನ್ನು ನಿರ್ಲಜ್ಜರಾಗಿ ಸಮರ್ಥಿಸಿಕೊಂಡರು.

ವೇದಿಕೆ ಮೇಲಿದ್ದ ಕನ್ಹಯ್ಯ ಸಹ ಪ್ರಾರಂಭದಲ್ಲಿ ‘ಬಿಟ್ಬಿಡಿ ಸ್ನೇಹಿತರೇ’ ಅಂದರಾದರೂ, ಭಾಷಣ ಮುಂದುವರಿಸಿದ ಹೊತ್ತಿನಲ್ಲಿ ಈ ಬಗ್ಗೆ ಯಾವ ವಿಷಾದವನ್ನೂ ತೋರದೇ ವ್ಯಂಗ್ಯಕ್ಕೆ ಮೊರೆಹೋಗಿದ್ದು ‘ಮಹಾನ್ ಕ್ರಾಂತಿಕಾರನ’ ಯೋಗ್ಯತೆಯನ್ನು ಸಾರಿ ಹೇಳುವಂತಿತ್ತು. ‘ನಂಗೆ ಬಣ್ಣದ ಕುರುಡಾಗಿದೆ. ಯಾವ ಬಾವುಟ ಕಂಡರೂ ಕೇಸರಿ ಧ್ವಜ ಕಂಡಂತೆಯೇ ಆಗುತ್ತದೆ’ ಅಂತ ನಂಜು ಕಾರುವ ಕುಹಕ ಮುಂದುವರಿಸಿದರು. ಎಷ್ಟೆಂದರೂ ಈ ಹಿಂದೆ ಕಂಡ ಕಂಡಲ್ಲಿ ಮೂತ್ರ ಮಾಡುವ, ಹುಡುಗಿಯರ ಜತೆ ಅಸಭ್ಯವಾಗಿ ನಡೆದುಕೊಳ್ಳುವ ಆಜಾದಿ ಬಯಸಿದ್ದ ಹೀರೋ ಈತನಲ್ಲವೇ? ಭಾಷಣವೂ ಪ್ರಧಾನಿ ನರೇಂದ್ರ ಮೋದಿ ಟೀಕೆಗೇ ಮೀಸಲಾಗಿತ್ತು. ತಾನು ನಿಂತ ನೆಲದ ಜಂಗಲ್ ರಾಜ್, ನಿರುದ್ಯೋಗ ಇವ್ಯಾವುದೂ ಕನ್ಹಯ್ಯಗೆ ಮುಖ್ಯವಾಗಲಿಲ್ಲ. ಮೋದಿ ಬರೀ ಮಾತಾಡೋದು ಬಿಟ್ಟರೆ ಯಾವ ಭರವಸೆಯನ್ನೂ ಈಡೇರಿಸಿಲ್ಲ ಅಂತ ಭಾಷಣ ಕುಟ್ಟಿದರು.

ಕನ್ಹಯ್ಯನಿಗೆ ಬಣ್ಣಗುರುಡು ಎಂಬುದು ಕೆಲದಿನಗಳ ಹಿಂದಿನ ವಿಮಾನಯಾನ ಪ್ರಕರಣದಲ್ಲೇ ಜಾಹೀರಾಗಿತ್ತು. ತನ್ನನ್ನು ವಿಮಾನದಲ್ಲಿಕುತ್ತಿಗೆ ಹಿಸುಕಿ ಕೊಲ್ಲುವುದಕ್ಕೆ ಯತ್ನಿಸಲಾಯಿತು ಅಂತ ಈತ ಬೊಬ್ಬೆ ಹಾಕಿದ. ಇಷ್ಟೇ ಅಲ್ಲ, ತನ್ನನ್ನು ಕೊಲ್ಲಲು ಬಂದಿದ್ದು ಬಿಜೆಪಿಯ ಮಾನಸ್ ದೆಕಾ ಎಂಬ ವ್ಯಕ್ತಿ ಅಂತಲೂ ಟ್ವೀಟು ಕುಟ್ಟಿ, ಯಥಾಪ್ರಕಾರ ಬಿಜೆಪಿ- ಆರೆಸ್ಸೆಸ್ ಗಳ ಮೇಲೆ ನಂಜು ಕಾರಿಕೊಂಡ. ವಾಸ್ತವದಲ್ಲಿ ಸಹಪ್ರಯಾಣಿಕನಾಗಿದ್ದ ಮಾನಸ್ ಎಂಬ ವ್ಯಕ್ತಿಗೂ, ಬಿಜೆಪಿ ಸದಸ್ಯ ಮಾನಸ್ ಗೂ ಸಂಬಂಧವೇ ಇರಲಿಲ್ಲ. ಜೆಟ್ ಏರ್ವೇಸ್ ಹಾಗೂ ಪೊಲೀಸ್ ವಿಚಾರಣೆಗಳೆರಡೂ ಅದೊಂದು ‘ಹಲ್ಲೆ’ ಎಂಬುದನ್ನೇ ಅಲ್ಲಗಳೆದವು. ಕಿಟಕಿ ಸೀಟು ಹೊಂದಿದ್ದ ವ್ಯಕ್ತಿ ಕನ್ಹಯ್ಯನನ್ನು ದಾಟುವಾಗ ಉಂಟಾದ ತಿಕ್ಕಾಟ, ಕ್ರಾಂತಿಕಾರಿ ಗ್ಯಾಂಗಿನ ಪ್ರಚಾರ ತೆವಲಿನಿಂದಾಗಿ ರಾಷ್ಟ್ರೀಯ ಸುದ್ದಿ ಆಯಿತು. ಈ ಮೂಲಕ, ಯಾತ್ರಾ ಡಾಟ್ ಕಾಂ ಪರವಾಗಿ ಕನ್ಹಯ್ಯ ಕುಮಾರನನ್ನು ತಮಾಷೆ ಮಾಡುತ್ತ, ವಿಂಡೋ ಸೀಟ್ ಕಿ ಆಜಾದಿ ಎಂಬ ಜಾಹೀರಾತು ನಿರ್ಮಿಸಿದ್ದು ಅಗ್ದಿ ಕರೆಕ್ಟ್ ಆಗಿತ್ತು ಅಂತ ಈ ಪ್ರಹಸನ ನಿರೂಪಿಸಿತಷ್ಟೆ.

