ರಾಹುಲ್ ಬೆನ್ನಿಗೆ ಪ್ರಶಾಂತ್ ಕಿಶೋರ್ ಎಂಬ ಕಾರ್ಯತಂತ್ರ ಚಾಣಕ್ಯ, ಆದರೆ ಹಿಂದಿನಂತಿಲ್ಲ ಈ ಪರೀಕ್ಷೆಯ ವಿಷಯ!

ಡಿಜಿಟಲ್ ಕನ್ನಡ ಟೀಮ್

ಪ್ರಶಾಂತ್ ಕಿಶೋರ್. ಚುನಾವಣೆ ತಂತ್ರಗಾರಿಕೆಯ ಚಾಣಾಕ್ಷ್ಯ ಎಂಬ ಹೊಗಳಿಕೆಗೆ ಪಾತ್ರರಾಗಿರುವ ಇವರಿಗೆ ಉತ್ತರ ಪ್ರದೇಶದಲ್ಲಿ ನಿಜವಾದ ಪರೀಕ್ಷೆ ಎದುರಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಇವರು ನರೇಂದ್ರ ಮೋದಿಯವರ ಪಾಳೆಯದಲ್ಲಿದ್ದರು. ಹಿಂದಿನ ಬಿಹಾರ ವಿಧಾನಸಭೆ ಚುನಾವಣೆ ವೇಳೆ ನಿತೀಶ್ ಕುಮಾರ್ ಅವರ ಚುನಾವಣೆ ರೂಪುರೇಷೆ ಕಟ್ಟಿಕೊಡಲು ತಮ್ಮ ತಂಡವನ್ನು ದುಡಿಸಿದ್ದರು. ಎರಡು ಬಾರಿಯೂ ಇವರಿದ್ದ ಕಡೆಯೇ ಅಪೂರ್ವ ಗೆಲುವು ದಾಖಲಾಗಿದ್ದು ಈಗ ಇತಿಹಾಸ.

ಮತ ಸಮರದ ಬೌದ್ಧಿಕ ರೂಪುರೇಷೆ ಹಾಕಿಕೊಡುವ ನೇಪಥ್ಯದ ವಾರ್ ರೂಮ್ ತಂಡ ಮುಖ್ಯವೇ. ಹಾಗಂತ ನರೇಂದ್ರ ಮೋದಿಯವರನ್ನಾಗಲೀ, ನಿತೀಶ್ ಕುಮಾರ್ ಅವರನ್ನಾಗಲೀ ಗೆಲ್ಲಿಸಿದ್ದು ಪ್ರಶಾಂತ್ ಕಿಶೋರೇ ಅಂತ ಹೇಳಲಾಗುವುದಿಲ್ಲ. ಹಾಗಂತ ಯಾರೂ ವಾದಿಸುವುದೂ ಇಲ್ಲ. ಆದರೆ, ಶ್ರೇಯಸ್ಸಿನ ಪಾಲು ಅವರಿಗೆ ಖಂಡಿತ ಇದೆ.

ಈ ಬಾರಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರ ರೂಪಿಸುವ ಹೊಣೆ ಹೊತ್ತಿದ್ದಾರೆ ಪ್ರಶಾಂತ್ ಕಿಶೋರ್. ಸೋಮವಾರ ರಾಷ್ಟ್ರೀಯ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ಮಾಡುತ್ತಿರುವ ವರದಿ ಹೀಗಿದೆ- ‘ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ಜತೆ ಸಭೆ ನಡೆಸಿರುವ ಪ್ರಶಾಂತ್ ಕಿಶೋರ್, ಅಲ್ಲಿ ಚುನಾವಣೆ ಗೆಲ್ಲುವುದಕ್ಕೆ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಬೇಕು ಎಂಬ ವಿಚಾರ ಹರಿಯಬಿಟ್ಟಿದ್ದಾರೆ.’

ಅವರ ಪ್ರಕಾರ ಉತ್ತರ ಪ್ರದೇಶದಲ್ಲಿ ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ದಯನೀಯ ಸ್ಥಿತಿಗೆ ತಳ್ಳಲ್ಪಟ್ಟಿರುವ ಕಾಂಗ್ರೆಸ್ ಚೇತರಿಸಿಕೊಳ್ಳಬೇಕೆಂದರೆ ರಾಹುಲ್ ಗಾಂಧಿ ಇಲ್ಲವೇ ಪ್ರಿಯಾಂಕಾ ಗಾಂಧಿ ಮುಂಚೂಣಿಯಲ್ಲಿ ನಿಂತು ಚುನಾವಣೆ ಸೆಣೆಸಬೇಕು. ‘ಇಂಥ ಕತೆ ಕಟ್ಟೋದೆ ಮಾಧ್ಯಮಗಳು, ನಂಗೆ ಈ ಬಗ್ಗೆ ಏನೂ ಗೊತ್ತಿಲ್ಲ’ ಅಂತ ರಾಹುಲ್ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಿದ್ದೂ ಆಗಿದೆ.

ನೆಹರು- ಗಾಂಧಿ ಮನೆತನದಲ್ಲಿ ಹೀಗೆ ಹಂತ-ಹಂತವಾಗಿ ಮೇಲೇರುವ ಕಲ್ಪನೆಯೇ ಇಲ್ಲ. ಇಂದಿರಾ ಆಗಲೀ, ರಾಜೀವ್ ಆಗಲಿ ಏಕಾಏಕಿ ಪ್ರಧಾನಿ ಪಟ್ಟಕ್ಕೆ ಹೋದವರೇ ಹೊರತು ಮತ್ಯಾವುದರ ನಿರ್ವಹಣೆ ಅನುಭವವನ್ನೂ ಪಡೆದವರಲ್ಲ. ರಾಹುಲ್ ಗಾಂಧಿಯವರನ್ನೂ ಇದೇ ಮಾದರಿಯಲ್ಲಿ ಉನ್ನತ ಪದವಿಯಲ್ಲಿ ಕೂರಿಸಬೇಕೆಂಬುದೇ ಕಾಂಗ್ರೆಸ್ ಆಶಯವಾಗಿತ್ತು. ರಾಹುಲ್ ಸಿದ್ಧರಾಗುತ್ತಿದ್ದಂತೆ ಈ ಪಟ್ಟ ಬಿಟ್ಟುಕೊಡುತ್ತೇನೆ ಎಂಬರ್ಥದ ಮಾತುಗಳನ್ನು ಪ್ರಧಾನಿ ಪಟ್ಟದಲ್ಲಿರುವಾಗಲೇ ಮನಮೋಹನ ಸಿಂಗರು ಹೇಳಿದ್ದರು. ಆದರೆ ಲೋಕಸಭೆ ಚುನಾವಣೆಯ ದಯನೀಯ ಸೋಲು ಈ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಆನಂತರ ಮೋದಿ ಸರ್ಕಾರದ ವಿರುದ್ಧ ನಾನಾ ಪ್ರತಿಭಟನೆಗಳಲ್ಲಿ ರಾಹುಲ್ ಗಾಂಧಿಯವರನ್ನು ಮುಂದಿರಿಸಿ ರೀಪ್ಯಾಕೇಜಿಂಗ್ ಪ್ರಯತ್ನವಾಗಿದ್ದರೂ ಅದು ಅಂಥ ಯಶವನ್ನೇನೂ ಕೊಟ್ಟಿಲ್ಲ.

ಇದೀಗ 2017ರ ಉತ್ತರಪ್ರದೇಶ ಚುನಾವಣೆಯಲ್ಲಿ ರಾಹುಲ್ ಗಾಂಧಿ ನಾಯಕತ್ವವೇ ಮದ್ದು ಎಂಬ ಅಭಿಪ್ರಾಯವನ್ನು ಪ್ರಶಾಂತ್ ಕಿಶೋರ್ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಎಕ್ಸ್ ಕ್ಲೂಸಿವ್ ಎಂಬ ಅಂಶವೇನೂ ಕಾಣುತ್ತಿಲ್ಲ. ಹೀಗಾಗಿ ರಾಹುಲ್ ಮುಖ್ಯಮಂತ್ರಿ ಪದವಿಗೆ ಎಂಬುದಂತೂ ಕೇವಲ ಕಲ್ಪನೆಯೇ ಆಗುವ ಸಾಧ್ಯತೆ ಹೆಚ್ಚಾಗಿದೆ.

ಮೋದಿಯವರನ್ನು ಚಹಾ ಮಾರ್ತಿದ್ದವ ಎಂದು ಮಣಿಶಂಕರ್ ಅಯ್ಯರ್ ನಿಂದಿಸಿದಾಗ ಅದನ್ನೇ ಚಾಯ್ ಪೇ ಚರ್ಚಾ ಆಗಿಸಿ, ಚಾಯ್ವಾಲಾ ಮೋದಿಯ ಇಮೇಜು ರೂಪಿಸುವಲ್ಲಿ ಪ್ರಶಾಂತ್ ಕಿಶೋರ್ ಪಾತ್ರವಿತ್ತು ಎಂಬ ವರದಿಗಳಿವೆ. ಬಿಹಾರ ವಿಧಾನಸಭೆ ಚುನಾವಣೆ ವಿಷಯಕ್ಕೆ ಬಂದರೆ, ಅದೇ ನರೇಂದ್ರ ಮೋದಿ ದೆಹಲಿಗೆ ಸರಿಯಿರಬಹುದಾದರೂ ಬಿಹಾರ ಈ ಮಣ್ಣಿನ ಮಗನನ್ನೇ ಚುನಾಯಿಸಬೇಕು ಎಂಬ ಸಂದೇಶ ಬಿತ್ತುವಲ್ಲಿ ಪ್ರಶಾಂತ್ ಕಿಶೋರ್ ಅವರ ಪ್ರಚಾರ ಕಾರ್ಯತಂತ್ರ ಪಾತ್ರ ವಹಿಸಿದ್ದರು. ತ್ರೀ ಇಡಿಯಟ್ಸ್ ಚಿತ್ರದ ಹಾಡಿನ ಧಾಟಿಯಲ್ಲೇ ನಿತೀಶ್ ಕುಮಾರ್ ಅತ್ಯಂತ ಸೃಜನಶೀಲವಾಗಿ ಮೋದಿಯವರನ್ನು ಗೇಲಿ ಮಾಡುತ್ತ, ‘ಆತ ಗುಜರಾತಿನಿಂದ ಬಂದಿದ್ದ, ಭಾರೀ ಭಾಷಣ ಮಾಡ್ತಿದ್ದ, ಕಳ್ಳಹಣ ತರುವುದಾಗಿ ಹೇಳಿದ್ದ… ಕಹಾಂ ಗಯೇ ಓ ಡೂಂಡೋ’ ಭರವಸೆ ಕೊಟ್ಟಿದ್ದ ಮೋದಿಯನ್ನು ಹುಡುಕಿಕೊಡಿ ಅಂತ ಟಾಂಗ್ ಕೊಟ್ಟಿದ್ದು ನೋಡಿದರೆ ಅದರಲ್ಲಿ ಪ್ರಶಾಂತ್ ಕಿಶೋರ್ ತಂಡದ ತಾಲೀಮು ಎದ್ದು ಕಾಣುತ್ತಿತ್ತು.

