ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಚಾಲನೆ, ಐದು ಕೋಟಿ ಅಗತ್ಯ ಮನೆಗಳಿಗೆ ಉಚಿತ ಎಲ್ ಪಿಜಿ ಸಂಪರ್ಕ ಮೋದಿ ಗುರಿ

ಡಿಜಿಟಲ್ ಕನ್ನಡ ಟೀಮ್

ಪ್ರಧಾನಿ ನರೇಂದ್ರ ಮೋದಿ ಅವರ ಹಲವು ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ‘ಪ್ರಧಾನ ಮಂತ್ರಿ ಉಜ್ವಲಾ ಯೋಜನೆ’ಗೆ ಭಾನುವಾರ ಉತ್ತರ ಪ್ರದೇಶದಲ್ಲಿ ಭರ್ಜರಿ ಚಾಲನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ಬರಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಇಲ್ಲೇ ನಡೆಸಿರುವುದರಲ್ಲಿ ಅದರದೇ ಆದ ರಾಜಕೀಯ ಲೆಕ್ಕಾಚಾರವೂ ಇದೆ. ಇವೆಲ್ಲವನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಈ ಯೋಜನೆ ಜನಸಾಮಾನ್ಯರಿಂದ ಪಡೆದದನ್ನು ಜನಸಾಮಾನ್ಯರಿಗೆ ನೀಡುವ ಪ್ರಯತ್ನ ಎಂದರೆ ತಪ್ಪಿಲ್ಲ.

ಸರ್ಕಾರ ನೀಡುವ ಗ್ರಾಹಕರಿಗೆ ನೀಡುತ್ತಿರುವ ಅಡುಗೆ ಅನಿಲ ಮೇಲಿನ ಸಬ್ಸಿಡಿಯನ್ನು ಅಗತ್ಯವಿಲ್ಲದವರು ಕೈಬಿಡಿ ಎಂದು ಕಳೆದ ವರ್ಷ ‘ಗಿವ್ ಇಟ್ ಅಪ್’ ಆಂದೋಲನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು. ಮೋದಿ ಅವರ ಮನವಿಗೆ ಸ್ಪಂದಿಸಿದ 85 ಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಸಬ್ಸಿಡಿ ತ್ಯಜಿಸಿದರು. ಈ ಹಣದಿಂದ ಸುಮಾರು 5 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಗುರಿಯಾಗಿದೆ. ಆ ಮೂಲಕ ಬಡ ಕುಟುಂಬದಲ್ಲಿ ಸೌದೆ ಒಲೆಯಲ್ಲಿ ಹೊಗೆ ಕುಡಿದು ಪರದಾಟ ನಡೆಸುವ ಕೋಟ್ಯಂತರ ಬಡ ಕುಟುಂಬದ ಮಹಿಳೆಯರಿಗೆ ನೆರವಾಗಲಿದೆ.

ಮೇ 1, ಕಾರ್ಮಿಕರ ದಿನದಂದು ಈ ಯೋಜನೆಗೆ ಚಾಲನೆ ನೀಡಿರುವ ಮೋದಿ, ಮುಂದಿನ 3 ವರ್ಷಗಳಲ್ಲಿ 5 ಕೋಟಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಈ ಉಚಿತ ಗ್ಯಾಸ್ ಸಂಪರ್ಕ ವಿತರಿಸುವ ಗುರಿ ಹೊಂದಿದ್ದಾರೆ. ಈ ಯೋಜನೆಯಲ್ಲಿ ಗ್ರಾಹಕರಿಂದ ಪಡೆದ ಸಬ್ಸಿಡಿ ಹಣ ಸೇರಿದಂತೆ ಒಟ್ಟು 8 ಸಾವಿರ ಕೋಟಿ ವೆಚ್ಚ ತಗುಲಲಿದೆ. ಪ್ರಸ್ತುತ ಭಾರತದಲ್ಲಿ 16.64 ಕೋಟಿ ಎಲ್ ಪಿಜಿ ಸಂಪರ್ಕವಿದೆ. ಆ ಮೂಲಕ 21 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಪೆಟ್ರೋಲಿಯಂ ಅನಿಲವನ್ನು ಬಳಸಲಾಗುತ್ತಿದೆ. ಈ ಯೋಜನೆ ಮೂಲಕ 2016-17ನೇ ಸಾಲಿನಲ್ಲಿ 1.5 ಕೋಟಿ ಹೆಚ್ಚುವರಿ ಸಂಪರ್ಕ ನೀಡಲಿದ್ದು, ಪ್ರತಿ ಬಿಪಿಎಲ್ ಕುಟುಂಬಕ್ಕೆ 1600 ಆರ್ಥಿಕ ಬೆಂಬಲ ನೀಡಿದಂತಾಗಲಿದೆ.

ಗ್ಯಾಸ್ ಸ್ಟೌವ್ ಮತ್ತು ಇತರೆ ವಸ್ತುಗಳ ಖರೀದಿಯನ್ನು ಸುಲಭವಾಗಿಸಲು ಸರ್ಕಾರ ಪ್ರಯತ್ನಿಸಿದೆ. ಡೀಲರ್ ಗಳ ಸಹಾಯದಿಂದ ಇದರ ಬೆಲೆ ಕಡಿಮೆ ಮಾಡಲಾಗಿದ್ದು, ಫಲಾನುಭವಿ ಕುಟುಂಬ ಈ ವಸ್ತುಗಳನ್ನು ಖರೀದಿಸಲು ತಕ್ಷಣವೇ ಹಣ ನೀಡುವ ಅಗತ್ಯ ಇಲ್ಲ. ಇದರ ಹಣವನ್ನು ಅಡುಗೆ ಅನಿಲಕ್ಕೆ ನೀಡಲಾಗುವ ಸಬ್ಸಿಡಿ ಹಣದಲ್ಲಿ ಹಂತ ಹಂತವಾಗಿ ಪಾವತಿ ಮಾಡಲಾಗುವುದು. ಈ ಸಬ್ಸಿಡಿ ಹಣವನ್ನು ಫಲಾನುಭವಿ ಕುಟುಂಬದ ಮಹಿಳೆಯ ಜನ ಧನ್ ಖಾತೆಯಿಂದ ಡೀಲರ್ ಖಾತೆಗೆ ನೇರವಾಗಿ ವರ್ಗವಾಗುವಂತೆ ಮಾಡಲಾಗುವುದು.

ಉತ್ತರ ಪ್ರದೇಶದ ಬಾಲಿಯಾದಲ್ಲಿ ಈ ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಸೌದೆ ಒಲೆಯಲ್ಲಿ ಅಡುಗೆ ಮಾಡುವುದರಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಕುಡಿಯುತ್ತಾರೆ. ಇದು 40 ಸಿಗರೇಟ್ ಗೆ ಸಮ ಎಂದು ಸಮೀಕ್ಷೆಗಳ ವರದಿಯಲ್ಲಿ ಬಂದಿವೆ. ಸುಮಾರು 85 ಲಕ್ಷ ಜನರು ತಮ್ಮ ಸಬ್ಸಿಡಿಯನ್ನು ಕೈಬಿಟ್ಟಿದ್ದಾರೆ. ಇವರೆಲ್ಲರೂ ಶ್ರೀಮಂತರಲ್ಲ. ಕೆಲಸದಿಂದ ನಿವೃತ್ತಿ ಹೊಂದಿರುವವರೂ ಸಹ ಈ ಒಂದು ಉತ್ತಮ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ಸಂಪರ್ಕದಿಂದ ಕುಟುಂಬದ ಖರ್ಚು ಕಡಿಮೆ ಮಾಡುವುದರ ಜತೆಗೆ ಮಹಿಳೆಯರ ಆರೋಗ್ಯ ಕಾಪಾಡುವುದು ಮುಖ್ಯ ಉದ್ದೇಶವಾಗಿದೆ. ಇಲ್ಲಿ ಅತಿ ಕಡಿಮೆ ಮಟ್ಟದ ಅಡುಗೆ ಅನಿಲ ಸಂಪರ್ಕವಿದೆ. ಹಾಗಾಗಿ ಇಲ್ಲಿ ಈ ಯೋಜನೆ ಉದ್ಘಾಟಿಸಲು ಮುಂದಾಗಿದ್ದೇನೆ. ಈ ಯೋಜನೆ ಬಡ ಕುಟುಬ, ಅದರಲ್ಲೂ ಬಡ ಮಹಿಳೆಯರಿಗೆ ನೆರವಾಗಲಿದೆ’ ಎಂದು ತಿಳಿಸಿದರು.

Leave a Reply