ಅಂದಹಾಗೆ ಆ ಸಂದರ್ಭದಲ್ಲಿ ‘ಈ ಬಡ ಕ್ರಾಂತಿಕಾರಿ’ ಮುಂಬೈನಿಂದ ಪುಣೆಗೆ ವಿಮಾನದಲ್ಲಿ ಪ್ರಯಣಿಸುತ್ತಿದ್ದ. ಕಡಿಮೆದರದ ಹಾಗೂ ಸಮಯ ಸಹ ಕಡಿಮೆಯೇ ತಗಲುವ ರಸ್ತೆಮಾರ್ಗ ಬಹುಶಃ ಈ ಬಡವಗೆ ರುಚಿಸಿರಲಿಕ್ಕಿಲ್ಲ.

ಈ ಪುಂಡಾಟಿಕೆಯ ನೇತಾಗಿರಿಯನ್ನು ಮುಖ್ಯವಾಹಿನಿ ಮಾಧ್ಯಮ ಪ್ರಶ್ನೆಗೊಳಪಡಿಸುತ್ತಲೇ ಇಲ್ಲ ಎಂಬುದು ಕೌತುಕವೇ.

ಅತ್ತ, ಜೆ ಎನ್ ಯು ಆಂತರಿಕ ವಿಚಾರಣೆಯಲ್ಲಿ ಕನ್ಹಯ್ಯ ಆ್ಯಂಡ್ ಗ್ಯಾಂಗ್ ಗೆ ಶಿಕ್ಷೆ ಆಗಿದೆಯಲ್ಲ? ಸಮತೋಲನಕ್ಕೆ ಇರಲಿ ಎಂಬಂತೆ ಎಬಿವಿಪಿಯ ಸೌರಭ್ ಶರ್ಮರಿಗೂ ₹10 ಸಾವಿರ ದಂಡ ಹಾಕಲಾಗಿದೆ. ಇದರ ವಿರುದ್ಧ ಅವರು ಶನಿವಾರ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ದಂಡ ಹಾಕಿರುವುದು ‘ಸಂಚಾರ ತಡೆಗಟ್ಟಿದ’ ಆರೋಪದಲ್ಲಿ. ಸೌರಭ್ ಕೇಳುತ್ತಿರುವ ಪ್ರಶ್ನೆ- ‘ಫೆಬ್ರವರಿ 9ರ ದೇಶವಿರೋಧಿ ಕಾರ್ಯಕ್ರಮ ರದ್ದುಪಡಿಸುವಂತೆ ವಿವಿಗೆ ದೂರು ಸಲ್ಲಿಸಿದವನು ನಾನು. ದೇಶದ್ರೋಹಿ ಘೋಷಣೆಗಳ ಮೆರವಣಿಗೆಗೆ ಪ್ರತಿರೋಧ ತೋರಿದ್ದು ಅಪರಾಧವಾಗುತ್ತದೆಯೇ?’

ಕನ್ಹಯ್ಯ ವ್ಯಕ್ತಿತ್ವದ ಟೊಳ್ಳುತನ, ವಿಚಾರ ಪ್ರತಿಪಾದನೆಯಲ್ಲಿ ಇಲ್ಲದ ಸತ್ವ ಹೆಜ್ಜೆ ಹೆಜ್ಜೆಗೂ ಪ್ರಕಟವಾಗುತ್ತಲೇ ಇದೆ. ಆದರೆ ಈತನನ್ನು ಹೀರೋ ಮಾಡಿದ ಬುದ್ಧಿಜೀವಿಗಣಕ್ಕೆ ಮಾತ್ರ ಈತನಂತೆಯೇ ದಿವ್ಯಕುರುಡು!

ಇದನ್ನೂ ಓದಿ: ಮೋದಿದ್ವೇಷದ ಹೊಸ ಹೀರೋ

1 COMMENT

  1. ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಹುಟ್ಟಿಕೊಂಡಿರೊ “ಡಿಜಿಟಲ್ ಕನ್ನಡ” ಅಂತ ಸ್ಪಷ್ಟವಾಗಿ ಗೊತ್ತಾಗ್ತಿದೆ. ವೀಡಿಯೋ ಎಡಿಟ್ ಮಾಡಿದ ದೇಶಭಕ್ತನ ಬಗ್ಗೆ ಮೊದ್ಲು ಬರೀರಿ ಆಮೇಲೆ ಕನ್ಹಯ್ಯನ ದೇಶದ್ರೋಹದ ಬಗ್ಗೆ ಮಾತಾಡಿ.

Leave a Reply