ಒಸಾಮಾನನ್ನು ಕೊಂದೆವೆಂದು ಕಾಲರ್ ಜಗ್ಗಿಕೊಳ್ಳುತ್ತಿರುವ ಅಮೆರಿಕಕ್ಕೆ, ತಾವು ನಿಜಕ್ಕೂ ಹೊಡೆಸಿಕೊಂಡಿದ್ದು ಸೌದಿ ಅರೇಬಿಯಾದಿಂದ ಅಂತ ಸತ್ಯ ಹೇಳೋ ಧೈರ್ಯ ಬಂದೀತಾ?

ಚೈತನ್ಯ ಹೆಗಡೆ

ಇವತ್ತಿಗೆ ಒಸಾಮಾ ಬಿನ್ ಲಾಡೆನ್ ನನ್ನು ಕೊಂದು ಐದು ವರ್ಷ ಸಂದಿತು. ಹಾಗಂತ ಅಮೆರಿಕ ನಮಗೆ ನೆನಪು ಮಾಡಿಕೊಡುತ್ತಿದೆ. ಅದೂ ಹೇಗೆ? ಅಮೆರಿಕ ಗುಪ್ತಚರ ಸಂಸ್ಥೆ ಸಿಐಎ ತನ್ನ ಟ್ವಿಟ್ಟರ್ ಖಾತೆ ಮೂಲಕ, ಇವತ್ತಿನ ದಿನ ಐದು ವರ್ಷಗಳ ಹಿಂದೆ ಆಗಿದ್ದನ್ನು ರೋಚಕ ಮರು ನಿರೂಪಣೆ ಮಾಡುತ್ತಿದೆ. ಅಂದರೆ, ಸಮಯ 5.02 ಹೆಲಿಕಾಪ್ಟರ್ ಗಳು ಹಾರಿದವು… ಇತ್ಯಾದಿ ಧಾಟಿಯಲ್ಲಿ.

ಪಾಕಿಸ್ತಾನದ ಅಬೊಟಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಒಸಾಮನನ್ನು ಹುಡುಕಿ ಹೊಸೆಯುವುದಕ್ಕೆ ಕೇವಲ ಮಿಲಿಟರಿ ಧೈರ್ಯ ಮಾತ್ರವಲ್ಲದೇ, ಅದಕ್ಕೂ ಮೊದಲು ಗುಪ್ತಚರ ಮಾಹಿತಿಗಳನ್ನು ಕಲೆಹಾಕುವ ನಾಜೂಕು, ಕಾರ್ಯತಂತ್ರದ ವಿನ್ಯಾಸಗಳನ್ನು ರೂಪಿಸುವ ಸಹನೆ- ತಂತ್ರಗಾರಿಕೆಗಳೆಲ್ಲ ನಿರ್ಣಾಯಕ. ಅದಕ್ಕೆ ಅಮೆರಿಕಕ್ಕೆ ಮೆಚ್ಚುಗೆ ಸಂದಾಯವಾಗಲೇಬೇಕು.

ಆದರೆ…

ಈ ದಿನದಲ್ಲಿ ಇನ್ನೊಂದನ್ನೂ ಮರೆಯುವ ಹಾಗಿಲ್ಲ. ಒಸಾಮಾ ಎಂಬ ಭೂತವನ್ನುಸೃಷ್ಟಿಸಿದ್ದು ಇದೇ ಅಮೆರಿಕ ಎಂಬ ವಾಸ್ತವವನ್ನು. ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡುವ ನೆಪದಲ್ಲಿ ತಾಲಿಬಾನಿಗಳಿಗೆ ಭರಪೂರ ಕಾಸು ಮತ್ತು ಅಸ್ತ್ರ ಕೈಗಿಟ್ಟಿದ್ದೇ ಅಮೆರಿಕ ಎಂಬುದನ್ನು ಚರಿತ್ರೆ ಮರೆಯುವುದಿಲ್ಲ. ಹೀಗೆ ಬೆಳೆದ ಲಾಡೆನ್ ಯಾವಾಗ ಅಮೆರಿಕದ ಅವಳಿ ಕಟ್ಟಡಗಳಿಗೇ ವಿಮಾನ ನುಗ್ಗಿಸಿ ಭಾಷಣ ಬಿಗಿದನೋ ಆಗ ಮಾತ್ರ ವೈರಿಯಾದ.