ಅವೇನೇ ಇದ್ದರೂ…

ಮೊದಲೆರಡು ವಿದ್ಯಮಾನಗಳಲ್ಲೂ ಪ್ರಶಾಂತ್ ಕಿಶೋರ್ ಅವರ ಬಳಿ ಒಳ್ಳೆ ಪ್ರಾಡಕ್ಟ್ ಗಳಿದ್ದವು(ಮೋದಿ- ನಿತೀಶ್). ಅವನ್ನು ಮಾರುವಾಗ ಸ್ಲೋಗನ್ ಗಳು ಉತ್ಪ್ರೇಕ್ಷಿತ ಅನ್ನಿಸಿದರೂ ಚಲಾವಣೆಯಲ್ಲಿದ್ದ ಉತ್ಪನ್ನಕ್ಕೆ ಅಂಥ ಪ್ರಚಾರ ಕಾರ್ಯತಂತ್ರಗಳು ಒಗ್ಗುತ್ತಿದ್ದವು. ಆದರೆ ರಾಹುಲ್ ಗಾಂಧಿ ಎಂಬ ಫೇಲ್ಡ್ ಪ್ರಾಡಕ್ಟ್ ಅನ್ನು ಮಾರುವ ಬಗೆ ಎಂತು? ಗುಜರಾತಿನಲ್ಲಿ ಅಭಿವೃದ್ಧಿ ಮಾಡಿ ಬಂದಿದ್ದಾರೆ ಎಂಬ ಕತೆ ಬೆನ್ನಿಗಿಲ್ಲ, ಅಭಿವೃದ್ಧಿ ಜತೆಯಲ್ಲಿ ಮಣ್ಣಿನ ಮಗನೆಂಬ ನಿತೀಶ್ ಛಾಪು ಇಲ್ಲಿಲ್ಲ. ಮನೆತನದ ಹೆಸರು ಬಿಟ್ಟರೆ ಶೋಕೇಸಿಗೆ ಇಡಬಹುದಾದ ಇನ್ಯಾವ ಅನುಭಗಳ ಬಲವೂ ಇಲ್ಲ. ತೀರ ರಾಹುಲ್ ಪ್ರತಿನಿಧಿಸುತ್ತಿರುವ ಅಮೇಠಿಯಾದರೂ ಮಾದರಿ ಕ್ಷೇತ್ರವಾ ಅಂತ ನೋಡಿದರೆ, ಮಹಿಳಾ ಸ್ವಸಹಾಯ ಸಂಘಗಳ ಹಳೆ ಕ್ಯಾಸೆಟ್ಟನ್ನೇ ಮತ್ತೆ ಹಾಕುವುದು ಬಿಟ್ಟರೆ ಹೇಳಲಿಕ್ಕೆ ಇನ್ನೇನಿಲ್ಲ.

ಈ ಉತ್ಪನ್ನವನ್ನು ಪ್ರಶಾಂತ್ ಕಿಶೋರ್ ಮಾರುತ್ತಾರಾದರೂ ಹೇಗೆ ಎಂಬುದು ಈಗಿನ ಕದನ ಕುತೂಹಲ. ಗಮನಿಸಬೇಕಾದ ಸಂಗತಿ ಎಂದರೆ, ವಿರೋಧಿ ಪಾಳೆಯದಲ್ಲಿ ಚುನಾವಣಾ ಕಾರ್ಯತಂತ್ರದ ಇನ್ನೊಬ್ಬ ಚಾಣಾಕ್ಷ್ಯ ಅಮಿತ್ ಶಾ ಜತೆಗೂ ಪ್ರಶಾಂತ್ ಕಿಶೋರ್ ಈ ಬಾರಿ ಸೆಣೆಸಬೇಕಿದೆ.

ಹೀಗಾಗಿಯೇ ಹೇಳಿದ್ದು… ಉತ್ತರಪ್ರದೇಶವೆಂಬುದು ಪ್ರಶಾಂತ್ ಕಿಶೋರರಿಗಿರುವ ನಿಜ ಪರೀಕ್ಷೆ.

Leave a Reply