ಟನ್ನುಗಟ್ಟಲೇ ದಂತರಾಶಿಗೆ ಕೀನ್ಯಾ ಬೆಂಕಿ ಇಡುತ್ತಿರೋದಕ್ಕೆ ಕಾರಣ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಂತ ಹಾಗೂ ಅದರ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ಈ ಬೇಡಿಕೆ ದಂತ ಉತ್ಪನ್ನಗಳ ಕಾಳಸಂತೆ ವ್ಯಾಪಕವಾಗಿ ಹರಡಲು ದಾರಿ ಮಾಡಿಕೊಟ್ಟಿದೆ. ಇದರ ಪರಿಣಾಮ ಕಳೆದ ಕೆಲ ವರ್ಷಗಳಲ್ಲಿ ಆಫ್ರಿಕಾ ರಾಷ್ಟ್ರಗಳಲ್ಲಿ ಆನೆ ಮತ್ತು ಘೇಂಡಾಮೃಗಗಳನ್ನು ಲೆಕ್ಕವಿಲ್ಲದಂತೆ ಹತ್ಯೆ ಮಾಡಲಾಗುತ್ತಿದೆ. ಈ ಬೆಳವಣಿಗೆಯನ್ನು ವಿರೋಧಿಸಿ ಕೀನ್ಯಾ ವಿಚಿತ್ರ ಕ್ರಮವನ್ನು ಕೈಗೊಂಡಿದೆ. ಈವರೆಗೂ ಸಂಗ್ರಹಿಸಲಾಗಿದ್ದ ಸಾವಿರಾರು ಆನೆಗಳ, ಕೋಟ್ಯಂತರ (ಸುಮಾರು ₹ 1150 ಕೋಟಿ) ಮೌಲ್ಯದ ಆನೆ ದಂತ ಮತ್ತು ಘೇಂಡಾಮೃಗಗಳು ಕೊಂಬು ಹಾಗೂ ಅದರ ಉತ್ಪನ್ನಗಳನ್ನು ರಾಶಿ ರಾಶಿಯಾಗಿ ಸುರಿದು ಬೆಂಕಿ ಇಟ್ಟಿದ್ದಾರೆ.

ಅರೆ, ಈ ಪ್ರಾಣಿಗಳ ಹತ್ಯೆ ವಿರೋಧಿಸುವುದಕ್ಕೂ ಅವುಗಳ ದಂತವನ್ನು ಸುಡುವುದಕ್ಕೂ ಏನು ಸಂಬಂಧ ಅಂತಾ ಯೋಚಿಸುತ್ತಿದ್ದೀರಾ? ಸಂಬಂಧ ಇದೆ. ಈ ದಂತಗಳನ್ನು ಸುಡುವ ಮೂಲಕ ನಾವು ಈ ದಂತಗಳಿಗೆ ಬೆಲೆ ಕೊಡುವುದಿಲ್ಲ. ಈ ದಂತ ಮತ್ತು ಕೊಂಬು ಜೀವಂತ ಆನೆ ಮತ್ತು ಘೇಂಡಾಮೃಗದಲ್ಲಿದ್ದರೆ ಮಾತ್ರ ನಾವು ಬೆಲೆ ಕೊಡುತ್ತೇವೆ ಎಂಬ ಸಂದೇಶ ರವಾನಿಸುತ್ತಿದೆ ಕೀನ್ಯಾ ಸರ್ಕಾರ.

ಕೀನ್ಯಾ ಸರ್ಕಾರ ಸುಟ್ಟಿರುವುದು ಒಂದೆರಡು ದಂತ ಹಾಗೂ ಕೊಂಬುಗಳನ್ನಲ್ಲ. ಬರೋಬ್ಬರಿ 8 ಸಾವಿರ ಆನೆಗಳ ದಂತ ಹಾಗೂ 343 ಘೇಂಡಾಮೃಗಗಳ ಕೊಂಬು. ಇಲ್ಲಿ ಹೊತ್ತಿ ಉರಿದ ದಂತದ ಮೌಲ್ಯ ಎಷ್ಟು ಗೊತ್ತೇ? ಬರೋಬ್ಬರಿ 105 ಮಿಲಿಯನ್ ಅಮೆರಿಕನ್ ಡಾಲರ್ (₹ 700 ಕೋಟಿ), ಇನ್ನು ಕೊಂಬಿನ ಮೊತ್ತ 67 ಮಿಲಿಯನ್ ಅಮೆರಿಕನ್ ಡಾಲರ್ (₹ 430 ಕೋಟಿ) ನಷ್ಟು. ಕೀನ್ಯಾ ಸೈನಿಕರು 10 ದಿನಗಳ ಕಾಲಾವಧಿಯಲ್ಲಿ  ಒಟ್ಟು 105 ಟನ್ ನಷ್ಟು ಆನೆ ದಂತ ಹಾಗೂ 1.35 ಟನ್ ನಷ್ಟು ಘೇಂಡಾಮೃಗದ ಕೊಂಬು, ಹಾಗೂ ಅವುಗಳ ಉತ್ಪನ್ನಗಳನ್ನು ರಾಶಿಯಾಗಿ ಸುರಿದು ಬೆಂಕಿ ಇಟ್ಟಿದ್ದಾರೆ.