ಅಷ್ಟಾಗಿಯೂ ಒಸಾಮಾನನ್ನು ಹುಡುಕಿ ಹೊಡೆದಿದ್ದಕ್ಕೆ ಅಮೆರಿಕಕ್ಕೆ ಸಲ್ಲಬೇಕಾದ ಶ್ರೇಯಸ್ಸು ಕೊಡೋಣ. ಆದರೆ, ಒಸಾಮಾ ಸಾವನ್ನು ಟ್ವೀಟುಗಳಲ್ಲಿ ಆನಂದಿಸುತ್ತ, ಅದುವೇ ಅಮೆರಿಕದ ಬಹುದೊಡ್ಡ ಸಾಧನೆ ಅಂತ ಸಂಭ್ರಮಿಸೋದು ಮಾತ್ರ ವಾಸ್ತವ ಗೊತ್ತಿಲ್ಲದವರ ಅಗ್ಗದ ಖುಷಿಯಾಗುತ್ತದಷ್ಟೆ.

ಇವತ್ತು ಅಮೆರಿಕವಾಗಲೀ, ಸಿಐಎ ಆಗಲೀ ಜಗತ್ತಿನ ಮುಂದೆ ಬಿಚ್ಚಿಡಬೇಕಿರುವುದು ಮುದುಕನಾಗುತ್ತಿದ್ದ ಒಸಾಮಾನನ್ನು ಹೊಡೆದ ಪರಾಕ್ರಮವನ್ನಲ್ಲ. ಬದಲಿಗೆ ಸೆಪ್ಟೆಂಬರ್ 11ರ ಬಗ್ಗೆ ಒಂದಿಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆಯಲ್ಲ… ಅದರಲ್ಲೂ ಅಮೆರಿಕದ ಪರಮಾಪ್ತ ಸಹಯೋಗಿ ಸೌದಿ ಅರೇಬಿಯಾವು ಈ ದಾಳಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟ ಬಗ್ಗೆ ಪ್ರಶ್ನೆಗಳಿವೆಯಲ್ಲ… ಆ ಬಗ್ಗೆ ಅಮೆರಿಕ ಯಾವಾಗ ಮಾತನಾಡುವ ಧೈರ್ಯ- ಪರಾಕ್ರಮ ತೋರುತ್ತದೆ?

ಯೆಸ್… 28 ಪೇಜುಗಳ ಮುಚ್ಚಿಟ್ಟ ವರದಿ! ಇಂಥದೊಂದು ಹಣೆಪಟ್ಟಿ ಹೊತ್ತು ಅಮೆರಿಕ ಸೆನೆಟರ್ ಗಳ ಸತ್ಯಶೋಧಕ ವರದಿಯೊಂದು ಸಾರ್ವಜನಿಕಗೊಳ್ಳದೇ ಕುಳಿತಿದೆ. ಅಷ್ಟೇ ಅಲ್ಲ, ಅಮೆರಿಕ ಸಂಸತ್ತಿನಲ್ಲಿ9/11ರ ದಾಳಿಗೆ ಸಂಬಂಧಿಸಿದ ಮಸೂದೆಯೊಂದು ಮಂಡನೆಯಾಗಬೇಕಿದೆ. ಅದು ಕಾನೂನಾಗಿ ಪರಿವರ್ತನೆಗೊಂಡಲ್ಲಿ 9/11ರ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಈ ದಾಳಿಗೆ ಹಣಕಾಸು ನೆರವು ಒದಗಿಸಿರುವ ಶಂಕೆಯ ಯಾರನ್ನೇ ಆದರೂ ಕಟಕಟೆಯಲ್ಲಿ ನಿಲ್ಲಿಸುವ ಶಕ್ತಿ ಸಿಗುತ್ತದೆ. ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿರುವ ರಾಷ್ಟ್ರವೇ ಸೌದಿ ಅರೇಬಿಯಾ! ಏಕೆಂದರೆ ಅನುಮಾನ ಇರುವುದೇ ಸೌದಿಯ ಪಾತ್ರದ ಕುರಿತು. ಸಾರ್ವಜನಿಕಗೊಳ್ಳದ ತನಿಖಾ ವರದಿಯ 28 ಪುಟಗಳೂ ಬೊಟ್ಟು ಮಾಡ್ತಿರೋದು ಸೌದಿ ಕಡೆಗೇ ಎನ್ನಲಾಗುತ್ತಿದೆ. ಹೀಗಾಗಿ ಸೌದಿ ಅರೇಬಿಯಾ ಹೇಳುತ್ತಿರೋದೇನಂದ್ರೆ- ‘ಈ ಮಸೂದೆ ಅಮೆರಿಕ ಸಂಸತ್ತಿನಲ್ಲಿ ಮಂಡನೆಯಾಗುತ್ತಲೇ ನಾವು ಅಮೆರಿಕದಲ್ಲಿ ಭದ್ರತಾ ಬಾಂಡುಗಳು ಹಾಗೂ ಇನ್ನಿತರ ಕಡೆಗಳಲ್ಲಿ ಏನೆಲ್ಲ ಸಂಪತ್ತು ಹೂಡಿದ್ದೇವೋ ಅವೆಲ್ಲವನ್ನೂ ಹಿಂಪಡೆದುಕೊಳ್ಳುತ್ತೇವೆ. ಹೀಗೆ ಕಾನೂನಿನ ವ್ಯಾಜ್ಯಗಳಲ್ಲಿ ಸಿಕ್ಕಿಸುವುದಕ್ಕೆ ನಮ್ಮ ಭಾರೀ ವಿರೋಧವಿದೆ..’

