ಪ್ರತ್ಯುತ್ಪನ್ನಮತಿಯಾಗುವುದೇ? ಪಲಾಯನವಾದಿಯಾಗುವುದೇ?

ಜಯಶ್ರೀ ದೇಶಪಾಂಡೆ

‘ದೇಶದಲ್ಲಿ ಆತ್ಮಹತ್ಯೆಗಳ ಸ೦ಖ್ಯೆಯಲ್ಲಿ ಭಾರೀ ಹೆಚ್ಚಳ’ ಇದು ವೃತ್ತಪತ್ರಿಕೆ, ಟೆಲಿವಿಜನ್, ಮತ್ತು ಅಂತರ್ಜಾಲದಲ್ಲಿ ತೋರಿ ಬಂದ ಸಣ್ಣ ಸಂಗತಿಯಾಗಿರುವ ಹಿನ್ನೆಲೆಯಲ್ಲಿ ಮನುಷ್ಯ ಜೀವ ಇಷ್ಟು ಹಗುರವಾಗುತ್ತಿರುವುದೇಕೆ, ಸಾವು ಕೆಲವರಿಗೆ ಎಲ್ಲ ಸಮಸ್ಯೆಗಳ ಮುಕ್ತಿಯ ರೂಪವಾಗಿ ಬರುತ್ತಿರುವುದೇಕೆ…ದುರ್ಲಭವಾದ ಮಾನವ ಜನ್ಮವನ್ನು ಹುಲ್ಲು ಕಿತ್ತೆಸೆದಷ್ಟು ಸಲೀಸಾಗಿ ಮುರುಟಿ ಹೋಗುತ್ತಿರುವುದೇಕೆ ? ಎನ್ನುವ ಪ್ರಶ್ನೆಗಳು ಕಾಡುವುದು ಸಹಜ. ಇಲ್ಲಿ ನನಗೊಂದು ಜಾತಕ ಕಥೆ ನೆನಪಾಗುತ್ತಿದೆ.

‘ಒ೦ದು ದೊಡ್ಡ ಕೆರೆಯಿತ್ತು. ಅದರಲ್ಲಿ ಮೂರು ಮೀನುಗಳು ವಾಸವಾಗಿದ್ದುವು. ಒಂದರ ಹೆಸರು ಅನಾಗತಭಯ, ಇನ್ನೊಂದು ಪ್ರತ್ಯುತ್ಪನ್ನಮತಿ ಹಾಗೂ ಮೂರನೆಯದರ ಹೆಸರು ಯದ್ಭವಿಷ್ಯ. ಮೊದಲನೆಯ ಮೀನಿನ ಮನಸ್ಸು ‘ಮುಂದೊಂದು ದಿನ ಹೀಗೆ ಹೀಗೆಲ್ಲ ನಡೆಯಬಹುದಲ್ಲವೇ… ಅದನ್ನು ನಾನು ಈ ರೀತಿಯ ಉಪಾಯಗಳಿಂದ ಪರಿಹರಿಸಿಕೊಳ್ಳಬಹುದಲ್ಲವೇ’  ಎಂದೆಲ್ಲ ಆಲೋಚಿಸಿ ಅದರ ತಯಾರಿಯಲ್ಲಿರುತ್ತಿತ್ತು.

ಎರಡನೆಯ ಮೀನು ‘ಅಪಾಯ ಬಂದ ಸಮಯದಲ್ಲಿ ಆಲೋಚನೆ ಮಾಡಿದರಾಯಿತು. ಆ ಹೊತ್ತಿಗೆ ಏನಾದರೂ ಉಪಾಯ ತೋಚಿಯೇ ತೋಚುತ್ತದೆ . ಎಂದೋ ಬರಬಹುದಾದ ಭಯಕ್ಕೆ ಇಂದೇ ಯಾಕೆ ಅಧೈರ್ಯ ಪಡಬೇಕು’ ಎ೦ದು ನಿಶ್ಚಿಂತೆಯಲ್ಲಿತ್ತು.

