ಸುದ್ದಿಸಂತೆ: 3 ಮೆಡಿಕಲ್ ಕಾಲೇಜು, ಹೆಚ್ಚಿನ ಬರ ಅನುದಾನಕ್ಕೆ ಸಿಎಂ ಮೊರೆ, ಶಿಕ್ಷಕರ ವರ್ಗ ಯಾವಾಗ?, ಪ್ರಧಾನಿಗೆ ತಾಗಿದ ಕಾರ್ಮಿಕರ ಬಿಸಿ..ಎಲ್ಲ ಸುದ್ದಿಗಳ ಕಣಜ

ಬೆಂಗಳೂರು ನಗರ ಪೋಲೀಸ್ ಆಯುಕ್ತರ ಕಚೇರಿಯಲ್ಲಿ ಸಿಸಿಟಿವಿ ಕೆಮರಾ ಸರ್ವೇಕ್ಷಣೆಯ ಹೊಸ ಕೇಂದ್ರ ಸೋಮವಾರ ಉದ್ಘಾಟನೆಗೊಂಡಿತು.

ಡಿಜಿಟಲ್ ಕನ್ನಡ ಟೀಮ್

ಮೂರು ಸರಕಾರಿ ಮೆಡಿಕಲ್ ಕಾಲೇಜಿಗೆ ಕೇಂದ್ರ ಸಮ್ಮತಿ

ಚಾಮರಾಜನಗರ, ಕೊಡಗು ಹಾಗೂ ಕಾರವಾರದಲ್ಲಿ ಈ ವರ್ಷದಿಂದಲೇ ಸರಕಾರಿ ವೈದ್ಯ ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ 450 ಹೆಚ್ಚುವರಿ 450 ವೈದ್ಯ ಸೀಟುಗಳು ಲಭ್ಯವಾಗಲಿವೆ.

ಅಷ್ಟೇ ಅಲ್ಲ ಈ ವೈದ್ಯ ಕಾಲೇಜುಗಳು ಸೇರ್ಪಡೆ ಆಗಲಿರುವ ಜಿಲ್ಲಾ ಆಸ್ಪತ್ರೆಗಳ ಉನ್ನತೀಕರಣ ಆಗುವುದರ ಜತೆಗೆ ತಜ್ಞ ವೈದ್ಯರ ಕೊರತೆಯೂ ನೀಗಲಿದೆ. ಇದರಿಂದ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ವೈದ್ಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮಾಧ್ಯಮಗಳಿಗೆ ಸೋಮವಾರ ತಿಳಿಸಿದರು.

ರಾಜ್ಯದಲ್ಲಿ 16 ಹೊಸ ಸರ್ಕಾರಿ ವೈದ್ಯ ಕಾಲೇಜುಗಳ ಆರಂಭಕ್ಕೆ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಈಗ ಒಟ್ಟಾರೆ 2200 ಸರಕಾರಿ ವೈದ್ಯ ಸೀಟುಗಳು ಲಭ್ಯವಿವೆ ಎಂದರು

ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಕೇಂದ್ರಕ್ಕೆ ಸಿದ್ದರಾಮಯ್ಯ ಮೊರೆ

ರಾಜ್ಯವನ್ನು ಭೀಕರ ಬರಗಾಲ ಕಾಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಆಹಾರ ಧಾನ್ಯ ಮತ್ತು ಅನುದಾನ ನೀಡುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಎರಡು ಕಂತುಗಳಲ್ಲಿ 2263 ಕೋಟಿ ರುಪಾಯಿ ಮಂಜೂರು ಮಾಡಿದ್ದರೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಇದರಲ್ಲೂ ನಮಗೆ ಬಂದಿರುವುದು 1540 ಕೋಟಿ ರುಪಾಯಿ ಮಾತ್ರ. ಉಳಿದ 723 ಕೋಟಿ ರುಪಾಯಿ ಇನ್ನೂ ಬಿಡುಗಡೆಯಾಗಿಲ್ಲ. ನನ್ನನ್ನು ಸೇರಿಸಿ ಇಡೀ ಸಂಪುಟ ರಾಜ್ಯದ ಮೂಲೆ ಮೂಲೆಗೆ ತೆರಳಿ ಬರ ಪರಿಸ್ಥಿತಿ ಅಧ್ಯಯನ ನಡೆಸುತ್ತಿದ್ದು, ಮೇ 4 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಎಲ್ಲ ವರದಿಗಳನ್ನು ಕ್ರೋಡೀಕರಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿ ನರಸಿಂಹರಾಜು ಪ್ರಮಾಣ

ಮುಖ್ಯಮಂತ್ರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಡಿ.ಎನ್.ನರಸಿಂಹರಾಜು ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಸೋಮವಾರ ಅಧಿಕಾರ ವಹಿಸಿಕೊಂಡರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯ್ ರೂಢಬಾಯ್ ವಾಲಾ, ನರಸಿಂಹರಾಜು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭಕ್ಕೆ ಸಾಕ್ಷಿಯಾದರು.

 

ಪಿಯು, ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಮುಗಿಯುವವರೆಗೂ ವರ್ಗಾವಣೆ ಇಲ್ಲ

ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಮುಗಿಯುವವರೆಗೂ ಶಿಕ್ಷಕರು ಹಾಗೂ ಉಪನ್ಯಾಸಕರ ವರ್ಗಾವರ್ಗಿಗೆ ಅವಕಾಶವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ಮೇ 18 ಕ್ಕೆ ಪಿಯುಸಿ ಹಾಗೂ ಮೂರನೇ ವಾರದ ನಂತರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ. ಇದರ ನಡುವೆಯೇ ಸಿಇಟಿ ಫಲಿತಾಂಶವೂ ಪ್ರಕಟಗೊಳ್ಳಲಿದ್ದು, ನಂತರ ಶಿಕ್ಷಕರ ವರ್ಗಾವಣೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ವರ್ಗಾವಣೆ ನಿಯಮಗಳ ಬದಲಾವಣೆಗೆ ಚಿಂತನೆ ನಡೆದಿದೆ.  ಡಿಡಿಪಿಐ, ಬಿಇಒಗಳು ತಮ್ಮ ತವರೂರಲ್ಲಿ ಕೆಲಸ ಮಾಡುವ ಹಾಗಿಲ್ಲ. ಶಿಕ್ಷಕ ದಂಪತಿ ವರ್ಗಾವಣೆ ಕೋರಿರುವ 17 ಸಾವಿರ ಪ್ರಕರಣಗಳಿವೆ ಎಂದು ಹೇಳಿದರು.

ಸಿದ್ದರಾಜು ಮಾಧ್ಯಮ ಅಕಾಡೆಮಿ ಅಧ್ಯಕ್ಷ

ಪಿಟಿಐ ವರದಿಗಾರರಾಗಿದ್ದ ಹಿರಿಯ ಪತ್ರಕರ್ತ ಎಂ. ಸಿದ್ದರಾಜು ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರಾಗಿ ವಿಜಯವಾಣಿ ಪತ್ರಿಕೆಯ ರುದ್ರಣ್ಣ, ದಿ ಹಿಂದು ಪತ್ರಿಕೆಯ ರಂಗಣ್ಣ ಮತ್ತು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಧಿಕಾರಾವಧಿ ಮೂರು ವರ್ಷದ್ದಾಗಿರುತ್ತದೆ.

ಇಟಲಿ ನಾವಿಕರನ್ನು ಹಿಂದಕ್ಕೆ ಕಳುಹಿಸುವಂತೆ ವಿಶ್ವಸಂಸ್ಥೆ ನ್ಯಾಯಾಲಯ ಸೂಚನೆ

 ಭಾರತದ ಸುಪ್ರೀಂಕೋರ್ಟ್ ಇಬ್ಬರು ಇಟಲಿ ನಾವಿಕರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಇಟಲಿ ಕೇಳಬೇಕು ಎಂದು ವಿಶ್ವಸಂಸ್ಥೆಯ ನ್ಯಾಯಾಲಯ ಸೂಚಿಸಿದೆ. 2012ರಲ್ಲಿ ಈ ಇಬ್ಬರು ಇಟಲಿ ನಾವಿಕರು ಎರಡು ಮಂದಿ ಭಾರತೀಯ ಮೀನುಗಾರರನ್ನು ಗುಂಡಿಟ್ಟು ಕೊಂದಿದ್ದರು. ಕಡಲ್ಗಳ್ಳರೆಂದು ತಪ್ಪಾಗಿ ಭಾವಿಸಿ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಈ ಪೈಕಿ ಒಬ್ಬ ನಾವಿಕ ಅದಾಗಲೇ ಅನಾರೋಗ್ಯ ಕಾರಣದಿಂದ ಇಟಲಿಗೆ ಮರಳಿದ್ದಾನೆ. ಇನ್ನೊಬ್ಬನನ್ನು ಬಿಡುಗಡೆಗೊಳಿಸುವುದಕ್ಕೆ ಭಾರತ ನಿರಾಕರಿಸಿದೆ. ಘಟನೆ ನಡೆದಾಗ ತಮ್ಮ ನಾವಿಕರಿಬ್ಬರೂ ಅಂತಾರಾಷ್ಟ್ರೀಯ ಜಲಸೀಮೆಯಲ್ಲಿದ್ದರು. ಹೀಗಾಗಿ ತಾವೇ ಅವರನ್ನು ವಿಚಾರಣೆ ನಡೆಸಿ ಅಗತ್ಯ ಶಿಕ್ಷೆ ನೀಡುತ್ತೇವೆ ಎಂಬುದು ಇಟಲಿಯ ವಾದ.

ಯುವತಿ ಅಪಹರಣ, ಅತ್ಯಾಚಾರ ಯತ್ನ

ಏಪ್ರಿಲ್ 23ರ ರಾತ್ರಿ 10 ಗಂಟೆ ವೇಳೆಗೆ ತನ್ನ ಪಿಜಿಯ ಹೊರಗಡೆ ಬಂದ ಯುವತಿಯನ್ನು ಅಪರಿಚಿತನೊಬ್ಬ ಎತ್ತಿ ಒಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿಯ ಪ್ರತಿರೋಧ, ಕೂಗಿನಿಂದಾಗಿ ಓಡಿಹೋಗಿದ್ದಾನೆ. ದುಷ್ಕರ್ಮಿಯು ರಾಜಾರೋಷವಾಗಿ ಯುವತಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟಿವಿ9 ಈ ದೃಶ್ಯಾವಳಿ ಮತ್ತು ಯುವತಿಯ ಸಂದರ್ಶನ ಬಿತ್ತರಿಸಿದೆ. ಮನೆಯ ಗೇಟಿನಲ್ಲೂ ರಕ್ಷಣೆ ಇಲ್ಲದ ಸ್ಥಿತಿ ಇದೆಯೇ, ಸಾರ್ವಜನಿಕರ ಸಹಾಯವೂ ಮರೀಚಿಕೆಯೇ ಎಂಬ ಪ್ರಶ್ನೆಗಳನ್ನು ಈ ಪ್ರಕರಣ ಹುಟ್ಟುಹಾಕಿದೆ.