ivoryburn2

1989ರಲ್ಲಿ ಈ ರೀತಿಯಾದ ಬೆಂಕಿ ಹಚ್ಚುವ ಪದ್ಧತಿ ಆರಂಭವಾಗಿದ್ದು, ಇದು ನಾಲ್ಕನೇ ಬಾರಿಗೆ ದಂತಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಬೆಂಕಿಯಲ್ಲಿ ಕೋಟ್ಯಂತರ ಮೌಲ್ಯದ ಸಂಪತ್ತು ನಾಶವಾಗಿದೆ ಎಂದು ನಾವೆಲ್ಲ ಭಾವಿಸಬಹುದು. ಆದರೆ, ಅಲ್ಲಿನ ಸರ್ಕಾರ ಅದನ್ನು ಸಂಪತ್ತು ಎಂದು ಪರಿಗಣಿಸಲು ಸಿದ್ಧವಿಲ್ಲ. ಈ ದಂತಗಳು ಜೀವಂತ ಪ್ರಾಣಿಯ ಜೊತೆ ಇದ್ದರೆ ಮಾತ್ರ ಸಂಪತ್ತು ಎಂಬುದು ಅವರ ವಾದ.

ಇಲ್ಲಿನ ಮೂಲ ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಒಂದು ಜೀವಂತ ಆನೆ, ದಂತೋದ್ಯಮದ 76 ಪಟ್ಟು ಆದಾಯವನ್ನು ಪ್ರವಾಸೋದ್ಯಮದಿಂದ ತಂದುಕೊಡಲಿದೆ. ಹೀಗಾಗಿ ದಂತಕ್ಕಾಗಿ ಆನೆ, ಘೆಂಡಾಮೃಗಗಳನ್ನು ಕೊಲ್ಲಬೇಡಿ, ಅವನ್ನು ರಾಷ್ಟ್ರೀಯ ಸಂಪತ್ತಾಗಿ ಉಳಿಸಿಕೊಳ್ಳೋಣ ಎಂಬ ಸಂದೇಶವಿದು. ಇವುಗಳನ್ನು ಕೊಂದು ಯಾರಾದರೂ ದಂತ ಸಂಪತ್ತು ಸೃಷ್ಟಿಗೆ ಮುಂದಾದರೆ, ಅವಕ್ಕೆ ಯಾವುದೇ ಬೆಲೆ ಎಂದು ಜಗತ್ತಿಗೆ ಜಾಹೀರುಪಡಿಸಲು ಈವರೆಗಿನ ದಂತ ಸಂಗ್ರಹ, ದಂತದ ಉತ್ಪನ್ನಗಳನ್ನೆಲ್ಲ ಕಲೆಹಾಕಿ ಬೆಂಕಿ ಇಡಲಾಗುತ್ತಿದೆ.

ಈ ರಾಷ್ಟ್ರಗಳಲ್ಲಿ ಪ್ರಾಣಿ ವಸ್ತುಗಳ ಕಳ್ಳ ಸಾಗಾಣೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಆಫ್ರಿಕಾ ಎಂದರೆ ಸಾಕು, ಆನೆಗಳು ಮತ್ತು ಘೇಂಡಾಮೃಗಗಳು ಕಣ್ಮುಂದೆ ಬರುತ್ತಿದ್ದವು. ಈ ದೇಶಗಳ ಗುರುತಾಗಿ ಈ ಪ್ರಾಣಿಗಳನ್ನು ಬಳಸಲಾಗುತ್ತಿತ್ತು. ಆದರೆ, ಈಗ ಅವುಗಳ ಮಾರಣ ಹೋಮ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಎಂಬಂತೆ ಆನೆಯ ಹತ್ಯೆ ಪ್ರಮಾಣವಿದೆ. ಇನ್ನು ಕಳೆದ ವರ್ಷವೊಂದರಲ್ಲೇ ಸರಿಸುಮಾರು 1338 ಘೇಂಡಾಮೃಗಗಳನ್ನು ಕೊಲ್ಲಲಾಗಿದೆ. ಸತತ ಆರನೇ ವರ್ಷ ಇಷ್ಟು ಪ್ರಮಾಣದ ಹತ್ಯೆ ನಡೆದಿದೆ. ಹಾಗಾಗಿ ಈ ಅತ್ಯಮೂಲ್ಯ ಹಾಗೂ ಅದ್ಭುತ ಪ್ರಾಣಿಗಳ ಸಂತತಿ ಕಾಪಾಡಿಕೊಳ್ಳಬೇಕಿರುವುದು ಇಲ್ಲಿನ ಸರ್ಕಾರಗಳ ಜವಾಬ್ದಾರಿಯಾಗಿದೆ.

‘ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಂತಕ್ಕೆ ಹೆಚ್ಚಿನ ಮೌಲ್ಯ ಬರುತ್ತಿದ್ದಂತೆ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಆಫ್ರಿಕಾದ ಅರಣ್ಯದಲ್ಲಿ ಸಾಮೂಹಿಕ ಹತ್ಯೆ ನಡೆಯುತ್ತಿದ್ದು, ಈ ಪ್ರಾಣಿ ಸಂಪತ್ತು ನಶಿಸುತ್ತಿದೆ. ಕಳೆದ ದಶಕದಲ್ಲಿ ಕೇಂದ್ರ ಆಫ್ರಿಕಾದಲ್ಲಿದ್ದ ಶೇ.70ರಷ್ಟು ಆನೆ ಪ್ರಮಾಣ ನಾಶವಾಗಿದೆ. ಆನೆ ನಮ್ಮ ದೇಶದ ಸಂಕೇತ. ಈಗ ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಈ ಪ್ರಾಣಿ ಸಂತತಿಗಳು ನಶಿಸಲಿವೆ’ ಎಂದು ಕೀನ್ಯಾ ಅಧ್ಯಕ್ಷ ಯುಹುರು ಕೆನ್ಯಾಟ ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply