ಆಗಸ್ಟಾ: ತ್ಯಾಗಿ ಮತ್ತು ಸೋದರರನ್ನು ಪ್ರಶ್ನೆಗೊಳಪಡಿಸಿತು ಸಿಬಿಐ, ರಾಜ್ಯಸಭೆಯಲ್ಲಿ ಮತ್ತೆ ಗದ್ದಲ, ಉತ್ತರಾಖಂಡದಲ್ಲಿ ಕಾಳ್ಗಿಚ್ಚಿಗಿಲ್ಲ ಶಮನ

ಡಿಜಿಟಲ್ ಕನ್ನಡ ಟೀಮ್

ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್. ಪಿ. ತ್ಯಾಗಿ ಹಾಗೂ ಅವರ ಸಹೋದರ ಸಂಬಂಧಿಗಳನ್ನು ಸಿಬಿಐ ಸೋಮವಾರ ಪ್ರಶ್ನೆಗೆ ಒಳಪಡಿಸಿದೆ. ಅಗಸ್ಟಾ ಒಪ್ಪಂದದಲ್ಲಿ ತ್ಯಾಗಿ ಮತ್ತವರ ಮೂವರು ಸಹೋದರ ಸಂಬಂಧಿಗಳಿಗೆ ಲಂಚ ಸಂದಾಯವಾಗಿರುವುದಾಗಿ ಇಟಲಿ ನ್ಯಾಯಾಲಯ ಉಲ್ಲೇಖಿಸಿದೆ. ಮೊದಲು ವಾಯುಸೇನೆಯು ನಿರಾಕರಿಸಿದ್ದ ಒಪ್ಪಂದ ಮತ್ತೆ ಸಾಕಾರಗೊಂಡಿದ್ದು ತ್ಯಾಗಿ ಮುಖ್ಯಸ್ಥರಾಗಿ ಬಂದಮೇಲೆ. ಸಿಬಿಐ ಹೇಳುವ ಪ್ರಕಾರ ತ್ಯಾಗಿ ಸಹೋದರ ಸಂಬಂಧಿಗಳಿಗೆ 2004ರ ಮಾರ್ಚ್ ನಲ್ಲಿ 1.26 ಲಕ್ಷ ಯೂರೋ ಹಾಗೂ 2005ರ ಫೆಬ್ರವರಿಯಲ್ಲಿ 2 ಲಕ್ಷ ಯುರೋ ಹಣ, ‘ಸಲಹೆ ಕೊಟ್ಟಿದ್ದಕ್ಕೆ ಪ್ರತಿಯಾಗಿ’ ಸಂದಾಯವಾಗಿದೆ. ಆದರೆ ತ್ಯಾಗಿ ನಿರ್ಧಾರಕ್ಕೂ ಹಣ ಸಂದಾಯಕ್ಕೂ ಹೊಂದಾಣಿಕೆಯಾಗುವುದರಿಂದ ಇದು ಲಂಚ ಎಂಬುದು ಸಿಬಿಐ ಪ್ರತಿಪಾದನೆ.

  • ಇತ್ತ ಅಗಸ್ಟಾ ವೆಸ್ಟ್ಲ್ಯಾಂಡ್ ವಿಷಯ ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಾಗ ಕಾಂಗ್ರೆಸ್ ಸಂಸದರು ಸ್ಪೀಕರ್ ಮುಂದಿನ ಆವರಣಕ್ಕೆ ಬಂದು ಅಡ್ಡಿ ವ್ಯಕ್ತಪಡಿಸಿದರು. ‘ಹಗರಣದ ಎಲ್ಲ ಆಯಾಮಗಳು, ಎನ್ ಡಿ ಎ ಸರ್ಕಾರ ಕೈಗೊಂಡ ಕ್ರಮ ಇವೆಲ್ಲವನ್ನೂ ಚರ್ಚಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಕಾಂಗ್ರೆಸ್ ವಿಷಯಾಂತರ ಮಾಡುತ್ತ ಪಲಾಯನ ಮಾಡುತ್ತಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ. ‘ಸಿಬಿಐ ತನಿಖೆಗೆ ನಾವು ಯಾವ ಆಕ್ಷೇಪವನ್ನೂ ಹೊಂದಿಲ್ಲ. ಆದರೆ ಇದನ್ನು ಬಿಜೆಪಿ ರಾಜಕೀಯಲಾಭಕ್ಕೆ ಬಳಸಿಕೊಳ್ಳುವುದಕ್ಕಾಗಿ, ಕಾಂಗ್ರೆಸ್ಸನ್ನು ನಿಂದಿಸುವುದಕ್ಕಾಗಿ ಸಂಸತ್ತಿನಲ್ಲಿ ಚರ್ಚೆ ಬೇಕೆನ್ನುತ್ತಿದೆ’ ಎಂದಿದ್ದಾರೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ.
  • ಉತ್ತರಾಖಂಡದಲ್ಲಿ ಕಾಡ್ಗಿಚ್ಚು ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ಸೇನೆಯ ವಾಯುದಳದ ಕ್ಷಿಪ್ರ ಕಾರ್ಯಾಚರಣೆ ನಡುವೆಯೂ ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ಹಬ್ಬುತ್ತಿರುವ ಬೆಂಕಿಯ ಶಮನ ಸಾಧ್ಯವಾಗಿಲ್ಲ. ದಟ್ಟ ಹೊಗೆ ಆವರಿಸಿರುವುದರಿಂದ ಹೆಲಿಕಾಪ್ಟರ್ ಗಳ ಮೂಲು ನೀರು ಸುರಿಯುವುದು ಬಿಟ್ಟರೆ, ಮತ್ಯಾವುದೇ ನಿಖರ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಆಶಾಭಾವ ಎಂದರೆ ಇನ್ನು 28 ತಾಸುಗಳಲ್ಲಿ ಕಾಡ್ಗಿಚ್ಚಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ 3 ಸಾವಿರ ಎಕರೆ ಅರಣ್ಯ ನಾಶವಾಗಿದೆ. ಏಳು ಮಂದಿ ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಹಿಮಾಚಲ ಪ್ರದೇಶದ ಶಿಮ್ಲಾ ಗ್ರಾಮೀಣ ಪ್ರಾಂತ್ಯದ 50 ಎಕರೆ ಅರಣ್ಯಕ್ಕೂ ಕಾಡ್ಗಿಚ್ಚು ಆವರಿಸಿದೆ.

Leave a Reply