₹5 ರ ಹೆಚ್ಚಳ ವಿರೋಧಿಸಿ ಪ್ರಧಾನಿಗೆ ಹಣ ವಾಪಸು ಮಾಡಿದ ಕೂಲಿಗಳು

ನಾನು ಶ್ರಮಿಕ ನಂಬರ್ 1 ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೂಲಿಗಳ ಪ್ರತಿಭಟನೆ ಬಿಸಿ ತಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ನೀಡುತ್ತಿದ್ದ ಕೂಲಿಯನ್ನು ಕೇವಲ ₹5 ಹೆಚ್ಚಳ ಮಾಡಿರುವುದಕ್ಕೆ ಕ್ರುದ್ಧರಾಗಿರುವ ಜಾರ್ಖಂಡ್ ಮಹಿಳೆಯರ ಗುಂಪೊಂದು, ಆ ಹಣವನ್ನು ಪ್ರಧಾನಿ ವಿಳಾಸಕ್ಕೇ ಹಿಂತಿರುಗಿ ಕಳುಹಿಸಿದೆ.  ಗ್ರಾಮ್ ಸ್ವರಾಜ್ ಮಜ್ದೂರ್ ಸಂಘ್ ಎಂಬ ಛತ್ರದಡಿ ಒಗ್ಗೂಡಿರುವ ಮಹಿಳಾ ಕಾರ್ಮಿಕರು ತಮ್ಮ ನೋವಿನ ಪತ್ರದೊಂದಿಗೆ ಹಣ ವಾಪಸು ಮಾಡಿದ್ದಾರೆ. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವೇ ಅದೃಷ್ಟವಂತರೆನಿಸುತ್ತದೆ. ಏಕೆಂದರೆ ಅನೇಕ ರಾಜ್ಯಗಳಲ್ಲಿ ಐದು ರುಪಾಯಿಯೂ ಏರಿಕೆ ಆಗಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ ಈ ಕಾರ್ಮಿಕರು.

ಮಾಲ್ಡಾ ಬಾಂಬ್

ಪಶ್ಚಿಮ ಬಂಗಾಳದ ಮಾಲ್ಡಾ ಹೆಸರನ್ನು ಕೆಲತಿಂಗಳ ಹಿಂದೆ ಹಿಂದೂಗಳ ವಿರುದ್ಧದ ಕೋಮುಗಲಭೆ ಸಂದರ್ಭದಲ್ಲಿ ಕೇಳಿರುತ್ತೀರಿ. ಇದೀಗ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮಾಲ್ಡಾದ ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದ ಮೂವರು, ತಯಾರಿಕೆ ಹಂತದಲ್ಲಿ ಸ್ಫೋಟಗೊಂಡು ಸತ್ತಿದ್ದಾರೆ.

ವಿಜಯ್ ಮಲ್ಯ ಸಂಸದ ಸ್ಥಾನಕ್ಕೆ ರಾಜೀನಾಮೆ

ಹಣದ ಅವ್ಯವಹಾರ ಆರೋಪದಲ್ಲಿ ಬಿಗಿಯಾಗಿರುವ ವಿಜಯ್ ಮಲ್ಯ ತಮ್ಮ ರಾಜ್ಯಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಲ್ಲದಿದ್ದರೂ ಆ ಸ್ಥಾನ ಉಳಿಯುತ್ತಿರಲಿಲ್ಲ. ಕಾರಣ, ವಾರದ ಹಿಂದಷ್ಟೇ ಮಲ್ಯ ಅವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಲು ರಾಜ್ಯಸಭೆಯ ಎಥಿಕ್ಸ್ ಸಮಿತಿ ನಿರ್ಧರಿಸಿತ್ತು.

ಒಸಾಮಾ ಬಿನ್ ಲಾಡೆನ್ ನನ್ನು ಕೊಂದು ಇಂದಿಗಾಯ್ತು ಐದು ವರ್ಷ. ಆದರೆ ಸೆಪ್ಟೆಂಬರ್ 11ರ ದಾಳಿ ವಿಷಯದಲ್ಲಿ ಅಮೆರಿಕ ಸ್ಪಷ್ಟಪಡಿಸಬೇಕಿರುವ ಸಂಗತಿಗಳು ಬೇರೆಯೇ ಇವೆ. ಇಷ್ಟಕ್ಕೂ ಅಮೆರಿಕಕ್ಕೆ ಉಗ್ರರು ನುಗ್ಗುವಲ್ಲಿ ಸೌದಿ ಅರೇಬಿಯದ ಕೊಡುಗೆ ಇಲ್ಲವೇ?

ಉತ್ತರಪ್ರದೇಶದ 2017ರ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರದ ಜವಾಬ್ದಾರಿ ಹೊತ್ತಿರುವ ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿಯವರೇ ಮುಖ್ಯಮಂತ್ರಿ ಅಭ್ಯರ್ಥಿ ಆಗಲಿ ಎಂದಿದ್ದಾರಂತೆ. ಈ ಕುರಿತು ನೀವು ಓದಲೇಬೇಕಾದ ವಿಶ್ಲೇಷಣೆ.

Leave a Reply