ಇಂಥ ಸಿಕ್ಕುಗಳಿರುವುದರಿಂದಲೇ 9/11 ದಾಳಿ ಸಂತ್ರಸ್ತ ಕುಟುಂಬಗಳ ಒತ್ತಾಯದ ನಡುವೆಯೂ ಅಮೆರಿಕ ಸರ್ಕಾರ ಹೀಗೊಂದು ಮಸೂದೆ ಮಂಡನೆಗೆ ಹಿಂಜರಿಯುತ್ತಿದೆ.

ಒಸಾಮನನ್ನು ಹೊಡೆದಿದ್ದೇ ಉಗ್ರವಾದದ ವಿರುದ್ಧದ ದೊಡ್ಡ ವಿಜಯ ಅಂತ ಬೀಗುತ್ತಿರುವ ಅಮೆರಿಕ, ಅವಳಿ ಕಟ್ಟಡದ ಒಳಗೆ ವಿಮಾನ ನುಗ್ಗಿಸುವುದರಲ್ಲಿ ಪಾಲ್ಗೊಂಡಿದ್ದ ಉಗ್ರರ ಪೈಕಿ ಹೆಚ್ಚಿನವರು ಸೌದಿ ಅರೇಬಿಯ ಪ್ರಜೆಗಳಾಗಿದ್ದರೇ ಎಂಬ ಪ್ರಶ್ನೆಗೆ ಖಚಿತ ಉತ್ತರ ಕೊಡಲು ಹಿಂದೆ- ಮುಂದೆ ನೋಡುತ್ತಿದೆ.

1970ರ ವೇಳೆಗೆ ಅಮೆರಿಕ ತೈಲಕ್ಕಾಗಿ ಗಳಿಸಿದ ಸೌದಿ ಸ್ನೇಹ ಅದೆಷ್ಟು ತೀವ್ರ ಉದ್ಯಮ ಹಿತಾಸಕ್ತಿಯಾಗಿ ರೂಪುಗೊಂಡಿತೆಂದರೆ, ಸೌದಿಯ ಎಲ್ಲ ತೀವ್ರಗಾಮಿ ಚಟುವಟಿಕೆಗಳಿಗೆ ಅಮೆರಿಕ ಕುರುಡಾಗುವಷ್ಟು. ಇದಿ ಅಮಿನ್ ನಂಥ ಕೊಲೆಪಾತಕ ಸರ್ವಾಧಿಕಾರಿಗೆ ಸೌದಿ ನೀಡಿದ್ದ ಆಶ್ರಯ, ಅದರ ಇಸ್ಲಾಂ ತೀವ್ರವಾದ ಹಾಗೂ ಇವೆಲ್ಲವಕ್ಕೆ ಅಮೆರಿಕದ ಮೌನ ಸಮ್ಮತಿ ಬಗ್ಗೆ ಇನ್ನೊಂದು ಲೇಖನವನ್ನೇ ಬರೆಯಬೇಕಾಗುತ್ತದೆ.

ಸದ್ಯಕ್ಕೆ, ಒಸಾಮಾ ತಿಥಿಯನ್ನು ಅಮೆರಿಕ ಸಂಭ್ರಮಿಸುತ್ತಿರುವ ಹೊತ್ತಿನಲ್ಲಿ, ಅವಳಿ ಕಟ್ಟಡದ ಮೇಲಿನ ಆತ್ಮಹತ್ಯಾ ದಾಳಿಗೆ ಸೌದಿ ಅರೇಬಿಯಾ ಕೊಡುಗೆ ಏನಿತ್ತೆಂಬುದಕ್ಕೆ ಇರುವ ಸಾಕ್ಷ್ಯಗಳನ್ನು ಗಮನಿಸೋಣ.

9/11ರ ದಾಳಿಗೆ ವಿಮಾನ ಅಪಹರಣ ಮಾಡಿದ 19 ಅಪಹರಣಕಾರರಲ್ಲಿ 15 ಮಂದಿ ಸೌದಿ ಪ್ರಜೆಗಳಾಗಿದ್ದರು. ಈ ಉಗ್ರಕೃತ್ಯ ನಡೆಯುತ್ತಲೇ ಅಮೆರಿಕವು ಹೊರಜಗತ್ತಿನ ಪಾಲಿಗೆ ಮುಚ್ಚಿಕೊಂಡಿತಾದರೂ, ಅಮೆರಿಕ ನೆಲದಲ್ಲಿದ್ದ, ಮುಂದೆ ವಿಚಾರಣೆಗೆ ಅನುಕೂಲವಾಗಬಹುದಿದ್ದ ಹಲವು ಸೌದಿಗಳನ್ನು ರಾತ್ರೋರಾತ್ರಿ ಅವರ ದೇಶಕ್ಕೆ ಕಳುಹಿಸಿಕೊಡಲಾಯಿತು ಅನ್ನೋದು ಗುರುತರ ಆರೋಪ. ಹಾಗಂತ ಇದು ಯಾವ ನ್ಯಾಯಾಲಯದಲ್ಲೂ ಸಾಬೀತಾಗಿಲ್ಲ. ಸೌದಿ ವಿಚಾರಣೆಗೆ ಒಳಪಟ್ಟರೆ ತಾನೇ ಸಾಬೀತಾಗೋದು?

ಹೀಗೊಂದು ಪರಾರಿ ಪ್ರಕರಣಕ್ಕೆ ಆಗಿನ ಅಮೆರಿಕದ ಜಾರ್ಜ್ ಬುಷ್ ಆಡಳಿತ ಸಹಕರಿಸಿದ್ದಿರಬಹುದು ಅಂತ ಅನುಮಾನಿಸುವುದಕ್ಕೂ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಸೌದಿ ರಾಜಮನೆತನದೊಂದಿಗೆ ಬುಷ್ ಕುಟುಂಬ ಹೊಂದಿರುವ ಹಳೆಯ ಉದ್ಯಮ ಸಂಬಂಧ. ಜಾರ್ಜ್ ಬುಷ್ ಅಪ್ಪ ಎಚ್. ಡಬ್ಲ್ಯು. ಬುಷ್ 1971-73ರ ಅವಧಿಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿ ಆಗಿದ್ದರು. 1976-77ರಲ್ಲಿ ಗೂಢಚರ ಸಂಸ್ಥೆ ಸಿಐಎ ನೇತೃತ್ವ ವಹಿಸಿದ್ದರು. ಸೌದಿಗಳೊಂದಿಗೆ ಅಮೆರಿಕದ ಸಲ್ಲಾಪ ಶುರುವಾಗಿದ್ದು ಇದೇ ಸಂದರ್ಭದಲ್ಲಿ ಹಾಗೂ ಸಿಐಎ- ರಾಯಭಾರತ್ವದಂಥ ಅಂಶಗಳ ಮೂಲಕವೇ ಅದನ್ನು ಸಾಕಾರಗೊಳಿಸಿಕೊಳ್ಳಲಾಯಿತೆಂಬುದನ್ನು ಗಮನಿಸಬೇಕು. ನಂತರ ಸೌದಿಗಳ ಬೆಂಬಲದ ಹಾರ್ಕಿನ್ ಎನರ್ಜಿ ಕಂಪನಿಗೆ ಬುಷ್ ಒಬ್ಬ ಹೂಡಿಕೆದಾರರಾಗಿದ್ದರು.  ಕಾರ್ಲೈಲ್ ಗ್ರೂಪ್ ಎಂಬ ದೈತ್ಯ ಮ್ಯುಚುವಲ್ ಫಂಡ್ ಕಂಪನಿ ಪರವಾಗಿ ಜಾರ್ಜ್ ಬುಷ್ ಮತ್ತು ಅವರ ಸಹವರ್ತಿ ಮತ್ತು ಗೃಹಖಾತೆ ಸಚಿವರಾಗಿದ್ದ ಜೇಮ್ಸ್ ಬೇಕರ್, ಸೌದಿಯಲ್ಲಿ ಹಣ ಎತ್ತಿದ ಉದಾಹರಣೆಗಳಿವೆ. ನಿವೃತ್ತಿ ನಂತರ ಬುಷ್ ಇದರ ಸಲಹೆಗಾರರಾಗಿಯೂ ಇದ್ದಾರೆ. ಈ ಕಂಪನಿ ಉಗ್ರವಾದಿಗಳಿಗೆ ಹಣ ಹರಿಸಿದ ಶಂಕೆಯನ್ನು ಹೊದ್ದಿದೆ.