ಮೂರನೆಯದು ಮಾತ್ರ ‘ಈ ಪ್ರಪಂಚವೇ ಅನಿಶ್ಚಿತ. ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದನ್ನು ಬ್ರಹ್ಮನೂ ತಪ್ಪಿಸಲು ಸಾಧ್ಯವಿಲ್ಲ. ಏನು ನಡೆಯಬೇಕೋ ನಡೆದೇ ನಡೆಯುತ್ತದೆ. ಆದ್ದರಿ೦ದ ಈಗ ತಲೆ ಕೆಡಸಿಕೊಂಡು ಏನು ಪ್ರಯೋಜನ’ ಎ೦ದು ವಾದಿಸುತ್ತ ಕೂತಿತ್ತು.

ಆಗೊಂದು ದಿನ ನಾಲ್ವರು ಮೀನುಗಾರರು ಬಂದು ಕೆರೆಯ ಸುತ್ತ ಮುತ್ತ ಸುಳಿದಾಡಿದರು. ಅದನ್ನು ಕಂಡ ಮೊದಲನೆಯ ಮೀನು ಅಪಾಯವನ್ನು ಗ್ರಹಿಸಿ ‘ಇವತ್ತು ಬಂದ ಮೀನುಗಾರರು ನಾಳೆಯೂ ಬರುತ್ತಾರೆ. ಬಲೆ ಬೀಸಲೂಬಹುದು. ಆದ್ದರಿಂದ ನಾನು ಅಪಾಯವನ್ನು ತಪ್ಪಿಸಿಕೊಳ್ಳುವುದು ಸೂಕ್ತ’ ಎಂದೆಣಿಸಿ ಅಲ್ಲಿಂದ ಪರಾರಿಯಾಗಿ ಬೇರೆಡೆಗೆ ಹೋಗಿಬಿಟ್ಟಿತು. ಮತ್ತು ಬದುಕಿಕೊಂಡಿತು.

ಮಾರನೆಯ ದಿನ ಮೀನುಗಾರರು ಬಂದು ಬಲೆ ಬೀಸಿದಾಗ ಎರಡನೆಯ  ಮತ್ತು ಮೂರನೆಯ ಮೀನುಗಳೆರಡೂ ಸಿಕ್ಕಿಹಾಕಿಕೊಂಡವು. ಆದರೆ ಎರಡನೆಯ ಮೀನು ‘ಇವರು ಬಲೆಯ  ಕುಣಿಕೆ ಎಳೆಯುವುದರೊಳಗಾಗಿ ನಾನಿಲ್ಲಿಂದ ಪಾರಾಗಬೇಕು’ ಎಂದುಕೊಳ್ಳುತ್ತ ಚಾಣಾಕ್ಷತೆಯಿ೦ದ ನುಣುಚಿಕೊಂಡು ದೂರ ಹೋಗಿಬಿಟ್ಟಿತು. ಅದೂ ಬದುಕಿಕೊಂಡಿತು.

ಮೂರನೆಯ ಮೀನು ಯದ್ಭವಿಷ್ಯ ಮಾತ್ರ ‘ಆಗಬೇಕಾದು ಆಗಿಯೇ ಆಗುತ್ತೆ. ಯಾರೂ ತಪ್ಪಿಸಲಾರರು’ ಎ೦ದು ಬಡಬಡಿಸುತ್ತ ಆ ಮೀನುಗಾರರ ಬಲೆಯೊಳಗೆ ಉಳಿದು ತನ್ನ ಅಂತ್ಯವನ್ನು ಕಂಡಿತು.’

ಜೀವನ ಮತ್ತದು ಒಡ್ಡಬಹುದಾದ ಪರೀಕ್ಷೆಗಳ ಮಾನದಂಡವಾಗಿ ಈ ಕಥೆಯನ್ನು ಗಣಿಸಿ ನೋಡಿದರೆ ಕೆಲವು ಸತ್ಯಗಳು ಗೋಚರವಾಗುತ್ತವೆ.

 ತರ್ಕ ಸೂಕ್ಷ್ಮತೆ, ಆಗು ಹೋಗುಗಳ ಬಗ್ಗೆ ಸಹಜವಾಗಿಯೇ ಮನಸ್ಸಿನಲ್ಲಿ ಹುಟ್ಟುವ ಲೆಕ್ಕಾಚಾರಗಳು- ನಮ್ಮ ಬದುಕಿನ ಉದ್ದಕ್ಕೂ ಹೆಣೆದುಕೊಂಡು ಬಂದು ನಮ್ಮ ಮಿದುಳಿನ ವಿಚಾರಧಾರೆಯ ಪ್ರತ್ಯುತ್ಪನ್ನ ಸಂಗತಿಗಳು. ಎಲ್ಲಿ ಯಾವಾಗ ಯಾವ ಲಾಜಿಕ್ ಬಳಸಿದರೆ ಬರಬಹುದಾದ, ಬಂದ ಮತ್ತು ಇನ್ನು ಮೇಲೆ ಬರಲಿರುವ ವಿಪತ್ತುಗಳನ್ನು ಯಶಸ್ವಿಯಾಗಿ ದಾಟಬಹುದೆಂಬ ತರ್ಕಸೂಕ್ಷ್ಮತೆಯನ್ನು ಈ ಮೂರು ಮೀನುಗಳು ದೃಷ್ಟಾಂತೀಕರಿಸಿವೆ. ಹೌದಲ್ಲವೇ?

ಆದರೆ ಕೊಂಚ ತಾಳಿ… ಇಲ್ಲೊಂದು  ಅನುಮಾನ. ಇಲ್ಲಿ ಜೀವನಭದ್ರತೆಯ ದೃಷ್ಟಿಯಿಂದ ಇದನ್ನವಲೋಕಿಸಿದಾಗ ಮೂರನೆಯ ಮೀನನ್ನು ಯಾರೂ ಮೆಚ್ಚಲಾಗದು, ತನ್ನ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳುವ ಬುದ್ಧಿಯಿಂದಾಗಿ ಕಂಡ ಪರ್ಯವಸಾನ ಅದು. ಇನ್ನು ಎರಡನೆಯ ಮೀನು ಕೊಟ್ಟ ಕೊನೆಯ ವರೆಗೂ ಅಪಾಯ ಕಣ್ಣೆದುರಲ್ಲಿದ್ದರೂ ಸುಮ್ಮನೇ ಕೂತದ್ದು ಅದರ (ಭಂಡ ) ಧೈರ್ಯವಾಗಬಹುದೇ? ಮೊದಲ ಮೀನು ಅತ್ಯಪೂರ್ವ ದೂರದೃಷ್ಟಿ ಬಳಸಿ ತನ್ನನ್ನೇ ಉಳಿಸಿ ಭದ್ರಪಡಿಸಿಕೊ೦ಡರೆ ಅದು ಜಾಣ್ಮೆಯೇ ಇರಲೂಬಹುದು. ಆದರೆ ಮೀನುಗಾರರು ಮಾರನೇ ದಿನ ಬರದೇ ಹೋಗಿದ್ದರೆ? ಇದ್ದ ಮನೆಯನ್ನೇ ಕಳಕೊಂಡಂತಾಯ್ತಲ್ಲ?

ಇವೆಲ್ಲವನ್ನೂ ಮೀರಿದ ಇನ್ನೊಂದು ದಾರಿಯನ್ನು ಮನುಷ್ಯರು, ಅದರಲ್ಲೂ ಹೆಚ್ಚಾಗಿ ಹದಿ ಹರೆಯದ ತರುಣ ತರುಣಿಯರು  ಅನುಸರಿಸುತ್ತಾರೆ. ಅದೇ ‘ಆತ್ಮಹತ್ಯೆ’!  ತಮ್ಮ ಪ್ರಾಣವನ್ನು ಕ್ಷಣಾರ್ಧದಲ್ಲಿ ತಾವೇ ಬಲಿಕೊಟ್ಟು ಜೀವನವನ್ನೇ ಮೋಸಗೊಳಿಸುವ ಹುಡುಗ ಹುಡುಗಿಯರ ದೊಡ್ಡ ಪಡೆಯನ್ನೇ ನಾವಿಂದು ಎಲ್ಲೆಲ್ಲೂ  ಕಾಣುತ್ತೇವೆ. ಇವರಲ್ಲಿ ಬಹುತೇಕರಿಗೆ ಬದುಕು ಎಂದರೆ ಏನು? ಅದರ ಮಹತ್ವವೇನು ಎಂಬ ಯಾವ ಗಹನ ಸೂಕ್ಷ್ಮವೂ ಅರ್ಥವಾಗಿರುವುದೇ ಇಲ್ಲ. ಅತಿ ಕ್ಷುಲ್ಲಕ ಕಾರಣಗಳಿಗಾಗಿ ಜೀವ ಕೊಡುವ ಇವರ ನಿರ್ಧಾರಗಳ   ಪೂರ್ವಾಪರಗಳನ್ನು ವಿಮರ್ಶಿಸಿ ನೋಡಿದರೆ ಸಂಭವಿಸಿದ ಅನೇಕ ಸಾವುಗಳು ತಮಗೆ ತಾವೇ ಮಾಡಿಕೊ೦ಡ ಅನ್ಯಾಯಗಳಾಗಿರುತ್ತವೆ ಎ೦ದು ಸ್ಪಷ್ಟವಾಗಿ ತಿಳಿಯದೇ ಇರಲಾರದು. ಅಪವಾದಗಳನ್ನು ಹೊರತುಪಡಿಸಿಯೂ ಈ ನಿರ್ಧಾರವನ್ನು ಸರಿ ಎನ್ನಲಾಗದು!