ಇಂಥ ಎಲ್ಲ ಸೂತ್ರಗಳನ್ನು ಹರವಿಟ್ಟು ಅಮೆರಿಕದ ವ್ಯಾನಿಟಿ ಫೇರ್ ನಿಯತಕಾಲಿಕವು ಸೌದಿಗಳನ್ನು ರಕ್ಷಿಸಿದ್ದು ಹೇಗೆ’ ಎಂಬ ಬಗ್ಗೆ ತನಿಖಾ ವರದಿಯನ್ನೂ ಪ್ರಕಟಿಸಿತು.

ಹೀಗಾಗಿ…

ಒಸಾಮಾ ಸತ್ತ ಐದು ವರ್ಷಗಳ ನೆರಳಲ್ಲಿ ಚರ್ಚೆಯಾಗಬೇಕಿರೋದು ಇಂಥ ವಿಷಯಗಳು ಹೊರತು ಲಾಡೆನ್ ಕೊಂದ ಪರಾಕ್ರಮಗಾಥೆಯಲ್ಲ. ಏಕೆಂದರೆ ಲಾಡೆನ್ ಗೆ ಮೀರಿದ ಸೈತಾನ ಮುಖಗಳು ಜಾಗತಿಕ ರಾಜಕಾರಣದಲ್ಲಿ ಹಲವು ಇದ್ದಾವೆ. ಇಕನಾಮಿಕ್ಸ್ ಮತ್ತು ಜಿಹಾದ್ ಮಂಚ ಹಂಚಿಕೊಂಡಾಗ ಒಸಾಮಾನಂಥವು ಹುಟ್ಟುವುದು ಸಹಜ. ಇದೀಗ ಬದಲಾದ ಪರಿಸ್ಥಿತಿಯಲ್ಲಿ ಇರಾನಿನ ಜತೆ ಅಮೆರಿಕ ಸ್ನೇಹ ಸಾಧಿಸುತ್ತಿರೋದು ಸೌದಿಗೆ ಉರಿದುಕೊಳ್ಳುವ ವಿಷಯ. ಅವರ ತೈಲ ಕೇಂದ್ರಿತ ಅರ್ಥವ್ಯವಸ್ಥೆಯೂ ಕಂಪಿಸುತ್ತಿದೆ. ತನಗೆ ಲಾಭವಾಗದ ಕಡೆ ಅಮೆರಿಕ ಆಸಕ್ತಿ ಕಳೆದುಕೊಳ್ಳುವುದು ಚರಿತ್ರೆ ಯಾವತ್ತೂ ಕಂಡುಕೊಂಡುಬಂದ ವಿದ್ಯಮಾನ.

ಅಮೆರಿಕವೇನಾದರೂ ಸೌದಿಯ ಜತೆ ವಿಚ್ಛೇದನ ಪಡೆದುಕೊಂಡಿದ್ದೇ ಆದರೆ, ಈಗ ಒಸಾಮಾ ಸಾವಿನ ಐದನೇ ವಾರ್ಷಿಕ ದಿನದಲ್ಲಿ ಸಿಐಎ ಕುಟ್ಟಿಕೊಂಡಿರುವ ಟ್ವೀಟುಗಳಿಗಿಂತ ಕೌತುಕದ ಹಲವು ಮಾಹಿತಿಗಳು ಹೊರಬರುವುದಕ್ಕೆ ಶುರುವಾಗಬಹುದು!

ಲೆಟ್ಸ್ ವೇಟ್..

Leave a Reply