ಇಲ್ಲಿ ಯದ್ಭವಿಷ್ಯ ಮೀನು ಕೂಡ  ಇಂಥದೇ ಆತ್ಮಹತ್ಯಾ ಪೃವೃತ್ತಿಯ ಸಂಕೇತವಾಗಿದೆ. ಅಪಾಯವನ್ನು ಎದುರಿಸದೆ, ಪಾರಾಗುವ ಪ್ರಯತ್ನವನ್ನೂ ಮಾಡದೇ ಸಾವಿಗೆ ತನ್ನನ್ನೇ ಒಡ್ಡಿಕೊಂಡ ಅದರಂತೆಯೇ ಸಾವಿರಾರು ಹುಡುಗ ಹುಡುಗಿಯರು ತಮ್ಮ ಸಾವಿನಲ್ಲಿ ಒಂದಿಷ್ಟು ಸಂತಾಪ, ಸಹಾನುಭೂತಿಗಳ ಜೊತೆಯಲ್ಲೇ ಅಧೈರ್ಯ, ಆತ್ಮಸ್ಥೈರ್ಯದ ಕೊರತೆಯ  ಸಂಕೇತಗಳಾಗಿ ಉಳಿದು ಹೋಗುತ್ತಾರೆ.  ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಉತ್ತರವಲ್ಲ ಎಂಬ ಸರಳ ಸತ್ಯವನ್ನು ಅರಿಯದೇ ಮರವಾಗಿ ಬೆಳೆಯದ ಸಸಿಯಾಗೇ ಉಳಿದು ಮುಗಿದು ಹೋಗುತ್ತಾರೆ.

ಬದುಕು  ಖಂಡಿತವಾಗಿ ನಮ್ಮೆದುರು ಆಯ್ಕೆಗಳನ್ನು ತೆರೆದಿಟ್ಟೇ  ಪರೀಕ್ಷೆಗಳನ್ನು ಒಡ್ಡೀತು. ಸಮಯ, ಸಂದರ್ಭ, ಗತಿವಿಧಿಗಳ ಸೂತ್ರವೆಲ್ಲವನ್ನೂ ತನ್ನ ಕೈಯೊಳಗಿಟ್ಟುಕೊ೦ಡು ನಡೆಸುವ ಪರೀಕ್ಷೆಗಳಿವು. ಆಯ್ಕೆಯ ಅವಕಾಶವಿದ್ದರೂ ಯಾವ ಆಯ್ಕೆ ಸೂಕ್ತವೆಂಬುದನ್ನು ನಿರ್ಧರಿಸುವ ಅಂಶಗಳು ನಮ್ಮ ಮಾನಸಿಕ ಸ್ತರಗಳ ದಕ್ಷತೆ, ಧಾರ್ಡ್ಯವನ್ನು ಕೆಣಕದೆ ಇರಲಾರವು… ಪರೀಕ್ಷೆಯ ಎಲ್ಲ ಪೇಪರುಗಳು ಹೇಗೆ ವಿಭಿನ್ನ ವಿಷಯಗಳ ಆಗರವೋ  ಹಾಗೆಯೇ ಈ ಆಯ್ಕೆಯೂ ವೈವಿಧ್ಯತೆಯ  ಪ್ರತೀಕಗಳೇ. ‘ತೇನ ವಿನಾ ತೃಣಮಪಿ ನ ಚಲತಿ’ ಮನೋಭಾವವನ್ನೊಪ್ಪಿಕೊಳ್ಳುತ್ತಲೇ ‘ಈಸಬೇಕು ಇದ್ದು ಜೈಸಬೇಕು’ ತತ್ವ ನಮ್ಮನ್ನು ಹಿಂಬಾಲಿಸಿ ಬರುವಾಗ ಬದುಕೊಡ್ಡಿದ ಪರೀಕ್ಷೆಗಳ ನಿರ್ಣಾಯಕ ಫಲಿತಾಂಶ ನಮ್ಮ ಅಂತಸ್ಸತ್ವದ ಆಳವನ್ನರಿಯುವ ಸೂಚನೆಯಾದೀತು. ತರ್ಕವನ್ನೇ ಮೂಲವಾಗಿಟ್ಟು  ಕೊಂಡರೂ ಈ ಮೂರು ಮೀನುಗಳು ತಳೆಯುವ ನಿರ್ಧಾರಗಳೊಂದಿಗೆ ಏಕೀಭವಿಸಿರುವ ಮೊದಲ ಮೀನಿನ  ದೂರದೃಷ್ಟಿ, ಎರಡನೆಯದರ  ಚಾಣಾಕ್ಷತೆ ಮತ್ತು  ಕೊನೆಯ ಮೀನಿನ ಅಸಾಧಾರಣ ವಿಚಿತ್ರ  ಭಯ ಮತ್ತು ಅಪಾಯದೆದುರಿನಲ್ಲೂ ಮೇಲೆದ್ದು ವ್ಯಾಪಿಸುವ ನಿರ್ಲಿಪ್ತತೆ , ಅದು ಸಾವನ್ನೇ ತಂದೊಡ್ಡಿದರೂ ‘ನಡೆಯುವುದು ತಪ್ಪದು’ ಎಂಬ ಹುಸಿ ಸಮರ್ಥನೆಯಡಿಯಲ್ಲಿ ಮಾಡಿಕೊಂಡ ಆತ್ಮಹತ್ಯೆ ಹೌದಲ್ಲವೇ ?! ನಮ್ಮಲ್ಲೂ ಇರಬಹುದಾದ ಇಂಥವೇ ಮನೋವ್ಯಾಪಾರಗಳ ಸೂಚಿಗಳು. ‘ನಾಳೆ’ಯನ್ನು ಕುರಿತ ನಮ್ಮ ನಡೆಗಳು ಇಂದೇ ನಿರ್ಧಾರವಾಗಬೇಕಿರುತ್ತದೆ.  ಸಮಯಪ್ರಜ್ಞೆ,ಸಮಂಜಸತೆಗಳ  ಮೇಳೈಕೆಯ ಅವಶ್ಯಕತೆಯಿದೆ. ಜೀವನ ನಾವೆಂದುಕೊಂಡಷ್ಟು ಕ್ರೂರಿಯಲ್ಲ, ಹಾಗೆಂದು ಅದು ನಮ್ಮ ಸ್ನೇಹಿತನೂ ಅಲ್ಲ…ಅದನ್ನು ಉಳಿಸಿ, ಬೆಳೆಸಿ ಸದುಪಯೋಗಪಡಿಸಿಕೊಳ್ಳಬೇಕೇ ಹೊರತು ಯಾವುದೇ ವಿಧಾನದ ‘ಆತ್ಮಹತ್ಯೆ’ಗೆ ಎಳಸಬಾರದು.

ಯಾವ ಮೀನು ನಿಮಗೆ ಮೆಚ್ಚಿಗೆ? ಅರ್ಥಾತ್ ಈ ಮೂರು ‘ಉಪಾಯ’ಗಳಲ್ಲಿ ನಿಮ್ಮ ಆಯ್ಕೆ ಯಾವುದು?  ಆದರೆ ಕೊನೆಯ ಮೀನು ನಿಮ್ಮ ಆಯ್ಕೆ ಆಗದಿರಲಿ!

1 COMMENT

Leave a Reply